ಸಾರ್ವಜನಿಕ ಚುನಾವಣಾ ಬಾಂಡ್ ವಿವರಗಳನ್ನು ನೀಡಲು ಜೂನ್ 30ರವರೆಗೆ ಮೂರುವರೆ ತಿಂಗಳಿಗಿಂತ ಹೆಚ್ಚು ಹೆಚ್ಚುವರಿ ಸಮಯವನ್ನು ಕೋರಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಅರ್ಜಿ ಬಗ್ಗೆ ಪ್ರತಿಕ್ರಿಯಿಸಿದ ಸುಪ್ರೀಂ ಕೋರ್ಟ್‌ನ ಮಾಜಿ ನ್ಯಾಯಮೂರ್ತಿ ದೀಪಕ್ ಗುಪ್ತಾ, ಚುನಾವಣಾ ಬಾಂಡ್ ಕುರಿತ ಎಸ್‌ಬಿಐ ವಿವರಣೆಯನ್ನು ನಾನು ನಂಬುವುದಿಲ್ಲ, ಇದು ಹಾಸ್ಯಾಸ್ಪದ ಎಂದು ಹೇಳಿದ್ದಾರೆ.
ನ್ಯಾಯಮೂರ್ತಿ ದೀಪಕ್ ಗುಪ್ತಾ ಅವರು 2019ರಲ್ಲಿ ಎಸ್‌ಬಿಐಗೆ ಚುನಾವಣಾ ಬಾಂಡ್ ಯೋಜನೆಯ ಸಂಬಂಧಿತ ವಿವರಗಳನ್ನು ಅಂದರೆ ದಾಖಲೆಗಳನ್ನು ಸಂಗ್ರಹಿಸಲು ಮತ್ತು ಇರಿಸಿಕೊಳ್ಳಲು ತಿಳಿಸಿದ್ದ ಪೀಠದ ಭಾಗವಾಗಿದ್ದರು ಎಂದು ಹೇಳಿದ್ದು, ಚುನಾವಣಾ ಆಯೋಗಕ್ಕೆ ವಿವರಣೆಯನ್ನು ಕೊಡಲು ಮೂರೂವರೆ ತಿಂಗಳು ಹೆಚ್ಚುವರಿ ಅಗತ್ಯವಿದೆ ಎಂದು ಒಪ್ಪಿಕೊಳ್ಳುವುದಿಲ್ಲ ಎಂದು ಹೇಳಿದ್ದಾರೆ.
SBIನ ನಿಲುವು ಸಂಪೂರ್ಣವಾಗಿ ಹಾಸ್ಯಾಸ್ಪದವಾಗಿದೆ. ಈ ವಿವರಣೆಯು ಹೆಚ್ಚು ಮೌಲ್ಯಯುತವಾಗಿಲ್ಲ ಎಂದು ಹೇಳಿದ್ದಾರೆ. ಪೀಠದ ಭಾಗವಾಗಿದ್ದಾಗಿನ ಏಪ್ರಿಲ್ 2019ರ ಆದೇಶವನ್ನು ಉಲ್ಲೇಖಿಸಿದ ನ್ಯಾಯಮೂರ್ತಿ ದೀಪಕ್ ಗುಪ್ತಾ, ಒಮ್ಮೆ ನ್ಯಾಯಾಲಯವು ಈ ಮಾಹಿತಿಯನ್ನು ಇರಿಸಿಕೊಳ್ಳಲು ನಿರ್ದೇಶಿಸಿದಾಗ ಅದನ್ನು ಇಟ್ಟುಕೊಳ್ಳುವುದು ಅವರ ಬದ್ಧ ಕರ್ತವ್ಯವಾಗಿದೆ. ಅವರು ಸಾಧ್ಯವಾದಷ್ಟು ಬೇಗ ಅದನ್ನು ಬಹಿರಂಗಪಡಿಸಬೇಕು. ಮೂರು ತಿಂಗಳವರೆಗೆ ಕಾಲಾವಕಾಶ ಕೋರುವುದಲ್ಲ ಎಂದು ಹೇಳಿದ್ದಾರೆ.
ಕರಣ್ ಥಾಪರ್‌ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ನ್ಯಾಯಮೂರ್ತಿ ದೀಪಕ್ ಗುಪ್ತಾ, ಎಲ್ಲಾ ವಿವರಗಳನ್ನು ಒಟ್ಟುಗೂಡಿಸಲು ಕೆಲವು ಗಂಟೆಗಳು ಅಥವಾ ಕೆಲವು ದಿನಗಳನ್ನು ತೆಗೆದುಕೊಳ್ಳಲಾಗುತ್ತದೆ ಎಂದು ನಾನು ಭಾವಿಸುತ್ತೇನೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ 44,434 ಸೆಟ್‌ಗಳ ಮಾಹಿತಿಯನ್ನು ಒಟ್ಟುಗೂಡಿಸುವಲ್ಲಿ ಈ ಸಮಸ್ಯೆ ಇದೆ ಎಂದು ಏಕೆ ಊಹಿಸಿದೆ ಎಂದು ಅವರು ಪ್ರಶ್ನಿಸಿದ್ದಾರೆ.
ನ್ಯಾಯಮೂರ್ತಿ ಗುಪ್ತಾ ಅವರು ತಮ್ಮ ಅಭಿಪ್ರಾಯದಲ್ಲಿ ಚುನಾವಣಾ ಬಾಂಡ್ ವಿವರಗಳನ್ನು ಮತದಾನ ಪ್ರಾರಂಭವಾಗುವ ಕನಿಷ್ಠ ಐದು ಅಥವಾ ಆರು ದಿನಗಳ ಮೊದಲು ಸಾರ್ವಜನಿಕರಿಗೆ ಲಭ್ಯವಾಗುವಂತೆ ಮಾಡಬೇಕು ಎಂದು ಹೇಳಿದರು. ಎಸ್‌ಬಿಐ ಅರ್ಜಿಯನ್ನು ತಿರಸ್ಕರಿಸಲು ಮತ್ತು ಮಾಹಿತಿ ಲಭ್ಯವಾದಾಗ ಹೊಸ ಗಡುವನ್ನು ನಿಗದಿಪಡಿಸಲು ಸುಪ್ರೀಂಕೋರ್ಟ್‌ಗೆ ಎಲ್ಲ ಹಕ್ಕಿದೆ ಎಂದು ಹೇಳಿದರು. ಏಪ್ರಿಲ್ ಮಧ್ಯದಲ್ಲಿ ಅಂದರೆ ಮತದಾನ ಪ್ರಾರಂಭವಾಗುವ ಸಾಧ್ಯತೆಯಿರುವಾಗ ಮಾಹಿತಿಯು ಇತ್ತೀಚಿನ ದಿನಗಳಲ್ಲಿ ಲಭ್ಯವಿರಬೇಕು ಎಂದು ನಾನು ನಂಬುತ್ತೇನೆ ಎಂದು ಹೇಳಿದ್ದಾರೆ.
ಚುನಾವಣಾ ಬಾಂಡ್:
ಜನ ಸಾಮಾನ್ಯರು, ಕಾರ್ಪೊರೇಟ್ ಸಂಸ್ಥೆಗಳು ರಾಜಕೀಯ ಪಕ್ಷಗಳಿಗೆ ನೀಡುವ ಒಂದು ವಿಧದ ದೇಣಿಗೆ ಕ್ರಮವಾಗಿದೆ ಚುನಾವಣಾ ಬಾಂಡ್. ಜನರು 1,000 ರೂ, 10,000 ರೂ, 1 ಲಕ್ಷ ರೂ, 10 ಲಕ್ಷ ರೂ, 1 ಕೋಟಿ ರೂ ಇತ್ಯಾದಿ ಮುಖಬೆಲೆಗಳಲ್ಲಿ ಬಾಂಡ್ಗಳನ್ನು ಖರೀದಿಸಬಹುದಿತ್ತು. ಈ ಬಾಂಡ್ಗಳು ಅನಾಮಧೇಯವಾಗಿತ್ತು. ಅಂದರೆ, ಇದನ್ನು ಖರೀದಿಸಿದ ವ್ಯಕ್ತಿ ಅಥವಾ ಸಂಸ್ಥೆಯ ಹೆಸರು ಬಹಿರಂಗಗೊಳ್ಳುತ್ತಿರಲಿಲ್ಲ. ಯಾವ ರಾಜಕೀಯ ಪಕ್ಷಕ್ಕೆ ದೇಣಿಗೆ ಕೊಡಲಾಗಿದೆ ಆ ಪಕ್ಷ ಹೆಸರೂ ಬಹಿರಂಗವಾಗುತ್ತಿರಲಿಲ್ಲ.
ಜನವರಿ 2,2018ರಂದು ಅಂದಿನ ಮೋದಿ ಸರ್ಕಾರ ಚುನಾವಣಾ ಬಾಂಡ್ ಯೋಜನೆಗೆ ಅಧಿಸೂಚನೆ ಹೊರಡಿಸಿತ್ತು. ಚುನಾವಣಾ ಬಾಂಡ್ಗಳನ್ನು ಹಣಕಾಸು ಕಾಯ್ದೆ 2017ರ ತಿದ್ದುಪಡಿ ಮೂಲಕ ಜಾರಿಗೆ ತರಲಾಗಿತ್ತು. ಈ ಬಾಂಡ್ಗಳನ್ನು ವರ್ಷಕ್ಕೆ ನಾಲ್ಕು ಬಾರಿ, ಅಂದರೆ ಜನವರಿ, ಏಪ್ರಿಲ್, ಜುಲೈ ಹಾಗೂ ಅಕ್ಟೋಬರ್ನಲ್ಲಿ ನೀಡಲಾಗುತ್ತಿತ್ತು. ಜನರು ಬ್ಯಾಂಕ್ ಶಾಖೆಗೆ ಭೇಟಿ ನೀಡುವ ಮೂಲಕ ಅಥವಾ ವೆಬ್ಸೈಟ್ನಲ್ಲಿ ಆನ್ಲೈನ್ನಲ್ಲಿ ಇದನ್ನು ಖರೀದಿಸಬಹುದಿತ್ತು.
ಇದನ್ನು ಓದಿ: ಚುನಾವಣಾ ಬಾಂಡ್: SBI ಕಾಲಾವಕಾಶ ಕೋರಿರುವುದರ ವಿರುದ್ಧ ಭುಗಿಲೆದ್ದ ಆಕ್ರೋಶ


