ದೇವಾಲಯಗಳು ಮಾನಸಿಕ ಗುಲಾಮಗಿರಿಗೆ ದಾರಿ, ಶಾಲೆಗಳು ಜೀವನಕ್ಕೆ ಬೆಳಕನ್ನು ಚೆಲ್ಲುವ ಮಾರ್ಗವಾಗಿದೆ ಎಂದು ಬಿಹಾರದ ಶಿಕ್ಷಣ ಸಚಿವ ಪ್ರೊ.ಚಂದ್ರಶೇಖರ್ ಅವರು ಹೇಳಿದ್ದು, ಆರ್‌ಜೆಡಿ ಪಕ್ಷದ ಶಾಸಕ ಫತೇ ಬಹದ್ದೂರ್ ಸಿಂಗ್ ಅವರ ಹೇಳಿಕೆಗೆ ತಮ್ಮ ಬೆಂಬಲವನ್ನು ವ್ಯಕ್ತಪಡಿಸಿದ್ದಾರೆ.
ರೋಹ್ತಾಸ್ ಜಿಲ್ಲೆಯ ಡೆಹ್ರಿಯಲ್ಲಿ ಸಾಮಾಜ ಸುಧಾರಕಿ ಮತ್ತು ದೇಶದ ಮೊದಲ ಮಹಿಳಾ ಶಿಕ್ಷಕಿ ಸಾವಿತ್ರಿಬಾಯಿ ಫುಲೆ ಅವರ ಜನ್ಮದಿನದ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದ ಪ್ರೊ.ಚಂದ್ರಶೇಖರ್, ಆರ್‌ಜೆಡಿ ಶಾಸಕ ಫತೇಹ್ ಅವರಿಗೆ ಬೆಂಬವನ್ನು ಸೂಚಿಸಿ ದೇವಸ್ಥಾನವು ‘ಮಾನಸಿಕ ಗುಲಾಮಗಿರಿ’ಗೆ ಮಾರ್ಗವಾಗಿದೆ, ಶಾಲೆಗಳು ಜೀವನದ ದಾರಿಗೆ ಬೆಳಕನ್ನು ತೋರಿಸುತ್ತವೆ ಎಂದು ಹೇಳಿದ್ದಾರೆ.
ಹುಸಿ ಹಿಂದುತ್ವ ಮತ್ತು ಹುಸಿ ಹಿಂದುತ್ವವಾದದ ಬಗ್ಗೆ ಜನರು ಜಾಗರೂಕರಾಗಿರಬೇಕು. ಅಯೋಧ್ಯೆಯ ರಾಮ ಮಂದಿರದ ತಾಣವು ಶೋಷಣೆಯ ತಾಣವಾಗಿದ್ದು, ನಿರ್ದಿಷ್ಟ ಸಮುದಾಯದ ಕೆಲವರು ಅದರ ಮೂಲಕ ತಮ್ಮ ಜೇಬು ತುಂಬಿಸಿಕೊಳ್ಳಲು ಸಂಚು ರೂಪಿಸಿದ್ದಾರೆ ಎಂದು ಹೇಳಿದ್ದಾರೆ. ರಾಮನು ಎಲ್ಲರಲ್ಲಿಯೂ ಮತ್ತು ಎಲ್ಲೆಡೆಯೂ ನೆಲೆಸಿದ್ದಾನೆ. ಅವನನ್ನು ಹುಡುಕಲು ಎಲ್ಲಿಯೂ ಅಥವಾ ಯಾವುದೇ ದೇವಾಲಯಕ್ಕೆ ಹೋಗುವ ಅಗತ್ಯವಿಲ್ಲ ಎಂದು ಅವರು ಹೇಳಿದ್ದಾರೆ.
ನೀವು ಗಾಯಗೊಂಡರೆ ಎಲ್ಲಿಗೆ ಹೋಗುತ್ತೀರಿ? ದೇವಾಲಯಕ್ಕೆ ಅಥವಾ ಆಸ್ಪತ್ರೆಗೆ ? ಒಂದು ವೇಳೆ ನೀವು ಶಿಕ್ಷಣ ಪಡೆಯಲು, ಅಧಿಕಾರಿ, ಶಾಸಕ ಅಥವಾ ಸಂಸದನಾಗಲು ಬಯಸಿದರೆ, ದೇವಾಲಯಕ್ಕೆ ಹೋಗುತ್ತೀರಾ ? ಅಥವಾ ಶಾಲೆಗೆ ಹೋಗುತ್ತೀರಾ? ಎಂದು ಸಾವಿತ್ರಿ ಬಾಯಿ ಪುಲೆ ಪ್ರಶ್ನಿಸಿದ್ದರು. ಇದನ್ನೇ ಫತೇಹ್ ಬಹಾದೂರ್ ಸಿಂಗ್ ಹೇಳಿದ್ದಾರೆ ಎಂದು ಪ್ರೊ.ಚಂದ್ರಶೇಖರ್ ಹೇಳಿದ್ದಾರೆ.
ಸಿಂಗ್ ಹೇಳಿಕೆಯನ್ನು ವಿರೋಧಿಸುತ್ತಿರುವವರು ಅವರ ನಾಲಿಗೆ ಕತ್ತರಿಸಲು 10 ಲಕ್ಷ ರೂ. ಬಹುಮಾನ ಘೋಷಿಸಿದ್ದಾರೆ. ಮಹಾಭಾರತವನ್ನು ಉಲ್ಲೇಖಿಸಿದ ಅವರು ಈಗ ಏಕಲವ್ಯನ ಮಕ್ಕಳು ಹೆಬ್ಬೆರಳು ನೀಡಲಾರರು. ಯಾವುದೇ ದೇವಸ್ಥಾನಗಳು ನಿಮ್ಮ ಮಕ್ಕಳನ್ನು ಜವಾನನಿಂದ ಕಲೆಕ್ಟರ್ ಆಗಿ ಪರಿವರ್ತಿಸುವುದಿಲ್ಲ, ಪುಸ್ತಕ, ಲೇಖನಿ, ಶಾಲೆ, ಶಿಕ್ಷಣದಿಂದ ಮಾತ್ರವೇ ನಿಮ್ಮ ಮಕ್ಕಳನ್ನು ಪರಿವರ್ತಿಸಲು ಸಾಧ್ಯ. ಆದ್ದರಿಂದ ಅಕ್ಷತೆಯನ್ನು ನೀಡುವವರನ್ನು ಬಿಟ್ಟು ಅಂಬೇಡ್ಕರ್ ಅವರ ತತ್ವಗಳನ್ನು ಅನುಸರಿಸಿ ಎಂದು ಹೇಳಿದ್ದಾರೆ.
ಜೆಡಿಯು ರಾಷ್ಟ್ರೀಯ ವಕ್ತಾರ ಕೆಸಿ ತ್ಯಾಗಿ ಈ ಬಗ್ಗೆ ಪ್ರತಿಕ್ರಿಯಿಸಿದ್ದು, ರಾಮಮಂದಿರ ಮತ್ತು ರಾಮಲಾಲ ಪ್ರತಿಷ್ಠಾಪನಾ ಸಮಾರಂಭದ ವಿರುದ್ಧ ನೀಡಿರುವ ಹೇಳಿಕೆಗಳಿಂದ ಬಿಜೆಪಿಗೆ ಲಾಭವಾಗಿದೆ. ಇಂತಹ ಪರಿಸ್ಥಿತಿಯಲ್ಲಿ ವಿರೋಧ ಪಕ್ಷವಾದ INDIA ಮೈತ್ರಿಕೂಟದ ಮಿತ್ರಪಕ್ಷಗಳು ಇಂತಹ ಹೇಳಿಕೆಗಳನ್ನು ನೀಡಬಾರದು ಎಂದು ಹೇಳಿದ್ದಾರೆ.


