Homeಮುಖಪುಟ'ಸ್ತನ ಹಿಡಿಯುವುದು, ಪೈಜಾಮದ ಲಾಡಿ ಬಿಚ್ಚುವುದು ಅತ್ಯಾಚಾರ ಯತ್ನವಲ್ಲ' ಎಂಬ ಅಲಹಾಬಾದ್ ಹೈಕೋರ್ಟ್ ತೀರ್ಪು ರದ್ದುಗೊಳಿಸಿದ...

‘ಸ್ತನ ಹಿಡಿಯುವುದು, ಪೈಜಾಮದ ಲಾಡಿ ಬಿಚ್ಚುವುದು ಅತ್ಯಾಚಾರ ಯತ್ನವಲ್ಲ’ ಎಂಬ ಅಲಹಾಬಾದ್ ಹೈಕೋರ್ಟ್ ತೀರ್ಪು ರದ್ದುಗೊಳಿಸಿದ ಸುಪ್ರೀಂ ಕೋರ್ಟ್

- Advertisement -
- Advertisement -

“ಹೆಣ್ಣು ಮಕ್ಕಳ ಸ್ತನ ಹಿಡಿಯುವುದು, ಪೈಜಾಮದ ಲಾಡಿ ಬಿಚ್ಚುವುದು, ಅವರನ್ನು ಚರಂಡಿ ಕಡೆಗೆ ಅಥವಾ ಮೋರಿಯ ಅಡಿಗೆ ಎಳೆಯುವುದು ‘ಅತ್ಯಾಚಾರ ಅಥವಾ ಅತ್ಯಾಚಾರ ಯತ್ನವಲ್ಲ” ಎಂಬ ಅಲಹಾಬಾದ್‌ ಹೈಕೋರ್ಟ್‌ನ ವಿವಾದಾತ್ಮಕ ತೀರ್ಪಿನ್ನು ಸುಪ್ರೀಂ ಕೋರ್ಟ್ ರದ್ದುಗೊಳಿಸಿದೆ ಎಂದು ವರದಿಯಾಗಿದೆ.

ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ಮತ್ತು ನ್ಯಾಯಮೂರ್ತಿಗಳಾದ ಜೋಯ್ಮಾಲ್ಯ ಬಾಗ್ಚಿ ಹಾಗೂ ಎನ್.ವಿ. ಅಂಜಾರಿಯಾ ಅವರನ್ನೊಳಗೊಂಡ ಪೀಠವು, “ಲೈಂಗಿಕ ಅಪರಾಧ ಪ್ರಕರಣಗಳ ನ್ಯಾಯದಾನವು ಕೇವಲ ಕಾನೂನಿನ ಚೌಕಟ್ಟಿಗೆ ಸೀಮಿತವಾಗಿರದೆ, ಅದು ಸಂವೇದನಾಶೀಲತೆ ಮತ್ತು ಸಹಾನುಭೂತಿಯಿಂದ ಕೂಡಿರಬೇಕು” ಎಂದು ಒತ್ತಿಹೇಳಿರುವುದಾಗಿ ಕಾನೂನು ಸುದ್ದಿ ಸಂಸ್ಥೆ ಬಾರ್ & ಬೆಂಚ್ ವರದಿ ಮಾಡಿದೆ.

ಹೈಕೋರ್ಟ್‌ನ ನಿಲುವನ್ನು ತೀವ್ರವಾಗಿ ಖಂಡಿಸಿದ ಸುಪ್ರೀಂ ಕೋರ್ಟ್, ಇದು ‘ಅಮಾನವೀಯ ಮತ್ತು ಸಂವೇದನಾ ರಹಿತ’ ತೀರ್ಪು ಎಂದು ಬಣ್ಣಿಸಿದೆ. ಸ್ತನಗಳನ್ನು ಹಿಡಿಯುವುದು ಮತ್ತು ಪೈಜಾಮದ ಲಾಡಿ ಬಿಚ್ಚುವುದು ಅತ್ಯಾಚಾರದ ಪ್ರಯತ್ನವೇ ಹೊರತು, ಕೇವಲ ಸಿದ್ಧತೆಯಲ್ಲ ಎಂದು ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸಿದೆ.

ಫೆಬ್ರವರಿ 10ರಂದು ನೀಡಿದ ತನ್ನ ತೀರ್ಪಿನಲ್ಲಿ ಸುಪ್ರೀಂ ಕೋರ್ಟ್ ಪೀಠವು, “ನ್ಯಾಯಾಲಯಗಳು ದೂರುದಾರರ ಅಥವಾ ಸಂತ್ರಸ್ತರ ದುರ್ಬಲತೆ ಮತ್ತು ಸೂಕ್ಷ್ಮತೆಗಳ ಬಗ್ಗೆ ‘ಅಸಡ್ಡೆ’ ತೋರಿದರೆ ಅಥವಾ ಅವುಗಳನ್ನು ಪರಿಗಣನೆಗೆ ತೆಗೆದುಕೊಳ್ಳದಿದ್ದರೆ, ಅಂತಹ ಸಂದರ್ಭಗಳಲ್ಲಿ ‘ಸಂಪೂರ್ಣ ನ್ಯಾಯ’ ನೀಡಲು ಸಾಧ್ಯವಿಲ್ಲ ಎಂದು ಎಚ್ಚರಿಸಿದೆ.

“ನಮ್ಮ ಕಾನೂನು ಪ್ರಕ್ರಿಯೆಯ ಪಾಲ್ಗೊಳ್ಳುವವರಾಗಿ ನಾವು ತೆಗೆದುಕೊಳ್ಳುವ ನಿರ್ಧಾರಗಳು ಸಾಮಾನ್ಯ ನಾಗರಿಕರು ಎದುರಿಸಬೇಕಾದ ಕಾರ್ಯವಿಧಾನಗಳನ್ನು ರೂಪಿಸುವುದರಿಂದ ಹಿಡಿದು, ಯಾವುದೇ ಪ್ರಕರಣದಲ್ಲಿ ನೀಡುವ ಅಂತಿಮ ತೀರ್ಪಿನವರೆಗೆ—ಕರುಣೆ, ಮಾನವೀಯತೆ ಮತ್ತು ತಿಳುವಳಿಕೆಯ ಮೌಲ್ಯಗಳನ್ನು ಪ್ರತಿಬಿಂಬಿಸಬೇಕು; ಒಂದು ನ್ಯಾಯಸಮ್ಮತ ಮತ್ತು ಪರಿಣಾಮಕಾರಿ ನ್ಯಾಯದಾನ ವ್ಯವಸ್ಥೆಯನ್ನು ನಿರ್ಮಿಸಲು ಇವು ಅತ್ಯಗತ್ಯ” ಎಂದು ಸುಪ್ರೀಂ ಕೋರ್ಟ್ ಅಭಿಪ್ರಾಯಪಟ್ಟಿರುವುದಾಗಿ ವರದಿ ಹೇಳಿದೆ.

ಈ ಪ್ರಕರಣದಲ್ಲಿ ವ್ಯವಸ್ಥಿತ ಸುಧಾರಣೆಯ ಅಗತ್ಯವಿದೆ ಮತ್ತು ನ್ಯಾಯಾಧೀಶರಲ್ಲಿ ಸಂವೇದನಾಶೀಲತೆಯನ್ನು ಬೆಳೆಸಲು ಕ್ರಮಗಳನ್ನು ತೆಗೆದುಕೊಳ್ಳುವ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಒಪ್ಪಿಕೊಂಡಿದೆ ಎಂದು ವರದಿ ಉಲ್ಲೇಖಿಸಿದೆ.

“ನ್ಯಾಯಾಂಗದ ಸದಸ್ಯರ ಧೋರಣೆಯಲ್ಲಿ ಮತ್ತು ಅದರ ಜೊತೆಗಿನ ನ್ಯಾಯಾಲಯದ ಕಾರ್ಯವಿಧಾನಗಳಲ್ಲಿ ಅಂತರ್ಗತ ಸಂವೇದನಾಶೀಲತೆ ಮತ್ತು ವಿವೇಚನೆಯನ್ನು ಬೆಳೆಸಲು ಹಾಗೂ ಪೋಷಿಸಲು ಕೆಲವು ಕ್ರಮಗಳನ್ನು ತೆಗೆದುಕೊಳ್ಳುವ ಅಗತ್ಯವಿದೆ ಎಂಬುದರಲ್ಲಿ ಸಂದೇಹವಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ.

ಇಬ್ಬರು ಆರೋಪಿಗಳ ವಿರುದ್ಧದ ಸಮನ್ಸ್ ಆದೇಶವನ್ನು ಮಾರ್ಪಡಿಸುವಾಗ ಅಲಹಾಬಾದ್ ಹೈಕೋರ್ಟ್ ಮಾರ್ಚ್ 17, 2025ರಂದು ವಿವಾದಾತ್ಮಕ ಅವಲೋಕನಗಳನ್ನು ಮಾಡಿತ್ತು.

ಪ್ರಾಸಿಕ್ಯೂಷನ್ ಪ್ರಕಾರ, ಆರೋಪಿಗಳಾದ ಪವನ್ ಮತ್ತು ಆಕಾಶ್ ಮೊದಲು 11 ವರ್ಷದ ಬಾಲಕಿಯ ಸ್ತನಗಳನ್ನು ಹಿಡಿದಿದ್ದರು. ನಂತರ, ಅವರಲ್ಲಿ ಒಬ್ಬ ಆಕೆಯ ಪೈಜಾಮದ ದಾರವನ್ನು ಎಳೆದು ಚರಂಡಿಯ ಕಡೆಗೆ ಅಥವಾ ಮೋರಿಯ ಅಡಿಗೆ ಎಳೆಯಲು ಪ್ರಯತ್ನಿಸಿದ್ದ. ನಂತರ ಇಬ್ಬರೂ ಬಾಲಕಿ ಮೇಲೆ ದೌರ್ಜನ್ಯ ಎಸಗಲು ಮುಂದಾಗಿದ್ದರು. ಈ ವೇಳೆ ದಾರಿ ಹೋಕರು ಅಲ್ಲಿಗೆ ಬಂದಿದ್ದರಿಂದ ಇಬ್ಬರೂ ಸ್ಥಳದಿಂದ ಪರಾರಿಯಾಗಿದ್ದರು. ಇದರಿಂದ ಬಾಲಕಿಯು ಹೆಚ್ಚಿನ ಅಪಾಯದಿಂದ ಪಾರಾಗಿದ್ದಳು.

ಪೋಕ್ಸೊ ಕಾಯ್ದೆಯಡಿ ಇದನ್ನು ಅತ್ಯಾಚಾರದ ಯತ್ನ ಅಥವಾ ಪೆನೆಟ್ರೇಟಿವ್ ಲೈಂಗಿಕ ದೌರ್ಜನ್ಯದ ಯತ್ನ ಎಂದು ಪರಿಗಣಿಸಿದ ವಿಚಾರಣಾ ನ್ಯಾಯಾಲಯವು, ಪೋಕ್ಸೊ ಕಾಯ್ದೆಯ ಸೆಕ್ಷನ್ 18ರ ಜೊತೆಗೆ ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್ 376 (ಅತ್ಯಾಚಾರ) ಅಡಿಯಲ್ಲಿ ಕ್ರಮ ಜರುಗಿಸಿತ್ತು. ಈ ನಿಬಂಧನೆಗಳ ಅಡಿಯಲ್ಲಿ ಆರೋಪಿಗಳ ವಿರುದ್ದ ಸಮನ್ಸ್ ಆದೇಶವನ್ನು ಹೊರಡಿಸಿತ್ತು.

ಪೆನೆಟ್ರೇಟಿವ್ ಲೈಂಗಿಕ ದೌರ್ಜನ್ಯದ ಯತ್ನ ಎನ್ನುವುದು ಪೋಕ್ಸೊ ಕಾಯ್ದೆ 2012ರ ಸೆಕ್ಷನ್ 3ರ ಅಡಿಯಲ್ಲಿ ವ್ಯಾಖ್ಯಾನಿಸಲಾದ ಅತ್ಯಂತ ಗಂಭೀರವಾದ ಅಪರಾಧವಾಗಿದೆ. ಒಬ್ಬ ವ್ಯಕ್ತಿಯು ಲೈಂಗಿಕ ಉದ್ದೇಶದಿಂದ ಮಗುವಿನ ಖಾಸಗಿ ಅಂಗಗಳಿಗೆ (ಯೋನಿ, ಗುದದ್ವಾರ, ಮೂತ್ರನಾಳ ಅಥವಾ ಬಾಯಿ) ತನ್ನ ಶಿಶ್ನವನ್ನು ಯಾವುದೇ ಮಟ್ಟಕ್ಕೆ ನುಗ್ಗಿಸುವುದು ಅಥವಾ ಮಗುವಿನಿಂದ ಹಾಗೆ ಮಾಡಿಸುವುದಾಗಿದೆ.

ಶಿಶ್ನವಲ್ಲದ ಬೇರೆ ಯಾವುದೇ ವಸ್ತು ಅಥವಾ ದೇಹದ ಭಾಗವನ್ನು (ಉದಾಹರಣೆಗೆ ಬೆರಳು) ಮಗುವಿನ ಖಾಸಗಿ ಅಂಗಗಳ ಒಳಗೆ ಸೇರಿಸುವುದು ಸಹ ಈ ಅಪರಾಧದ ವ್ಯಾಪ್ತಿಗೆ ಬರುತ್ತದೆ.

ಮಗುವಿನ ದೇಹದ ಯಾವುದೇ ಭಾಗವನ್ನು ಕುಶಲತೆಯಿಂದ ನುಗ್ಗುವಿಕೆ ಉಂಟಾಗುವಂತೆ ಮಾಡುವುದು. ಮಗುವಿನ ಜನನಾಂಗಗಳಿಗೆ ತನ್ನ ಬಾಯಿಯನ್ನು ಮುಟ್ಟಿಸುವುದು ಅಥವಾ ಮಗುವಿನಿಂದ ಹಾಗೆ ಮಾಡಿಸುವುದು ಕೂಡ ಇದೇ ಅಪರಾಧ ಎಂದು ಪರಿಗಣಿಸಲಾಗುತ್ತದೆ.

ಅಲಹಾಬಾದ್ ಹೈಕೋರ್ಟ್ ಇಬ್ಬರು ಆರೋಪಿಗಳ ಮೇಲಿನ ಆರೋಪಗಳನ್ನು ಮಾರ್ಪಡಿಸಿ, ಅವರನ್ನು ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್ 354-B (ಬಟ್ಟೆ ಕಳಚುವ ಉದ್ದೇಶದಿಂದ ಹಲ್ಲೆ ಅಥವಾ ಕ್ರಿಮಿನಲ್ ಬಲದ ಬಳಕೆ) ಮತ್ತು ಪೋಕ್ಸೊ ಕಾಯ್ದೆಯ ಸೆಕ್ಷನ್ 9/10 (ತೀವ್ರತರದ ಲೈಂಗಿಕ ದೌರ್ಜನ್ಯ) ಎಂಬ ಕಡಿಮೆ ತೀವ್ರತೆಯ ಸೆಕ್ಷನ್‌ಗಳ ಅಡಿಯಲ್ಲಿ ವಿಚಾರಣೆ ನಡೆಸುವಂತೆ ನಿರ್ದೇಶಿಸಿತ್ತು.

ವಿಚಾರಣಾ ನ್ಯಾಯಾಲಯವು ಹೊರಿಸಿದ್ದ ‘ಅತ್ಯಾಚಾರದ ಪ್ರಯತ್ನ’ ಎಂಬ ಗಂಭೀರ ಆರೋಪವನ್ನು ಹೈಕೋರ್ಟ್ ರದ್ದುಗೊಳಿಸಿತ್ತು. ಆರೋಪಿಗಳು ಮಗುವಿನ ಸ್ತನಗಳನ್ನು ಹಿಡಿದಿದ್ದು ಮತ್ತು ಪೈಜಾಮಾದ ಲಾಡಿ ಬಿಚ್ಚಿದ್ದು ಕೇವಲ ‘ಅತ್ಯಾಚಾರದ ಸಿದ್ಧತೆ’, ಅದು ‘ಅತ್ಯಾಚಾರದ ಯತ್ನ’ವಲ್ಲ ಎಂದು ಅಭಿಪ್ರಾಯಪಟ್ಟಿತ್ತು.

“ಆರೋಪಿಗಳಾದ ಪವನ್ ಮತ್ತು ಆಕಾಶ್ ಸಂತ್ರಸ್ತೆಯ ಸ್ತನಗಳನ್ನು ಹಿಡಿದಿದ್ದರು. ಆಕಾಶ್ ಸಂತ್ರಸ್ತೆಯ ಪೈಜಾಮವನ್ನು ಕೆಳಕ್ಕೆ ಎಳೆಯಲು ಯತ್ನಿಸಿದ್ದ. ಅದಕ್ಕಾಗಿ ಅದರ ಲಾಡಿ ಬಿಚ್ಚಿದ್ದ. ಬಾಲಕಿಯನ್ನು ಚರಂಡಿಗೆ ಎಳೆಯಲು ಯತ್ನಿಸಿದ್ದ ಎಂಬ ಆರೋಪಗಳಿವೆ. ಆದರೆ, ಸಾಕ್ಷಿಗಳು (ದಾರಿ ಹೋಕರು) ಮಧ್ಯಪ್ರವೇಶಿಸಿದ ಕಾರಣ ಅವರು ಸಂತ್ರಸ್ತೆಯನ್ನು ಬಿಟ್ಟು ಸ್ಥಳದಿಂದ ಓಡಿ ಹೋಗಿದ್ದಾರೆ. ಈ ಸಂಗತಿಗಳು ಆರೋಪಿಗಳು ಸಂತ್ರಸ್ತೆಯ ಮೇಲೆ ಅತ್ಯಾಚಾರ ಮಾಡಲು ನಿರ್ಧರಿಸಿದ್ದರು ಎಂದು ತೀರ್ಮಾನಿಸಲು ಸಾಕಾಗುವುದಿಲ್ಲ, ಏಕೆಂದರೆ ಈ ಅಂಶಗಳನ್ನು ಹೊರತುಪಡಿಸಿ ಅತ್ಯಾಚಾರ ಮಾಡುವ ಅವರ ಉದ್ದೇಶವನ್ನು ಸಾಬೀತುಪಡಿಸಲು ಬೇರೆ ಯಾವುದೇ ಕೃತ್ಯಗಳು ಕಂಡುಬಂದಿಲ್ಲ” ಎಂದು ನ್ಯಾಯಮೂರ್ತಿ ರಾಮ್ ಮನೋಹರ್ ನಾರಾಯಣ ಮಿಶ್ರಾ ಅಭಿಪ್ರಾಯಪಟ್ಟಿದ್ದರು.

“ಆರೋಪಿಗಳು ಸಂತ್ರಸ್ತೆಯ ಮೇಲೆ ಅತ್ಯಾಚಾರ ಎಸಗುವ ದೃಢ ಉದ್ದೇಶ ಹೊಂದಿದ್ದರು ಎಂದು ಸೂಚಿಸಲು ಯಾವುದೇ ದಾಖಲೆಗಳು ಲಭ್ಯವಿಲ್ಲ” ಎಂದು ನ್ಯಾಯಮೂರ್ತಿ ಮಿಶ್ರಾ ಹೇಳಿದ್ದರು. ಅಷ್ಟೇ ಅಲ್ಲದೆ, “ಆರೋಪಿ ಆಕಾಶ್ ಅಪ್ರಾಪ್ತ ಸಂತ್ರಸ್ತೆಯ ಪೈಜಾಮದ ಲಾಡಿ ಬಿಚ್ಚಿ ಅದನ್ನು ಎಳೆಯಲು ಸಡಿಲಗೊಳಿಸಿಕೊಂಡಿದ್ದ ಎನ್ನಲಾಗಿದೆ. ಈ ಬಗ್ಗೆ ದೂರಿನಲ್ಲಾಗಲಿ ಅಥವಾ ಸಾಕ್ಷಿಗಳ ಹೇಳಿಕೆಯಲ್ಲಾಗಲಿ ಯಾವುದೇ ಆರೋಪವಿಲ್ಲ” ಎಂದಿದ್ದರು.

ಹೈಕೋರ್ಟ್‌ನ ಈ ಅವಲೋಕನದ ಕುರಿತು ದೇಶದಾದ್ಯಂತ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾದ ನಂತರ, ಸುಪ್ರೀಂ ಕೋರ್ಟ್ ಸ್ವಯಂ ಪ್ರೇರಿತ ವಿಚಾರಣೆ ಕೈಗೆತ್ತಿಕೊಂಡಿತ್ತು. ಮಾರ್ಚ್ 26, 2025ರಂದು ಹೈಕೋರ್ಟ್ ಆದೇಶಕ್ಕೆ ತಡೆ ನೀಡಿತ್ತು.

ಫೆಬ್ರವರಿ 10ರಂದು ನೀಡಿರುವ ತನ್ನ ಅಂತಿಮ ತೀರ್ಪಿನಲ್ಲಿ, ಸುಪ್ರೀಂ ಕೋರ್ಟ್ ನ್ಯಾಯಾಧೀಶರನ್ನು ನಿಯಂತ್ರಿಸಲು ಯಾವುದೇ ನಿರ್ದಿಷ್ಟ ಮಾರ್ಗಸೂಚಿಗಳನ್ನು ರೂಪಿಸಲು ನಿರಾಕರಿಸಿದೆ. ದಿ ಹಿಂದೂ ವರದಿಯ ಪ್ರಕಾರ, ನ್ಯಾಯಾಂಗದ ವಿವೇಚನೆಯ ಮೇಲೆ ನಿರ್ಬಂಧ ಹೇರುವ ಬದಲು, ನ್ಯಾಯಾಧೀಶರಲ್ಲಿ ಅಂತರ್ಗತ ಸಂವೇದನಾಶೀಲತೆಯನ್ನು ಬೆಳೆಸುವ ಅಗತ್ಯವಿದೆ ಎಂದು ಕೋರ್ಟ್ ಅಭಿಪ್ರಾಯಪಟ್ಟಿದೆ.

“ವಿವಿಧ ಸಾಂವಿಧಾನಿಕ ಮತ್ತು ಶಾಸನಬದ್ಧ ಸಂಸ್ಥೆಗಳು ಈ ಹಿಂದೆ ನಡೆಸಿರುವ ಇಂತಹ ಪ್ರಯತ್ನಗಳ ಸಮಗ್ರ ತಿಳುವಳಿಕೆ, ಅಂತಹ ಪ್ರಯತ್ನಗಳ ವಾಸ್ತವಿಕ ಫಲಿತಾಂಶಗಳು ಮತ್ತು ಇಂತಹುದೇ ಸೂಕ್ಷ್ಮ ಪ್ರಕರಣಗಳಲ್ಲಿ ಸಂತ್ರಸ್ತರು ಹಾಗೂ ದೂರುದಾರರು ಎದುರಿಸುತ್ತಿರುವ ವಿವಿಧ ಸಮಸ್ಯೆಗಳ ವ್ಯಾಪ್ತಿಯನ್ನು ಸರಿಯಾಗಿ ಅರಿತುಕೊಳ್ಳದೆ, ಈ ಹಂತದಲ್ಲಿ ಯಾವುದೇ ಮಾರ್ಗಸೂಚಿಗಳನ್ನು ರೂಪಿಸಲು ನಾವು ಮುಂದಾಗುವುದಿಲ್ಲ” ಎಂದು ಸುಪ್ರೀಂ ಕೋರ್ಟ್ ತಿಳಿಸಿದೆ.

ಅದಕ್ಕೆ ಬದಲಾಗಿ, ಲೈಂಗಿಕ ದೌರ್ಜನ್ಯ ಮತ್ತು ಇತರ ಸೂಕ್ಷ್ಮ ಪ್ರಕರಣಗಳ ಸಂದರ್ಭದಲ್ಲಿ ‘ನ್ಯಾಯಾಧೀಶರು ಮತ್ತು ನ್ಯಾಯಾಂಗ ಪ್ರಕ್ರಿಯೆಗಳಲ್ಲಿ ಸಂವೇದನಾಶೀಲತೆ ಹಾಗೂ ಸಹಾನುಭೂತಿಯನ್ನು ಬೆಳೆಸುವ ಕುರಿತು ಮಾರ್ಗಸೂಚಿಗಳನ್ನು ಸಿದ್ಧಪಡಿಸಲು’ ತಜ್ಞರ ಸಮಿತಿಯನ್ನು ರಚಿಸುವಂತೆ ಭೋಪಾಲ್‌ನಲ್ಲಿರುವ ರಾಷ್ಟ್ರೀಯ ನ್ಯಾಯಾಂಗ ಅಕಾಡೆಮಿ (ಎನ್‌ಜೆಎ) ಗೆ ಸುಪ್ರೀಂ ಕೋರ್ಟ್ ವಿನಂತಿಸಿದೆ.

ಅಲ್ಲದೆ, ಲೈಂಗಿಕ ಅಪರಾಧಗಳು ಮತ್ತು ಅದೇ ರೀತಿಯ ಸೂಕ್ಷ್ಮ ಘಟನೆಗಳಲ್ಲಿ ಭಾಗಿಯಾದ ಅಸಹಾಯಕ ಸಂತ್ರಸ್ತರು, ದೂರುದಾರರು ಮತ್ತು ಸಾಕ್ಷಿಗಳ ಪ್ರಕರಣಗಳನ್ನು ನಿರ್ವಹಿಸುವಾಗ, ‘ನ್ಯಾಯಾಧೀಶರು ಮತ್ತು ನ್ಯಾಯಾಂಗ ವ್ಯವಸ್ಥೆಯು ಅನುಸರಿಸಬೇಕಾದ ಧೋರಣೆಯ ಕುರಿತಾದ ಕರಡು ಮಾರ್ಗಸೂಚಿಗಳನ್ನು’ ಸಿದ್ಧಪಡಿಸುವಂತೆಯೂ ಸಮಿತಿಗೆ ಸೂಚಿಸಿದೆ.

ಎನ್‌ಜೆ ಸಿದ್ಧಪಡಿಸುವ ವರದಿಯು ದೇಶದ ಭಾಷಾ ವೈವಿಧ್ಯತೆಯನ್ನು ಮನಸ್ಸಿನಲ್ಲಿಟ್ಟುಕೊಳ್ಳಬೇಕು ಮತ್ತು ಈ ಕರಡು ಮಾರ್ಗಸೂಚಿಗಳು ಸಾಮಾನ್ಯ ಜನರಿಗೂ ಅರ್ಥವಾಗುವಂತಹ ಸರಳ ಭಾಷೆಯಲ್ಲಿರಬೇಕು ಎಂದು ಸುಪ್ರೀಂ ಕೋರ್ಟ್ ಹಿರಿಯ ನ್ಯಾಯಾಧೀಶರಿಗೆ ನಿರ್ದೇಶನ ನೀಡಿದೆ.

ನಮ್ಮ ನಿರೀಕ್ಷೆಯಂತೆ, ಈ ಮಾರ್ಗಸೂಚಿಗಳು ವಿದೇಶಿ ಭಾಷೆಗಳಿಂದ ಅಥವಾ ವಿದೇಶಿ ನ್ಯಾಯವ್ಯಾಪ್ತಿಗಳಿಂದ ಎರವಲು ಪಡೆದ ಭಾರವಾದ ಮತ್ತು ಸಂಕೀರ್ಣವಾದ ಪದಪ್ರಯೋಗಗಳಿಂದ ಕೂಡಿರಬಾರದು,” ಎಂದು ಸುಪ್ರೀಂ ಕೋರ್ಟ್ ತಿಳಿಸಿದೆ. ಅಲ್ಲದೆ, ಸಮಿತಿಯು ತನ್ನ ವರದಿಯನ್ನು “ಆದ್ಯತೆಯ ಮೇರೆಗೆ ಮೂರು ತಿಂಗಳ ಒಳಗಾಗಿ” ಸಲ್ಲಿಸಬೇಕು ಎಂದು ಸೂಚಿಸಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಪಶ್ಚಿಮ ಬಂಗಾಳದ ಸೋಲಿನ ಬಳಿಕ ‘ಇಂಡಿಯಾದ ಆಸರೆ’ ಬಯಸಿದ ಮಮತಾ

2026ರ ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯ ಸೋಲಿನ ನಂತರ ಮಮತಾ ಬ್ಯಾನರ್ಜಿ ಅವರು ಇದ್ದಕ್ಕಿದ್ದಂತೆ ‘ಇಂಡಿಯಾ’ (INDIA) ಒಕ್ಕೂಟ ಮತ್ತು ರಾಷ್ಟ್ರೀಯ ಮಟ್ಟದ ವಿರೋಧ ಪಕ್ಷಗಳ ಒಗ್ಗಟ್ಟಿಗೆ ಇಷ್ಟೊಂದು ಪ್ರಾಮುಖ್ಯತೆ ನೀಡುತ್ತಿರುವುದು ಏಕೆ? ದೀರ್ಘಕಾಲದವರೆಗೆ...

ಪಶ್ಚಿಮ ಬಂಗಾಳ| ಮತದಾರರ ಪಟ್ಟಿಯಿಂದ ಡಿಲೀಟ್‌ ಆದವರಿಗೆ ಪಡಿತರ ಪ್ರಯೋಜನಗಳಿಲ್ಲ

ಚುನಾವಣಾ ಆಯೋಗದ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಯಿಂದಾಗಿ ಪಶ್ಚಿಮ ಬಂಗಾಳದ ಚುನಾವಣಾ ಪ್ರಕ್ರಿಯೆಯಿಂದ ಹೊರಗುಳಿದವರಿಗೆ ಈಗ ಎರಡು ಹೊಡೆತ ಎದುರಾಗಿದೆ. ರಾಜ್ಯ ಸರ್ಕಾರವು ಈಗ ಅವರ ಪಡಿತರ ಚೀಟಿಗಳನ್ನು ಸಹ ನಿಷ್ಕ್ರಿಯಗೊಳಿಸಲು...

ಇಂಡಿಯಾ ಮೈತ್ರಿಕೂಟದ ಸಭೆ: ಎಸ್‌ಐಆರ್, ಬೆಲೆ ಏರಿಕೆ, ನಿರುದ್ಯೋಗದ ಕುರಿತು ಖರ್ಗೆ ಕಳವಳ; ಒಗ್ಗಟ್ಟಿನ ಹೋರಾಟಕ್ಕೆ ಕರೆ

ರಾಜಕೀಯ, ಆರ್ಥಿಕ, ಸಾಮಾಜಿಕ ಮತ್ತು ವಿದೇಶಾಂಗ ನೀತಿ ರಂಗಗಳಲ್ಲಿ ಮೋದಿ ಸರ್ಕಾರದ ವೈಫಲ್ಯಗಳನ್ನು ಎದುರಿಸಲು ತನ್ನ ಒಗ್ಗಟ್ಟನ್ನು ಬಲಪಡಿಸಿಕೊಳ್ಳುವಂತೆ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಸೋಮವಾರ (ಜೂ.8) ಇಂಡಿಯಾ ಮೈತ್ರಿಕೂಟಕ್ಕೆ ಕರೆ...

ಟೆಹ್ರಾನ್ ಮೇಲಿನ ದಾಳಿಗೆ ಪ್ರತೀಕಾರ: ಇಸ್ರೇಲ್ ಮೇಲೆ ಕ್ಷಿಪಣಿ ಹಾರಿಸಿದ ಇರಾನ್

ಟೆಹ್ರಾನ್, ತಬ್ರಿಜ್ ಮತ್ತು ಇಸ್ಫಹಾನ್‌ ಮೇಲಿನ ದಾಲಿಗಳಿಗೆ ಪ್ರತೀಕಾರವಾಗಿ, ಇರಾನ್ ಸೇನೆಯು ಇಸ್ರೇಲ್‌ ಮೇಲೆ ಎರಡನೇ ತರಂಗದ ಕ್ಷಿಪಣಿಗಳನ್ನು ಹಾರಿಸಿದೆ. ದೇಶಾದ್ಯಂತ ಸೈರನ್‌ಗಳು ಮೊಳಗುತ್ತಿವೆ ಎಂದು ಇಸ್ರೇಲ್ ಮಿಲಿಟರಿ ಹೇಳಿದೆ ಎಂದು ಅಂತರಾಷ್ಟ್ರೀಯ...

ಭಾರತದಲ್ಲಿ ಬೆಂಕಿ ದುರಂತ ‘ದಿನವೊಂದಕ್ಕೆ ಬಲಿಯಾಗುತ್ತಿವೆ 16 ಜೀವಗಳು’ NCRB ವರದಿ

ಇತ್ತೀಚೆಗೆ ದೆಹಲಿಯ ಮಾಳವೀಯ ನಗರದ ಹೋಟೆಲ್‌ ಒಂದರಲ್ಲಿ ನಡೆದ ಭೀಕರ ಬೆಂಕಿ ದುರಂತ (ಇದರಲ್ಲಿ 22 ಜನರು ಸಜೀವ ದಹನವಾಗಿದ್ದರು) ಇಡೀ ದೇಶವನ್ನೇ ನಡುಗಿಸಿದೆ. ಈ ದುರಂತದ ಬೆನ್ನಲ್ಲೇ ಕರ್ನಾಟಕದಲ್ಲೂ ವಾಣಿಜ್ಯ ಮತ್ತು...

ಈದ್ ಹಬ್ಬದ ವೇಳೆ ಮುಸ್ಲೀಮರನ್ನು ಗುರಿಯಾಗಿಸಿ 46 ದ್ವೇಷ ಅಪರಾಧಗಳು, ಮೂವರ ಹತ್ಯೆ: APCR ಆತಂಕಕಾರಿ ವರದಿ

ಇತ್ತೀಚಿನ ಬಕ್ರೀದ್ (ಈದ್ ಉಲ್-ಅಧಾ) ಹಬ್ಬದ ಆಚರಣೆಯ ಸಂದರ್ಭದಲ್ಲಿ ದೇಶದ ವಿವಿಧೆಡೆ ಅಲ್ಪಸಂಖ್ಯಾತರನ್ನು ಗುರಿಯಾಗಿಸಿಕೊಂಡು ನಡೆದ ಕೋಮು ಕಿರುಕುಳ, ದ್ವೇಷ ಭಾಷಣ ಹಾಗೂ ಹಿಂಸಾಚಾರದ ಘಟನೆಗಳ ಕುರಿತು 'ನಾಗರಿಕ ಹಕ್ಕುಗಳ ರಕ್ಷಣಾ ಸಂಘ'...

ಗ್ರೇಟ್ ನಿಕೋಬಾರ್ : ಕಾರ್ಪೊರೇಟ್ ಹಿತಾಸಕ್ತಿಗೆ ಬಲಿಯಾಗುತ್ತಿರುವ ಪರಿಸರ, ಆದಿವಾಸಿಗಳ ಅಸ್ತಿತ್ವ

ಬಂಗಾಳಕೊಲ್ಲಿಯಲ್ಲಿರುವ ಭಾರತದ ದಕ್ಷಿಣ ತುದಿಯ ದ್ವೀಪದ ಸಮಗ್ರ ಅಭಿವೃದ್ಧಿಯ ಹೆಸರಿನಲ್ಲಿ ಕೇಂದ್ರ ಸರ್ಕಾರ ಬರೋಬ್ಬರಿ 72 ಸಾವಿರದಿಂದ 81 ಸಾವಿರ ಕೋಟಿ ರೂಪಾಯಿ ವೆಚ್ಚದ ’ಗ್ರೇಟ್ ನಿಕೋಬಾರ್ ದ್ವೀಪ ಅಭಿವೃದ್ಧಿ ಯೋಜನೆ’ಯನ್ನು ರೂಪಿಸಿದೆ.ಈ...

ಅಸ್ಸಾಂನ ನಾಲ್ವರು ಮುಸ್ಲಿಂ ಮಹಿಳೆಯರ ಗಡೀಪಾರು ಪ್ರಕ್ರಿಯೆಗೆ ಸುಪ್ರೀಂ ತಡೆ: ಕೇಂದ್ರ, ರಾಜ್ಯ ಸರ್ಕಾರಗಳಿಗೆ ನೋಟಿಸ್‌

ಅಸ್ಸಾಂನಲ್ಲಿ 'ವಿದೇಶಿಯರು' ಎಂದು ಘೋಷಿತರಾಗಿ ಗಡೀಪಾರು ಭೀತಿ ಎದುರಿಸುತ್ತಿದ್ದ ನಾಲ್ವರು ಮುಸ್ಲಿಂ ಮಹಿಳೆಯರ ವಿಚಾರದಲ್ಲಿ ಭಾರತದ ಸುಪ್ರೀಂ ಕೋರ್ಟ್ ಮಹತ್ವದ ಮಧ್ಯಪ್ರವೇಶ ಮಾಡಿದೆ. ಈ ಮಹಿಳೆಯರನ್ನು ದೇಶದಿಂದ ಹೊರಹಾಕುವ (ಗಡೀಪಾರು ಮಾಡುವ) ಪ್ರಕ್ರಿಯೆಗೆ...

ದೆಹಲಿಗೆ ಬಂದಿಳಿದ ಕಾಕ್ರೋಚ್ ಪಾರ್ಟಿ ಸಂಸ್ಥಾಪಕ ಅಭಿಜೀತ್ ದೀಪ್ಕೆ : ಜಂತರ್‌ ಮಂತರ್‌ನಲ್ಲಿ ಪ್ರತಿಭಟಿಸಲು ಪೊಲೀಸರಿಂದ ಅನುಮತಿ

ಶನಿವಾರ (ಜೂ.6) ಬೆಳಿಗ್ಗೆ ದೆಹಲಿಗೆ ಆಗಮಿಸಿದ ಕಾಕ್ರೋಚ್ ಜನತಾ ಪಾರ್ಟಿಯ (ಸಿಜೆಪಿ) ಸಂಸ್ಥಾಪಕ ಅಭಿಜೀತ್ ದೀಪ್ಕೆ, ಪ್ರತಿಭಟನೆಗೆ ದೆಹಲಿ ಪೊಲೀಸರು ಅನುಮತಿ ನೀಡಿದ್ದಾರೆ ಎಂದು ತಿಳಿಸಿದ್ದು, ಯೋಜಿತ ಆಂದೋಲನಕ್ಕಾಗಿ ನೇರವಾಗಿ ಜಂತರ್ ಮಂತರ್‌ನಲ್ಲಿ...

ಜಾಗತಿಕವಾಗಿ ಮೂರು ವರ್ಷಗಳಲ್ಲಿ 600 ಪರಿಸರ ರಕ್ಷಕರ ಹತ್ಯೆ: ವಿಶ್ವಸಂಸ್ಥೆ ತೀವ್ರ ಕಳವಳ: ಜಾಗತಿಕ ತಾಪಮಾನಕ್ಕೆ ಸಾಕ್ಷಿಯಾಗುತ್ತಿರುವ ಭಾರತ

ಜೂನ್ 5 ವಿಶ್ವ ಪರಿಸರ ದಿನ. ಜಗತ್ತಿನಾದ್ಯಂತ ಗಿಡ ನೆಡುವ, ಹಸಿರು ಭಾಷಣ ಬಿಗಿಯುವ ಮತ್ತು ಪರಿಸರ ಕಾಳಜಿಯ ಸಡಗರದ ಆಚರಣೆಗಳು ಎಲ್ಲೆಡೆ ವಿಭಿನ್ನ ರೀತಿಗಳಲ್ಲಿ ವಿಜೃಂಭಿಸುತ್ತಿವೆ. ಆದರೆ, ಇದೇ ಹೊತ್ತಿನಲ್ಲಿ ವಿಶ್ವಸಂಸ್ಥೆಯು...