ಮಥುರಾದ ಕೃಷ್ಣ ಜನ್ಮಭೂಮಿಯಲ್ಲಿರುವ ಶಾಹಿ ಈದ್ಗಾ ಮಸೀದಿ ತೆರವುಗೊಳಿಸುವಂತೆ ಕೋರಿರುವ 15 ಅರ್ಜಿಗಳನ್ನು ಒಗ್ಗೂಡಿಸಿ ಆಲಿಸಲು ಅಲಹಾಬಾದ್ ಹೈಕೋರ್ಟ್ ಮುಂದಾಗಿದೆ.
ನಾಗರಿಕ ಪ್ರಕ್ರಿಯಾ ಸಂಹಿತೆ (ಸಿಪಿಸಿ) ಆದೇಶ 4-ಎ ಅಡಿಯಲ್ಲಿ ಹಿಂದೂ ಪಕ್ಷಕಾರರು (ವಾದಿ) ಈ ಕುರಿತು ಸಲ್ಲಿಸಿದ ಅರ್ಜಿಯ ನಂತರ ನ್ಯಾಯಮೂರ್ತಿ ಮಾಯಾಂಕ್ ಕುಮಾರ್ ಜೈನ್ ಮೇಲಿನ ಆದೇಶವನ್ನು ಹೊರಡಿಸಿದ್ದಾರೆ.
ಶಾಹಿ ಈದ್ಗಾ ಮಸೀದಿಯನ್ನು ತೆರವುಗೊಳಿಸುವಂತೆ ಕೋರಿರುವ ಅರ್ಜಿಗಳು ಮಥುರಾದ ಸಿವಿಲ್ ನ್ಯಾಯಾಲಯದಲ್ಲಿ ಬಾಕಿ ಇದ್ದವು. ಮೇ 2023ರಲ್ಲಿ, ಹೈಕೋರ್ಟ್ ಈ ಮೊಕದ್ದಮೆಗಳನ್ನು ತನಗೆ ವರ್ಗಾಯಿಸಿಕೊಂಡಿತ್ತು. ಈ ಅರ್ಜಿಗಳನ್ನು ಒಗ್ಗೂಡಿಸಿ ಆಲಿಸಲು ಹಿಂದೂ ವಾದಿಯೊಬ್ಬರು ಹೈಕೋರ್ಟ್‌ಗೆ ಮನವಿ ಮಾಡಿದ್ದರು.
ಮಥುರಾದ ಕೃಷ್ಣ ಜನ್ಮಭೂಮಿಯಲ್ಲಿದ್ದ ದೇವಸ್ಥಾನವನ್ನು ಕೆಡವಿ ಮೊಗಲ್ ದೊರೆ ಔರಂಗಜೇಬ್ ನಿರ್ದೇಶನದಂತೆ ಅಲ್ಲಿ ಶಾಹಿ ಈದ್ಗಾ ಮಸೀದಿ ನಿರ್ಮಿಸಲಾಗಿದೆ ಎಂದು ಆರೋಪಿಸಲಾಗಿದೆ.
ಈ ಸಂಬಂಧ ಸುಮಾರು 18ರಷ್ಟು ಅರ್ಜಿಗಳು ಈಗಾಗಲೇ ಅಲಹಾಬಾದ್ ಹೈಕೋರ್ಟ್‌ಗೆ ಸಲ್ಲಿಕೆಯಾಗಿದ್ದು, ಈ ಪೈಕಿ 12ರಷ್ಟು ಅರ್ಜಿಗಳು ಕತ್ರಾ ಕೇಶವ್ ದೇವಸ್ಥಾನಕ್ಕೆ ಹೊಂದಿಕೊಂಡಿರುವ 13.17 ಎಕರೆ ಜಾಗದಲ್ಲಿರುವ ಶಾಹಿ ಈದ್ಗಾ ಮಸೀದಿಯನ್ನು ತೆರವುಗೊಳಿಸುವಂತೆ ಕೋರಿವೆ.
ಶಾಹಿ ಈದ್ಗಾ ಮಸೀದಿ ಸಮೀಕ್ಷೆಗೆ ಅನುಮತಿ:
ಶಾಹಿ ಈದ್ಗಾ ಮಸೀದಿಯ ಆವರಣದಲ್ಲಿ ಸಮೀಕ್ಷೆ ಮಾಡುವಂತೆ ಕೋರಿದ್ದ ಅರ್ಜಿಯನ್ನು ಅಲಹಾಬಾದ್ ಹೈಕೋರ್ಟ್ ಮಾನ್ಯ ಮಾಡಿದೆ. ನ್ಯಾಯಾಲಯದ ಮೇಲ್ವಿಚಾರಣೆಯಲ್ಲಿ ಸಮೀಕ್ಷೆ ನಡೆಸಲು ಡಿಸೆಂಬರ್ 14,2023ರಂದು ಅನುಮತಿ ನೀಡಿದೆ. ಇದಕ್ಕೆ ತಡೆ ನೀಡುವಂತೆ ಮಸೀದಿ ಪರ ಅರ್ಜಿದಾರರು ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದೆ.
ಇದನ್ನೂ ಓದಿ : ಮಕ್ಕಳ ಅಶ್ಲೀಲ ಚಿತ್ರಗಳ ವೀಕ್ಷಣೆ POCSO ಕಾಯ್ದೆಯಡಿಯಲ್ಲಿ ಅಪರಾಧವಲ್ಲ: ಮದ್ರಾಸ್ ಹೈಕೋರ್ಟ್


