ಮಾರ್ಚ್ 15ರೊಳಗೆ ತಮ್ಮ ಸೇನೆಯನ್ನು ವಾಪಸ್ ತೆಗೆದುಕೊಳ್ಳುವಂತೆ ಭಾರತಕ್ಕೆ ಮಾಲ್ಡೀವ್ಸ್ ಗಡುವು ನೀಡಿದೆ ಎಂದು ಅಧ್ಯಕ್ಷ ಮೊಹಮ್ಮದ್ ಮುಯಿಝು ಅವರ ಉನ್ನತ ಸಹಾಯಕ ಅಬ್ದುಲ್ಲಾ ನಾಝಿಮ್ ಇಬ್ರಾಹಿಂ ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.
“ಭಾರತೀಯ ಸೇನೆ ಮಾಲ್ಡೀವ್ಸ್‌ನಲ್ಲಿ ಇರಬಾರದು ಎಂಬುವುದು ಅಧ್ಯಕ್ಷ ಮುಯಿಝು ಅವರ ಆಶಯವಾಗಿದೆ. ಕೆಲ ತಿಂಗಳುಗಳಿಂದ ನಾವು ಈ ಬಗ್ಗೆ ಭಾರತದೊಂದಿಗೆ ಮಾತುಕತೆ ನಡೆಸುತ್ತಿದ್ದೇವೆ. ಮಾಲ್ಡೀವ್ಸ್‌ನಲ್ಲಿರುವ ಭಾರತೀಯ ಹೈಕಮಿಷನರ್ ಭಾನುವಾರ ಮಾಲ್ಡೀವ್ಸ್ ಅಧಿಕಾರಿಗಳನ್ನು ಭೇಟಿ ಮಾಡಿದ್ದಾರೆ” ಎಂದು ನಾಝಿಮ್ ಇಬ್ರಾಹಿಂ ತಿಳಿಸಿದ್ದಾರೆ.
ಮಾಲ್ಡೀವ್ಸ್‌ನ ಹೊಸ ಸರ್ಕಾರ ಭಾರತದ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಿ ಚೀನಾದತ್ತ ಒಲವು ತೋರಿಸಿದೆ. ಇತ್ತೀಚೆಗೆ ಭಾರತ ಮತ್ತು ಮಾಲ್ಡೀವ್ಸ್ ನಡುವೆ ಶೀತಲ ಸಮರ ನಡೆಯುತ್ತಿದ್ದಾಗಲೇ, ಮಾಲ್ಡೀವ್ಸ್ ಅಧ್ಯಕ್ಷ ಮುಯಿಝು ಅವರು ಚೀನಾಗೆ ಭೇಟಿ ನೀಡಿದ್ದರು. ಈ ವೇಳೆ ಮಾಲ್ಡೀವ್ಸ್ ರಾಜಧಾನಿ ಮಾಲೆಯ ಅಭಿವೃದ್ಧಿಗೆ 130 ಮಿಲಿಯನ್ ಡಾಲರ್ ನೆರವು ನೀಡಲು ಚೀನಾ ಒಪ್ಪಿಕೊಂಡಿದೆ. ಉಭಯ ದೇಶಗಳು ಕೃಷಿ ಸಹಕಾರ ಒಪ್ಪಂದಕ್ಕೂ ಸಹಿ ಹಾಕಿವೆ.
“ಅಕ್ಕಿ, ಸಕ್ಕರೆ ಮತ್ತು ಹಿಟ್ಟಿನಂತಹ ಆಮದು ಮಾಡಿಕೊಳ್ಳುವ ಪ್ರಧಾನ ಆಹಾರಗಳಿಗಾಗಿ ಒಂದು ದೇಶದ ಮೇಲಿನ ಅವಲಂಬನೆಯನ್ನು ನಮ್ಮ ಸರ್ಕಾರ ಕೊನೆಗೊಳಿಸಲಿದೆ” ಎಂದು ಅಧ್ಯಕ್ಷ ಮುಯಿಝು ಅವರ ಕಚೇರಿಯು ಇತ್ತೀಚೆಗೆ ಪರೋಕ್ಷವಾಗಿ ಭಾರತಕ್ಕೆ ತಿರುಗೇಟು ನೀಡಿತ್ತು.
ಮುಯಿಝು ಅವರು ಚೀನಾವನ್ನು ‘ಮಾಲ್ಡೀವ್ಸ್‌ನ ಆತ್ಮೀಯ ಮಿತ್ರ ರಾಷ್ಟ್ರಗಳಲ್ಲಿ ಒಂದು’ ಎಂದು ಹೇಳಿದ್ದರು. ಚೀನಾ ಭೇಟಿಯ ಬಳಿಕ ಭಾರತವನ್ನು ಗುರಿಯಾಗಿಸಿ ಟೀಕೆ ವ್ಯಕ್ತಪಡಿಸಿದ್ದರು.
“ನಾವು ಚಿಕ್ಕವರಾಗಿರಬಹುದು, ಆದರೆ, ನಮ್ಮನ್ನು ಬೆದರಿಸುವುದಕ್ಕೆ ನಿಮಗೆ ಪರವಾನಗಿ ನೀಡುವುದಿಲ್ಲ. ನಾವು ಯಾರ ಹಿತ್ತಲಿನಲ್ಲಿಲ್ಲ. ನಾವು ಸ್ವತಂತ್ರ ಮತ್ತು ಸಾರ್ವಭೌಮ ರಾಷ್ಟ್ರ” ಎಂದು ಮಾಲ್ಡೀವಿಯನ್ ಮಾಧ್ಯಮದ ಮುಂದೆ ಮುಯಿಝು ಹೇಳಿದ್ದರು.
ಪ್ರಧಾನಿ ಮೋದಿಯವರು ಇತ್ತೀಚೆಗೆ ಲಕ್ಷದ್ವೀಪಕ್ಕೆ ಭೇಟಿ ನೀಡಿದ್ದ ಫೋಟೋಗಳನ್ನು ಹಂಚಿಕೊಂಡಿದ್ದರು. ಇದಕ್ಕೆ ಮಾಲ್ಡೀವ್ಸ್ ಸಚಿವರು ಟೀಕೆ ವ್ಯಕ್ತಪಡಿಸಿದ್ದರು. ಈ ವಿಚಾರ ಭಾರತ ಮತ್ತು ಮಾಲ್ಡೀವ್ಸ್ ನಡುವೆ ರಾಜತಾಂತ್ರಿಕ ಸಂಬಂಧ ಹದೆಗೆಡುವಂತೆ ಮಾಡಿದೆ. ಪ್ರಧಾನಿ ಮೋದಿಯನ್ನು ಟೀಕಿಸಿದ ಮೂವರು ಸಚಿವರನ್ನು ಮಾಲ್ಡೀವ್ಸ್ ಸರ್ಕಾರ ಸಂಪುಟದಿಂದ ವಜಾ ಮಾಡಿದೆ. ಆದರೂ, ಮಾಲ್ಡೀವ್ಸ್‌ನ ಹೊಸ ಸರ್ಕಾರ ಭಾರತಕ್ಕಿಂತ ಚೀನಾದ ಕಡೆ ಹೆಚ್ಚಿನ ಒಲವು ತೋರಿಸುತ್ತಿದೆ.
ಇದನ್ನೂ ಓದಿ: 100ನೇ ದಿನಕ್ಕೆ ಕಾಲಿಟ್ಟ ಯುದ್ಧ: ನೆತನ್ಯಾಹು ಪ್ರತಿಜ್ಞೆ


