Homeಮುಖಪುಟಭಾರತ-ಮಾಲ್ಡೀವ್ಸ್ ರಾಜತಾಂತ್ರಿಕ ಬಿಕ್ಕಟ್ಟು; ವಿವಾದ ಮೈಮೇಲೆ ಎಳೆದುಕೊಂಡಿದ್ಯಾಕೆ ದ್ವೀಪ ರಾಷ್ಟ್ರ?

ಭಾರತ-ಮಾಲ್ಡೀವ್ಸ್ ರಾಜತಾಂತ್ರಿಕ ಬಿಕ್ಕಟ್ಟು; ವಿವಾದ ಮೈಮೇಲೆ ಎಳೆದುಕೊಂಡಿದ್ಯಾಕೆ ದ್ವೀಪ ರಾಷ್ಟ್ರ?

- Advertisement -
- Advertisement -

ಮಾಲ್ಡೀವ್ಸ್… ಭಾರತದ ಶ್ರೀಮಂತರ, ನಟರ, ಕ್ರೀಡಾಪಟುಗಳ ನೆಚ್ಚಿನ ‘ವಿಶ್ರಾಂತಿ ತಾಣ’. ಹಿಂದೂ ಮಹಾಸಾಗರದಲ್ಲಿರುವ ಈ ದ್ವೀಪ ರಾಷ್ಟ್ರಕ್ಕೆ ಪ್ರತಿ ವರ್ಷ ಲಕ್ಷಾಂತರ ಭಾರತೀಯ ಪ್ರವಾಸಿಗರು ಭೇಟಿ ನೀಡುತ್ತಾರೆ. ನಮ್ಮದೆ ದೇಶದ ‘ಲಕ್ಷದ್ವೀಪ’ದ ಸೆರಗಿನಲ್ಲೇ ಇರುವ ಈ ದೇಶಕ್ಕೆ ಪ್ರವಾಸೋದ್ಯಮವು ಆದಾಯದ ಪ್ರಮುಖ ಮೂಲವಾಗಿದೆ. ಟೂರಿಸಂಗೆ ಹೆಸರುವಾಸಿಯಾಗಿರುವ ಮಾಲ್ಡೀವ್ಸ್ ಇದೀಗ ರಾಜಕೀಯ ಕಾರಣಕ್ಕೆ ಸುದ್ದಿಯಾಗಿದೆ. ಅಲ್ಲಿನ ಮೂವರು ಯುವ ಸಚಿವರು ಭಾರತದ ಪ್ರಧಾನಮಂತ್ರಿಗಳನ್ನು ಟೀಕಿಸಿದ್ದು, ಪ್ರವಾಸೋದ್ಯಮಕ್ಕೆ ಭಾರೀ ಹೊಡೆತ ಬಿದ್ದಿದೆ. ಭಾರತದ ಸಿನಿಮಾ ನಟರು, ಕ್ರೀಡಾಪಟುಗಳು ಹಾಗೂ ಬಿಜೆಪಿ ಬೆಂಬಲಿಗರು ಮಾಲ್ಡೀವ್ಸ್ ಬದಲಿಗೆ ಲಕ್ಷದ್ವೀಪಕ್ಕೆ ಪ್ರವಾಸ ಹೋಗುತ್ತೇವೆ ಎನ್ನುತ್ತಿದ್ದಾರೆ.

ಕಳೆದವಾರ (ಜ.4) ಎರಡು ದಿನಗಳ ಲಕ್ಷ ದ್ವೀಪ ಪ್ರವಾಸ ಕೈಗೊಂಡಿದ್ದ ಪ್ರಧಾನ ಮಂತ್ರಿ ನರೇಂದ್ರ ಮೋದಿ, ಅಲ್ಲಿನ ಸಮುದ್ರ ತೀರಗಳಲ್ಲಿ ತಾವು ಕಾಲ ಕಳೆದಿದ್ದ ಫೋಟೋಗಳನ್ನು ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದರು. ‘ತಮ್ಮಲ್ಲಿರುವ ಸಾಹಸಿಗಳನ್ನು ಅಪ್ಪಿಕೊಳ್ಳಲು ಬಯಸುವವರಿಗೆ, ಲಕ್ಷದ್ವೀಪವು ನಿಮ್ಮ ಪಟ್ಟಿಯಲ್ಲಿರಬೇಕು. ನನ್ನ ವಾಸ್ತವ್ಯದ ಸಮಯದಲ್ಲಿ, ನಾನು ಸ್ಕೂಬಾ ಡೈವಿಂಗ್ ಅನ್ನು ಸಹ ಪ್ರಯತ್ನಿಸಿದೆ; ಇದು ಎಂತಹ ಆಹ್ಲಾದಕರ ಅನುಭವವಾಗಿದೆ’ ಎಂದು ಲಕ್ಷ ದ್ವೀಪ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡುವ ರೀತಿಯಲ್ಲಿ ಪೋಸ್ಟ್ ಮಾಡಿದ್ದರು.

ಮೋದಿ ಎಕ್ಸ್ ಪೋಸ್ಟಿಗೆ ಪ್ರತಿಕ್ರಿಯೆ ನೀಡಿದ್ದ ಮಾಲ್ಡಿವ್ಸ್ ದ್ವೀಪ ರಾಷ್ಟ್ರದ ಮಾಜಿ ಉಪ ಮಂತ್ರಿ (ಆಗ ಉಪ ಸಚಿವೆ) ಮರಿಯಮ್ ಶಿಯೂನಾ, ‘ಎಂತಹ ಕೋ…ಗಿ. ಇಸ್ರೇಲ್ ಕೈಗೊಂಬೆ ಡೈವರ್ ನರೇಂದ್ರ ಲೈಫ್ ಜಾಕೆಟ್‌ನೊಂದಿಗೆ’ ಎಂದು ಅವಹೇಳನಕಾರಿಯಾಗಿ ಕಮೆಂಟ್ ಮಾಡಿದ್ದರು. ಸಾಲದ್ದಕ್ಕೆ, ‘ವಿಸಿಟ್ ಮಾಲ್ಡಿವ್ಸ್’ ಎಂದು ಹ್ಯಾಷ್ ಟ್ಯಾಗ್ ಕೂಡ ಬಳಸಿದ್ದರು. ‘ಭಾರತವು ಮಾಲ್ಡೀವ್ಸ್‌ಗಿಂತ ಉತ್ತಮ ಸೇವೆಗಳನ್ನು ನೀಡಬಹುದೇ’ ಎಂದು ಮತ್ತೋರ್ವ ಯುವ ರಾಜಕಾರಣಿ ಜಾಹಿದ್ ರಮೀಜ್ ಪ್ರಶ್ನಿಸಿದ್ದರು.

ನರೇಂದ್ರ ಮೋದಿಯವರನ್ನು ಟೀಕಿಸುವ ಬರದಲ್ಲಿ ಶಿಯೂನಾ ಬಳಸಿದ ಭಾಷೆ ಇದೀಗ ರಾಜತಾಂತ್ರಿಕ ಬಿಕ್ಕಟ್ಟಿಗೆ ಕಾರಣವಾಗಿದೆ. ದ್ವೀಪ ರಾಷ್ಟ್ರದ ಅಧ್ಯಕ್ಷರು ತನ್ನ ಮೂರು ಜನ ಸಚಿವರನ್ನು ವಜಾ ಮಾಡಿದೆ. ಮಾಲ್ಡೀವ್ಸ್‌ನ ಯುವ ವ್ಯವಹಾರಗಳ ಸಚಿವಾಲಯದ ಮೂವರು ಉಪ ಮಂತ್ರಿಗಳಾಗಿದ್ದ ಮರ್ಯಮ್ ಶಿಯುನಾ, ಮಲ್ಶಾ ಶರೀಫ್ ಮತ್ತು ಮಹಜೂಮ್ ಮಜೀದ್ ಅವರು ತಮ್ಮ ನಕಾರಾತ್ಮಕ ಕಾಮೆಂಟ್‌ಗಳ ಕಾರಣಕ್ಕೆ ಬೆಲೆ ತೆತ್ತಿದ್ದಾರೆ.

ಅಮಾನತುಗೊಂಡಿರುವ ಮಾಲ್ಡೀವಿಯನ್ ಸಚಿವೆ ಮರಿಯಮ್ ಶಿಯುನಾ ಮತ್ತು ರಾಜಕಾರಣಿ ಜಾಹಿದ್ ರಮೀಜ್ ಅವರು ಭಾರತವನ್ನು ಗುರಿಯಾಗಿಸಿಕೊಂಡು ಜನಾಂಗೀಯ ಟೀಕೆಗಳನ್ನು ಮಾಡುವ ಮೂಲಕ ಮತ್ತು ಲಕ್ಷದ್ವೀಪವನ್ನು ಪ್ರವಾಸಿ ತಾಣವಾಗಿ ಪ್ರಚಾರ ಮಾಡುವ ಪ್ರಧಾನಿ ನರೇಂದ್ರ ಮೋದಿಯವರ ಪ್ರಯತ್ನವನ್ನು ಲೇವಡಿ ಮಾಡಿದ್ದಾರೆ. ಆ ಮೂಲಕ ಭಾರೀ ವಿವಾದವನ್ನು ಮೈ ಮೇಲೆ ಎಳದುಕೊಂಡಿದ್ದಾರೆ.

ಅಮಾನತುಗೊಂಡ ಮಾಲ್ಡೀವ್ಸ್‌ ಸಚಿವರು

ಶಿಯುನಾ ತಮ್ಮ ಕಮೆಂಟ್ ಮೂಲಕ ಇಸ್ರೇಲ್‌ನೊಂದಿಗೆ ಭಾರತದ ಸಂಪರ್ಕಗಳನ್ನು ಉಲ್ಲೇಖಿಸಿದ್ದಾರೆ. ಆಕೆಯ ಸಹೋದ್ಯೋಗಿಗಳು ಕೂಡ ಇದಕ್ಕೆ ಧ್ವನಿಗೂಡಿಸಿದ್ದಾರೆ. ‘ಭಾರತದ ಪ್ರಧಾನ ಮಂತ್ರಿಗಳ ಲಕ್ಷದ್ವೀಪ ಭೇಟಿಯು ಮಾಲ್ಡೀವಿಯನ್ ಪ್ರವಾಸೋದ್ಯಮಕ್ಕೆ ಸವಾಲನ್ನು ಒಡ್ಡುವ ಉದ್ದೇಶವನ್ನು ಹೊಂದಿದೆ’ ಎಂಬರ್ಥದಲ್ಲಿ ಮಾತನಾಡಿದ್ದಾರೆ.

ಭಾರತ ಸರ್ಕಾರ ಕೂಡಲೇ ಈ ವಿಷಯವನ್ನು ಮಾಲ್ಡೀವ್ಸ್ ಆಡಳಿತದ ಗಮನಕ್ಕೆ ತಂದು ಪ್ರತಿಭಟನೆ ವ್ಯಕ್ತಪಡಿಸಿದೆ. ನಂತರ, ಮಾಲ್ಡೀವ್ಸ್ ಸರ್ಕಾರವು ತನ್ನ ಮೂವರು ಮಂತ್ರಿಗಳನ್ನು ಅಮಾನತುಗೊಳಿಸಿತು. ‘ಮಾಲ್ಡೀವ್ಸ್ ಸರ್ಕಾರದ ಪ್ರತಿನಿಧಿಗಳು ವಿದೇಶಿ ನಾಯಕರು ಮತ್ತು ಉನ್ನತ ಶ್ರೇಣಿಯ ವ್ಯಕ್ತಿಗಳ ವಿರುದ್ಧ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಅವಹೇಳನಕಾರಿ ಹೇಳಿಕೆಗಳ ಬಗ್ಗೆ ತಿಳಿದಿದೆ. ಈ ಅಭಿಪ್ರಾಯಗಳು ಅವರ ವೈಯಕ್ತಿಕ ಮತ್ತು ಮಾಲ್ಡೀವ್ಸ್ ಸರ್ಕಾರದ ಅಭಿಪ್ರಾಯಗಳನ್ನು ಪ್ರತಿನಿಧಿಸುವುದಿಲ್ಲ. ಮಾಲ್ಡೀವ್ಸ್ ಸರ್ಕಾರವು “ಅಭಿವ್ಯಕ್ತಿ” ಸ್ವಾತಂತ್ರ್ಯದಲ್ಲಿ ನಂಬಿಕೆ ಇಟ್ಟಿದೆ. ಆದರೆ, ಅದನ್ನು ಜವಾಬ್ದಾರಿಯುತ ರೀತಿಯಲ್ಲಿ ಚಲಾಯಿಸಬೇಕು’ ಎಂದು ಹೇಳಿದೆ.

ಕೂಡಲೇ ಎಚ್ಚೆತ್ತ ಮಾಲ್ಡೀವ್ಸ್ ಮಾಜಿ ಸಚಿವ ಹಸನ್ ಝಿಹಾನ್, ‘ಆತ್ಮೀಯ ಭಾರತದ ಪ್ರಜೆಗಳೇ, ನಾನು ಭಾರತದ ಬಗ್ಗೆ ಅಥವಾ ನಿಮ್ಮ ಪ್ರಧಾನಿ ಬಗ್ಗೆ ಅವಹೇಳನಕಾರಿ ಕಾಮೆಂಟ್‌ಗಳನ್ನು ಮಾಡಿಲ್ಲ ಎಂದು ಸ್ಪಷ್ಟಪಡಿಸಲು ಬಯಸುತ್ತೇನೆ. ತಪ್ಪು ತಿಳುವಳಿಕೆಯಿಂದ ಮಾಲ್ಡೀವಿಯನ್ ಸುದ್ದಿವಾಹಿನಿಯೊಂದು ಇಂತಹ ಟೀಕೆಗಳನ್ನು ಬೇರೆಯವರ ಬದಲಿಗೆ ನನ್ನ ಮೇಲೆ ತಪ್ಪಾಗಿ ಆರೋಪಿಸಿದೆ. ಈ ಸ್ಪಷ್ಟನೆ ಈಗ ಎದ್ದಿರುವ ಗೊಂದಲವನ್ನು ಪರಿಹರಿಸುತ್ತದೆ ಎಂದು ನಾನು ಭಾವಿಸುತ್ತೇನೆ’ ಎಂದು ಹೇಳಿದ್ದಾರೆ. ಅಮಾನತಾದ ಮೂವರೂ ಸಚಿವರು ತಮ್ಮ ಟ್ವೀಟ್‌ಗಳನ್ನು ಅಳಿಸಿಹಾಕಿದ್ದಾರೆ.

ಭಾರತ-ಮಾಲ್ಡೀವ್ಸ್ ಸಂಬಂಧ:

ಮಾಲ್ಡೀವ್ಸ್‌ನ ಹಾಲಿ ಅಧ್ಯಕ್ಷರು ಚೀನಾ ಕಡೆಗೆ ಒಲವು ಹೊಂದಿದ್ದಾರೆ ಎಂಬ ಕಾರಣಕ್ಕೆ ಉಭಯ ದೇಶಗಳ ನಡುವೆ ಸಂಬಂಧ ಅಷ್ಟಕ್ಕಷ್ಟೆ ಎನ್ನುವಂತಿತ್ತು. ಇದೀಗ ಮೋದಿ ಕುರಿತ ಅವಹೇಳನಕಾರಿ ಟ್ವೀಟ್ ಮೂಲಕ ಭಾರತ ಹಾಗೂ ಮಾಲ್ಡೀವ್ಸ್ ನಡುವಿನ ರಾಜತಾಂತ್ರಿಕ ಸಂಬಂಧ ಮತ್ತಷ್ಟು ಹಳಸಿದೆ. ಹಿಂದೂ ಮಹಾಸಾಗರ ಪ್ರದೇಶದಲ್ಲಿ ಭಾರತದ ನಿರ್ಣಾಯಕ ಕಡಲ ನೆರೆಹೊರೆಯಾಗಿ ಮಾಲ್ಡೀವ್ಸ್ ಮಹತ್ವದ ಸ್ಥಾನವನ್ನು ಹೊಂದಿದೆ. ಇದು ‘ಸಾಗರ್’ (ಪ್ರದೇಶದ ಎಲ್ಲರಿಗೂ ಭದ್ರತೆ ಮತ್ತು ಬೆಳವಣಿಗೆ) ನಂತಹ ಉಪಕ್ರಮಗಳಲ್ಲಿ ವಿಶೇಷ ಪಾತ್ರವನ್ನು ವಹಿಸುತ್ತದೆ. ‘ನೆರೆಹೊರೆಯ ಮೊದಲ ನೀತಿ’ ಅಡಿಯಲ್ಲಿ ಭಾರತ ಸರ್ಕಾರದ ಆದ್ಯತೆಗಳಿಗೆ ಈ ಸ್ಥಳ ಕೇಂದ್ರಬಿಂದುವಾಗಿದೆ.

ಚೀನಾ ಪರವಾಗಿ ಒಲವು ಹೊಂದಿರುವ ಮಾಲ್ಡೀವ್ಸ್‌ನ ಅಧ್ಯಕ್ಷರಾದ ಮೊಹಮದ್ ಮುಯಿಜ್ಜು ಅವರು ನವೆಂಬರ್ 2023ರಲ್ಲಿ ತಮ್ಮ ಪ್ರಮಾಣವಚನ ಸಮಾರಂಭದ ನಂತರ ಉಭಯ ದೇಶಗಳ ನಡುವೆ ವಿದೇಶಾಂಗ ಸಂಬಂಧ ಹಳಸಿದೆ ಎನ್ನಲಾಗುತ್ತಿದೆ. ಮಾಲ್ಡೀವ್ಸ್ ದ್ವೀಪಸಮೂಹದಲ್ಲಿ ನಿಯೋಜಿಸಿರುವ ಭಾರತದ ಮಿಲಿಟರಿ ಪಡೆಯನ್ನು ಹಿಂತೆಗೆದುಕೊಳ್ಳುವಂತೆ ಭಾರತವನ್ನು ಒತ್ತಾಯಿಸಿದ್ದಾರೆ. ಆದರೆ, ‘ಅಲ್ಲಿನ ಮಿಲಿಟರಿ ಉಪಸ್ಥಿತಿಯು, ಮುಖ್ಯವಾಗಿ ಹಿಂದೂ ಮಹಾಸಾಗರ ದೂರದ ದ್ವೀಪಗಳಿಗೆ ವೈದ್ಯಕೀಯ ಬೆಂಬಲವನ್ನು ಒದಗಿಸುವ ಗುರಿಯನ್ನು ಹೊಂದಿದೆ’ ಎಂದು ಭಾರತವು ಸಮರ್ಥಿಸಿಕೊಂಡಿದೆ. ಡಿಸೆಂಬರ್ 1ರಂದು ದುಬೈನಲ್ಲಿ ನಡೆದ ಹವಾಮಾನ ಶೃಂಗಸಭೆಯಲ್ಲಿ ಅಧ್ಯಕ್ಷ ಮುಯಿಝು ಅವರು ಪ್ರಧಾನಿ ಮೋದಿಯನ್ನು ಭೇಟಿಯಾದಾಗ ಈ ವಿಚಾರ ಪ್ರಸ್ತಾಪಿಸಿದ್ದರು ಎನ್ನಲಾಗಿದೆ. ಭಾರತ ಮತ್ತು ಮಾಲ್ಡೀವ್ಸ್ ನಡುವೆ ಇಷ್ಟೆಲ್ಲಾ ವಿವಾದ ಬಿಸಿಯಾಗಿರುವಾಗಲೇ ಮುಯಿಜ್ಜು ಮಂಗಳವಾರ ಬೀಜಿಂಗ್ ತಲುಪಿದ್ದಾರೆ.

ಭಾರತ-ಮಾಲ್ಡೀವ್ಸ್ ನಡುವಿನ ಜಗಳ ಹಾಗೂ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಅವಹೇಳನಕ್ಕೆ ಪ್ರತಿಯಾಗಿ ಭಾರತದ ವಿವಿಧ ಕ್ಷೇತ್ರಗಳ ‘ಸೆಲೆಬ್ರಿಟಿ’ಗಳು ಕಿಡಿಕಾರಿದ್ದಾರೆ. ನಟರಾದ ಅಕ್ಷಯ್ ಕುಮಾರ್, ಭೂಮಿ ಪೆಡ್ನೇಕರ್, ಪೂಜಾ ಹೆಗ್ಡೆ, ಮಧುರ್ ಭಂಡಾರ್ಕರ್, ಪಿವಿ ಸಿಂಧು, ಶಿಲ್ಪಾ ಶೆಟ್ಟಿ ಮತ್ತು ವರುಣ್ ಧವನ್ ಮತ್ತು ಸ್ನ್ಯಾಪ್ಡೀಲ್ ಸಹ-ಸಂಸ್ಥಾಪಕ ಕುನಾಲ್ ಬಹ್ಲ್, ವೀರೇಂದ್ರ ಸೇವಾಗ್, ಸುರೇಶ್ ರೈನಾ ಸೇರಿದಂತೆ ಭಾರತೀಯ ಸೆಲೆಬ್ರಿಟಿಗಳು, ಕ್ರೀಡಾಪಟುಗಳು ಮತ್ತು ಉದ್ಯಮ ಸಂಸ್ಥಾಪಕರು ಈ ಬಗ್ಗೆ ಬರೆದಿದ್ದಾರೆ. ಭಾರತದ ದ್ವೀಪಗಳು ಮತ್ತು ತಮ್ಮ ಪ್ರಯಾಣದ ಪಟ್ಟಿಗಳಲ್ಲಿ ಲಕ್ಷದ್ವೀಪವನ್ನು ಸೇರಿಸಿಕೊಳ್ಳುವಂತೆ ಮನವಿ ಮಾಡಿದ್ದಾರೆ.

ಸಾಲದ್ದಕ್ಕೆ, ಈ ವಿವಾದವು ಅನೇಕ ಭಾರತೀಯರು ಮಾಲ್ಡೀವ್ಸ್‌ನಲ್ಲಿ ತಮ್ಮ ರಜಾದಿನದ ಬುಕಿಂಗ್‌ಗಳನ್ನು ರದ್ದುಗೊಳಿಸುವಂತೆ ಮಾಡಿದೆ. ಇದರ ಸ್ಕ್ರೀನ್‌ಶಾಟ್‌ಗಳು ಎಕ್ಸ್ ನಲ್ಲಿ ಈಗಲೂ ಟ್ರೆಂಡಿಂಗ್‌ನಲ್ಲಿವೆ. ಭಾರತೀಯ ಬೀಚ್‌ಗಳು ಮತ್ತು ದ್ವೀಪಗಳ ಬಗ್ಗೆ ಮಾತನಾಡುತ್ತಿರುವ ನೆಟ್ಟಿಗರಿಂದ #ExploreIndianIslands ಕಳೆದ ಮೂರು ದಿನಗಳಿಂದ ಟ್ರೆಂಡಿಂಗ್ ಆಗುತ್ತಿದೆ.

ಪ್ರಧಾನಿ ಮೋದಿ ವಿರುದ್ಧ ಮಾಲ್ಡೀವ್ಸ್ ಆಡಳಿತ ಪಕ್ಷದ ಸಚಿವರು ಮತ್ತು ಇತರ ಸಾರ್ವಜನಿಕ ವ್ಯಕ್ತಿಗಳ ಕಾಮೆಂಟ್‌ಗಳ ನಂತರ 8000 ಕ್ಕೂ ಹೆಚ್ಚು ಹೋಟೆಲ್ ಬುಕಿಂಗ್ ಮತ್ತು ಮಾಲ್ಡೀವ್ಸ್‌ಗೆ 2,500 ಫ್ಲೈಟ್ ಟಿಕೆಟ್‌ಗಳನ್ನು ಭಾರತೀಯರು ರದ್ದುಗೊಳಿಸಿದ್ದಾರೆ ಎಂದು ವರದಿಗಳು ಹೇಳಿವೆ.

ಇದನ್ನೂ ಓದಿ; ‘ಭಾರತ ಅಂತಹ ಅವಮಾನವನ್ನು ಎಂದಿಗೂ ಸಹಿಸುವುದಿಲ್ಲ…’; ಲಕ್ಷದ್ವೀಪ ಆಡಳಿತಾಧಿಕಾರಿ ಪ್ರಫುಲ್ ಪಟೇಲ್

ಮಾಲ್ಡೀವ್ಸ್ ಅಧ್ಯಕ್ಷ ಸೇನೆ ವಾಪಸಾತಿಗೆ ಮನವಿ ಮಾಡಿದ್ದೇಕೆ?

ಚೀನಾ ಪರವಾಗಿ ಒಲವು ಹೊಂದಿರುವ ಮಾಲ್ಡೀವ್ಸ್ ಅಧ್ಯಕ್ಷ ಮೊಹಮದ್ ಮುಯಿಝು, ತಮ್ಮ ಪದಗ್ರಹಣ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿ, ‘ಸಣ್ಣ ದ್ವೀಪ ರಾಷ್ಟ್ರವು ತನ್ನ ನೆಲದಲ್ಲಿ ಯಾವುದೇ ವಿದೇಶಿ ಮಿಲಿಟರಿ ಉಪಸ್ಥಿತಿಯನ್ನು ಹೊಂದಿಲ್ಲ’ ಎಂದು ಖಚಿತಪಡಿಸಿಕೊಳ್ಳುತ್ತೇನೆ’ ಎಂದು ಹೇಳುವ ಮೂಲಕ ಭಾರತೀಯ ಸೇನೆಯನ್ನು ಹೊರಗೆ ಕಳಿಸುವ ಇಂಗಿತ ವ್ಯಕ್ತಪಡಿಸಿದ್ದರು. ಇದಾದ ಕೆಲವೇ ದಿನಗಳಲ್ಲಿ, ಕೇಂದ್ರ ಸಚಿವ ಕಿರಣ್ ರಿಜಿಜು ಅವರೊಂದಿಗಿನ ಸಭೆಯಲ್ಲಿ ಸಹ ಸೇನಾ ಸಿಬ್ಬಂದಿಯನ್ನು ಹಿಂತೆಗೆದುಕೊಳ್ಳುವಂತೆ ಮನವಿ ಮಾಡಿದ್ದರು.

ಭಾರತವು ದ್ವೀಪ ರಾಷ್ಟ್ರದಲ್ಲಿ ಕೇವಲ 77 ಸೈನಿಕರನ್ನು ಮಾತ್ರ ಹೊಂದಿದೆ ಎನ್ನಲಾಗಿದೆ. ಈ ಸಿಬ್ಬಂದಿಗಳು ಭಾರತ ಪ್ರಾಯೋಜಿತ ರಾಡಾರ್‌ಗಳು ಮತ್ತು ಕಣ್ಗಾವಲು ವಿಮಾನಗಳನ್ನು ನಿರ್ವಹಿಸುತ್ತಾರೆ. ಈ ಪ್ರದೇಶದಲ್ಲಿ ಭಾರತೀಯ ಯುದ್ಧನೌಕೆಗಳು ದೇಶದ ವಿಶೇಷ ಆರ್ಥಿಕ ವಲಯದಲ್ಲಿ ಗಸ್ತು ತಿರುಗಲು ಸಹಾಯ ಮಾಡುತ್ತವೆ. ನಿರ್ವಹಣಾ ಕಚೇರಿಗಳನ್ನು ಹೊರಡಿಸಿ, ತುರ್ತು ವೈದ್ಯಕೀಯ ಸಾಮಗ್ರಿ ಸ್ಥಳಾಂತರಿಸುವಿಕೆಗೆ ಎರಡು ಭಾರತೀಯ ಹೆಲಿಕಾಪ್ಟರ್ ಗಳನ್ನು ಅಲ್ಲಿ ನಿಯೋಜಿಸಲಾಗಿದೆ. ಭಾರತೀಯ ಸೈನಿಕರ ಈ ಸಣ್ಣ ಗುಂಪು ಮಾಲ್ಡೀವ್ಸ್‌ನಲ್ಲಿ ಹಲವಾರು ವರ್ಷಗಳಿಂದ ಬೀಡುಬಿಟ್ಟಿದೆ. ಈ ಹಿಂದೆ, ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಮಾಲ್ಡೀವ್ಸ್ ನೊಂದಿಗಿನ ಭಾರತದ ಸಹಕಾರವು ಹಂಚಿಕೆಯ ಸವಾಲುಗಳು ಮತ್ತು ಆದ್ಯತೆಗಳನ್ನು ಜಂಟಿಯಾಗಿ ಪರಿಹರಿಸುವುದನ್ನು ಆಧರಿಸಿದೆ ಎಂದು ಹೇಳಿದೆ. ಸಾರ್ವಜನಿಕ ಕಲ್ಯಾಣ, ಮಾನವೀಯ ನೆರವು, ವಿಪತ್ತು ಪರಿಹಾರ, ದ್ವೀಪ ರಾಷ್ಟ್ರದಲ್ಲಿ ಕಾನೂನುಬಾಹಿರ ಸಮುದ್ರ ಚಟುವಟಿಕೆಗಳನ್ನು ಎದುರಿಸುವಲ್ಲಿ ಭಾರತದ ನೆರವು ಮತ್ತು ವೇದಿಕೆಗಳು ಗಣನೀಯವಾಗಿ ಕೊಡುಗೆ ನೀಡಿವೆ ಎಂದು ಭಾರತದ ರಕ್ಷಣಾ ಸಚಿವಾಲಯ ಹೇಳಿದೆ.

ಚೀನಾ-ಭಾರತದ ರಾಜಕೀಯ ಹಾಟ್‌ಸ್ಪಾಟ್:

ಗಾತ್ರದಲ್ಲಿ ದೆಹಲಿಯ ಐದನೇ ಒಂದು ಭಾಗದಷ್ಟಿರುವ ದ್ವೀಪ ರಾಷ್ಟ್ರವಾದ ಮಾಲ್ಡೀವ್ಸ್ ಸುಮಾರು 5 ಲಕ್ಷ ಜನರಿಗೆ ನೆಲೆಯಾಗಿದೆ. ಇದು ಜನಪ್ರಿಯ ಪ್ರವಾಸಿ ತಾಣವಾಗಿದ್ದು, ಹಿಂದೂ ಮಹಾಸಾಗರದ ಪ್ರದೇಶದ ಮೇಲೆ ಹಿಡಿತ ಇಟ್ಟುಕೊಂಡಿರುವ ಭಾರತ ಮತ್ತು ಹಿಡಿತ ಸಾಧಿಸಲು ಹವಣಿಸುತ್ತಿರುವ ಚೀನಾ ನಡುವಿನ ರಾಜಕೀಯ ‘ಹಾಟ್‌ಸ್ಪಾಟ್’ ಆಗಿದೆ. ತಮ್ಮ ರಾಜಕೀಯ ದೃಷ್ಟಿಕೋನದ ಭಾಗವಾಗಿ ಭಾರತ ಮತ್ತು ಚೀನಾ ಎರಡೂ ದೇಶಗಳು ದ್ವೀಪದಲ್ಲಿ ದೀರ್ಘಾವಧಿಯ ಅಭಿವೃದ್ಧಿಗೆ ಉದಾರವಾಗಿ ಹೂಡಿಕೆ ಮಾಡಿವೆ. ಮಾಲ್ಡೀವ್ಸ್ ಅಧ್ಯಕ್ಷರು ಭಾರತ ಮತ್ತು ಚೀನಾ ಎರಡರೊಂದಿಗೂ ಒಟ್ಟಾಗಿ ಕೆಲಸ ಮಾಡಲು ಬಯಸುತ್ತೇವೆ ಎಂದು ಒತ್ತಿ ಹೇಳಿದರೂ, ‘ಚೀನಾ ಪರವಾಗಿದ್ದಾರೆ’ ಎಂದು ಅಲ್ಲಿನ ಪ್ರತಿಪಕ್ಷಗಳೆ ಬಲವಾಗಿ ಪ್ರತಿಪಾದಿಸುತ್ತಿವೆ.

ಹಾಲಿ ಅಧ್ಯಕ್ಷ ಮುಯಿಝು ಅವರು ಇಬ್ರಾಹಿಂ ಮೊಹಮ್ಮದ್ ಸೊಲಿಹ್ ಅವರ ಉತ್ತರಾಧಿಕಾರಿಯಾದರು. ಇಬ್ರಾಹಿಂ ಅಧಿಕಾರಾವಧಿಯು ದ್ವೀಪ ರಾಷ್ಟ್ರ ಮತ್ತು ನವದೆಹಲಿ ನಡುವಿನ ಸಂಬಂಧಗಳಲ್ಲಿ ಉತ್ತೇಜನವನ್ನು ಕಂಡಿತ್ತು. ಮಾಜಿ ಸಚಿವ ಮತ್ತು ಮಾಲೆಯ ಮೇಯರ್, ಅಧ್ಯಕ್ಷ ಮುಯಿಝು ಅವರು ಮಾಜಿ ಅಧ್ಯಕ್ಷ ಅಬ್ದುಲ್ಲಾ ಯಮೀನ್ ಅವರ ನಿಕಟವರ್ತಿಯಾಗಿದ್ದಾರೆ. ಅತ್ಯಂತ ಬಡ ರಾಷ್ಟ್ರವಾಗಿರುವ ಮಾಲ್ಡೀವ್ಸ್, 2013 ರಿಂದ 2018 ರವರೆಗಿನ ಅವಧಿಯಲ್ಲಿ ಚೀನಾದಿಂದ ಹೆಚ್ಚು ಸಾಲ ಪಡೆದಿದೆ. ‘ಚೀನಾದೊಟ್ಟಿಗೆ ಬಲವಾದ ಸಂಬಂಧವನ್ನು ಬಯಸುವುದಾಗಿ’ ಒಂದು ವರ್ಷದ ಹಿಂದೆ ಮುಯಿಜ್ಜು ಹೇಳಿದ್ದರು. ಆ ನಂತರ, ಅವರ ಪಕ್ಷ ಚುನಾವಣೆಯಲ್ಲಿ ಗೆಲುವು ಕಂಡಿತ್ತು.

ಉನ್ನತ ಹುದ್ದೆಗೆ ಆಯ್ಕೆಯಾದ ನಂತರ, ಮುಯಿಜ್ಜು ಭದ್ರತೆಯ ಆಧಾರದ ಮೇಲೆ ಮಾಲ್ಡೀವ್ಸ್‌ನಿಂದ ಭಾರತೀಯ ಪಡೆಗಳನ್ನು ಹಿಂತೆಗೆದುಕೊಳ್ಳುವಂತೆ ಒತ್ತಾಯಿಸಿದ್ದಾರೆ. “ನಮ್ಮ ಭದ್ರತೆಯ ವಿಷಯಕ್ಕೆ ಬಂದರೆ, ನಾನು ಕೆಂಪು ರೇಖೆಯನ್ನು ಎಳೆಯುತ್ತೇನೆ. ಮಾಲ್ಡೀವ್ಸ್ ಇತರ ದೇಶಗಳ ಕೆಂಪು ಗೆರೆಗಳನ್ನು ಸಹ ಗೌರವಿಸುತ್ತದೆ” ಎಂದು ಪ್ರಮಾಣ ವಚನ ಸ್ವೀಕರಿಸಿದ ನಂತರ ಅವರು ಹೇಳಿದರು.

ಲಕ್ಷದ್ವೀಪದಲ್ಲಿ ಹೂಡಿಕೆಗೆ ಇಸ್ರೇಲ್ ಒಲವು!

ಮಾಲ್ಡೀವ್ಸ್‌ನ ಸಚಿವರು ಇಸ್ರೇಲ್ ಹೆಸರನ್ನು ಮುಂದಿಟ್ಟುಕೊಂಡು ಪ್ರಧಾನಿ ಮೋದಿಯವರನ್ನು ಅವಹೇಳನ ಮಾಡಿದ್ದರು. ಇದೀಗ ಭಾರತದ ಪರವಾಗಿ ನಿಂತಿರುವ ಇಸ್ರೇಲ್, ಲಕ್ಷದ್ವೀಪದಲ್ಲಿ ಹೂಡಿಕೆ ಮಾಡಲು ಮುಂದಾಗಿದೆ.

‘ಡಸಲೈಸೇಷನ್ ಕಾರ್ಯಕ್ರಮ’ವನ್ನು ಪ್ರಾರಂಭಿಸಲು ಭಾರತ ಸರ್ಕಾರದ ಕೋರಿಕೆಯ ಮೇರೆಗೆ ನಾವು ಕಳೆದ ವರ್ಷ ಲಕ್ಷ ದ್ವೀಪದಲ್ಲಿದ್ದೆವು. ನಾಳೆ ಈ ಯೋಜನೆಯ ಕೆಲಸವನ್ನು ಪ್ರಾರಂಭಿಸಲು ಇಸ್ರೇಲ್ ಸಿದ್ಧವಾಗಿದೆ. ಲಕ್ಷದ್ವೀಪ ದ್ವೀಪಗಳ ಪ್ರಾಚೀನ ಮತ್ತು ಭವ್ಯವಾದ ನೀರೊಳಗಿನ ಸೌಂದರ್ಯವನ್ನು ಇನ್ನೂ ವೀಕ್ಷಿಸಲು ಸಾಧ್ಯವಾಗದವರಿಗೆ, ಈ ದ್ವೀಪದ ಮೋಡಿಮಾಡುವ ಆಕರ್ಷಣೆಯನ್ನು ತೋರಿಸುವ ಕೆಲವು ಚಿತ್ರಗಳು ಇಲ್ಲಿವೆ’ ಎಂದು ಇಸ್ರೇಲ್ ರಾಯಭಾರ ಕಚೇರಿ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದೆ.

ಪ್ರತಿಪಕ್ಷ ನಾಯಕರ ಪ್ರತಿಕ್ರಿಯೆ ಏನು?

ಭಾರತ ಮತ್ತು ಮಾಲ್ಡೀವ್ಸ್ ನಡುವಿನ ರಾಜತಾಂತ್ರಿಕ ಬಿಕ್ಕಟ್ಟಿನ ಬಗ್ಗೆ ದೇಶದ ಪ್ರತಿಪಕ್ಷಗಳ ಬಹುತೇಕ ನಾಯಕರು ಮೌನವಾಗಿದ್ದಾರೆ. ಆದರೆ, ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮಾತ್ರ ಇಂದು ಪ್ರತಿಕ್ರಿಯಿಸಿದ್ದು, ‘ಪ್ರಧಾನಿ ನರೇಂದ್ರ ಮೋದಿ ಅವರು ಅಧಿಕಾರಕ್ಕೆ ಬಂದ ನಂತರ ಎಲ್ಲವನ್ನೂ ವೈಯಕ್ತಿಕವಾಗಿ ತೆಗೆದುಕೊಳ್ಳುತ್ತಾರೆ’ ಎಂದು ರಾಜತಾಂತ್ರಿಕ ಉದ್ವಿಗ್ನತೆ ಬಗ್ಗೆ ಮಾತನಾಡಿದ್ದಾರೆ.

‘ನರೇಂದ್ರ ಮೋದಿಯವರು ಅಧಿಕಾರಕ್ಕೆ ಬಂದ ನಂತರ ಎಲ್ಲವನ್ನೂ ವೈಯಕ್ತಿಕವಾಗಿ ತೆಗೆದುಕೊಳ್ಳುತ್ತಿದ್ದಾರೆ. ಅಂತರಾಷ್ಟ್ರೀಯ ಮಟ್ಟದಲ್ಲಿ ನಾವು ನಮ್ಮ ನೆರೆಹೊರೆಯವರೊಂದಿಗೆ ಉತ್ತಮ ಬಾಂಧವ್ಯವನ್ನು ಇಟ್ಟುಕೊಳ್ಳಬೇಕು.. ಸಮಯಕ್ಕೆ ತಕ್ಕಂತೆ ನಾವು ನಡೆದುಕೊಳ್ಳಬೇಕು. ನಮ್ಮ ನೆರೆಹೊರೆಯವರನ್ನೂ ಬದಲಾಯಿಸಲು ಸಾಧ್ಯವಿಲ್ಲ…” ಎಂದು ಖರ್ಗೆ ಹೇಳಿರುವುದಾಗಿ ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ.

ಆದರೆ, ನ್ಯಾಶನಲಿಸ್ಟ್ ಕಾಂಗ್ರೆಸ್ ಪಕ್ಷದ (ಎನ್‌ಸಿಪಿ) ಮುಖ್ಯಸ್ಥ ಶರದ್ ಪವಾರ್ ಅವರು ಪ್ರಧಾನಿ ಮೋದಿಯವರನ್ನು ಬೆಂಬಲಿಸಿ, ಮಾಲ್ಡೀವ್ಸ್ ಸಚಿವರ ಅವಹೇಳನಕಾರಿ ಹೇಳಿಕೆಗಳನ್ನು ಖಂಡಿಸಿದ್ದಾರೆ. ಪ್ರಧಾನಿ ಹುದ್ದೆಯನ್ನು ಗೌರವಿಸಬೇಕು ಮತ್ತು ಅಂತಹ ಯಾವುದೇ ಹೇಳಿಕೆಗಳು ಸ್ವೀಕಾರಾರ್ಹವಲ್ಲ ಎಂದು ಅವರು ಹೇಳಿದ್ದಾರೆ.

‘ಅವರು ನಮ್ಮ ದೇಶದ ಪ್ರಧಾನಿ ಮತ್ತು ಬೇರೆ ಯಾವುದೇ ದೇಶದ ಯಾವುದೇ ಸ್ಥಾನದಲ್ಲಿರುವವರು ನಮ್ಮ ಪ್ರಧಾನಿಯ ಮೇಲೆ ಅಂತಹ ಕಾಮೆಂಟ್‌ಗಳನ್ನು ಮಾಡಿದರೆ ನಾವು ಅದನ್ನು ಸ್ವೀಕರಿಸುವುದಿಲ್ಲ. ನಾವು ಪ್ರಧಾನಿ ಹುದ್ದೆಯನ್ನು ಗೌರವಿಸಬೇಕು. ನಾವು ದೇಶದ ಹೊರಗಿನಿಂದ ಪ್ರಧಾನಿ ವಿರುದ್ಧ ಏನನ್ನೂ ಸ್ವೀಕರಿಸುವುದಿಲ್ಲ’ ಎಂದು ಪವಾರ್ ಹೇಳಿದ್ದಾರೆ.

ಮರಿಯಮ್ ಶಿಯುನಾ ಯಾರು?

ಅಮಾನತಾಗಿರುವ ಮರಿಯಮ್ ಶಿಯುನಾ ಮಾಲ್ಡೀವ್ಸ್ ಸರ್ಕಾರದಲ್ಲಿ ಯುವ ಸಬಲೀಕರಣ, ಮಾಹಿತಿ ಮತ್ತು ಕಲೆಯ ಸಚಿವಾಲಯದಲ್ಲಿ ಉಪ ಮಂತ್ರಿಯಾಗಿ ಸೇವೆ ಸಲ್ಲಿಸಿದ್ದರು. ಇತ್ತೀಚೆಗಷ್ಟೇ ಲಕ್ಷದ್ವೀಪಕ್ಕೆ ಭೇಟಿ ನೀಡಿದ್ದ ಪ್ರಧಾನಿ ಮೋದಿಯನ್ನು ‘ವಿದೂಷಕ’ ಮತ್ತು ‘ಕೈಗೊಂಬೆ’ ಎಂದು ಕರೆದ ನಂತರ ಶಿಯುನಾ ವಿವಾದಕ್ಕೆ ಕಾರಣರಾಗಿದ್ದರು. ಭಾರೀ ವಿರೋಧ ನಂತರ, ಅವರು ಶನಿವಾರ ಎಕ್ಸ್ ಪೋಸ್ಟ್ ಅನ್ನು ಅಳಿಸಿದ್ದಾರೆ.

ಭಾರತ ಮತ್ತು ಪ್ರಧಾನಿ ಮೋದಿ ವಿರುದ್ಧದ ಹೇಳಿಕೆಗಳ ಮೇಲೆ ಮಾಲ್ಡೀವ್ಸ್ ಸರ್ಕಾರವು ಶಿಯುನಾ ಹಾಗೂ ಇತರ ಇಬ್ಬರು ಮಂತ್ರಿಗಳಾದ ಮಲ್ಶಾ ಶರೀಫ್ ಮತ್ತು ಮಹಜೂಮ್ ಮಜಿದ್ ಅವರನ್ನು ಭಾನುವಾರ ಅಮಾನತುಗೊಳಿಸಿದೆ.

ಜಾಹಿದ್ ರಮೀಜ್ ಯಾರು?

ಜಾಹಿದ್ ರಮೀಜ್ ಜನವರಿ 2013 ರಿಂದ ಪ್ರೋಗ್ರೆಸ್ಸಿವ್ ಪಾರ್ಟಿ ಆಫ್ ಮಾಲ್ಡೀವ್ಸ್ ಸೆನೆಟ್‌ನ ಸದಸ್ಯರಾಗಿದ್ದಾರೆ. ಇಂಟರ್ನೆಟ್‌ನಲ್ಲಿ ಲಭ್ಯವಾದ ಮಾಹಿತಿಗಳ ಪ್ರಕಾರ, ರಮೀಜ್ ಅವರು ಯುನಿಟಿ ಯೂನಿವರ್ಸಿಟಿ ಕಾಲೇಜಿನಿಂದ ಪದವಿ ಪಡೆದಿದ್ದಾರೆ. ಆಹಾರ ಮತ್ತು ಪಾನೀಯಗಳ ಉದ್ಯಮದಲ್ಲಿ ಕೆಲಸ ಮಾಡಿರುವ ಅನುಭವ ಹೊಂದಿದ್ದಾರೆ. ಬಿಸಿನೆಸ್ ಮ್ಯಾನೇಜ್‌ಮೆಂಟ್ ಮತ್ತು ಡೆವಲಪ್ಮೆಂಟ್, ಮಾರ್ಕೆಟಿಂಗ್ ಸ್ಟ್ರಾಟಜಿ ಮತ್ತು ಜಾಹೀರಾತುಗಳಲ್ಲಿ ಕ್ಷೇತ್ರಗಳಲ್ಲಿ ನುರಿತ”ಎನ್ನಲಾಗುತ್ತಿದೆ. ಮೋದಿಯವರ ಇತ್ತೀಚಿನ ಲಕ್ಷದ್ವೀಪ ಭೇಟಿಯ ಕುರಿತು ಹೇಳಿಕೆ ನೀಡಿದ ನಂತರ ಇವರು ಶನಿವಾರ ವಿವಾದವನ್ನು ಹುಟ್ಟುಹಾಕಿದರು.’ ಭಾರತವು ಮಾಲ್ಡೀವ್ಸ್‌ಗಿಂತ ಉತ್ತಮ ಸೇವೆಗಳನ್ನು ನೀಡಬಹುದೇ’ ಎಂದು ಪ್ರಶ್ನಿಸಿದ್ದರು.

ಮಾಲ್ಡೀವ್ಸ್‌ಗೆ ಅತಿ ಹೆಚ್ಚು ಭೇಟಿ ನೀಡುವ ದೇಶ ಯಾವುದು?

ಮಾಲ್ಡೀವ್ಸ್ ಪ್ರವಾಸೋದ್ಯಮ ಸಚಿವಾಲಯದ ಅಂಕಿಅಂಶಗಳ ಪ್ರಕಾರ, 2023 ರಲ್ಲಿ 17 ಲಕ್ಷಕ್ಕೂ ಹೆಚ್ಚು ಪ್ರವಾಸಿಗರು ದ್ವೀಪ ರಾಷ್ಟ್ರಕ್ಕೆ ಭೇಟಿ ನೀಡಿದ್ದಾರೆ. ಅದರಲ್ಲಿ 2,09,198 ಕ್ಕೂ ಹೆಚ್ಚು ಪ್ರವಾಸಿಗರು ಭಾರತೀಯರು. ರಷ್ಯನ್ನರು 2,09,146 ಮತ್ತು ಚೀನಾದ 1,87,118 ಜನರು ಭೇಟಿ ನೀಡಿದ್ದಾರೆ.
ಕೋವಿಡ್ ಸಾಂಕ್ರಾಮಿಕ ಸಮಯದಲ್ಲಿ ಕೂಡ ಮಾಲ್ಡೀವ್ಸ್ ಅಂತರರಾಷ್ಟ್ರೀಯ ಪ್ರವಾಸಿಗರಿಗೆ ಮುಕ್ತವಾಗಿತ್ತು. ಆ ಅವಧಿಯಲ್ಲಿ ಸುಮಾರು 63,000 ಭಾರತೀಯರು ದೇಶಕ್ಕೆ ಭೇಟಿ ನೀಡಿದ್ದಾರೆ. 2018 ರಲ್ಲಿ, ಭಾರತದ 90,474 ಪ್ರವಾಸಿಗರೊಂದಿಗೆ ಮಾಲ್ಡೀವ್ಸ್‌ನಲ್ಲಿ ಪ್ರವಾಸಿಗರ ಆಗಮನದ ಐದನೇ ಅತಿದೊಡ್ಡ ದೇಶವಾಗಿದೆ. 2019 ರಲ್ಲಿ ಭಾರತವು ಹಿಂದಿನ ವರ್ಷಕ್ಕೆ ಹೋಲಿಸಿದರೆ ಸುಮಾರು ಎರಡು ಪಟ್ಟು (1,66,030) ಆಗಮನದೊಂದಿಗೆ ಎರಡನೇ ಸ್ಥಾನವನ್ನು ತಲುಪಿದೆ.

ಇದೀಗ ಎರಡು ದೇಶಗಳ ನಡುವೆ ಉಂಟಾಗಿರುವ ರಾಜಕೀಯ ಬಿಕ್ಕಟ್ಟಿನಿಂದ ಭಾರತೀಯ ಪ್ರವಾಸಿಗರು ಮಾಲ್ಡೀವ್ಸ್ ಪ್ರವಾಸ ರದ್ದು ಮಾಡಿದರೆ, ದ್ವೀಪ ರಾಷ್ಟ್ರ ಸಾಕಷ್ಟು ನಷ್ಟ ಅನುಭವಿಸಬೇಕಾಗುತ್ತದೆ. ಆದರೆ, ಅಷ್ಟಾಗಿ ತಲೆ ಕೆಡಿಸಕೊಳ್ಳದ ಮಾಲ್ಡೀವಿಯನ್ ಅಧ್ಯಕ್ಷ ಮುಯಿಝು, ಚೀನಾ ಪ್ರವಾಸ ಕೈಗೊಂಡಿದ್ದಾರೆ.

ಲಕ್ಷದ್ವೀಪ ಕುರಿತು:

ಲಕ್ಷದ್ವೀಪ ಐತಿಹಾಸಿಕ ಹಿನ್ನೆಲೆ ಇರುವ ಭಾರತದ ಒಂದು ಕೇಂದ್ರಾಡಳಿತ ಪ್ರದೇಶವಾಗಿದೆ. ಇದು 36 ದ್ವೀಪಗಳ ದ್ವೀಪಸಮೂಹವಾಗಿದ್ದು, ಪಶ್ಚಿಮಕ್ಕೆ ಅರೇಬಿಯನ್ ಸಮುದ್ರ ಮತ್ತು ಪೂರ್ವಕ್ಕೆ ಲಕಾಡಿವ್ ಸಮುದ್ರದ ನಡುವಿನ ಸಮುದ್ರ ಗಡಿಯಾಗಿ ಕಾರ್ಯನಿರ್ವಹಿಸುತ್ತದೆ. ಇದು ಭಾರತದ ಮಲಬಾರ್ ಕರಾವಳಿಯಿಂದ 200 ರಿಂದ 440 ಕಿಮೀ (120 ರಿಂದ 270 ಮೈಲಿ) ದೂರದಲ್ಲಿದೆ.

ಲಕ್ಷದ್ವೀಪ್ ಎಂಬ ಹೆಸರು ಮಲಯಾಳಂ ಮತ್ತು ಸಂಸ್ಕೃತದಲ್ಲಿ “ಒಂದು ಲಕ್ಷ ದ್ವೀಪಗಳು” ಎಂದರ್ಥ ಇದು ನೂರಕ್ಕೂ ಹೆಚ್ಚು ದ್ವೀಪಗಳ ದ್ವೀಪಸಮೂಹದ ಒಂದು ಭಾಗವಾಗಿದೆ. ‘ಜೆಸೇರಿ’ ಈ ಪ್ರಾಂತ್ಯದಲ್ಲಿ ಪ್ರಾಥಮಿಕ ಮತ್ತು ವ್ಯಾಪಕವಾಗಿ ಮಾತನಾಡುವ ಸ್ಥಳೀಯ ಭಾಷೆಯಾಗಿದೆ. ಈ ದ್ವೀಪಗಳು ಭಾರತದ ಅತ್ಯಂತ ಚಿಕ್ಕ ಕೇಂದ್ರಾಡಳಿತ ಪ್ರದೇಶವನ್ನು ರೂಪಿಸಿದ್ದು, ಅವುಗಳ ಒಟ್ಟು ಮೇಲ್ಮೈ ವಿಸ್ತೀರ್ಣವು ಸರಿಸುಮಾರು 32 ಕಿ.ಮಿ. ಆಗಿದೆ.

Why Lakshadweep is the Perfect Island Hideaway
ಲಕ್ಷದ್ವೀಪ

ಈ ಪ್ರದೇಶವು 10 ಉಪವಿಭಾಗಗಳೊಂದಿಗೆ ಒಂದೇ ಜಿಲ್ಲೆಯನ್ನು ರೂಪಿಸಲಾಗಿದೆ. ಕವರಟ್ಟಿ ಕೇಂದ್ರಾಡಳಿತ ಪ್ರದೇಶದ ರಾಜಧಾನಿಯಾಗಿ ಕಾರ್ಯನಿರ್ವಹಿಸುತ್ತದೆ. ಈ ಪ್ರದೇಶವು ಕೇರಳ ಹೈಕೋರ್ಟಿನ ವ್ಯಾಪ್ತಿಗೆ ಬರುತ್ತದೆ. ಈ ದ್ವೀಪಗಳು ಲಕ್ಷದ್ವೀಪ-ಮಾಲ್ಡೀವ್ಸ್-ಚಾಗೋಸ್ ದ್ವೀಪಗಳ ಗುಂಪಿನ ಉತ್ತರದ ತುದಿಗಳಾಗಿವೆ. ಅವುಗಳು ವಿಶಾಲವಾದ ಸಮುದ್ರದೊಳಗಿನ ಪರ್ವತ ಶ್ರೇಣಿಯ ಮೇಲ್ಭಾಗಗಳಾಗಿವೆ. ಲಕ್ಷದ್ವೀಪವು ಮೂಲತಃ 36 ದ್ವೀಪಗಳನ್ನು ಒಳಗೊಂಡಿದೆ. ಸಮುದ್ರದ ಸವೆತದಿಂದಾಗಿ ಹಲವು ದ್ವೀಪವು ನೀರಿನಲ್ಲಿ ಮುಳುಗಿರುವುದರಿಂದ, ಈಗ 35 ದ್ವೀಪಗಳು ಮಾತ್ರ ಉಳಿದಿವೆ.

ಆರನೇ ಶತಮಾನದ ಬೌದ್ಧ ಜಾತಕ ಕಥೆಗಳಲ್ಲಿ ಈ ದ್ವೀಪಗಳನ್ನು ಉಲ್ಲೇಖಿಸಲಾಗಿದೆ. ಏಳನೇ ಶತಮಾನದಲ್ಲಿ ಮುಸ್ಲಿಮರು ಆಗಮಿಸಿದಾಗ ಇಸ್ಲಾಂ ಧರ್ಮವನ್ನು ಸ್ಥಾಪಿಸಲಾಯಿತು. ಮಧ್ಯಕಾಲೀನ ಅವಧಿಯಲ್ಲಿ, ಈ ಪ್ರದೇಶವನ್ನು ಚೇರ ರಾಜವಂಶ, ಚೋಳ ರಾಜವಂಶ ಮತ್ತು ಅಂತಿಮವಾಗಿ ಕಣ್ಣೂರು ಸಾಮ್ರಾಜ್ಯವು ಆಳಿತು. ಕ್ಯಾಥೋಲಿಕ್ ಪೋರ್ಚುಗೀಸರು 1498ರ ಸುಮಾರಿಗೆ ಆಗಮಿಸಿದರು. ಆದರೆ 1545ರ ಹೊತ್ತಿಗೆ ಹೊರಹಾಕಲ್ಪಟ್ಟರು. ನಂತರ ಈ ಪ್ರದೇಶವನ್ನು ಅರಕ್ಕಲ್‌ನ ಮುಸ್ಲಿಂ ಮನೆತನ ಆಳಿತು. ಅವರು ಕಣ್ಣೂರಿನ ಕೋಲತಿರಿ ರಾಜರಿಗೆ ಸಾಮಂತರಾಗಿದ್ದರು. ನಂತರ ಟಿಪ್ಪು ಸುಲ್ತಾನ್ ವಶಕ್ಕೆ ಬಂದ ಈ ಪ್ರದೇಶವು, 1799 ರಲ್ಲಿ ಅವರ ಮರಣದ ನಂತರ, ಹೆಚ್ಚಿನ ಪ್ರದೇಶವು ಬ್ರಿಟಿಷರಿಗೆ ಹಸ್ತಾಂತರವಾಯಿತು. ಸ್ವಾತಂತ್ರ್ಯ ನಂತರ ಅವರ ನಿರ್ಗಮನದೊಂದಿಗೆ, 1956 ರಲ್ಲಿ ಕೇಂದ್ರಾಡಳಿತ ಪ್ರದೇಶವನ್ನು ರಚಿಸಲಾಯಿತು.

2011ರ ಭಾರತೀಯ ಜನಗಣತಿಯ ಪ್ರಕಾರ, ಒಟ್ಟು 36 ದ್ವೀಪಗಳ ಜನಸಂಖ್ಯೆಯು 64,473 ಆಗಿತ್ತು. ಸ್ಥಳೀಯ ಜನಸಂಖ್ಯೆಯ ಬಹುಪಾಲು ಮುಸ್ಲಿಮರು ಮತ್ತು ಅವರಲ್ಲಿ ಹೆಚ್ಚಿನವರು ಸುನ್ನಿ ಪಂಥದ ಶಾಫಿ ಪಂಗಡಕ್ಕೆ ಸೇರಿದ್ದಾರೆ. ದ್ವೀಪವಾಸಿಗಳು ಭಾರತದ ಹತ್ತಿರದ ರಾಜ್ಯವಾದ ಕೇರಳದ ಮಲಯಾಳಿ ಜನರನ್ನು ಜನಾಂಗೀಯವಾಗಿ ಹೋಲುತ್ತಾರೆ . ಮಿನಿಕಾಯ್ ದ್ವೀಪದಲ್ಲಿ ‘ಧಿವೇಹಿ’ ಹೆಚ್ಚು ಮಾತನಾಡುವ ಭಾಷೆಯಾಗಿದ್ದು, ಹೆಚ್ಚಿನ ಜನಸಂಖ್ಯೆಯು ‘ಜೆಸೇರಿ’ಯನ್ನು ಮಾತನಾಡುತ್ತಾರೆ. ಜೆಸೇರಿ ಉಪಭಾಷೆಯನ್ನು ದ್ವೀಪಸಮೂಹದ ಜನವಸತಿ ದ್ವೀಪಗಳಲ್ಲಿ ಮಾತನಾಡುತ್ತಾರೆ. ಅವುಗಳೆಂದರೆ ಅಮಿಂಡಿವಿ ಮತ್ತು ಲ್ಯಾಕಾಡಿವ್ ದ್ವೀಪಗಳು. ದಕ್ಷಿಣದ ಮಿನಿಕೋಯ್ ದ್ವೀಪವನ್ನು ಹೊರತುಪಡಿಸಿ, ಅಲ್ಲಿ ಮಹಲ್ ಉಪಭಾಷೆಯನ್ನು ಬಳಸಲಾಗುತ್ತದೆ. ಈ ದ್ವೀಪಗಳಿಗೆ ಅಗತ್ತಿ ದ್ವೀಪದಲ್ಲಿರುವ ವಿಮಾನ ನಿಲ್ದಾಣದಿಂದ ಸೇವೆಯನ್ನು ನೀಡಲಾಗುತ್ತದೆ . ಜನರ ಮುಖ್ಯ ಉದ್ಯೋಗ ಮೀನುಗಾರಿಕೆ ಮತ್ತು ತೆಂಗಿನ ಕೃಷಿ, ಟೂನ ಮೀನು ರಫ್ತು ಮುಖ್ಯ ವಸ್ತುವಾಗಿದೆ.

ಇದನ್ನೂ ಓದಿ; ಮಣಿಪುರ ಗಲಭೆ: ಎಎಫ್ಎಸ್‌ಪಿಎ ಮರುಸ್ಥಾಪನೆಗೆ ಒತ್ತಾಯಿಸಿ ಕುಕಿ-ಜೋ ಮಹಿಳೆಯರಿಂದ ಪ್ರತಿಭಟನೆ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...