ಪಶ್ಚಿಮ ಬಂಗಾಳದಲ್ಲಿ ಟಿಎಂಸಿ ಪಕ್ಷ ಮತ್ತು ಕಾಂಗ್ರೆಸ್ ನಡುವಿನ ಸೀಟು ಹಂಚಿಕೆ ಭಿನ್ನಾಭಿಪ್ರಾಯದ ಬೆನ್ನಲ್ಲಿ ಟಿಎಂಸಿ ಮೈತ್ರಿಯಿಂದ ಹೊರ ಬರುವ ಸಾಧ್ಯತೆ ಇದೆ ಎಂದು ಹೇಳಲಾಗಿತ್ತು. ಇದೀಗ ಈ ಬಗ್ಗೆ ಟಿಎಂಸಿ ನಾಯಕಿ ಮಮತಾ ಬ್ಯಾನರ್ಜಿ ಸ್ಪಷ್ಟನೆ ನೀಡಿದ್ದು, ಬಿಜೆಪಿ ವಿರುದ್ಧದ ಹೋರಾಟದಲ್ಲಿ INDIA ಬಣದ ಭಾಗವಾಗಿ ಉಳಿಯುವುದಾಗಿ ಹೇಳಿದ್ದಾರೆ.
ಟಿಎಂಸಿಯ ಪಶ್ಚಿಮ ಮಿಡ್ನಾಪುರ ಜಿಲ್ಲಾ ಘಟಕದ ಟಿಎಂಸಿ ಸಭೆಯಲ್ಲಿ ಮಾತನಾಡಿದ ಮಮತಾ ಬ್ಯಾನರ್ಜಿ, ಬಿಜೆಪಿ ವಿರುದ್ಧದ ಹೋರಾಟದಲ್ಲಿ ಟಿಎಂಸಿ INDIA ಬಣದ ಜೊತೆಗೆ ಇರಲಿದೆ. ಸಿಪಿಐ(ಎಂ)ನ್ನು ಟೀಕಿಸಿದರೂ ಅವರು ಕಾಂಗ್ರೆಸ್ ವಿರುದ್ಧ ಒಂದೇ ಒಂದು ಮಾತನ್ನೂ ಹೇಳಲಿಲ್ಲ ಎಂದು ಸಭೆಯಲ್ಲಿದ್ದ ಟಿಎಂಸಿಯ ಹಿರಿಯ ನಾಯಕರೊಬ್ಬರು ತಿಳಿಸಿದ್ದಾರೆ.
ಕಾಂಗ್ರೆಸ್ ಮತ್ತು ಟಿಎಂಸಿ ಸೇರಿ INDIA ಮೈತ್ರಿಕೂಟದಲ್ಲಿ 28 ಪಕ್ಷಗಳಿವೆ. ಲೋಕಸಭೆ ಚುನಾವಣೆಗೆ ಪಶ್ಚಿಮ ಬಂಗಾಳದಲ್ಲಿ ಸೀಟು ಹಂಚಿಕೆಗೆ ಸಂಬಂಧಿಸಿದಂತೆ ಕಾಂಗ್ರೆಸ್‌ಗೆ ಪಕ್ಷವು ಮುಕ್ತವಾಗಿದೆ, ಆದರೆ ಮಾತುಕತೆ ವಿಫಲವಾದರೆ ಏಕಾಂಗಿಯಾಗಿ ಸ್ಪರ್ಧಿಸಲು ಕಾಂಗ್ರೆಸ್ ಸಿದ್ಧವಾಗಿದೆ ಎಂದು ಟಿಎಂಸಿ ನಾಯಕ, ಸಂಸದ ಸುದೀಪ್ ಬಂಡೋಪಾಧ್ಯಾಯ ಅವರ ಇತ್ತೀಚಿಗೆ ಹೇಳಿಕೆಯನ್ನು ನೀಡಿದ್ದರು.
ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಅಧೀರ್ ರಂಜನ್ ಚೌಧರಿ ಅವರು ತಮ್ಮ ಪಕ್ಷವು ಟಿಎಂಸಿಯಿಂದ ಸ್ಥಾನಕ್ಕಾಗಿ ಭಿಕ್ಷೆ ಬೇಡುವುದಿಲ್ಲ ಎಂದು ಹೇಳಿದ ಎರಡು ದಿನಗಳ ಬಳಿಕ ಈ ಹೇಳಿಕೆ ಹೊರಬಿದ್ದಿತ್ತು. ಈ ವಿಷಯದ ಬಗ್ಗೆ ಮಾತನಾಡಲು ಅಧಿಕಾರವಿಲ್ಲ ಎಂದು ಹೆಸರಿಸಲು ನಿರಾಕರಿಸಿದ ಮತ್ತೊಬ್ಬ ಹಿರಿಯ ಟಿಎಂಸಿ ನಾಯಕ ಹೇಳಿದ್ದರು. ಪಶ್ಚಿಮ ಬಂಗಾಳದಲ್ಲಿ ಪಕ್ಷವು ಮೈತ್ರಿ ಮಾಡಿಕೊಳ್ಳಲು ಮುಕ್ತವಾಗಿದೆ ಆದರೆ ಅಗತ್ಯವಿದ್ದರೆ ಏಕಾಂಗಿಯಾಗಿ ಹೋಗಲು ಸಿದ್ಧವಾಗಿದೆ ಎಂದು ಹೇಳಿದ್ದರು.
ರಾಜ್ಯದ 42 ಲೋಕಸಭಾ ಸ್ಥಾನಗಳ ಪೈಕಿ 4 ಸ್ಥಾನಗಳನ್ನು ಕಾಂಗ್ರೆಸ್‌ಗೆ ಬಿಟ್ಟುಕೊಡಲು ಟಿಎಂಸಿ ಚಿಂತನೆ ನಡೆಸಿತ್ತು. 2019ರ ಲೋಕಸಭೆ ಚುನಾವಣೆಯಲ್ಲಿ ರಾಜ್ಯದಲ್ಲಿ ಟಿಎಂಸಿ 22 ಸ್ಥಾನಗಳನ್ನು ಗೆದ್ದುಕೊಂಡಿತ್ತು. ಕಾಂಗ್ರೆಸ್ 2 ಸ್ಥಾನಗಳನ್ನು ಗೆದ್ದಿತು ಮತ್ತು ಬಿಜೆಪಿ 18 ಸ್ಥಾನಗಳನ್ನು ಗಳಿಸಿತ್ತು. ಲೋಕಸಭೆಯಲ್ಲಿ ಕಾಂಗ್ರೆಸ್‌ನ ನಾಯಕರಾಗಿರುವ ಅಧೀರ್ ರಂಜನ್ ಚೌಧರಿ ಅವರು ಮುರ್ಷಿದಾಬಾದ್ ಜಿಲ್ಲೆಯ ಬಹರಂಪುರ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದಾರೆ ಮತ್ತು ಮಾಜಿ ಕೇಂದ್ರ ಸಚಿವರಾದ ಅಬು ಹಸೇಮ್ ಖಾನ್ ಚೌಧರಿ ಅವರು ಮಾಲ್ಡಾ ಜಿಲ್ಲೆಯ ಮಲ್ದಹಾ ದಕ್ಷಿಣ ಕ್ಷೇತ್ರದಿಂದ ಸತತ ಮೂರನೇ ಗೆಲುವು ಸಾಧಿಸಿದ್ದರು.
ಪಶ್ಚಿಮ ಬಂಗಾಳದಲ್ಲಿ ಟಿಎಂಸಿ, ಕಾಂಗ್ರೆಸ್ ಮತ್ತು ಎಡಪಕ್ಷಗಳ ನಡುವೆ ಮೈತ್ರಿ ಮಾಡಿಕೊಳ್ಳುವ ಬಗ್ಗೆ ಟಿಎಂಸಿ ಮುಖ್ಯಸ್ಥ ಬ್ಯಾನರ್ಜಿ ಈ ಹಿಂದೆ ವಿಶ್ವಾಸ ವ್ಯಕ್ತಪಡಿಸಿದ್ದರು. ಈ ಪ್ರಸ್ತಾವನೆಯನ್ನು ಸಿಪಿಐ(ಎಂ) ತಳ್ಳಿಹಾಕಿತ್ತು. ಈ ಮೊದಲು ಟಿಎಂಸಿ 2001ರ ವಿಧಾನಸಭೆ ಚುನಾವಣೆ, 2009ರ ಲೋಕಸಭೆ ಚುನಾವಣೆ ಮತ್ತು 2011ರ ವಿಧಾನಸಭೆ ಚುನಾವಣೆಗಳಲ್ಲಿ ಕಾಂಗ್ರೆಸ್‌ನೊಂದಿಗೆ ಮೈತ್ರಿ ಮಾಡಿಕೊಂಡಿತ್ತು.
ಇದನ್ನು ಓದಿ: ‘ಶಾಸ್ತ್ರ’ಗಳಿಗೆ ವಿರುದ್ಧವಾಗಿ ‘ರಾಮಮಂದಿರ’ದ ಪ್ರಾಣ ಪ್ರತಿಷ್ಠಾನ: ಹಿಂದೂ ಮಠಾಧೀಶರ ಆರೋಪ


