ರಾಜ್ಯಸಭೆಯ 225 ಹಾಲಿ ಸದಸ್ಯರ ಪೈಕಿ, ಶೇಕಡಾ 33ರಷ್ಟು ಜನರು ತಮ್ಮ ವಿರುದ್ಧ ಕ್ರಿಮಿನಲ್ ಮೊಕದ್ದಮೆಗಳು ಇರುವುದಾಗಿ ಘೋಷಿಸಿಕೊಂಡಿದ್ದಾರೆ. ಹಾಲಿ ಸದಸ್ಯರ ಒಟ್ಟು ಆಸ್ತಿ ಮೌಲ್ಯ ₹19,602 ಕೋಟಿಗಳಷ್ಟಿದೆ ಎಂದು ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್(ಎಡಿಆರ್)ನ ವಿಶ್ಲೇಷಣೆ ತಿಳಿಸಿದೆ.
ಇಬ್ಬರು ರಾಜ್ಯಸಭಾ ಹಾಲಿ ಸದಸ್ಯರು ಐಪಿಸಿ ಸೆಕ್ಷನ್ 302ರ ಅಡಿಯಲ್ಲಿ ಕೊಲೆಗೆ ಸಂಬಂಧಿಸಿದ ಪ್ರಕರಣಗಳನ್ನು ಎದುರಿಸುತ್ತಿದ್ದಾರೆ. ನಾಲ್ವರು ಸದಸ್ಯರ ಮೇಲೆ ಐಪಿಸಿ ಸೆಕ್ಷನ್ 307ರ ಅಡಿಯಲ್ಲಿ ಕೊಲೆ ಯತ್ನಕ್ಕೆ ಸಂಬಂಧಿಸಿದ ಪ್ರಕರಣಗಳಿವೆ. ಒಟ್ಟು ಸದಸ್ಯರ ಪೈಕಿ 31 ಮಂದಿ, ಅಂದರೆ ಶೇ.14ರಷ್ಟು ಜನರು ಕೋಟ್ಯಾಧಿಪತಿಗಳಾಗಿದ್ದಾರೆ ಎಂದು ಎಡಿಆರ್ ವರದಿ ತಿಳಿಸಿದೆ.
ರಾಜ್ಯಸಭೆಯ 225 ಹಾಲಿ ಸಂಸದರ ಪೈಕಿ 75 (ಶೇ. 33) ಮಂದಿ ತಮ್ಮ ವಿರುದ್ಧ ಕ್ರಿಮಿನಲ್ ಮೊಕದ್ದಮೆಗಳು ಇರುವುದಾಗಿ ಘೋಷಿಸಿದ್ದಾರೆ. 40 (ಶೇ. 18) ಮಂದಿ ಸಂಸದರು ಗಂಭೀರ ಕ್ರಿಮಿನಲ್ ಪ್ರಕರಣಗಳನ್ನು ಎದುರಿಸುತ್ತಿದ್ದಾರೆ ಎಂದು ವರದಿ ಹೇಳಿದೆ.
ಎಡಿಆರ್ ವಿಶ್ಲೇಷಣೆಯಲ್ಲಿ ವಿವಿಧ ರಾಜಕೀಯ ಪಕ್ಷಗಳಲ್ಲಿ ಎಷ್ಟು ಜನ ರಾಜ್ಯಸಭಾ ಸದಸ್ಯರ ಮೇಲೆ ಕ್ರಿಮಿನಲ್ ಪ್ರಕರಣಗಳಿವೆ ಎಂಬುವುದನ್ನು ತಿಳಿಸಿದೆ. ಅದರಂತೆ, ಬಿಜೆಪಿಯ 90 (ಶೇ.23), ಕಾಂಗ್ರೆಸ್‌ನ 28 (ಶೇ. 50) ಸದಸ್ಯರ ಮೇಲೆ ಕ್ರಿಮಿನಲ್ ಪ್ರಕರಣಗಳಿವೆ.
ಟಿಎಂಸಿಯ 13 ರಾಜ್ಯಸಭಾ ಸದಸ್ಯರ ಪೈಕಿ 5 (ಶೇ. 38), ಆರ್‌ಜೆಡಿಯ 6 ಸದಸ್ಯರಲ್ಲಿ 4 (ಶೇ. 67), ಸಿಪಿಐಎಂನ 5 ಸದಸ್ಯರಲ್ಲಿ 4 (ಶೇ.80), ಎಎಪಿಯ 10 ಸದಸ್ಯರ ಪೈಕಿ 3 (ಶೇ.10), ವೈಎಸ್‌ಆರ್‌ಸಿಪಿಯ 11 ಸದಸ್ಯರ ಪೈಕಿ 4 (ಶೇ.36) ಮತ್ತು ಡಿಎಂಕೆಯ 10 ಸದಸ್ಯರಲ್ಲಿ 2 (ಶೇ.20) ಮಂದಿ ಚುನಾವಣಾ ಅಫಿಡವಿಟ್‌ಗಳಲ್ಲಿ ತಮ್ಮ ವಿರುದ್ಧ ಕ್ರಿಮಿನಲ್ ಮೊಕದ್ದಮೆಗಳು ಇರುವುದಾಗಿ ಘೋಷಿಸಿದ್ದಾರೆ ಎಂದು ಎಡಿಆರ್ ವಿಶ್ಲೇಷಣೆ ತಿಳಿಸಿದೆ.
ಬಿಜೆಪಿಯ 90 ಸದಸ್ಯರ ಪೈಕಿ 10 (ಶೇ.11), ಕಾಂಗ್ರೆಸ್‌ನ 28 ಸದಸ್ಯರ ಪೈಕಿ 9 (ಶೇ.32), ಟಿಎಂಸಿಯ 13 ಸದಸ್ಯರ ಪೈಕಿ 3 (ಶೇ.23), ಆರ್‌ಜೆಡಿಯ 6 ಸದಸ್ಯರ ಪೈಕಿ 2 (ಶೇ.33) ಸಿಪಿಐಎಂನ 5 ಸದಸ್ಯರ ಪೈಕಿ 2 (ಶೇ. 40), ಎಎಪಿಯ 10 ಸದಸ್ಯರ ಪೈಕಿ 1 (ಶೇ.10), ವೈಎಸ್‌ಆರ್‌ಸಿಪಿಯ 11 ಸದಸ್ಯರ ಪೈಕಿ 3(ಶೇ.27) ಮತ್ತು ಡಿಎಂಕೆಯ 10 ಸದಸ್ಯರ ಪೈಕಿ ಒಬ್ಬರು (ಶೇ.10) ಅಫಿಡವಿಟ್‌ಗಳಲ್ಲಿ ತಮ್ಮ ವಿರುದ್ಧ ಗಂಭೀರ ಕ್ರಿಮಿನಲ್ ಮೊಕದ್ದಮೆಗಳು ಇರುವುದಾಗಿ ಘೋಷಿಸಿದ್ದಾರೆ ಎಂದು ವರದಿ ಹೇಳಿದೆ.
ರಾಜ್ಯವಾರು ಸಂಸದರ ವಿಶ್ಲೇಷಣೆ ನೋಡುವುದಾದರೆ, ಮಹಾರಾಷ್ಟ್ರದ 18 ಸಂಸದರಲ್ಲಿ 11 (ಶೇ.61), ಬಿಹಾರದ 16 ಸಂಸದರಲ್ಲಿ 8 (ಶೇ.50), ಉತ್ತರ ಪ್ರದೇಶದ 31 ಸಂಸದರಲ್ಲಿ 9 (ಶೇ.29), ತಮಿಳುನಾಡಿನ 18 ಸಂಸದರ ಪೈಕಿ 6 (ಶೇ.33), ಕೇರಳದ 9 ಸಂಸದರ ಪೈಕಿ 6 (ಶೇ.67) ಮತ್ತು ಪಶ್ಚಿಮ ಬಂಗಾಳದ 16 ಸಂಸದರ ಪೈಕಿ 7(ಶೇ.44) ಮಂದಿ ಅಫಿಡವಿಟ್‌ಗಳಲ್ಲಿ ತಮ್ಮ ವಿರುದ್ಧ ಕ್ರಿಮಿನಲ್ ಮೊಕದ್ದಮೆಗಳು ಇರುವುದಾಗಿ ಘೋಷಿಸಿದ್ದಾರೆ.
ವಿಶ್ಲೇಷಣೆಯು 233 ರಾಜ್ಯಸಭಾ ಸದಸ್ಯರ ಪೈಕಿ 225 ಮಂದಿಯನ್ನು ಒಳಗೊಂಡಿದೆ. ಮಹಾರಾಷ್ಟ್ರದಿಂದ ಒಂದು ಸ್ಥಾನ ಖಾಲಿಯಾಗಿದೆ, ಜಮ್ಮು ಕಾಶ್ಮೀರದ ನಾಲ್ವರನ್ನು ವಿಶ್ಲೇಷಣೆಗೆ ಒಳಪಡಿಸಿಲ್ಲ. ಕರ್ನಾಟಕ, ಪುದುಚ್ಚೇರಿ ಮತ್ತು ಅಸ್ಸಾಂನ ತಲಾ ಒಬ್ಬ ಸಂಸದರ ಅಫಿಡವಿಟ್‌ಗಳ ಅಲಭ್ಯತೆಯಿಂದಾಗಿ ವಿಶ್ಲೇಷಣೆ ಮಾಡಿಲ್ಲ ಎಂದು ಎಡಿಆರ್ ಹೇಳಿದೆ.
ಕ್ರಿಮಿನಲ್ ಪ್ರಕರಣಗಳ ಜೊತೆಗೆ ರಾಜ್ಯಸಭಾ ಸದಸ್ಯರ ಆಸ್ತಿ ಮೌಲ್ಯವನ್ನೂ ವಿಶ್ಲೇಷಿಸಲಾಗಿದೆ. ಪ್ರತಿ ಸಂಸದರ ಸರಾಸರಿ ಆಸ್ತಿ ಮೌಲ್ಯ ₹87.12 ಕೋಟಿಗಳಷ್ಟಿದೆ ಎಂದು ತಿಳಿದು ಬಂದಿದೆ. ದತ್ತಾಂಶಗಳನ್ನು ಮತ್ತಷ್ಟು ವಿಭಜಿಸಿ ವಿಶ್ಲೇಷಿಸಿದಾಗ ವಿವಿಧ ರಾಜಕೀಯ ಪಕ್ಷಗಳ ಸದಸ್ಯರ ಆಸ್ತಿ ಮೌಲ್ಯಗಳ ನಡುವೆ ಗಮನಾರ್ಹ ವ್ಯತ್ಯಾಸಗಳು ಕಂಡು ಬಂದಿವೆ.
ಪ್ರಮುಖ ಪಕ್ಷಗಳ ಪೈಕಿ, ಬಿಜೆಪಿಯ 90 ಸದಸ್ಯರಲ್ಲಿ 9 (ಶೇ.10), ಕಾಂಗ್ರೆಸ್‌ನ 28 ಸದಸ್ಯರಲ್ಲಿ 4 (ಶೇ.14), ವೈಎಸ್‌ಆರ್‌ಸಿಪಿಯ 11 ಸದಸ್ಯರಲ್ಲಿ 5 (ಶೇ.45), ಎಎಪಿಯ 10 ಸದಸ್ಯರಲ್ಲಿ 2 (ಶೇ.20) ಟಿಆರ್‌ಎಸ್‌ನ 4 ಸದಸ್ಯರಲ್ಲಿ 3 (ಶೇ.75) ಮತ್ತು ಆರ್‌ಜೆಡಿಯ 6 ಸದಸ್ಯರಲ್ಲಿ 2 (ಶೇ.33) ಮಂದಿ ₹100 ಕೋಟಿಗೂ ಅಧಿಕ ಮೌಲ್ಯದ ಆಸ್ತಿ ಹೊಂದಿದ್ದಾರೆ.
ಪ್ರಮುಖ ಪಕ್ಷಗಳ ಸಂಸದರ ಸರಾಸರಿ ಆಸ್ತಿ ಮೌಲ್ಯ ಹೀಗಿದೆ : ಬಿಜೆಪಿ ಸದಸ್ಯರ ಸರಾಸರಿ ಆಸ್ತಿ ಮೌಲ್ಯ ₹37.34 ಕೋಟಿ, ಕಾಂಗ್ರೆಸ್ ಸದಸ್ಯರ ಸರಾಸರಿ ಆಸ್ತಿ ಮೌಲ್ಯ ₹40.70 ಕೋಟಿ, ಟಿಎಂಸಿ ಸದಸ್ಯರ ಸರಾಸರಿ ಆಸ್ತಿ ಮೌಲ್ಯ ₹10.25 ಕೋಟಿ, ವೈಎಸ್‌ಆರ್‌ಸಿಪಿ ಸದಸ್ಯರ ಸರಾಸರಿ ಆಸ್ತಿ ಮೌಲ್ಯ ₹357.68 ಕೋಟಿ, ಟಿಆರ್‌ಎಸ್ ಸದಸ್ಯರ ಸರಾಸರಿ ಆಸ್ತಿ ಮೌಲ್ಯ ₹1,383.74 ಕೋಟಿ, ಡಿಎಂಕೆ ಸದಸ್ಯರ ಸರಾಸರಿ ಆಸ್ತಿ ಮೌಲ್ಯ ₹6.37 ಕೋಟಿ ಮತ್ತು ಎಎಪಿ ಸದಸ್ಯರ ಸರಾಸರಿ ಆಸ್ತಿ ಮೌಲ್ಯ ₹114.81 ಕೋಟಿಯಾಗಿದೆ. ಇದಲ್ಲದೆ, ವಿಶ್ಲೇಷಿಸಲಾದ ರಾಜ್ಯಸಭೆಯ ಹಾಲಿ ಸದಸ್ಯರ ಒಟ್ಟು ಆಸ್ತಿ ಮೌಲ್ಯ ₹19,602 ಕೋಟಿಗಳಷ್ಟಿದೆ
ಪಕ್ಷವಾರು ವಿಂಗಡಿಸಿದಾಗ ವಿಶ್ಲೇಷಿಸಿದ ಸಂಸದರ ಒಟ್ಟು ಆಸ್ತಿ ಮೌಲ್ಯ ಹೀಗಿದೆ : ಬಿಜೆಪಿ ಸದಸ್ಯರ ಒಟ್ಟು ಆಸ್ತಿ ಮೌಲ್ಯ ₹3,360 ಕೋಟಿ, ಕಾಂಗ್ರೆಸ್ ಸದಸ್ಯರ ಒಟ್ಟು ಆಸ್ತಿ ಮೌಲ್ಯ ₹1,139 ಕೋಟಿ, ವೈಎಸ್‌ಆರ್‌ಸಿಪಿ ಸದಸ್ಯರ ಒಟ್ಟು ಆಸ್ತಿ ಮೌಲ್ಯ ₹3,934 ಕೋಟಿ, ಬಿಆರ್‌ಎಸ್ ಸದಸ್ಯರ ಒಟ್ಟು ಆಸ್ತಿ ಮೌಲ್ಯ ₹5,534 ಕೋಟಿ ಆಸ್ತಿ ಮತ್ತು ಎಎಪಿ ಸದಸ್ಯರ ಒಟ್ಟು ಆಸ್ತಿ ಮೌಲ್ಯ ₹ 1,148 ಕೋಟಿ.
ಇದನ್ನೂ ಓದಿ : ಬಿಜೆಪಿಯ ಚುನಾವಣಾ ಬಾಂಡ್ ವಂಚನೆ ಪ್ರಕರಣ: ದೂರು ಹಿಂಪಡೆದ ಜಡ್ಜ್


