ನಿರ್ಣಾಯಕ ತೀರ್ಪುಗಳಲ್ಲಿ ಸುಪ್ರೀಂಕೋರ್ಟ್ ಪ್ರಧಾನಿ ನರೇಂದ್ರ ಮೋದಿ ಅವರ ಪರವಾಗಿದೆ ಎಂದು ಸಿಪಿಐ(ಎಂ) ಪಾಲಿಟ್‌ಬ್ಯೂರೋ ಸದಸ್ಯ ಎಂಎ ಬೇಬಿ ತೀವ್ರ ವಾಗ್ದಾಳಿಯನ್ನು ನಡೆಸಿದ್ದು, ಸುಪ್ರೀಂಕೋರ್ಟ್‌ಗೆ ನಾಚಿಕೆಯಾಗಬೇಕು ಎಂದು ಹೇಳಿದ್ದಾರೆ.
ಶನಿವಾರ ಕಣ್ಣೂರಿನ ಮುನ್ಸಿಪಲ್ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಕೇರಳ ಶಾಲಾ ಶಿಕ್ಷಕರ ಸಂಘದ (ಕೆಎಸ್‌ಟಿಎ) ರಾಜ್ಯ ಸಮ್ಮೇಳನದಲ್ಲಿ ಮಾಜಿ ಶಿಕ್ಷಕರ ಕೂಟವನ್ನು ಉದ್ಘಾಟಿಸಿದ ನಂತರ ಸಿಪಿಐ(ಎಂ) ನಾಯಕ ಎಂಎ ಬೇಬಿ ಈ ಆರೋಪವನ್ನು ಮಾಡಿದ್ದಾರೆ. ಪ್ರಧಾನಿ ಮೋದಿ ಪರವಾಗಿರುವುದಕ್ಕೆ ಸುಪ್ರೀಂಕೋರ್ಟ್ ನಾಚಿಕೆ ಪಡಬೇಕಲ್ಲವೇ ಎಂದು ಪ್ರಶ್ನಿಸಿದ್ದಾರೆ.
ಸಂಸದೀಯ ಪ್ರಜಾಪ್ರಭುತ್ವದ ಮೇಲೆ ದಾಳಿ ನಡೆಯುತ್ತಿದೆ, ಫ್ಯಾಸಿಸಂನ್ನು ನೇರವಾಗಿ ಆಶ್ರಯಿಸದೆ, ಪ್ರಧಾನಿ ಮೋದಿ ಅವರು ತಮ್ಮ ಕೆಲಸವನ್ನು ಮಾಡಿಕೊಳ್ಳುವಲ್ಲಿ ಸಫಲರಾಗುತ್ತಾರೆ. ಸುಪ್ರೀಂಕೋರ್ಟ್ ಕೂಡ ಪ್ರಧಾನಿಗೆ ಯಾವುದೇ ಹಾನಿಯಾಗದ ರೀತಿ ತೀರ್ಪುಗಳನ್ನು ಪ್ರಕಟಿಸುವುದನ್ನು ಖಚಿತಪಡಿಸುತ್ತದೆ. 370ನೇ ವಿಧಿಯನ್ನು ರದ್ದುಗೊಳಿಸಿದ ಸುಪ್ರೀಂಕೋರ್ಟ್ ತೀರ್ಪು ದೇಶದ ನ್ಯಾಯಾಂಗದ ಇತಿಹಾಸಕ್ಕೆ ಅವಮಾನವಾಗಿದೆ ಎಂದು ಹೇಳಿದ್ದಾರೆ.
ಈ ಬಗ್ಗೆ ವರದಿ ಬಳಿಕ ಎಂಎ ಬೇಬಿ ವಿರುದ್ಧ ಕೇಸ್ ದಾಖಲಿಸುತ್ತಿದ್ದರೆ ದಾಖಲಿಸಲಿ, ಇದೇ ವಿಚಾರವನ್ನು ನನಗೆ ಸುಪ್ರೀಂಕೋರ್ಟ್‌ನಲ್ಲಿ ಕೂಡ ಹೇಳಬಹುದಲ್ಲಾ? ಇಲ್ಲಿ ಮೈಕ್‌ನಲ್ಲಿ ಹೇಳಬೇಕಾಗಿಲ್ವಲ್ಲ, ಸುಪ್ರೀಂಕೋರ್ಟ್‌ಗೆ ನಾಚಿಕೆಯಾಗುವುದಿಲ್ವ? ನಾನು ಜವಾಬ್ಧಾರಿಯಿಂದಲೇ ಈ ಮಾತನ್ನು ಹೇಳುತ್ತಿದ್ದೇನೆ ಎಂದು ಹೇಳಿದ್ದಾರೆ.
ಅದಾನಿ ಮತ್ತು ಹಿಂಡೆನ್‌ಬರ್ಗ್‌ಗೆ ಸಂಬಂಧಿಸಿದ ಪ್ರಕರಣವು ನ್ಯಾಯಾಲಯದ ಮುಂದೆ ಬಂದಾಗ, ಸುಪ್ರೀಂಕೋರ್ಟ್ ಅದಾನಿಗೆ ಅನುಕೂಲಕರ ಮಾಡಿಕೊಟ್ಟಿತು. ಈ ಪ್ರಕರಣದ ವಿಚಾರಣೆ ವೇಳೆ ಅರ್ಜಿದಾರರೇ ಪ್ರತಿವಾದಿಯಾಗಿರುವುದರಿಂದ ಪರಿಸ್ಥಿತಿ ಹಾಸ್ಯಾಸ್ಪದವಾಗಿದೆ ಎಂದು ಹೇಳಿದ್ದಾರೆ.
ಇದನ್ನು ಓದಿ: ಅಡ್ವಾಣಿ: ರಥಯಾತ್ರೆಯಿಂದ ಭಾರತ ರತ್ನದವರೆಗೆ; ಹಿಂಸಾಚಾರ, ಧ್ರುವೀಕರಣದಿಂದ ಮುನ್ನಡೆದ ರಾಜಕೀಯ ಪಯಣ


