ಗಡಿ ಪಟ್ಟಣ ಮೊರೆಯಲ್ಲಿ ಪೊಲೀಸ್ ಕಮಾಂಡೋಗಳು ಮತ್ತು ಗಡಿ ಭದ್ರತಾ ಪಡೆ (ಬಿಎಸ್ಎಫ್)ಗಳ ಮೇಲಿನ ದಾಳಿಯಲ್ಲಿ ವಿದೇಶಿ ಬಂಡುಕೋರರು ಭಾಗಿಯಾಗಿರಬಹುದು ಎಂಬ ಮಣಿಪುರ ಮುಖ್ಯಮಂತ್ರಿ ಎನ್ ಬಿರೇನ್ ಸಿಂಗ್ ಅವರ ಆರೋಪವನ್ನು ಕುಕಿ ಗುಂಪುಗಳು ತಳ್ಳಿಹಾಕಿವೆ.
ಕುಕಿ ಬುಡಕಟ್ಟು ಜನಾಂಗದವರು ವಾಸಿಸುವ ಪ್ರದೇಶಗಳಲ್ಲಿ 24 ಗಂಟೆಗಳ ನಿಷೇಧಾಜ್ಞೆ ನಂತರ, ಸ್ಥಳೀಯ ಬುಡಕಟ್ಟು ನಾಯಕರ ವೇದಿಕೆ (ITLF) ಮತ್ತು ಬುಡಕಟ್ಟು ಏಕತೆಯ ಸಮಿತಿ (CoTU) ನೇತೃತ್ವದ ಗುಂಪುಗಳು ಬೇಡಿಕೆ ಮುಂದಿಟ್ಟಿದ್ದು, ಕುಕಿಗಳು ನೆಲೆಸಿರುವ ಬೆಟ್ಟದ ಪ್ರದೇಶಗಳಿಂದ ಮಣಿಪುರ ಪೊಲೀಸರನ್ನು ತೆರವುಗೊಳಿಸಿ, ಕೇಂದ್ರೀಯ ಪಡೆಗಳನ್ನು ಮಾತ್ರ ಇರಿಸುವಂತೆ ಒತ್ತಾಯಿಸಿವೆ.
ಕುಕಿ ಗುಂಪುಗಳು ಮಣಿಪುರ ಪೊಲೀಸರು ಹೇಗೆ ಪಕ್ಷಪಾತವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂಬುದರ ಬಗ್ಗೆ ಆರೋಪಿಸಿದ್ದಾರೆ. ಇಡೀ ಇಂಫಾಲ ಕಣಿವೆಯಲ್ಲಿ ಸಶಸ್ತ್ರ ಪಡೆಗಳ (ವಿಶೇಷ ಅಧಿಕಾರ) ಕಾಯಿದೆಯನ್ನು (ಎಎಫ್ಎಸ್‌ಪಿಎ) ಮರು ಜಾರಿಗೊಳಿಸುವಂತೆ ಅವರು ಗೃಹ ಸಚಿವ ಅಮಿತ್ ಶಾ ಅವರಿಗೆ ಮನವಿ ಮಾಡಿದರು.
ಮಣಿಪುರದಲ್ಲಿ ನಡೆಯುತ್ತಿರುವ ಹಿಂಸಾಚಾರದಿಂದ ತಾನು ‘ಅತ್ಯಂತ ಅಸಮಾಧಾನಗೊಂಡಿದ್ದೇನೆ’ ಎಂದು ಮುಖ್ಯಮಂತ್ರಿ ಹೇಳಿದ್ದಾರೆ. ಎಎಫ್ಎಸ್‌ಪಿಎ ಮರುಸ್ಥಾಪನೆ ಸೇರಿದಂತೆ ಯಾವುದೇ ಕಟ್ಟುನಿಟ್ಟಿನ ಕೇಂದ್ರ ಸರ್ಕಾರದ ಕ್ರಮಕ್ಕೆ ಅದರಲ್ಲಿ ತೊಡಗಿರುವವರೆ ಜವಾಬ್ದಾರರಾಗಿರುತ್ತಾರೆ ಎಂದಿದ್ದಾರೆ.
‘ಸಮಾಜದಲ್ಲಿ ಈಗ ಏನೇ ನಡೆಯುತ್ತಿದ್ದರೂ ಅದು ವಿಪರೀತವಾಗಿದೆ. ಯಾರಾದರೂ ಅಥವಾ ಯಾವುದೇ ಗುಂಪು ಕಾನೂನನ್ನು ಕೈಗೆತ್ತಿಕೊಂಡರೆ ಸರ್ಕಾರಕ್ಕೆ ಸಹಿಸಿಕೊಳ್ಳುವುದು ನಿಜವಾಗಿಯೂ ಕಷ್ಟವಾಗುತ್ತದೆ. ಕೇಂದ್ರ ಸರ್ಕಾರವು ನೋಡುತ್ತಲೇ ಇಲ್ಲ. ಮತ್ತೆ ಎಎಫ್ಎಸ್‌ಪಿಎ ವಿಧಿಸಿದರೆ ಅವರನ್ನು ಜವಾಬ್ದಾರರನ್ನಾಗಿ ಮಾಡಲಾಗುವುದು’ ಎಂದು ಅವರು ಈ ವಾರದ ಆರಂಭದಲ್ಲಿ ಮಣಿಪುರದ ತೌಬಲ್ ಜಿಲ್ಲೆಯ ಲಿಲಾಂಗ್ ಚಿಂಗ್ಜಾವೊ ಪ್ರದೇಶದಲ್ಲಿ ನಡೆದ ಗುಂಡಿನ ಘಟನೆಯಲ್ಲಿ ಗಾಯಗೊಂಡವರನ್ನು ಭೇಟಿ ಮಾಡಿದ ನಂತರ ಹೇಳಿದರು.
ಸೋಮವಾರ ಲಿಲಾಂಗ್ ಚಿಂಗ್ಜಾವೊದಲ್ಲಿ ನಿಷೇಧಿತ ಪೀಪಲ್ಸ್ ಲಿಬರೇಶನ್ ಆರ್ಮಿ (ಪಿಎಲ್ಎ) ಯ ರಾಜಕೀಯ ವಿಭಾಗವಾದ ರೆವಲ್ಯೂಷನರಿ ಪೀಪಲ್ಸ್ ಫ್ರಂಟ್ (ಆರ್‌ಪಿಎಫ್) ದಂಗೆಕೋರರು ನಾಲ್ವರನ್ನು ಕೊಂದಿದ್ದಾರೆ. ಘಟನೆಯಲ್ಲಿ ಹತ್ತು ಮಂದಿ ಗಾಯಗೊಂಡಿದ್ದು, ಸದ್ಯ ಚಿಕಿತ್ಸೆ ಪಡೆಯುತ್ತಿದ್ದಾರೆ. ಅಕ್ರಮ ಡ್ರಗ್ಸ್ ದಂಧೆ ಮೂಲಕ ಸಂಗ್ರಹಿಸಿದ ಹಣದ ವಿವಾದದ ಹಿನ್ನೆಲೆಯಲ್ಲಿ ಘಟನೆ ನಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ದಾಳಿಯ ನಂತರ ಸ್ಥಳೀಯರು ದಾಳಿಕೋರರು ಆಗಮಿಸಿದ್ದ ನಾಲ್ಕು ವಾಹನಗಳಿಗೆ ಬೆಂಕಿ ಹಚ್ಚಿದ್ದಾರೆ.
ಇದಕ್ಕೂ ಮುನ್ನ ಜನವರಿ 2ರಂದು ಮಣಿಪುರದಲ್ಲಿ ನಡೆದ ಗುಂಡಿನ ಚಕಮಕಿಯಲ್ಲಿ ಏಳು ಭದ್ರತಾ ಸಿಬ್ಬಂದಿ ಗಾಯಗೊಂಡಿದ್ದರು. ಮಣಿಪುರದ ಗಡಿ ಪಟ್ಟಣ ಮೊರೆಹ್‌ನಲ್ಲಿ ಶಂಕಿತ ಬಂಡುಕೋರರ ನಡುವೆ ನಡೆದ ಗುಂಡಿನ ಚಕಮಕಿಯಲ್ಲಿ ನಾಲ್ವರು ಪೊಲೀಸ್ ಕಮಾಂಡೋಗಳು ಮತ್ತು ಮೂವರು ಬಿಎಸ್ಎಫ್ ಯೋಧರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.


