Homeಅಂಕಣಗಳುಸಮ್ಮಿಶ್ರ ಸಂಪುಟದ ಸಂಕಷ್ಟ ಮತ್ತು ಮಾಧ್ಯಮಗಳ ಸಂಕಟ

ಸಮ್ಮಿಶ್ರ ಸಂಪುಟದ ಸಂಕಷ್ಟ ಮತ್ತು ಮಾಧ್ಯಮಗಳ ಸಂಕಟ

- Advertisement -
- Advertisement -

ಜೆಡಿಎಸ್ ಮತ್ತು ಕಾಂಗ್ರೆಸ್ ಸಮ್ಮಿಶ್ರ ಸರ್ಕಾರದ ಮುಂದಿನ ಐದು ವರ್ಷಗಳು ಅಷ್ಟು ಸುಲಭವಾಗಿರುವುದಿಲ್ಲ ಎಂಬುದಕ್ಕೆ ಈ ಸರ್ಕಾರದ ಸಂಪುಟ ರಚನೆಯ ಕಸರತ್ತಿನ ತಿಣುಕಾಟವೇ ಸಾಕ್ಷಿ. ಇದು ಅನಿರೀಕ್ಷಿತವೇನೂ ಆಗಿರಲಿಲ್ಲ. ಏಕೆಂದರೆ ಎರಡೂ ಪಕ್ಷಗಳಲ್ಲಿ ‘ಆಕಾಂಕ್ಷಿಗಳು’, ‘ಅರ್ಹತೆಯಿದ್ದವರು’, ‘ಹಿರಿಯರು’, ‘ಯುವಕರು/ಹೊಸಬರಾಗಿರುವುದರಿಂದಲೇ ಅರ್ಹರು’ ಈ ರೀತಿ ಬಹಳ ಜನ ಇದ್ದರು. 3-4 ಸಾರಿ ಗೆದ್ದು ಒಮ್ಮೆಯೂ ಮಂತ್ರಿಗಳಾಗದವರು ಇದ್ದರು. 5 ಸಾರಿ ಗೆದ್ದವರೂ ಇದ್ದಾರೆ. ಅಂಥವರಿಗೆ ಹಿಂದಿನ ಅವಧಿಯಲ್ಲಿ ಮಂತ್ರಿಗಿರಿ ಸಿಕ್ಕಿರಲಿಲ್ಲ. ಆಗ ಮಂತ್ರಿಗಳಾದವರು ಸೋತಿದ್ದಾರೆ ಅಥವಾ ಗೆದ್ದಿದ್ದರೂ ಈಗ ಬೇರೆ ಬೇರೆ ಕಾರಣಗಳಿಂದ ಕೊಡಬಾರದು ಎನ್ನುವವರು, ಈಗಲಾದರೂ ತಮಗೆ ಕೊಡಲೇಬೇಕು ಎನ್ನುವವರೂ ಇದ್ದರು. ಜೊತೆಗೆ ಇರುವಷ್ಟು ಮಂತ್ರಿ ಸ್ಥಾನಗಳು ಎರಡೂ ಪಕ್ಷಗಳ ನಡುವೆ ಹಂಚಿಕೆಯಾಗಬೇಕಿರುವುದರಿಂದ ಸಮಸ್ಯೆಯ ತೀವ್ರತೆ ಇನ್ನೂ ಹೆಚ್ಚು.
ಇವೆಲ್ಲಾ ಕಾರಣಗಳಿಂದ ಸಂಪುಟ ರಚನೆ ಸುಲಭದ್ದಾಗಿರಲಿಲ್ಲ. ಇವೆಲ್ಲವನ್ನೂ ಮನಗಂಡೇ ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿಗಳಾಗಿ ಕುಮಾರಸ್ವಾಮಿ ಮತ್ತು ಪರಮೇಶ್ವರ್ ಮಾತ್ರ ಮೊದಲ ಕಂತಿನಲ್ಲಿ ಪ್ರಮಾಣ ಸ್ವೀಕರಿಸಿದ್ದರು. ವಿಶ್ವಾಸಮತ ಯಾಚನೆ, ರೈತರ ಸಾಲಮನ್ನಾದ ಭರವಸೆ ಈಡೇರಿಕೆಯ ಹೊರೆ ಇವೆಲ್ಲದಕ್ಕೆ ಮುಖ್ಯಮಂತ್ರಿ ಗಮನ ಕೊಡಬೇಕಿದ್ದರಿಂದ ಸ್ವಲ್ಪ ಸಮಯ ಹೋಯಿತು; ನಂತರ ರಾಹುಲ್‍ಗಾಂಧಿ ವಿದೇಶ ಪ್ರವಾಸಕ್ಕೆ ಹೋದರು. ಆ ನಂತರ ರಾಜ್ಯಪಾಲರು ಪೂರ್ವನಿಗದಿತ ಸಭೆಗೆ ದೆಹಲಿಗೆ ಹೋಗಬೇಕಾಗಿ ಬಂದಿತು. ಈ ಎಲ್ಲಾ ಕಾರಣಗಳಿಂದ ಸಂಪುಟ ರಚನೆ ಬಹಳ ತಡವಾಯಿತು ಎಂಬ ಸಮಜಾಯಿಷಿಯನ್ನು ಎರಡೂ ಪಕ್ಷಗಳವರು ನೀಡಬಹುದಾದರೂ, ಅಸಲೀ ಕಾರಣ ಎಲ್ಲರಿಗೂ ಗೊತ್ತಿದೆ. ಯಾರೂ ಪ್ರಶ್ನಿಸಲಾರರು ಎಂಬ ಧೈರ್ಯದಿಂದ ಒಂದು ಪಟ್ಟಿಯನ್ನು ಮಾಡಿ, ಸಮರ್ಥವಾಗಿ ನಿಭಾಯಿಸಬಲ್ಲರು ಎಂಬ ವಿಶ್ವಾಸದಿಂದ ಖಾತೆಗಳನ್ನು ಹಂಚಿ, ಅಸಮರ್ಥರು, ಭ್ರಷ್ಟರನ್ನು ದೂರವಿಟ್ಟು ಸಂಪುಟ ರಚನೆ ಮಾಡುವ ಸಂಭವವೇ ಇಲ್ಲ.
ಈ ಸರ್ಕಾರವು ಸಮ್ಮಿಶ್ರ ಸರ್ಕಾರವಾದ್ದರಿಂದ, ಹೆಚ್ಚಿನ ಬಹುಮತವಿಲ್ಲದ್ದರಿಂದ, ಆಪರೇಷನ್ ಕಮಲ ಎಂಬ ನೀಚ ಪ್ರಯೋಗದ ಮೂಲಕ ಪಕ್ಷಾಂತರವನ್ನೂ ಮಾಡುವ ಅಪಾಯವಿರುವುದರಿಂದ ಈ ಸಮಸ್ಯೆ ಏರ್ಪಟ್ಟಿದೆ ಎನ್ನುವ ಹಾಗಿಲ್ಲ. ಇದು ಜೆಡಿಎಸ್ ಮತ್ತು ಕಾಂಗ್ರೆಸ್ ಪಕ್ಷಗಳಿಗೆ ಮಾತ್ರ ಸೀಮಿತವಾದ ಸಮಸ್ಯೆಯೂ ಅಲ್ಲ. ಹಾಗೆ ನೋಡಿದರೆ ಪಕ್ಷೇತರರ ಬೆಂಬಲದೊಂದಿಗೆ ಸರಳ ಬಹುಮತವನ್ನು ಪಡೆದುಕೊಂಡಿದ್ದ ಯಡಿಯೂರಪ್ಪನವರೂ ತಮ್ಮ ಸಂಪುಟದಲ್ಲಿ ಎಂತೆಂಥವರನ್ನು ಇಟ್ಟುಕೊಂಡಿದ್ದರು ಎಂಬುದನ್ನು ನೋಡಿದರೆ ಗೊತ್ತಾಗುತ್ತದೆ. ನಂತರ ಬ್ಲೂ ಬಾಯ್ಸ್ ಎಂಬ ಖ್ಯಾತಿ ಪಡೆದುಕೊಂಡ ಸಿ.ಸಿ.ಪಾಟೀಲ, ಲಕ್ಷ್ಮಣ ಸವದಿ, ಕೃಷ್ಣ ಪಾಲೇಮಾರ್ ಮತ್ತು ರೇಣುಕಾಚಾರ್ಯನಂತಹ ಒಬ್ಬ ಕಾಮಿಡಿ ಫಿಗರ್‍ನನ್ನು ಅವರು ಮಂತ್ರಿ ಮಾಡಿಕೊಂಡಿದ್ದರು. ಇದಲ್ಲದೇ ಮಿತಿಯಿಲ್ಲದೇ ದೋಚುವ ಮಾರ್ಗಗಳನ್ನು ಹುಡುಕಿಕೊಂಡಿದ್ದ ಆರ್.ಅಶೋಕ್, ಶೋಭಾ ಕರಂದ್ಲಾಜೆ, ಕಟ್ಟಾ ಸುಬ್ರಹ್ಮಣ್ಯ ನಾಯ್ಡು, ಕೃಷ್ಣಯ್ಯ ಶೆಟ್ಟಿ, ಕೆ.ಎಸ್.ಈಶ್ವರಪ್ಪರಂಥವರೂ ಮಂತ್ರಿಗಳಾಗಿದ್ದರು. ಇದು ಸಿದ್ದರಾಮಯ್ಯನವರ ಸರ್ಕಾರದಲ್ಲೂ ಮುಂದುವರೆಯಿತು.
ಇಂದು ಯಾವ್ಯಾವ ಖಾತೆಗಳಿಗೆ ಪಟ್ಟು ಹಿಡಿಯಲಾಗುತ್ತಿದೆ ಮತ್ತು ಆ ಖಾತೆಗಳನ್ನು ಹಿಂದಿನ ಸಂಪುಟದಲ್ಲಿ ಯಾರು ಹೊಂದಿದ್ದರು ಎಂಬುದನ್ನು ನೋಡಿದರೆ ಸಾಕು ವಿಷಯ ಸ್ಪಷ್ಟವಾಗುತ್ತದೆ. ಬೆಂಗಳೂರು ಅಭಿವೃದ್ಧಿ ಕೆ.ಜೆ.ಜಾರ್ಜ್, ಇಂಧನ ಖಾತೆ ಡಿ.ಕೆ.ಶಿವಕುಮಾರ್, ಬೃಹತ್ ನೀರಾವರಿ ಎಂ.ಬಿ.ಪಾಟೀಲ್ ಮತ್ತು ಲೋಕೋಪಯೋಗಿ ಎಚ್.ಸಿ.ಮಹದೇವಪ್ಪ. ಈಗಲೂ ಇದೇ ಖಾತೆಗಳಿಗೆ ಒತ್ತಡವಂತೆ. ಪಕ್ಷಗಳ ಪ್ರಣಾಳಿಕೆಗಳಲ್ಲೇ ನೀರಾವರಿಗೆ ಮುಂದಿನ ಐದು ವರ್ಷಗಳಲ್ಲಿ ಒಂದೂವರೆ ಲಕ್ಷ ಕೋಟಿ ರೂ. ಮೀಸಲು ಎಂದು ಘೋಷಿಸಲಾಗಿದೆ ಎಂದರೆ ಆ ಖಾತೆಯ ಮಹತ್ವ ಅರ್ಥ ಮಾಡಿಕೊಳ್ಳಬಹುದು. ಸರ್ಕಾರದ ಯೋಜನೇತರ ವೆಚ್ಚದ ಸಿಂಹಪಾಲು ಕಬಳಿಸುವುದು ಶಿಕ್ಷಣ ಇಲಾಖೆ. ಆದರೆ, ಅದು ಯಾರಿಗೂ ಬೇಡ. ಏಕೆಂದರೆ ಅಲ್ಲಿ ಕಾಮಗಾರಿ ಅಥವಾ ಖರೀದಿ ಹೆಚ್ಚೇನೂ ನಡೆಯುವುದಿಲ್ಲ. ಈಗಾಗಲೇ ನೇಮಕಗೊಂಡಿರುವ ಶಿಕ್ಷಕರಿಗೆ ಸಂಬಳ ಕೊಡಲೇ ಅಷ್ಟು ಹಣ ಬೇಕು. ಸಿದ್ದರಾಮಯ್ಯನವರ ಸರ್ಕಾರದಲ್ಲಿ ತಂದ ಕಾಯ್ದೆಯಂತೆ ಎಸ್‍ಸಿ., ಎಸ್.ಟಿ ಸಮುದಾಯಗಳಿಗೆ ಜನಸಂಖ್ಯೆಗನುಗುಣವಾಗಿ ಸರ್ಕಾರದ ಹಣ ಖರ್ಚು ಮಾಡಬೇಕು ಎಂದಾಗಿರುವುದರಿಂದ ಸಮಾಜ ಕಲ್ಯಾಣ ಇಲಾಖೆಗೂ ಸ್ವಲ್ಪ ಮಹತ್ವ ಬಂದಿದೆ.
ಶಿಕ್ಷಣ, ಆರೋಗ್ಯ, ಸಣ್ಣ ಕೈಗಾರಿಕೆ, ಸಣ್ಣ ನೀರಾವರಿ ಇಂತಹ ಇಲಾಖೆಗಳನ್ನು ನಿಭಾಯಿಸುವ ಖಾತೆ ಆದರೆ ಸಾಕು ಎಂಬ ಮಾತನ್ನಾಡಿರುವುದು ಕೊಳ್ಳೇಗಾಲದ ಬಿಎಸ್‍ಪಿ ಶಾಸಕ ಎನ್.ಮಹೇಶ್ ಅವರು ಮಾತ್ರ.
‘ಫಲವತ್ತಾದ ಖಾತೆ’ಗಳನ್ನು ಕೇಳುತ್ತಿರುವ ಬಲಾಢ್ಯ ಶಾಸಕರ ಹಿತಾಸಕ್ತಿಯ ಕುರಿತು ಯಾವ ಮಾಧ್ಯಮವೂ ಪ್ರಶ್ನೆಯನ್ನು ಎತ್ತುತ್ತಿಲ್ಲ. ಬದಲಿಗೆ ಆ ಖಾತೆಗಳನ್ನು ಕೇಳುತ್ತಿರುವುದು ಅವರ ‘ಬಲ’ದ ಪ್ರತೀಕವೆಂಬಂತೆ ವಿಜೃಂಭಿಸಲಾಗುತ್ತಿದೆ ಅಥವಾ ಅದರಿಂದೇನಾದರೂ ಭಿನ್ನಮತ ಉಂಟಾದರೆ ಒಳ್ಳೆಯದೆಂದು ಬಿಜೆಪಿ ಪರವಾದ ಬಹುತೇಕ ಮಾಧ್ಯಮಗಳು ಕಾಯುತ್ತಿವೆ. ಇಂತಹ ಖಾತೆಗಳೇ ಬೇಕು ಎಂದು ಪಟ್ಟು ಹಿಡಿಯುವವರು ಖೂಳರು, ಅವರನ್ನು ಜನರು ತಿರಸ್ಕರಿಸಬೇಕು ಎನ್ನುವ ಮಾಧ್ಯಮವೇ ಇಲ್ಲ ಎಂಬುದು ಮಾಧ್ಯಮಗಳ ದುಸ್ಥಿತಿಯನ್ನೂ ತೋರಿಸುತ್ತಿದೆ.
ಇವುಗಳೊಂದಿಗೆ, ಹಣಕಾಸು ಮತ್ತು ಅಬಕಾರಿ ಇಲಾಖೆಗಳಿಗೂ ಬೇಡಿಕೆಯಿದೆಯಾದರೂ 2004ರಿಂದ ಈ ಖಾತೆಗಳನ್ನು ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಅಥವಾ ಅವರ ಡಮ್ಮಿ ಶಾಸಕರಿಗೆ ಕೊಟ್ಟು ನಿಭಾಯಿಸಲಾಗುತ್ತಿದೆ. ಕಂದಾಯ ಮತ್ತು ಗೃಹ ಖಾತೆಗಳಿಗೆ ಒಂದು ಕಾಲದಲ್ಲಿ ಬಹಳ ಬೇಡಿಕೆಯಿತ್ತು. ಮುಖ್ಯಮಂತ್ರಿ ನಂತರದ ನಂ.2 ಮತ್ತು 3ನೇ ಸ್ಥಾನದ ಖಾತೆಗಳಾಗಿದ್ದವು. ಈಗ ಅವಕ್ಕೆ ಅಷ್ಟು ಮಹತ್ವ ಇಲ್ಲ. ಕಾಂಗ್ರೆಸ್ ಮತ್ತು ಜೆಡಿಎಸ್ ನಡುವೆ ಖಾತೆ ಹಂಚಿಕೆ ಚರ್ಚೆಯಾದಾಗ ಗೃಹ ಖಾತೆ ನಮಗೆ ಬೇಡ, ಅದರಿಂದ ವಿವಾದಗಳೇ ಹೆಚ್ಚು ಎಂಬ ಮಾತುಕತೆಯಾಯಿತು ಎಂಬುದೊಂದು ಸುದ್ದಿಯೂ ಓಡಾಡಿತು. ಹಾಗೆಯೇ ಆಗಿದ್ದರೆ ಆಶ್ಚರ್ಯವೇನೂ ಇಲ್ಲ.
ಅತ್ಯುತ್ತಮವಾದ, ಅಂದರೆ ಹಣಕಾಸಿನ ವಿಚಾರದಲ್ಲಿ ಪ್ರಾಮಾಣಿಕರೂ, ಇಲಾಖೆ ಹಾಗೂ ಅಧಿಕಾರಿಗಳನ್ನು ನಿಭಾಯಿಸುವಲ್ಲಿ ದಕ್ಷರೂ, ಮುನ್ನೋಟ ಹೊಂದಿರುವ ವಿಚಾರದಲ್ಲಿ ಕನಸುಗಾರರೂ, ತಳಮಟ್ಟದ ಸಂಗತಿಗಳ ಅನುಭವದ ವಿಚಾರದಲ್ಲಿ ವಿವೇಕಿಗಳೂ ಮತ್ತು ದೃಷ್ಟಿಕೋನದ ವಿಚಾರದಲ್ಲಿ ಜನಪರರೂ ಆದಂತಹವರನ್ನು ಒಳಗೊಂಡಿರುವ, ಸಂಪುಟ ಇಲ್ಲದೇ ಯಾವೊಬ್ಬ ಸೂಪರ್ ಮುಖ್ಯಮಂತ್ರಿ ಅಥವಾ ಪ್ರಧಾನಮಂತ್ರಿ ಅತ್ಯುತ್ತಮ ಆಡಳಿತವನ್ನು ನೀಡುವುದು ಸಾಧ್ಯವಿಲ್ಲ. ಇವು ಇಲ್ಲದೇ, ಆಡಳಿತದಲ್ಲಿ ಯಶಸ್ಸು ಕಂಡಿದ್ದಾರೆಂದು ಹೇಳಿದರೆ ಅದರ ಅರ್ಥ ಅವರನ್ನು ಹೊಗಳಿ ಸತ್ಯವನ್ನು ಮರೆಮಾಚಬಲ್ಲ ಮಾಧ್ಯಮ ಯಂತ್ರಾಂಗ ಅವರ ಪರ ಇದೆ ಎಂದಾಗುತ್ತದೆ ಅಷ್ಟೇ.
ಒಂದು ಬೇಸಿಕ್ ಸಂಗತಿಯನ್ನು ನೋಡಿ. ಮೇಲ್ಮನೆ, ವಿಧಾನಪರಿಷತ್ ಏಕಿದೆ? ಹಿರಿಯ ಅನುಭವಿಗಳೂ, ವಿಷಯ ತಜ್ಞರೂ, ಪ್ರಜ್ಞಾವಂತ ಸಮುದಾಯದಿಂದ ಆಯ್ಕೆಯಾಗಿ ಬಂದಂಥವರೂ ಅಲ್ಲಿರಬೇಕು. ಆದರೆ, ಎಂ.ಎಲ್.ಎ.ಗಳಿಂದ ಆಯ್ಕೆಯಾಗಿ ಬರುವ ಮುಖ್ಯಮಂತ್ರಿ, ಅವರನ್ನು ನಿಭಾಯಿಸುವ ಒತ್ತಡದಲ್ಲಿ ಮೇಲ್ಮನೆಯಿಂದ ಯಾರನ್ನೂ ಮಂತ್ರಿ ಮಾಡಿಕೊಳ್ಳಲಾಗದ ಪರಿಸ್ಥಿತಿಯಲ್ಲಿರುತ್ತಾರೆ. ಅವಕಾಶವಿದ್ದಿದ್ದರೆ ಸಿದ್ದರಾಮಯ್ಯನವರು ಒಬ್ಬ ಎಂ.ಎಲ್.ಸಿಯನ್ನೂ ಮಂತ್ರಿ ಮಾಡುತ್ತಿರಲಿಲ್ಲ. ಸರ್ಕಾರವನ್ನು ಸಮರ್ಥಿಸಿಕೊಳ್ಳಲು ಅಲ್ಲಿಗೊಬ್ಬ ಸಭಾ ನಾಯಕ ಬೇಕಿದ್ದುದರಿಂದ ಎಸ್.ಆರ್.ಪಾಟೀಲ್‍ರನ್ನು ಮಂತ್ರಿಗಳನ್ನಾಗಿಸಲಾಯಿತು. ನಂತರ ಜಿ.ಪರಮೇಶ್ವರ್ ಅವರಿಗೆ ಕೊಡಲೇಬೇಕು ಎಂದಾದಾಗ, ಪಾಟೀಲರನ್ನು ತೆಗೆದರು.
ಸಚಿವ ಸಂಪುಟ ರಚನೆ ಎನ್ನುವುದು ಈ ರೀತಿಯ ಅಧಿಕಾರದ ಮ್ಯಾನೇಜ್‍ಮೆಂಟ್ ಕಸರತ್ತು ಮಾತ್ರವಾಗಿಬಿಟ್ಟರೆ ರಾಜ್ಯದ ಗತಿಯೇನಾಗಬೇಕು? ಹಣಕಾಸು ಖಾತೆ ಮತ್ತು ಕಾಮಗಾರಿಗಳು ನಡೆಯುವ ಕೆಲವು ಖಾತೆಗಳು ಮಾತ್ರ ಸರ್ಕಾರವಲ್ಲ. ಶಿಕ್ಷಣ ಮತ್ತು ಆರೋಗ್ಯ ಖಾತೆಗಳ ಮೂಲಕ ಏನು ಮಾಡಬಹುದೆಂಬುದನ್ನು ದೆಹಲಿಯ ಆಪ್ ಸರ್ಕಾರವು ಮಾಡಿ ತೋರಿಸಿದೆ. ಇಂತಹ ಹತ್ತು ಹಲವು ಉದಾಹರಣೆಗಳು ದೇಶದ ಬೇರೆ ಬೇರೆ ರಾಜ್ಯಗಳಲ್ಲಿರಲು ಸಾಧ್ಯ. ಅಂತಹವನ್ನು ಕರ್ತವ್ಯ ನಿಷ್ಠೆ ಮತ್ತು ಬದ್ಧತೆಯಿಂದ ಜಾರಿ ಮಾಡಲು ಸಾಧ್ಯವಿರುವ ಸಚಿವರು ಈ ಸಂಪುಟದಲ್ಲಿ ಹೆಚ್ಚೆಂದರೆ ಇಬ್ಬರು ಅಥವಾ ಮೂವರಿರಬಹುದು.
ಕುಮಾರಸ್ವಾಮಿಯವರಿಗೆ ಹೆಚ್ಚಿನ ಆಯ್ಕೆಗಳು ಉಳಿದುಕೊಂಡಂತಿಲ್ಲ; ಏಕೆಂದರೆ ಅವರು ತಮ್ಮ ಪಕ್ಷದಿಂದ ಇನ್ನೊಬ್ಬ ಸಚಿವರನ್ನಷ್ಟೇ ನೇಮಿಸಿಕೊಳ್ಳಬಹುದು. ಕಾಂಗ್ರೆಸ್ ಇನ್ನೂ 6 ಸಚಿವರನ್ನು ನೇಮಿಸಬಹುದಾದರೂ, ಆ ಆರು ಜನ ಯಾರಿರಲಿ ಎಂದು ತೀರ್ಮಾನಿಸುವವರು ಕುಮಾರಸ್ವಾಮಿ ಅಲ್ಲ. ಹೀಗಾಗಿ ಈ ಸಚಿವ ಸಂಪುಟದ ಬಾಲಗ್ರಹ ಶುರುವಾಗಿದೆ. ಇನ್ನು ಮುಂದೆ ಹೆಚ್ಚಾಗಬಹುದಾದ ಭಿನ್ನಮತವು ಸಂಪುಟಕ್ಕೆ ಇನ್ನೂ ಅಸಮರ್ಥರು ಮತ್ತು ಅಧಿಕಾರದಾಹಿಗಳನ್ನು ಸೇರಿಸುತ್ತದೆಯೇ ಹೊರತು ಸಮರ್ಥರನ್ನಲ್ಲ. ಇದನ್ನು ಸರಿಪಡಿಸುವ ಹೊಣೆಗಾರಿಕೆ ಜೆಡಿಎಸ್ ಮತ್ತು ಕಾಂಗ್ರೆಸ್ ಎರಡೂ ಪಕ್ಷಗಳ ಮೇಲಿದೆ. ಪೂರ್ಣ ಜನಾದೇಶವಿಲ್ಲದೆಯೂ ಸರ್ಕಾರ ರಚಿಸಲು ಹೊರಟಿರುವವರು ಹೆಚ್ಚಿನ ಹೊಣೆಗಾರಿಕೆಯಿಂದ ಅಧಿಕಾರ ನಡೆಸಬೇಕಾಗುತ್ತದೆ.
ಮಾಧ್ಯಮಗಳಿಗೇಕೆ ಈ ಸಂಕಟ?
ಫಲವತ್ತಾದ ಖಾತೆಯನ್ನು ಕೇಳುತ್ತಿದ್ದಾರೆಂಬ ಸುದ್ದಿ ಮಾಧ್ಯಮ ಸಂಸ್ಥೆಯೊಂದಕ್ಕೆ ಸಿಕ್ಕಿದರೆ, ಅವರೇನು ಮಾಡಬೇಕು? ಇಂತಹ ಖಾತೆ ಬೇಕು ಎಂದು ಕೇಳುತ್ತಿರುವ ಶಾಸಕ ಭ್ರಷ್ಟಾಚಾರಕ್ಕೆ ಅವಕಾಶ ಬೇಕು ಎಂದು ಕೇಳುತ್ತಿದ್ದಾರೆಂದು ಅವರ ವಿರುದ್ಧ ಜನಾಭಿಪ್ರಾಯ ಮೂಡಿಸಬೇಕು. ಆದರೆ, ಅಂತಹ ಖಾತೆಯನ್ನು ಅವರು ಕೇಳುತ್ತಿದ್ದಾರೆ. ಪಾಪ ಅವರಿಗೆ ಸಿಕ್ಕಿಲ್ಲ. ಆ ವ್ಯಕ್ತಿಗೆ ಅನ್ಯಾಯವಾಗಿದೆ ಎಂಬಂತೆ ಬಿಂಬಿಸುವುದು ನಡೆಯುತ್ತಿದೆ. ಕೇಂದ್ರ ಸರ್ಕಾರದಿಂದ ಐಟಿ ದಾಳಿಗೆ ಗುರಿಯಾಗುವ ಅಪಾಯವನ್ನು ಎದುರಿಸುವಷ್ಟು ಸಂಪತ್ತನ್ನು ಕ್ರೋಢೀಕರಣ ಮಾಡಿಕೊಂಡಿರುವ ಶಾಸಕರನ್ನು ಕೂಡಿಟ್ಟುಕೊಂಡು ಸರ್ಕಾರ ರಚಿಸುವಲ್ಲಿ ಮಹತ್ವದ ಪಾತ್ರ ವಹಿಸಿರುವ ಡಿ.ಕೆ.ಶಿವಕುಮಾರ್ ಅವರು ಇಂಧನ ಖಾತೆ ಕೇಳಿದರೆ ಅಥವಾ ಎರಡೆರಡು ಮಹತ್ವದ ಖಾತೆ ಬೇಕೆಂದರೆ ಅದರಲ್ಲಿ ತಪ್ಪೇನಿಲ್ಲ ಎಂಬಂತೆ ಮಾಧ್ಯಮಗಳು ಹೇಳುವುದಕ್ಕಿಂತ ಲಜ್ಜೆಗೇಡಿತನ ಇನ್ನೊಂದಿಲ್ಲ.
ಡಿಕೆಶಿ ಉಪಮುಖ್ಯಮಂತ್ರಿ ಸ್ಥಾನ ವಂಚಿತ ಎಂದು ಇವರೇ ಬಿರುದು ದಯಪಾಲಿಸುವುದು ಆಶ್ಚರ್ಯಕರವಾಗಿದೆ. ಮುಖ್ಯಮಂತ್ರಿ ಒಕ್ಕಲಿಗರಿಗೆ ಕೊಟ್ಟಿದ್ದಾರೆ. ಈ ಸಾರಿ ಜಿ.ಪರಮೇಶ್ವರ್ ಅವರು ಉಪಮುಖ್ಯಮಂತ್ರಿ ಆಗುವುದನ್ನು ತಡೆಯಲಾಗದು. ಒಂದು ವೇಳೆ ತಮಗೂ ಉ.ಮು.ಮ ಮಾಡಿದರೆ, ಇನ್ನೂ ಒಂದು ಉ.ಮು.ಮ ಮಾಡಿ ಎಂ.ಬಿ.ಪಾಟೀಲರನ್ನೋ ಅಥವಾ ಇನ್ನಾರೋ ಒಬ್ಬರನ್ನು ಆ ಸ್ಥಾನಕ್ಕೆ ತರಬೇಕು. ಮೂರು ಮೂರು ಉ.ಮು.ಮ ಸಾಧ್ಯವಿಲ್ಲ. ಈ ಕಾಮನ್‍ಸೆನ್ಸ್ ಡಿ.ಕೆ.ಶಿವಕುಮಾರ್‍ರಿಗೆ ಇದ್ದೇ ಇರುತ್ತದೆ. ಪ್ರಜಾವಾಣಿ ಪತ್ರಿಕೆಯ ಜೊತೆ ಏನು ಮಾತಾಡಿದ್ದಾರೆಂಬುದನ್ನು ಅವರೇ ಹಾಕಿದ್ದಾರೆ. ಆದರೂ, ಅವರು ಉಪಮುಖ್ಯಮಮತ್ರಿ ಸ್ಥಾನ ತಪ್ಪಿದ್ದಕ್ಕೆ ಅಸಮಾಧಾನಗೊಂಡಿದ್ದಾರೆಂದು ಸುದ್ದಿ ಮಾಡುತ್ತಾರೆ. ಡಿಕೆಶಿ ಬಿಜೆಪಿಗೆ ಹೋಗಲು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆಂಬ ಸುದ್ದಿ ಇದುವರೆಗೂ ನಾಲ್ಕೈದು ಬಾರಿ ಪ್ರಕಟವಾಗಿದೆ.
ತಮಗೆ ಇಂತಹುದೇ ಖಾತೆ ಬೇಕು, ಉಸ್ತುವಾರಿ ಸಚಿವರನ್ನಾಗಿಸದಿದ್ದರೆ ಶಾಸಕನಾಗಿಯೇ ಉಳಿಯುತ್ತೇನೆಂದು ಪಟ್ಟು ಹಿಡಿದಿರುವ ಕೊಳ್ಳೇಗಾಲ ಶಾಸಕ ಎನ್.ಮಹೇಶ್ ಎಂದು ಟಿವಿ ಚಾನೆಲ್ ಒಂದು ಸುದ್ದಿ ಮಾಡುತ್ತದೆ. ಅದರ ಕುರಿತು ಅವರು ಮಹೇಶ್ ಅವರ ಸಂದರ್ಶನವನ್ನೂ ಬಿತ್ತರಿಸುತ್ತಾರೆ. ಅದರಲ್ಲಿ ‘ತನಗೆ ಇಂತಿಂತಹ ಖಾತೆಗಳನ್ನು ಕೊಡಬಹುದೆಂದು ಮಾಧ್ಯಮಗಳಲ್ಲಿ ಸುದ್ದಿಯಾಗುತ್ತಿದೆ. ಅಂತಹ ಖಾತೆಗಳು ಸಿಕ್ಕರೆ ಒಳ್ಳೆಯ ಕೆಲಸ ಮಾಡಬಹುದು’ ಎಂದು ಎನ್.ಮಹೇಶ್ ಅವರು ಹೇಳುತ್ತಾರೆ. ವರದಿಗಾರ ‘ನಿಮಗೆ ಚಾಮರಾಜನಗರ ಜಿಲ್ಲಾ ಉಸ್ತುವಾರಿ ಸಚಿವರಾಗಿಸಲಾಗುತ್ತದಾ? ಅದಕ್ಕಾಗಿ ನೀವು ಪಟ್ಟು ಹಿಡಿಯುತ್ತೀರಾ?’ ಎಂದು ಕೇಳುತ್ತಾನೆ. ಆಗ ಮಹೇಶ್ ಅವರು ‘ಹೌದು, ಜಿಲ್ಲಾ ಉಸ್ತುವಾರಿ ಸಚಿವರನ್ನಾಗಿ ಮಾಡಬೇಕು ಎಂದು ನಾನು ಕೇಳುತ್ತೇನೆ. ಆದರೆ, ನನ್ನನ್ನು ಏನು ಮಾಡದಿದ್ದರೂ ಪರವಾಗಿಲ್ಲ. ನಾನು ಕುಮಾರಸ್ವಾಮಿಯವರನ್ನು ಬೆಂಬಲಿಸಿ ಶಾಸಕನಾಗಿಯೇ ಕೆಲಸ ಮಾಡುತ್ತೇನೆ’ ಎಂದು ಹೇಳುತ್ತಾರೆ. ಹೀಗಿದ್ದರೂ ಅದನ್ನು ತಿರುಚಲಾಗುತ್ತದೆ.
ಹುಣಸೂರು ಕ್ಷೇತ್ರದಿಂದ ಆರಿಸಿ ಬಂದಿರುವ ಹಿರಿಯ ಶಾಸಕ, ಮಾಜಿ ಸಚಿವ ಎಚ್.ವಿಶ್ವನಾಥ್ ಅವರಂತೂ ಬಹಳ ಸಮಾಧಾನಚಿತ್ತದಿಂದ ಮಾತನಾಡುತ್ತಾರೆ. ‘ನನಗೆ ಸಚಿವ ಸ್ಥಾನ ಸಿಗದಿದ್ದಕ್ಕೆ ಯಾವ ಬೇಸರವೂ ಇಲ್ಲ. ಪಕ್ಷದ ನಾಯಕರಿಗೂ ಎಲ್ಲರಿಗೂ ಪ್ರಾತಿನಿಧ್ಯ ನೀಡುವ ಒತ್ತಡವಿರುತ್ತದೆ. ನನ್ನ ಜೀವನದ ಸಂಧ್ಯಾ ಕಾಲದಲ್ಲಿ ನನ್ನನ್ನು ಶಾಸಕನಾಗಿಸಿದ್ದಕ್ಕೆ ಪಕ್ಷದ ನಾಯಕರಿಗೂ, ಹುಣಸೂರಿನ ಜನತೆಗೂ ನಾನು ಆಭಾರಿ. ನಾನು ಶಾಸಕನಾಗಿ ಅವರ ಕೆಲಸ ಮಾಡುತ್ತೇನೆ’. ‘ನಿಮಗಿಂತಲೂ ಕುಮಾರಸ್ವಾಮಿ ಆಡಳಿತದ ಅನುಭವದಲ್ಲಿ ಮತ್ತು ವಯಸ್ಸಿನಲ್ಲಿ ಕಿರಿಯರು. ಅವರು ನಿಮ್ಮ ಮಾರ್ಗದರ್ಶನ ಪಡೆದುಕೊಳ್ಳುತ್ತಾರಾ?’. ‘ಕುಮಾರಸ್ವಾಮಿಯವರು ಪ್ರಬುದ್ಧರು ಮತ್ತು ಸಮರ್ಥರು. ಅವರಿಗೆ ನಾನು ಸಹಾಯಕನಾಗಿರುತ್ತೇನೆ. ಅವರ ಎಡಬಲದಲ್ಲಿ ನಿಂತು ನಿಷ್ಠೆಯಿಂದ ಕೆಲಸ ಮಾಡುತ್ತೇನೆ’. ಇಷ್ಟು ಸ್ಪಷ್ಟವಾಗಿ ಮಾತಾಡಿದರೂ ಮಾಧ್ಯಮದವರಿಗೆ ಸಮಾಧಾನವಿಲ್ಲ.
ಮಂತ್ರಿ ಸ್ಥಾನ ತಪ್ಪಿದವರಿಗೆ ಅಸಮಾಧಾನವಾಗಿರುವುದಿಲ್ಲ ಎಂದೇನೂ ಅಲ್ಲ. ಬೇಸರವಂತೂ ಎಲ್ಲರಿಗೂ ಆಗಿಯೇ ಇರುತ್ತದೆ. ಆದರೆ, ಈ ಸಾರಿ ಸಚಿವರಾದವರ ಪಟ್ಟಿ ಹಾಕಿದ್ದಕ್ಕಿಂತ, ಸಚಿವ ಸ್ಥಾನ ವಂಚಿತರ ಫೋಟೋ ಹಾಕಿ, ಸಾಲದ್ದಕ್ಕೆ ಅವರ ಜಿಲ್ಲೆ ಮತ್ತು ಜಾತಿಯನ್ನೂ ಹಾಕಿ ಮಾಧ್ಯಮಗಳು ಗಂಟೆಗಟ್ಟಲೇ ಪ್ರಸಾರ ಮಾಡಿದರು.
ಜೊತೆಗೆ ಎರಡೂ ಪಕ್ಷಗಳ ನಡುವೆಯೇ ಅಸಮಾಧಾನ ಎಂದು ಬಿಂಬಿಸಲು ಪ್ರಯತ್ನಿಸಿದರು. ಮುಖ್ಯಮಂತ್ರಿ ಸ್ಥಾನವನ್ನು ಜೆಡಿಎಸ್‍ನವರಿಗೆ ಬಿಟ್ಟುಕೊಟ್ಟಿದ್ದಕ್ಕೆ ಕಾಂಗ್ರೆಸ್ ಶಾಸಕಾಂಗ ಪಕ್ಷದಲ್ಲಿ ಅಸಮಾಧಾನ ಎಂಬ ‘ಬ್ರೇಕಿಂಗ್ ನ್ಯೂಸ್’ ಬಂದಿತು. ಅತಂತ್ರದ ಭೀತಿಯಲ್ಲಿರುವ ಸಂದರ್ಭದಲ್ಲಿ, ಮುಖ್ಯಮಂತ್ರಿ ಸ್ಥಾನ ಬಿಟ್ಟುಕೊಡದಿದ್ದರೆ ಜೆಡಿಎಸ್‍ನವರು ಬಿಜೆಪಿಯ ಜೊತೆಗೆ ಹೋಗುವ ಎಲ್ಲಾ ಸಾಧ್ಯತೆ ಇದ್ದೇ ಇತ್ತು. ಹೀಗಿರುವಾಗ ಕಾಂಗ್ರೆಸ್ ಹೈಕಮ್ಯಾಂಡ್‍ನ ಚುರುಕುತನ ಮತ್ತು ಪ್ರಬುದ್ಧತೆಯ ಕಾರಣದಿಂದ, ಸರ್ಕಾರದ ಭಾಗವಾಗಿಯಾದರೂ ಇದ್ದೇವೆಂಬ ಸಮಾಧಾನದಲ್ಲಿ ಶಾಸಕರಿದ್ದರೆ, ಮಾಧ್ಯಮಗಳಿಗೆ ಸಮಾಧಾನವಿಲ್ಲ.
ಕಳೆದ ಸರ್ಕಾರ ಅಸ್ತಿತ್ವಕ್ಕೆ ಬಂದ ಆರಂಭದಿಂದಲೂ ಇಂತಹುದೇ ಸುದ್ದಿಗಳನ್ನು ಪದೇಪದೇ ಪ್ರಸಾರ ಮಾಡಲಾಯಿತು. ಸಿದ್ದರಾಮಯ್ಯನವರ ಸರ್ಕಾರ ಶೀಘ್ರವೇ ಪತನ, ಸಿದ್ದರಾಮಯ್ಯರ ಮುಖ್ಯಮಂತ್ರಿ ಸ್ಥಾನಕ್ಕೆ ಸಂಚಕಾರ, ದಲಿತ ಮುಖ್ಯಮಂತ್ರಿ ಬೇಡಿಕೆಗೆ ಹೈಕಮಾಂಡ್ ಅಸ್ತು, ಎಂಬ ಸುದ್ದಿಗಳು ಮೂರೂವರೆ ವರ್ಷಗಳ ಕಾಲ ಪ್ರಸಾರವಾದವು. ಇನ್ನು ಸಾಧ್ಯವೇ ಇಲ್ಲ ಎಂದಾಗ, ಸಿದ್ದರಾಮಯ್ಯನವರ ವಿರುದ್ಧ ಪ್ರಚಾರ ಮಾಡುತ್ತಾ ತಮ್ಮ ಕೈಂಕರ್ಯ ಮುಂದುವರೆಸಿದವು.
ಪ್ರಮಾಣವಚನಕ್ಕೆ ಮುಂಚೆ ಮಾಧ್ಯಮಗಳಿಂದ ಕನಿಷ್ಠ 7-8 ಬಾರಿಯಾದರೂ ಸಚಿವರ ಪಟ್ಟಿಗಳು ಬಿಡುಗಡೆಯಾದವು. ಪ್ರಮಾಣವಚನದ ದಿನ ‘ಸಚಿವ ಸ್ಥಾನ ವಂಚಿತ’ ಎಂ.ಬಿ.ಪಾಟೀಲ್, ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸುತ್ತಾರೆ; 1.15ಕ್ಕೆ ಸ್ಪೀಕರ್ ಭೇಟಿಗೆ ಸಮಯ ನಿಗದಿ ಮಾಡಿಕೊಂಡಿದ್ದಾರೆಂದು ಬ್ರೇಕಿಂಗ್ ನ್ಯೂಸ್ ಹಾಕಲಾಯಿತು. ಡಿ.ಸಿ.ತಮ್ಮಣ್ಣ ಬೆಂಬಲಿಗರಿಂದ ರಸ್ತೆ ತಡೆ, ಕಿ.ಮೀ.ಗಟ್ಟಲೆ ಟ್ರಾಫಿಕ್ ಜಾಮ್ ಎಂದು ಹೇಳಿದಾಗ, ರಸ್ತೆಯ ಮೇಲೆ 30 ಜನರೂ ಇರಲಿಲ್ಲ. ಸುವರ್ಣ ನ್ಯೂಸ್‍ನ ಪ್ರಮುಖ ಆಂಕರ್ ತಾರಕಸ್ವರದಲ್ಲಿ ಅರಚುತ್ತಿದ್ದರು. ಪಬ್ಲಿಕ್ ಟಿವಿಯಲ್ಲಿ ಭಿನ್ನಮತದ ಬೇಗುದಿ ನಡುವೆ ಪ್ರಮಾಣ ವಚನ ಎಂಬ ಶೀರ್ಷಿಕೆಯನ್ನು ಇಡೀ ಪ್ರಮಾಣ ವಚನ ಕಾರ್ಯಕ್ರಮದುದ್ದಕ್ಕೂ ಹಾಕಲಾಗಿತ್ತು. ರಾಜಕಾರಣಿಗಳು ಏನು ಎಂಬುದು ಎಲ್ಲರಿಗೂ ಗೊತ್ತಿರುವ ಸಂಗತಿ. ಆದರೆ ಮಾಧ್ಯಮಗಳು ಅವರಿಗಿಂತಲೂ ಕುಲಗೆಟ್ಟು ಹೋಗಿರುವ ಸಂದರ್ಭದಲ್ಲಿ ನಾವಿದ್ದೇವೆ.
ಆದಷ್ಟು ಬೇಗ ಈ ಮಾಧ್ಯಮಗಳು ತಮ್ಮ ತಪ್ಪನ್ನು ಅರಿತುಕೊಂಡು ಸರಿ ಪಡಿಸಿಕೊಳ್ಳದಿದ್ದರೆ, ಈಗಾಗಲೇ ಕುಸಿದಿರುವ ಮಾಧ್ಯಮಗಳ ವಿಶ್ವಾಸಾರ್ಹತೆ ಸಂಪೂರ್ಣ ಬಿಕ್ಕಟ್ಟಿಗೆ ಸಿಲುಕುವುದರಲ್ಲಿ ಸಂಶಯವಿಲ್ಲ.

ನೀಲಗಾರ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...