ಉದ್ಯೋಗ ಭರವಸೆಯೊಂದಿಗೆ ಏಜೆಂಟರ ವಂಚನೆಗೆ ಒಳಗಾಗಿ ರಷ್ಯಾಗೆ ತೆರಳಿದ್ದ ಭಾರತೀಯ ಯುವಕರನ್ನು ಉಕ್ರೇನ್ ವಿರುದ್ದದ ಯುದ್ದಕ್ಕೆ ಕಳುಹಿಸಲಾಗಿದ್ದು, ಅವರನ್ನು ಸುರಕ್ಷಿತವಾಗಿ ತಾಯ್ನಾಡಿಗೆ ಕರೆ ತರುವಂತೆ ಹೈದರಾಬಾದ್ ಸಂಸದ ಹಾಗೂ ಎಐಎಂಐಎಂ ಪಕ್ಷದ ಮುಖ್ಯಸ್ಥ ಅಸಾದುದ್ಧೀನ್ ಓವೈಸಿ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಮತ್ತು ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈಶಂಕರ್ ಅವರು ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿ, ರಷ್ಯಾ ಸರ್ಕಾರದೊಂದಿಗೆ ಮಾತುಕತೆ ನಡೆಸಿ ಯುವಕರ ಸಹಾಯಕ್ಕೆ ಧಾವಿಸುವಂತೆ ಓವೈಸಿ ಆಗ್ರಹಿಸಿದ್ದಾರೆ.
Sir @DrSJaishankar kindly use your good offices to bring these men back home. Their lives are at risk & their families are justifiably worried. https://t.co/pDmvdeO5HZ
— Asaduddin Owaisi (@asadowaisi) February 21, 2024
ನಿರುದ್ಯೋಗಿ ಯುವಕರನ್ನು ಕಟ್ಟಡಗಳಲ್ಲಿ ಭದ್ರತಾ ಸಿಬ್ಬಂದಿಯಾಗಿ ಕೆಲಸ ನೀಡುವ ಆಮಿಷವೊಡ್ಡಿ ರಷ್ಯಾಗೆ ಕಳುಹಿಸಲಾಗಿದೆ. ಬಳಿಕ ಅವರಿಗೆ ಶಸ್ತ್ರಾಸ್ತ್ರ ನಿರ್ವಹಣೆಯ ತರಬೇತಿ ಕೊಟ್ಟು ಬಲವಂತವಾಗಿ ಯುದ್ಧಭೂಮಿಗೆ ಕಳುಹಿಸಲಾಗಿದೆ. ಪ್ರಸ್ತುತ ಯುವಕರು ಉಕ್ರೇನ್ ಗಡಿಯ ಮಾರಿಯುಪೋಲ್, ಖಾರ್ಕಿವ್ ಮತ್ತು ಡೊನೆಟ್ಸ್ಕ್ ಪ್ರದೇಶಗಳಲ್ಲಿ ರಷ್ಯಾದ ಖಾಸಗಿ ಸೇನೆ ವ್ಯಾಗ್ನರ್‌ನ ಭಾಗವಾಗಿ ಸಿಲುಕಿಕೊಂಡಿದ್ದಾರೆ ಎಂದು ಓವೈಸಿ ಹೇಳಿದ್ದಾರೆ.
“ತೆಲಂಗಾಣದ ಇಬ್ಬರು, ಕರ್ನಾಟಕದ ಕಲಬುರಗಿಯ ಮೂವರು, ಕಾಶ್ಮೀರದ ಇಬ್ಬರು ಮತ್ತು ಗುಜರಾತ್ ಮತ್ತು ಉತ್ತರ ಪ್ರದೇಶದ ತಲಾ ಒಬ್ಬರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಕೆಲ ಯುವಕರ ಕುಟುಂಬಸ್ಥರು ನನ್ನನ್ನು ಭೇಟಿಯಾಗಿ ವಿಷಯ ತಿಳಿಸಿದ ಬಳಿಕ, ನಾನು ಸಚಿವ ಜೈಶಂಕರ್ ಮತ್ತು ರಷ್ಯಾದಲ್ಲಿರುವ ಭಾರತೀಯ ರಾಯಭಾರ ಕಚೇರಿಗೆ ಪತ್ರ ಬರೆದಿದ್ದೇನೆ” ಎಂದು ಓವೈಸಿ ತಿಳಿಸಿದ್ದಾರೆ.
“ತೆಲಂಗಾಣ, ಗುಜರಾತ್, ಕರ್ನಾಟಕ, ಜಮ್ಮು ಕಾಶ್ಮೀರ ಮತ್ತು ಉತ್ತರ ಪ್ರದೇಶದ ನಿರುದ್ಯೋಗಿ ಯುವಕರಿಗೆ
ಸೆಕ್ಯೂರಿಟಿ ಗಾರ್ಡ್ ಕೆಲಸ ನೀಡುವುದಾಗಿ ಸುಳ್ಳು ಹೇಳಿ ರಷ್ಯಾದ ಏಜೆಂಟರು ಕರೆಸಿಕೊಂಡಿದ್ದಾರೆ. ಬಳಿಕ ಅವರಿಗೆ ಶಸ್ತ್ರಾಸ್ತ್ರ ಕೊಟ್ಟು ಬಲವಂತವಾಗಿ ಯುದ್ಧ ಭೂಮಿಗೆ ಕಳುಹಿಸಲಾಗಿದೆ. ನಾನು ಯುವಕರ ಕುಟುಂಬಸ್ಥರನ್ನು ಭೇಟಿಯಾಗಿದ್ದೇನೆ. ಕಳೆದ ವರ್ಷ ಡಿಸೆಂಬರ್‌ನಲ್ಲಿ ಅವರು ನನ್ನಿಂದ ಸಹಾಯ ಕೇಳಿದ್ದರು. ಯುವಕರನ್ನು ಮರಳಿ ಕರೆತರುವಂತೆ ನಾನು ವಿದೇಶಾಂಗ ಸಚಿವರಿಗೆ ಮತ್ತು ರಷ್ಯಾದಲ್ಲಿರುವ ಭಾರತದ ರಾಯಭಾರ ಕಚೇರಿಗೆ ಪತ್ರ ಬರೆದಿದ್ದೇನೆ” ಎಂದು ಓವೈಸಿ ಪತ್ರಿಕಾಗೋಷ್ಠಿಯಲ್ಲಿ ವಿವರಿಸಿದ್ದಾರೆ.
ಏಜೆಂಟ್‌ಗಳಲ್ಲಿ ಒಬ್ಬನಾದ, ಸುಮಾರು 3 ಲಕ್ಷ ಚಂದಾದಾರರನ್ನು ಹೊಂದಿರುವ ‘ಬಾಬಾ ಬ್ಲಾಗ್ಸ್’ ಎಂಬ ಯೂಟ್ಯೂಬ್ ಚಾನೆಲ್‌ನ ಫೈಝಲ್ ಖಾನ್ ಎಂಬಾತ ಯುವಕರನ್ನು ವಂಚಿಸಿದ್ದಾನೆ. ಪ್ರಸ್ತುತ ಆತ ದುಬೈನಲ್ಲಿದ್ದಾನೆ. ವಿವಿಧ ದೇಶಗಳಲ್ಲಿ ಹೇಗೆ ಉದ್ಯೋಗ ಮತ್ತು ಉದ್ಯೋಗದ ಪರವಾನಿಗೆ ಪಡೆಯುವುದು ಎಂಬುವುದರ ಕುರಿತು ಈತ ವಿಡಿಯೋಗಳನ್ನು ಮಾಡುತ್ತಿರುತ್ತಾನೆ. ಈತನ ಜೊತೆಗೆ ಮುಂಬೈನಿಂದ ಸುಫಿಯಾನ್ ಮತ್ತು ಪೂಜಾ, ರಮೇಶ್ ಮತ್ತು ಮೊಯಿನ್ ರಷ್ಯಾದಲ್ಲಿ ಭಾರತೀಯ ಏಜೆಂಟ್‌ಗಳು ಎಂದು ಓವೈಸಿ ಹೇಳಿದ್ದಾರೆ.
ಯುದ್ಧ ಭೂಮಿಗೆ ತಮ್ಮನ್ನು ಹೇಗೆ ತಳ್ಳಲಾಯಿತು ಎಂದು ಯುವಕರು ವಿಡಿಯೋ ಕಳುಹಿಸಿದ್ದಾರೆ. ಅವರಲ್ಲಿ ಒಬ್ಬ ದಾಳಿಯಲ್ಲಿ ಸಾವನ್ನಪ್ಪಿದ್ದಾರೆ ಎಂದು ಯುವಕರು ಹೇಳಿದ್ದಾಗಿ ಓವೈಸಿ ಮಾಹಿತಿ ನೀಡಿದ್ದಾರೆ.
ರಷ್ಯಾದಲ್ಲಿ ಸಿಲುಕಿದವರಲ್ಲಿ ಹೈದರಾಬಾದ್‌ನ ನಾಂಪಲ್ಲಿಯ ಮೊಹಮ್ಮದ್ ಅಫ್ಸಾನ್ ಕೂಡ ಒಬ್ಬರು, ಈ ಕುರಿತು ಸ್ಥಳೀಯ ಮಾಧ್ಯಮಗಳೊಂದಿಗೆ ಮಾತನಾಡಿರುವ ಅಫ್ಸಾನ್ ಪತ್ನಿ ಅಸ್ಮಾ ಶಿರೀನ್, ತನ್ನ ಪತಿಯನ್ನು ರಕ್ಷಿಸುವಂತೆ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
ರಷ್ಯಾದ ರಕ್ಷಣಾ ಸಚಿವಾಲಯದಲ್ಲಿ ಕೆಲಸ ಮಾಡುವ ಭಾರತೀಯ ಮೂಲದ ಅಧಿಕಾರಿಯೊಬ್ಬರು ದೃಢಪಡಿಸಿದಂತೆ, ಕಳೆದ ಒಂದು ವರ್ಷದಲ್ಲಿ ತನ್ನ ಮಾಸ್ಕೋ ನೇಮಕಾತಿ ಕೇಂದ್ರದಲ್ಲಿ ರಷ್ಯಾದ ಸೇನೆಯು ಸುಮಾರು 100 ಭಾರತೀಯರನ್ನು ನೇಮಿಸಿಕೊಂಡಿದೆ ಎಂದು ದಿ ಹಿಂದೂ ವರದಿ ಮಾಡಿದೆ. ಪಾಕಿಸ್ತಾನ, ಬಾಂಗ್ಲಾದೇಶ, ನೇಪಾಳ, ಉಜ್ಬೇಕಿಸ್ತಾನ್ ಮತ್ತು ಕಿರ್ಗಿಸ್ತಾನ್ ಸೇರಿದಂತೆ ಹಲವಾರು ದೇಶಗಳ ಜನರನ್ನು ಕಳೆದ ಒಂದೂವರೆ ವರ್ಷಗಳಿಂದ ರಷ್ಯಾದ ಸೇನೆಯು ನೇಮಿಸಿಕೊಳ್ಳುತ್ತಿದೆ ಎಂದು ಅಧಿಕಾರಿ ಹೇಳಿದ್ದಾರೆ ಎಂದು ವರದಿ ತಿಳಿಸಿದೆ.
ಉಕ್ರೇನ್ ಮತ್ತು ರಷ್ಯಾ ನಡುವೆ ಯುದ್ಧ ಪ್ರಾರಂಭಗೊಂಡು ಎರಡು ವರ್ಷಗಳಾಗುತ್ತಾ ಬಂದಿದೆ. ಉಭಯ ರಾಷ್ಟ್ರಗಳ ನಡುವೆ ಮಾತುಕತೆಗಳು ನಿಂತು ಹೋಗಿವೆ. ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಸುದೀರ್ಘ ಸಂಘರ್ಷಕ್ಕೆ ಸಿದ್ಧರಾಗಿದ್ದಾರೆ. ತಮ್ಮ ಭೂ ಪ್ರದೇಶಗಳನ್ನು ಮರಳಿ ಪಡೆಯಲು ಉಕ್ರೇನ್ ಮುಂದಾಗಲಿರುವ ಕಾರಣ 2024ರಲ್ಲಿ ಯುದ್ಧ ತೀವ್ರಗೊಳ್ಳಬಹುದು ಎಂದು ವಿಶ್ಲೇಷಕರು ಹೇಳಿದ್ದಾರೆ. ಉಕ್ರೇನ್ ಬೇಷರತ್ ಆಗಿ ಶರಣಾಗುವವರೆಗೆ ನಾವು ಯುದ್ಧ ನಿಲ್ಲಿಸುವುದಿಲ್ಲ ಎಂದು ರಷ್ಯಾ ಪಟ್ಟು ಹಿಡಿದಿದೆ.
ಇದನ್ನೂ ಓದಿ : ತೆಲಂಗಾಣ: 18 ವರ್ಷಗಳ ಜೈಲುವಾಸದ ನಂತರ ದುಬೈನಿಂದ ಆಗಮಿಸಿದ ಐವರು


