ಅಬಕಾರಿ ನೀತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಐದು ಸಮನ್ಸ್‌ಗಳಿಗೆ ಪ್ರತಿಕ್ರಿಯೆ ನೀಡದ ಕಾರಣ ದೆಹಲಿ ಮುಖ್ಯಮಂತ್ರಿ ಮತ್ತು ಆಮ್ ಆದ್ಮಿ ಪಕ್ಷದ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ವಿರುದ್ಧ ಜಾರಿ ನಿರ್ದೇಶನಾಲಯ ದೆಹಲಿ ನ್ಯಾಯಾಲಯಕ್ಕೆ ದೂರು ಸಲ್ಲಿಸಿದೆ.
ದೆಹಲಿಯ ರೂಸ್ ಅವೆನ್ಯೂ ಕೋರ್ಟ್‌ನಲ್ಲಿ, ದೆಹಲಿ ಮದ್ಯ ನೀತಿ ಮನಿ ಲಾಂಡರಿಂಗ್ ಪ್ರಕರಣದಲ್ಲಿ ಸಂಸ್ಥೆ ನೀಡಿದ ಸಮನ್ಸ್‌ಗೆ ಪ್ರತಿಕ್ರಿಯಿಸದೆ ಅರವಿಂದ್ ಕೇಜ್ರಿವಾಲ್ ವಿರುದ್ಧ ಇಡಿ ದೂರು ದಾಖಲಿಸಿದೆ ಎಂದು ಎಎನ್‌ಐ ವರದಿ ಮಾಡಿದೆ.
ವರದಿಯ ಪ್ರಕಾರ, ನ್ಯಾಯಾಲಯವು ಈ ವಿಚಾರದಲ್ಲಿ ಶನಿವಾರ ಕೆಲವು ವಿಚಾರಗಳನ್ನು ಆಲಿಸಿತು ಮತ್ತು ಮುಂದಿನ ವಿಚಾರಣೆಯನ್ನು ಫೆಬ್ರವರಿ 7ಕ್ಕೆ ಮುಂದೂಡಿದೆ ಎಂದು ತಿಳಿದು ಬಂದಿದೆ.
ಮದ್ಯ ನೀತಿ ಹಗರಣಕ್ಕೆ ಸಂಬಂಧಿಸಿದ ಮನಿ ಲಾಂಡರಿಂಗ್ ಪ್ರಕರಣದಲ್ಲಿ ವಿಚಾರಣೆಗಾಗಿ ಕೇಜ್ರಿವಾಲ್ ಅವರಿಗೆ ಇಡಿ 5ನೇ ಸಮನ್ಸ್ ನೀಡಿದ ಬೆನ್ನಲ್ಲಿ ಈ ಬೆಳವಣಿಗೆ ನಡೆದಿದೆ. ಶುಕ್ರವಾರ ಡಿಡಿಯು ಮಾರ್ಗದಲ್ಲಿರುವ ಬಿಜೆಪಿ ಕೇಂದ್ರ ಕಚೇರಿ ಬಳಿ ನಡೆದ ಪ್ರತಿಭಟನೆಯಲ್ಲಿ ಎಎಪಿ ನಾಯಕರು ಮತ್ತು ಕಾರ್ಯಕರ್ತರೊಂದಿಗೆ ಕೇಜ್ರಿವಾಲ್ ಪಾಲ್ಗೊಂಡಿದ್ದರು.
ಕೇಜ್ರಿವಾಲ್ ಅವರು ಇಡಿ ಮುಂದೆ ವಿಚಾರಣೆಗೆ ಹಾಜರಾಗುವುದಿಲ್ಲ ಎಂದು ಎಎಪಿ ಹೇಳಿದೆ ಮತ್ತು ಅವರಿಗೆ ನೀಡಲಾದ ಸಮನ್ಸ್ ಕಾನೂನುಬಾಹಿರ ಎಂದು ಆರೋಪಿಸಿದೆ. ಕೇಜ್ರಿವಾಲ್ ಅವರನ್ನು ಬಂಧಿಸುವ ಮೂಲಕ ದೆಹಲಿಯಲ್ಲಿ ತನ್ನ ಸರ್ಕಾರವನ್ನು ಉರುಳಿಸಲು ಬಿಜೆಪಿ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರು ಬಯಸಿದ್ದಾರೆ ಎಂದು ಎಎಪಿ ಆರೋಪಿಸಿದೆ.
ಶುಕ್ರವಾರ ಇಡಿ ಮುಂದೆ ಹಾಜರಾಗದ ಕೇಜ್ರಿವಾಲ್ ಅವರನ್ನು ಕೆಲವು ಬಿಜೆಪಿ ನಾಯಕರು ತರಾಟೆಗೆ ತೆಗೆದುಕೊಂಡಿದ್ದಾರೆ. ಕೇಂದ್ರ ಸಚಿವೆ ಮತ್ತು ಬಿಜೆಪಿಯ ಹಿರಿಯ ನಾಯಕ ಮೀನಕಾಶಿ ಲೇಖಿ ಈ ಕುರಿತು ಪ್ರತಿಕ್ರಿಯಿಸಿದ್ದು, ಕೇಜ್ರಿವಾಲ್ ಅವರು ಇಡಿ ಮುಂದೆ ಹಾಜರಾಗದೆ, ಬಿಜೆಪಿ ಪ್ರಧಾನ ಕಚೇರಿಯ ಮುಂದೆ ನಾಟಕ ಪ್ರದರ್ಶಿಸುತ್ತಿದ್ದಾರೆ ಎಂದು ಹೇಳಿದ್ದಾರೆ.
ಅಬಕಾರಿ ನೀತಿ ಪ್ರಕರಣಕ್ಕೆ ಸಂಬಂಧಿಸಿದಂತೆ ನೀತಿ ನಿರೂಪಣೆ, ಸಭೆಗಳು ಮತ್ತು ಲಂಚದ ಆರೋಪದ ಬಗ್ಗೆ ಕೇಜ್ರಿವಾಲ್ ಅವರ ಹೇಳಿಕೆಯನ್ನು ದಾಖಲಿಸಲು ಇಡಿ ಬಯಸಿದೆ. ಕೇಂದ್ರೀಯ ತನಿಖಾ ದಳ (ಸಿಬಿಐ) ದೆಹಲಿ ಅಬಕಾರಿ ನೀತಿಯ (2021-22) ರಚನೆ ಮತ್ತು ಅನುಷ್ಠಾನದಲ್ಲಿ ಅಕ್ರಮಗಳನ್ನು ಆರೋಪಿಸಿ ಎಫ್‌ಐಆರ್ ದಾಖಲಿಸಿತ್ತು. ಬಳಿಕ ಪ್ರಕರಣದ ತನಿಖೆಯನ್ನು ‘ಇಡಿ’ ಕೈಗೆತ್ತಿಕೊಂಡಿದೆ. ಭ್ರಷ್ಟಾಚಾರದ ಆರೋಪದ ನಂತರ ನೀತಿಯನ್ನು ಹಿಂಪಡೆಯಲಾಗಿದೆ.
ಡಿಸೆಂಬರ್ 2, 2023 ರಂದು ಎಎಪಿ ನಾಯಕ ಸಂಜಯ್ ಸಿಂಗ್ ಮತ್ತು ಅವರ ಸಹಾಯಕ ಸರ್ವೇಶ್ ಮಿಶ್ರಾ ಅವರನ್ನು ಹೆಸರಿಸಿ ಪ್ರಕರಣದಲ್ಲಿ ಸಲ್ಲಿಸಿದ ಆರನೇ ಚಾರ್ಜ್ ಶೀಟ್‌ನಲ್ಲಿ, ಎಎಪಿ ತನ್ನ ವಿಧಾನಸಭಾ ಚುನಾವಣಾ ಪ್ರಚಾರದ ಭಾಗವಾಗಿ ನೀತಿಯ ಮೂಲಕ ಗಳಿಸಿದ 45 ಕೋಟಿ ಮೌಲ್ಯದ ಕಿಕ್‌ಬ್ಯಾಕ್‌ಗಳನ್ನು 2022ರಲ್ಲಿ ಗೋವಾ ಚುನಾವಣೆಯಲ್ಲಿ ಬಳಸಿದೆ ಎಂದು ಇಡಿ ಹೇಳಿಕೊಂಡಿದೆ.
ಪ್ರಕರಣದಲ್ಲಿ ಎಎಪಿ ನಾಯಕರಾದ ಮನೀಶ್ ಸಿಸೋಡಿಯಾ ಮತ್ತು ಸಂಜಯ್ ಸಿಂಗ್ ಈಗಾಗಲೇ ನ್ಯಾಯಾಂಗ ಬಂಧನದಲ್ಲಿದ್ದಾರೆ. ದೆಹಲಿಯ ಉಪಮುಖ್ಯಮಂತ್ರಿಯಾಗಿದ್ದ ಸಿಸೋಡಿಯಾ ಅವರನ್ನು ಫೆಬ್ರವರಿ 26ರಂದು ಸಿಬಿಐ ಹಲವಾರು ಸುತ್ತಿನ ವಿಚಾರಣೆಯ ನಂತರ ಬಂಧಿಸಿತ್ತು ಮತ್ತು ಅಕ್ಟೋಬರ್ 5ರಂದು ಇಡಿ ರಾಜ್ಯಸಭಾ ಸದಸ್ಯರಾಗಿರುವ ಸಿಂಗ್ ಅವರನ್ನು ಬಂಧಿಸಿತ್ತು.
ಇದನ್ನು ಓದಿ: ‘ಭಾರತ್ ಮಾತಾ ಕೀ ಜೈ’ ಹೇಳದ ಮಹಿಳೆಗೆ ಸಭೆಯಿಂದ ಹೊರ ನಡೆಯುವಂತೆ ಸೂಚಿಸಿದ ಕೇಂದ್ರ ಸಚಿವೆ


