ಕೇಂದ್ರದಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರ ಅಧಿಕಾರಕ್ಕೆ ಬಂದು ಎರಡು ವರ್ಷವೂ ಕಳೆದಿರಲಿಲ್ಲ; ಹೈದರಾಬಾದ್‌ನ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ಸಂಶೋಧನಾ ವಿದ್ಯಾರ್ಥಿಯಾಗಿದ್ದ ರೋಹಿತ್ ವೇಮುಲ ಆತ್ಮಹತ್ಯೆಗೆ ಶರಣಾಗಿದ್ದರು. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಅಭಿಮಾನಿಯಾಗಿದ್ದ, ವಿಜ್ಞಾನ ಕ್ಷೇತ್ರದಲ್ಲಿ ಮಹತ್ತರ ಸಾಧನೆ ಮಾಡಬೇಕು ಎಂದುಕೊಂಡಿದ್ದ ರೋಹಿತ್ ಸಾವಿನ ಸುದ್ದಿ ದೇಶಾದ್ಯಂತ ಭಾರೀ ಸದ್ದು ಮಾಡಿತ್ತು. ದೇಶದ ಲಕ್ಷಾಂತರ ಜನರ; ಮುಖ್ಯವಾಗಿ, ಯುವ ಸಮೂಹದ ಕಣ್ಣೀರಿಗೆ ಕಾರಣವಾಗಿತ್ತು.
ದಲಿತ ವಿದ್ಯಾರ್ಥಿಗಳಿಗೆ ನೆರವು ನೀಡುವಲ್ಲಿ ಕೇಂದ್ರೀಯ ವಿಶ್ವವಿದ್ಯಾಲಯಗಳಲ್ಲಿ ನಡೆಯುತ್ತಿದ್ದ ತಾರತಮ್ಯ ಹಾಗೂ ವಿವಿಗಳ ಕೇಸರೀಕರಣದ ವಿರುದ್ಧ ಸದಾ ಧ್ವನಿ ಎತ್ತುತ್ತಿದ್ದ ರೋಹಿತ್ ವೇಮುಲ ಬರೆದಿದ್ದ ಕೊನೆಯ ಪತ್ರ ಪ್ರತಿಯೊಬ್ಬರ ಕರುಳನ್ನೂ ಕಿವುಚಿತ್ತು.
26 ವರ್ಷದ ಪಿಎಚ್‌ಡಿ ವಿದ್ಯಾರ್ಥಿಯಾಗಿದ್ದ ರೋಹಿತ್, ಹೈದರಾಬಾದ್ ಕೇಂದ್ರೀಯ ವಿಶ್ವವಿದ್ಯಾಲಯದ ತಮ್ಮ ಸೀನಿಯರ್ ಒಬ್ಬರ ಕೊಠಡಿಯಲ್ಲಿ ಆತ್ಮಹತ್ಯೆಗೆ ಶರಣಾಗಿದ್ದರು. ಅವರು ಅಂಬೇಡ್ಕರ್ ವಿದ್ಯಾರ್ಥಿಗಳ ಸಂಘದ ಸದಸ್ಯರಾಗಿದ್ದರು, ಇದು ಕ್ಯಾಂಪಸ್‌ನಲ್ಲಿ ದಲಿತ ವಿದ್ಯಾರ್ಥಿಗಳ ಹಕ್ಕುಗಳಿಗಾಗಿ ಹೋರಾಡುತ್ತದೆ. ವಿಶ್ವವಿದ್ಯಾನಿಲಯದ ವಸತಿ ಸೌಲಭ್ಯದಿಂದ ಹೊರಹಾಕುವುದನ್ನು ವಿರೋಧಿಸಿ ಪ್ರತಿಭಟನೆ ನಡೆಸುತ್ತಿದ್ದ ಐವರು ದಲಿತ ವಿದ್ಯಾರ್ಥಿಗಳಲ್ಲಿ ಇವರೂ ಒಬ್ಬರಾಗಿದ್ದು, ಹಾಸ್ಟೆಲ್‌ನಿಂದ ಹೊರಬರುತ್ತಿರುವ ಫೋಟೋಗಳು ಇಂಟರ್‌ನೆಟ್‌ನಲ್ಲಿ ವೈರಲ್ ಆಗಿದ್ದವು.
ಬಿಜೆಪಿಯ ವಿದ್ಯಾರ್ಥಿ ಘಟಕವಾದ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ಎಬಿವಿಪಿ) ಸದಸ್ಯನ ಮೇಲೆ ಅವರು ಹಲ್ಲೆ ನಡೆಸಿದ್ದಾರೆ ಎಂಬ ಆರೋಪವನ್ನೂ ರೋಹಿತ್ ಎದುರಿಸಿದ್ದರು. ಆದರೆ, ವಿಶ್ವವಿದ್ಯಾಲಯದ ಆಡಳಿತ ಮಂಡಳಿ ವಿಚಾರಣೆ ನಂತರ ಕ್ಲೀನ್‌ಚಿಟ್ ನೀಡಿದರೂ, ಡಿಸೆಂಬರ್ ಹೊತ್ತಿಗೆ ತನ್ನ ನಿರ್ಧಾರವನ್ನು ಬದಲಾಯಿಸಿತು.
‘ರೋಹಿತ್ ಕಠಿಣ ಪರಿಶ್ರಮಿ, ಅದ್ಭುತ ವಿದ್ಯಾರ್ಥಿ ಮತ್ತು ಸಹೃದಯ ಆತ್ಮ’ ಎಂದು ಅವರ ಆತ್ಮೀಯ ಸ್ನೇಹಿತರಾಗಿದ್ದ ಪಿ ವಿಜಯ್ ಹೇಳಿದ್ದರು. ‘ಅವರು ತಮ್ಮ ಹೆಚ್ಚಿನ ಸಮಯವನ್ನು ವಿಶ್ವವಿದ್ಯಾಲಯದ ಗ್ರಂಥಾಲಯದಲ್ಲಿ ಕಳೆಯುತ್ತಿದ್ದರು’ ಎಂದು ಅವರ ಮರಣದ ನಂತರ ಹೇಳಿದ್ದರು.
ರೋಹಿತ್ ಸಾವಿನ ನಂತರ ಹೈದರಾಬಾದ್, ಬೆಂಗಳೂರು, ಚೆನ್ನೈ, ದೆಹಲಿ ಸೇರಿದಂತೆ ವಿವಿಧ ನಗರಗಳಲ್ಲಿ, ಹಲವು ವಿಶ್ವವಿದ್ಯಾಲಯಗಳಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಭಾರಿ ಪ್ರತಿಭಟನೆಗಳು ನಡೆದವು. ಸಂಸತ್ತಿನ ಅಧಿವೇಶನದಲ್ಲಿ ಹಲವು ದಿನಗಳ ಕಾಲ ರೋಹಿತ್ ಸಾವಿನ ವಿಚಾರವಾಗಿ ಚರ್ಚೆಗಳು ನಡೆದು, ಅಂದಿನ ಮಾನವ ಸಂಪನ್ಮೂಲ ಸಚಿವರಾಗಿದ್ದ ಸ್ಮೃತಿ ಇರಾನಿ ಅವರನ್ನು ವಿಪಕ್ಷಗಳು ತರಾಟೆಗೆ ತೆಗೆದುಕೊಂಡಿದ್ದವು.
"I always wanted to be a writer. The author of science, like Carl Sagan."
– Rohit Vemula [1989- Forever] pic.twitter.com/eDFZfLiBs8
— The Dalit Voice (@ambedkariteIND) January 17, 2024
ಇಂದಿಗೆ (17-01-2016; 17-01-2024) ರೋಹಿತ್ ನಮ್ಮನ್ನೆಲ್ಲಾ ದೈಹಿಕವಾಗಿ ಅಗಲಿ, ಮನಸ್ಸಿನಿಂದ ಅಪ್ಪಿಕೊಂಡು ಎಂಟು ವರ್ಷ ಕಳೆಯುತ್ತಿದೆ. ಸಾಮಾಜಿಕ ಜಾಲತಾಣಗಳಲ್ಲಿ ಇಂದು ಲಕ್ಷಾಂತರ ಜನ ರೋಹಿತ್ ನೆನಪಿಸಿಕೊಂಡು ಪೋಸ್ಟ್ ಮಾಡುತ್ತಿದ್ದಾರೆ. ಆತ ಕೊನೆಯದಾಗಿ ಬರೆದ ಡೆತ್ ನೋಟ್‌ನ ಸಾಲುಗಳನ್ನು ಹಂಚಿಕೊಂಡಿದ್ದಾರೆ.
ರೋಹಿತ್ ವೇಮುಲ ಕೊನೆಯದಾಗಿ ಬರೆದ ಡೆತ್ ನೋಟ್:
ಶುಭ ಮುಂಜಾನೆ…
ನೀವು ಈ ಪತ್ರವನ್ನು ಓದುವಾಗ ನಾನಿರುವುದಿಲ್ಲ, ಕೋಪ ಮಾಡಿಕೊಳ್ಳಬೇಡಿ. ನನಗೆ ಗೊತ್ತು, ನಿಮ್ಮಲ್ಲಿ ಹಲವರು ನಿಜಕ್ಕೂ ನನ್ನ ಬಗ್ಗೆ ಕಾಳಜಿ ತೋರಿದಿರಿ, ಪ್ರೀತಿಸಿದಿರಿ ಮತ್ತು ಉತ್ತಮವಾಗಿ ನೋಡಿಕೊಂಡಿರಿ. ಯಾರ ಮೇಲೂ ನನಗೆ ದೂರುಗಳಿಲ್ಲ. ಯಾವಾಗಲೂ ನನಗೆ ಸಮಸ್ಯೆಯಿದ್ದಿದ್ದು ನನ್ನೊಂದಿಗೇನೇ, ನನ್ನ ದೇಹ ಮತ್ತು ಆತ್ಮದ ನಡುವಿನ ಕಂದಕ ದೊಡ್ಡದಾಗುತ್ತಿರುವ ಭಾವನೆ ಮತ್ತು ನಾನು ರಾಕ್ಷಸನಾಗಿಬಿಟ್ಟಿದ್ದೇನೆ.

ಒಬ್ಬ ಬರಹಗಾರನಾಗಬೇಕೆಂಬುದು ಯಾವಾಗಲೂ ನನ್ನ ಬಯಕೆಯಾಗಿತ್ತು. ಕಾರ್ಲ್ ಸಗಾನ್‌ನಂತೆ, ವಿಜ್ಞಾನದ ಬರಹಗಾರನಾಗಬಯಸಿದ್ದೆ. ಕೊನೆಗೆ. ಇದೊಂದು ಪತ್ರವನ್ನು ಮಾತ್ರ ನನ್ನಿಂದ ಬರೆಯಲಾಗುತ್ತಿರುವುದು.
ನಾನು ವಿಜ್ಞಾನ, ನಕ್ಷತ್ರ, ಪ್ರಕೃತಿಯನ್ನು ಪ್ರೀತಿಸಿದೆ. ಆದರೆ, ಪ್ರಕೃತಿಯಿಂದ ಮನುಷ್ಯರು ವಿಚ್ಛೇದನ ಪಡೆದು ಬಹಳ ಕಾಲವಾಯಿತು ಎಂಬುದನ್ನು ಅರಿಯದೆ ಮನುಷ್ಯರನ್ನು ಪ್ರೀತಿಸಿದೆ. ನಮ್ಮ ಭಾವನೆಗಳೆಲ್ಲ ಸೆಕೆಂಡ್ ಹ್ಯಾಂಡು. ಪ್ರೀತಿಯನ್ನು ಇಲ್ಲಿ ಕಟ್ಟಿಕೊಡಲಾಗಿದ್ದು, ನಂಬಿಕೆಗಳಿಗೆ ಬಣ್ಣ ಬಳಿಯಲಾಗಿದೆ. ನಮ್ಮ ಸ್ವಂತಿಕೆಗೆ ಇಲ್ಲಿ ಬೆಲೆ ಬರುವುದೇ ಕೃತಕ ಕಲೆಯಿಂದ. ನೋವುಣ್ಣದೆ ಪ್ರೀತಿಸುವುದು ನಿಜಕ್ಕೂ ಕಷ್ಟಕರವಾಗಿಬಿಟ್ಟಿದೆ. ಅದು ಅಧ್ಯಯನ ಕ್ಷೇತ್ರದಲ್ಲಿರಲಿ, ಬೀದಿಗಳಲ್ಲಿರಲಿ, ರಾಜಕೀಯದಲ್ಲಿರಲಿ. ಸಾವಿನಲ್ಲೇ ಇರಲಿ ಅಥವಾ ಬದುಕಿನಲ್ಲೇ ಇರಲಿ; ಮನುಷ್ಯನ ಮೌಲ್ಯ ಎಂಬುದು ಅವನ ತತ್ಕ್ಷಣದ ಅಸ್ಮಿತೆ ಮತ್ತು ಸಮೀಪದ ಯಾವುದೋ ಒಂದು ಸಾಧ್ಯತೆಯ ಮಟ್ಟಕ್ಕಷ್ಟೇ ಇಳಿದುಬಿಟ್ಟಿದೆ. ಒಂದು ವೋಟಿಗೆ. ಒಂದು ಸಂಖ್ಯೆಗೆ ಒಂದು ವಸ್ತುವಿಗೆ. ಅಷ್ಟೆ. ಮನುಷ್ಯನನ್ನು ಅವನ ಮನಸ್ಸಿನ ಮೂಲಕ ಎಂದೂ ಪರಿಗಣಿಸಲಿಲ್ಲ. ನಭೋಮಂಡಲದ ನಕ್ಷತ್ರಗಳ ಧೂಳಿನಿಂದ ಮಾಡಲ್ಪಟ್ಟ ಅತ್ಯದ್ಭುತ ವಸ್ತುವಿನಂತೆ ಎಂದೂ ಅವನನ್ನು ಗುರುತಿಸಲಿಲ್ಲ.
ಈ ರೀತಿಯ ಪತ್ರವನ್ನು ಮೊದಲ ಬಾರಿಗೆ ಬರೆಯುತ್ತಿದ್ದೇನೆ. ಇದು ಅಂತಿಮ ಪತ್ರದ ಮೊದಲ ಯತ್ನ. ಏನಾದರೂ ತಪ್ಪಾಗಿ ಬರೆದಿದ್ದರೆ ಮನ್ನಿಸಿ. ಬಹುಶಃ ಪ್ರಪಂಚವನ್ನು ಅರ್ಥ ಮಾಡಿಕೊಳ್ಳುವಲ್ಲಿ ನಾನು ಎಡವಿದೆ. ಪ್ರೀತಿ, ನೋವು, ಬದುಕು, ಸಾವು ಇವನ್ನೆಲ್ಲಾ ಅರ್ಥ ಮಾಡಿಕೊಳ್ಳುವಲ್ಲಿ ಸೋತೆ. ಆತುರವೇನಿರಲಿಲ್ಲ. ನಾನು ಓಡುತ್ತಲೇ ಇದ್ದೆ. ಬದುಕು ಪ್ರಾರಂಭಿಸುವ ಹತಾಶೆಯಿಂದ ಓಡುತ್ತಿದ್ದೆ. ಕೆಲವರಿಗೆ ಬದುಕೇ ಒಂದು ಶಾಪ. ನನಗೆ, ನನ್ನ ಹುಟ್ಟೇ ನನಗೆ ಮಾರಣಾಂತಿಕ ಅಪಘಾತ. ನನ್ನ ಬಾಲ್ಯದ ಏಕಾಂಗಿತನದಿಂದ ನಾನೆಂದೂ ಚೇತರಿಸಿಕೊಳ್ಳಲಾರೆ. ನನ್ನ ಗತದಿಂದ ಬಂದ ಪಾಪಿ ಕೂಸು ನಾನು.
ಈ ಕ್ಷಣದಲ್ಲಿ ನನಗೆ ನೋವಾಗುತ್ತಿಲ್ಲ. ದುಃಖವಾಗುತ್ತಿಲ್ಲ; ಖಾಲಿ ಖಾಲಿ ಅನಿಸುತ್ತಿದೆ. ನನ್ನ ಬಗ್ಗೆ ನನಗೇ ಕಾಳಜಿಯಿಲ್ಲದಾಗಿದೆ. ಇದು ಅಸಹ್ಯ; ಹಾಗಾಗಿ ಈ ಕೆಲಸ ಮಾಡುತ್ತಿದ್ದೇನೆ. ಜನರು ನನ್ನನ್ನು ಹೇಡಿಯೆಂದು ಜರಿಯಬಹುದು. ನಾನು ಹೋದ ಮೇಲೆ ಸ್ವಾರ್ಥಿ, ಮೂರ್ಖ ಎನ್ನಬಹುದು. ಅದರ ಬಗ್ಗೆಯೇನೂ ಚಿಂತೆಯಿಲ್ಲ. ಪುನರ್ ಜನ್ಮದ ಕತೆಗಳಲ್ಲಿ, ಭೂತ, ಪಿಶಾಚಿಗಳಿರುವುದರಲ್ಲಿ ನನಗೆ ನಂಬಿಕೆಯಿಲ್ಲ. ಏನಾದರೂ ನಂಬುವುದಿದ್ದರೆ ಅದು ನಾನು ತಾರೆಗಳವರೆಗೆ ಪ್ರಯಾಣಿಸಬಲ್ಲೆನೆಂಬುದನ್ನು ಮಾತ್ರ ಮತ್ತು ಇತರ ಪ್ರಪಂಚಗಳ ಬಗ್ಗೆ ತಿಳಿದುಕೊಳ್ಳಬಲ್ಲೆ ಎಂಬುದನ್ನು ಮಾತ್ರವೇ.

ಈ ಪತ್ರ ಓದುತ್ತಿರುವ ನೀವು ನನಗೇನಾದರೂ ಮಾಡಬಹುದಾದರೆ, ಕಳೆದ ಏಳು ತಿಂಗಳಿನ ಫೆಲೋಶಿಪ್ ಹಣ ಒಂದು ಲಕ್ಷದ ಎಪ್ಪತ್ತೈದು ಸಾವಿರ ರೂಪಾಯಿ ಇನ್ನೂ ಬರಬೇಕಿದೆ. ಅದು ನನ್ನ ಕುಟುಂಬದವರಿಗೆ ತಲುಪುವಂತೆ ಮಾಡಿ. ರಾಮ್ಜಿಗೆ ನಲವತ್ತು ಸಾವಿರದಷ್ಟು ಕೊಡಬೇಕಿದೆ. ಅವನು ವಾಪಸ್ ಕೇಳಿಲ್ಲ. ದಯವಿಟ್ಟು ನನಗೆ ಬರುವ ಹಣದಲ್ಲಿ ಅವನ ಹಣವನ್ನು ಕೊಟ್ಟುಬಿಡಿ. ನನ್ನ ಅಂತ್ಯಕ್ರಿಯೆ ಶಾಂತವಾಗಿ, ಸುಗಮವಾಗಿ ನಡೆಯಲಿ. ಹಿಂಗೆ ಕಾಣಿಸಿಕೊಂಡು ಹಂಗೆ ಮರೆಯಾಗಿಬಿಟ್ಟ ಎನ್ನುವಂತೆ ವರ್ತಿಸಿ. ನನಗಾಗಿ ಕಣ್ಣೀರು ಬೇಡ. ಜೀವಂತವಾಗಿದ್ದಾಗ ಇರುವುದಕ್ಕಿಂತಲೂ ಸತ್ತಮೇಲೆಯೇ ನಾನು ಖುಷಿಯಾಗಿರುತ್ತೇನೆ ಎನ್ನುವುದು ಗೊತ್ತಿರಲಿ; ಮಬ್ಬುಗತ್ತಲೆಯಿಂದ ತಾರೆಗಳೆಡೆಗೆ.
ಉಮಾ ಅಣ್ಣ, ಈ ಕೆಲಸಕ್ಕೆ ನಿಮ್ಮ ಕೋಣೆಯನ್ನು ಉಪಯೋಗಿಸಿದ್ದಕ್ಕೆ ಕ್ಷಮೆ ಇರಲಿ. ‘ಆಸಾ’ ಕುಟುಂಬಕ್ಕೆ ನಿರಾಸೆ ಮೂಡಿಸಿದ್ದಕ್ಕೆ ಕ್ಷಮೆ ಕೋರುತ್ತೇನೆ. ನೀವೆಲ್ಲರೂ ನನ್ನನ್ನು ತುಂಬಾ ಪ್ರೀತಿಸಿದಿರಿ. ನಿಮ್ಮೆಲ್ಲರ ಉಜ್ವಲ ಭವಿಷ್ಯಕ್ಕೆ ಹಾರೈಸುತ್ತಿದ್ದೇನೆ. ಇದೋ ಕೊನೆಯ ಒಂದು ಸಲ, ಜೈ ಭೀಮ್.

ಫಾರ್ಮಾಲಿಟಿಗಳನ್ನು ಬರೆಯುವುದನ್ನು ಮರೆತುಬಿಟ್ಟೆ. ನನ್ನ ಸಾವಿಗೆ ಯಾರೂ ಹೊಣೆಗಾರರಲ್ಲ. ಯಾರೂ ನನ್ನನ್ನು ತಮ್ಮ ಕೃತ್ಯಗಳಿಂದಾಗಲೀ, ಮಾತಿನಿಂದಾಗಲೀ ಇದಕ್ಕೆ ಉತ್ತೇಜಿಸಲಿಲ್ಲ. ಇದು ನನ್ನ ನಿರ್ಧಾರ ಮತ್ತು ಇದಕ್ಕೆ ನಾನೊಬ್ಬನೇ ಜವಾಬ್ದಾರ. ನಾನು ಹೋದ ಮೇಲೆ ಈ ವಿಷಯವಾಗಿ ನನ್ನ ಸ್ನೇಹಿತರಿಗೆ ಮತ್ತು ಶತ್ರುಗಳಿಗೆ ತೊಂದರೆ ಕೊಡಬೇಡಿ.
ಇದನ್ನೂ ಓದಿ; ಚಂಡೀಗಢ: ಮೇಯರ್ ಚುನಾವಣೆಗೂ ಮುನ್ನವೇ ಕಾರ್ಯಕರ್ತರ ನಡುವೆ ಮಾರಾಮಾರಿ


