ರಾಜಸ್ಥಾನದ ಅಲ್ವಾರ್‌ನಲ್ಲಿ ಹಿಂದೂ-ಮುಸ್ಲಿಮರ ನಡುವೆ ಘರ್ಷಣೆ ನಡೆದಿದೆ ಎಂಬ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
ಪುರುಷರ ತಂಡವೊಂದು ಮಹಿಳೆಯರು, ವೃದ್ದರು ಸೇರಿದಂತೆ ಕೆಲ ಜನರ ಮೇಲೆ ದೊಣ್ಣೆಯಿಂದ ಥಳಿಸುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದು. “ರಾಜಸ್ಥಾನದ ಅಲ್ವಾರ್‌ನಲ್ಲಿ ಮುಸ್ಲಿಮರು ಹಿಂದೂಗಳ ಮೇಲೆ ದಾಳಿ ಮಾಡಿದ್ದಾರೆ” ಎಂದು ಬರೆದು ವಿಡಿಯೋ ಹಂಚಲಾಗ್ತಿದೆ.

ಅನೇಕ ಎಕ್ಸ್ ಮತ್ತು ಫೇಸ್‌ಬುಕ್ ಖಾತೆಗಳಲ್ಲಿ ವಿಡಿಯೋ ಹಂಚಿಕೊಂಡು ಕೋಮು ವೈಷಮ್ಯ ಹರಡುವ ಕೆಲಸ ಮಾಡಲಾಗುತ್ತಿದೆ.
ಫ್ಯಾಕ್ಟ್ ಚೆಕ್ : ನಾನುಗೌರಿ.ಕಾಂ ಮೇಲೆ ತಿಳಿಸಿದ ವೈರಲ್ ವಿಡಿಯೋದ ಸತ್ಯಾಸತ್ಯತೆ ಪರಿಶೀಲನೆ ನಡೆಸಿದೆ. ಇದಕ್ಕಾಗಿ ನಾವು ಮೊದಲಿಗೆ ಗೂಗಲ್‌ನಲ್ಲಿ ” Muslim attack on hindus in alwar rajasthan” ಎಂದು ಸರ್ಚ್ ಮಾಡಿದ್ದೇವೆ. ಈ ವೇಳೆ ಅಲ್ವಾರ್‌ನಲ್ಲಿ ಮುಸ್ಲಿಮರು ಹಿಂದೂಗಳ ಮೇಲೆ ದಾಳಿ ಮಾಡಿದ್ದಾರೆ ಎಂಬ ಇತ್ತೀನ ಯಾವುದೇ ಸುದ್ದಿ ನಮಗೆ ದೊರೆತಿಲ್ಲ.
ಗೂಗಲ್ ರಿವರ್ಸ್ ಇಮೇಜ್‌ನಲ್ಲಿ ನಾವು ವಿಡಿಯೋ ಹುಡುಕಿದಾಗ ಅನೇಕ ಸುದ್ದಿಗಳು ದೊರೆತಿವೆ. ಈ ಪೈಕಿ 11 ದಿನಗಳ ಹಿಂದೆ ಹಿಂದಿ ಸುದ್ದಿ ವೆಬ್‌ಸೈಟ್ ‘ದೈನಿಕ್ ಭಾಸ್ಕರ್’ ಈ ವಿಡಿಯೋ ಹಂಚಿಕೊಂಡಿರುವುದು ಕಂಡು ಬಂದಿದೆ. “ರಾಜಸ್ಥಾನದ ಅಲ್ವಾರ್ ಜಿಲ್ಲೆಯ ಕಾಕಸ್ಯಾಕಿ ಧನ್ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಪೂರ್ವಜರ ಆಸ್ತಿ ವಿಚಾರವಾಗಿ ಒಂದೇ ಕುಟುಂಬದ ಎರಡು ತಂಡಗಳ ನಡುವೆ ಗಲಾಟೆ ನಡೆದಿದೆ” ಎಂದು ಈ ಸುದ್ದಿಯಲ್ಲಿ ಹೇಳಲಾಗಿದೆ. ಎಲ್ಲಿಯೂ ಹಿಂದೂ-ಮುಸ್ಲಿಂ ಗಲಾಟೆ ಎಂದು ಬರೆದಿಲ್ಲ.

ಹಿಂದಿ ಸುದ್ದಿ ತಾಣ ‘ಹಿಂದೂಸ್ತಾನ್’ ಜನವರಿ 19,2024ರಂದು ಈ ಸುದ್ದಿ ಪ್ರಕಟಿಸಿದೆ. ಇಲ್ಲಿಯೂ ಘಟನೆ ನಡೆದಿರುವುದು ಅಲ್ವಾರ್‌ನಲ್ಲೇ, ಆದರೆ ಇದು ಜಮೀನು ವಿವಾದಕ್ಕೆ ಸಂಬಂಧಿಸಿದ ಕೌಟುಂಬಿಕ ಕಲಹ ಎಂದು ತಿಳಿಸಲಾಗಿದೆ.


ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ಹರಿದಾಡುತ್ತಿರುವ ಹಿನ್ನೆಲೆ ಅಲ್ವಾರ್ ಪೊಲೀಸರು ಪ್ರತಿಕ್ರಿಯಿಸಿದ್ದು, ಇದು ಹಳೆಯ ವಿಡಿಯೋ ಆಗಿದೆ. ಅದರಲ್ಲಿ ಕಾಣಿಸಿಕೊಂಡ ಜನರು ಒಂದೇ ಗುಂಪಿಗೆ (ಹಿಂದೂ) ಸೇರಿದವರಾಗಿದ್ದಾರೆ. ಸಿಆರ್‌ಪಿಸಿ 151 ಅಡಿ ಎರಡೂ ಕಡೆಯ 7 ಮಂದಿಯನ್ನು ಬಂಧಿಸಲಾಗಿದೆ. ಸುಳ್ಳು ಸಂದೇಶ ಹರಡಬೇಡಿ. ಆ ರೀತಿ ಮಾಡುವವರ ವಿರುದ್ದ ಕ್ರಮ ಕೈಗೊಳ್ಳಲಾಗುವುದು” ಎಂದಿದ್ದಾರೆ.
— Alwar Police (@AlwarPolice) January 27, 2024
ಲಭ್ಯ ಮೂಲಗಳ ಮೂಲಕ ನಾವು ನಡೆಸಿದ ಪರಿಶೀಲನೆಯಲ್ಲಿ ವೈರಲ್ ಆಗುತ್ತಿರುವ ವಿಡಿಯೋ ಮುಸ್ಲಿಮರು ಹಿಂದೂಗಳ ಮೇಲೆ ದಾಳಿ ಮಾಡಿರುವುದು ಅಲ್ಲ. ಅದು ಆಸ್ತಿ ವಿವಾದಕ್ಕೆ ಸಂಬಂಧಿಸಿದಂತೆ ಒಂದೇ ಕುಟುಂಬದ ಎರಡು ತಂಡಗಳ ನಡುವೆ ನಡೆದ ಗಲಾಟೆ ಎಂದು ತಿಳಿದು ಬಂದಿದೆ.
ಇದನ್ನೂ ಓದಿ: Fact Check: ಬುರ್ಖಾಧಾರಿ ಮಹಿಳೆಯಿಂದ ಬಾಲಕನ ಅಪಹರಣವೆಂದು ಸುಳ್ಳು ವಿಡಿಯೋ ಹಂಚಿಕೆ


