ರಾಮಮಂದಿರದ ಪ್ರಾಣಪ್ರತಿಷ್ಠಾಪನಾ ಕಾರ್ಯಕ್ರಮಕ್ಕೆ ನಾಲ್ಕು ದಿನಗಳು ಬಾಕಿ ಇದೆ. ಈ ಮಧ್ಯೆ ಅಲಹಾಬಾದ್ ಹೈಕೋರ್ಟ್‌ನಲ್ಲಿ ಎರಡು ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು (ಪಿಐಎಲ್) ಸಲ್ಲಿಸಲಾಗಿದೆ ಎಂದು ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.
ಗಾಝಿಯಾಬಾದ್ ಜಿಲ್ಲೆಯ ಭೋಲಾ ದಾಸ್ ಎಂಬವರು ಈ ಬಗ್ಗೆ ಮೊದಲ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸಲ್ಲಿಸಿದ್ದು, 2024ರ ಸಂಸತ್ತಿನ ಚುನಾವಣೆ ಮುಗಿಯುವವರೆಗೆ ಅಯೋಧ್ಯೆಯಲ್ಲಿ ನಡೆಯುವ ಪ್ರಾಣ-ಪ್ರತಿಷ್ಠಾಪನಾ ಸಮಾರಂಭದಲ್ಲಿ ಭಾರತದ ಪ್ರಧಾನಿ ಮೋದಿ ಮತ್ತು ಯುಪಿ ಸಿಎಂ ಭಾಗವಹಿಸಲು ಅವಕಾಶ ನೀಡದಂತೆ ನ್ಯಾಯಾಲಯದ ನಿರ್ದೇಶನವನ್ನು ಕೋರಿದ್ದಾರೆ.
ಸನಾತನ ಧರ್ಮದ ಶಂಕರಾಚಾರ್ಯರುಗಳ ಅನುಮತಿ ದೊರೆಯುವ ತನಕ ನ್ಯಾಯದ ಹಿತಾಸಕ್ತಿಯಿಂದ ಮೇಲಿನ ನಿರ್ಬಂಧಗಳನ್ನು ಪ್ರಧಾನಿ ಹಾಗೂ ಉತ್ತರಪ್ರದೇಶ ಸಿಎಂಗೆ ಹೇರಬೇಕೆಂದೂ ಪಿಐಎಲ್‌ನಲ್ಲಿ ಕೋರಲಾಗಿದೆ.
ಪಿಐಎಲ್‌ನಲ್ಲಿ ಅರ್ಜಿದಾರರು ಕೆಂದ್ರ ಸರಕಾರ, ಪ್ರಧಾನಿ, ಯುಪಿ ಮುಖ್ಯಮಂತ್ರಿ, ಯುಪಿ ರಾಜ್ಯ ಮತ್ತು ನಾಲ್ವರು ಶಂಕರಾಚಾರ್ಯರನ್ನು ಪ್ರತಿವಾದಿಗಳನ್ನಾಗಿ ಮಾಡಿದ್ದಾರೆ. ಆಡಳಿತಾರೂಢ ಬಿಜೆಪಿಯು ಅಧಿಕಾರವನ್ನು ದುರುಪಯೋಗಪಡಿಸಿಕೊಳ್ಳುತ್ತಿದೆ ಮತ್ತು ಲೋಕಸಭೆ ಚುನಾವಣೆಗೆ ಮುಂದಿರುವ ಪಕ್ಷದ ರಾಜಕೀಯ ಹಿತಾಸಕ್ತಿಯಲ್ಲಿ ಸನಾತನ ಸಂಸ್ಕೃತಿಯನ್ನು ನಾಶಪಡಿಸುತ್ತಿದೆ ಎಂದು ಸಾರ್ವಜನಿಕ ಹಿತಾಸಕ್ತಿ ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ.
ಇದಲ್ಲದೆ ಅಯೋಧ್ಯೆಯ ರಾಮ ಮಂದಿರದಲ್ಲಿ ಜನವರಿ 22ರಂದು ನಡೆಯಲಿರುವ ರಾಮಲಲ್ಲಾ ಮೂರ್ತಿಯ ಪ್ರಾಣ ಪ್ರತಿಷ್ಠಾಪನಾ ಕಾರ್ಯಕ್ರಮಕ್ಕೆ ನಿರ್ಬಂಧ ವಿಧಿಸಲು ಕೂಡ ಅರ್ಜಿದಾರರು ಆಗ್ರಹಿಸಿದ್ದಾರೆ. ಹಿಂದೂ ಪಂಚಾಂಗದ ಪ್ರಕಾರ, ಪುಷ್ಯ ಮಾಸದಲ್ಲಿ ಯಾವುದೇ ಧಾರ್ಮಿಕ ಕಾರ್ಯಕ್ರಮ ಆಯೋಜಿಸಬಾರದು. ಅಲ್ಲದೆ ದೇವಾಲಯ ಇನ್ನೂ ನಿರ್ಮಾಣ ಹಂತದಲ್ಲಿದ್ದು, ಉದ್ಘಾಟನೆ ಸನಾತನ ಸಂಪ್ರದಾಯಕ್ಕೆ ವ್ಯತಿರಿಕ್ತವಾಗಿರುವುದರಿಂದ ದೇವರ ಪ್ರತಿಷ್ಠಾಪನೆ ಮಾಡಬಾರದು ಎಂದು ಅರ್ಜಿದಾರರು ಕೋರ್ಟ್‌ಗೆ ಸಲ್ಲಿಸಿದ ಅರ್ಜಿಯಲ್ಲಿ ಉಲ್ಲೇಖಿಸಿದ್ದಾರೆ.
ಪ್ರಾಣ ಪ್ರತಿಷ್ಠಾಪನಾ ಕಾರ್ಯಕ್ರಮಕ್ಕೆ ಶಂಕರಾಚಾರ್ಯರ ಆಕ್ಷೇಪವಿದೆ. ದೇವಾಲಯ ಅಪೂರ್ಣವಾಗಿದ್ದು, ದೇವರ ವಿಗ್ರಹದ ಪ್ರಾಣ ಪ್ರತಿಷ್ಠಾಪನೆ ಮಾಡುವುದು ಸನಾತನ ಧರ್ಮದ ಆಚರಣೆಗಳಿಗೆ ವಿರುದ್ಧವಾಗಿದೆ ಎಂದು ಅರ್ಜಿಯಲ್ಲಿ ತಿಳಿಸಿದ್ದಾರೆ ಎನ್ನಲಾಗಿದೆ. ಇದಲ್ಲದೆ, ಮುಂಬರುವ ಲೋಕಸಭಾ ಚುನಾವಣೆಯಲ್ಲಿ ರಾಜಕೀಯ ಲಾಭಕ್ಕಾಗಿ ಬಿಜೆಪಿ ಈ ಸಮಾರಂಭ ಹಮ್ಮಿಕೊಂಡಿದೆ ಎಂದು ಅರ್ಜಿದಾರರು ಆರೋಪಿಸಿದ್ದಾರೆ.
ಈ ಮೊದಲು ರಾಮಂದಿರದ ಕಾಮಗಾರಿ ಪೂರ್ತಿಯಾಗದೆ ಪ್ರಾಣ ಪ್ರತಿಷ್ಠಾಪನೆಗೆ ಶಂಕಾರಾಚಾರ್ಯ ಮಠದ ನಾಲ್ವರು ಪ್ರಸಿದ್ದ ಮಠಾದೀಶರು ವಿರೋಧವನ್ನು ವ್ಯಕ್ತಪಡಿಸಿದ್ದರು. ಧಾರ್ಮಿಕ ಮತ್ತು ಆಧ್ಯಾತ್ಮಿಕ ಕ್ಷೇತ್ರಗಳಲ್ಲಿ ರಾಜಕೀಯ ಹಸ್ತಕ್ಷೇಪ ಸರಿಯಲ್ಲ ಮತ್ತು ಸಂವಿಧಾನವೂ ಇದನ್ನು ಅನುಮತಿಸುವುದಿಲ್ಲ ಎಂದು ಪುರಿಯ ಶಂಕರಾಚಾರ್ಯ ಮಠದ ನಿಶ್ಚಲಾನಂದ ಸರಸ್ವತಿ ಅವರು ಹೇಳಿದ್ದರು.
ಸಮಾರಂಭದಲ್ಲಿ ಶಾಸ್ತ್ರಗಳನ್ನು ಪಾಲಿಸದ ಕಾರಣ ಉದ್ಘಾಟನೆಗೆ ಬರುವುದಿಲ್ಲ. ಧರ್ಮಗ್ರಂಥಗಳ ಪ್ರಕಾರ ಪ್ರಾಣ ಪ್ರತಿಷ್ಟಾಪನೆಗೆ ನಿಯಮಗಳಿವೆ ಮತ್ತು ಪ್ರಧಾನ ಮಂತ್ರಿ ಅವುಗಳನ್ನು ಅನುಸರಿಸಬೇಕು. ಒಬ್ಬರ ಹೆಸರನ್ನು ಪ್ರಚಾರ ಮಾಡಲು ಈ ನಿಯಮಗಳನ್ನು ಮೀರುವುದು ವಿನಾಶದ ಹಾದಿಯಲ್ಲಿ ಹೋಗುವುದಾಗಿದೆ ಎಂದು ಶಂಕರಾಚಾರ್ಯರು ಹೇಳಿದ್ದರು.
ಜ.4ರಂದು ಸುದ್ದಿಗಾರರ ಜೊತೆ ಮಾತನಾಡಿದ್ದ ಪುರಿ ಶಂಕರಾಚಾರ್ಯರು, ನನಗೆ ನನ್ನ ಸ್ಥಾನದ ಘನತೆಯ ಅರಿವಿದೆ. ಹೀಗಾಗಿ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರದಲ್ಲಿ ಭಾಗವಹಿಸುವುದಿಲ್ಲ. ಪ್ರಧಾನಿ ನರೇಂದ್ರ ಮೋದಿಯವರು ರಾಮ ಮಂದಿರವನ್ನು ಉದ್ಘಾಟಿಸುತ್ತಾರೆ. ಅವರು ವಿಗ್ರಹವನ್ನು ಸ್ಪರ್ಶಿಸುತ್ತಾರೆ. ಆಗ ನಾನು ಏನು ಮಾಡಬೇಕು? ನಿಂತುಕೊಂಡು ಚಪ್ಪಾಳೆ ಹೊಡೆಯಬೇಕೇ ಎಂದು ಪ್ರಶ್ನಿಸಿದ್ದರು.
ಇದನ್ನು ಓದಿ: ಮಳವಳ್ಳಿಯಲ್ಲಿ ದಲಿತ ಯುವಕನ ಮೇಲೆ ದೌರ್ಜನ್ಯ


