ಸ್ವಾತಂತ್ರ್ಯ ಹೋರಾಟ ಸಂದರ್ಭದ ವಿವಾದಾತ್ಮಕ ಮುಖಂಡ ಹಾಗೂ ಬಲಪಂಥೀಯ ನಾಯಕ ಸಾವರ್ಕರ್ ಬಗೆಗಿನ ಹಿಂದಿ ಸಿನಿಮಾ ತಯಾರಾಗಿದ್ದು, ಮಾರ್ಚ್ 22ರಂದು ಬಿಡುಗಡೆಯಾಗಲಿದೆ.
‘ಸ್ವಾತಂತ್ರ್ಯ ವೀರ ಸಾವರ್ಕರ್’ ಎಂಬ ಶೀರ್ಷಿಕೆಯ ಈ ಸಿನಿಮಾವನ್ನು ಬಾಲಿವುಡ್ ನಟ ರಣದೀಪ್ ಹೂಡಾ ನಿರ್ದೇಶನ ಮಾಡಿದ್ದು, ಅವರೇ ಸಾವರ್ಕರ್ ಪಾತ್ರದಲ್ಲಿ ನಟಿಸಿದ್ದಾರೆ. ಸಿನಿಮಾದ ಟ್ರೇಲರ್ ಮಂಗಳವಾರ (ಮಾ.5) ಯೂಟ್ಯೂಬ್‌ನಲ್ಲಿ ಬಿಡುಗಡೆಯಾಗಿದೆ.
ಟ್ರೇಲರ್ ಬಿಡುಗಡೆಯ ಬೆನ್ನಲ್ಲೇ ಆಕ್ಷೇಪ ಎತ್ತಿರುವ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಮೊಮ್ಮಗ ಚಂದ್ರ ಕುಮಾರ್ ಬೋಸ್, “ಸಾವರ್ಕರ್‌ರೊಂದಿಗೆ ಸುಭಾಷ್ ಚಂದ್ರ ಬೋಸ್‌ನವರಿಗೆ ಸಂಬಂಧ ಕಲ್ಪಿಸಬೇಡಿ” ಎಂದು ಎಕ್ಸ್‌ನಲ್ಲಿ ಬರೆದುಕೊಂಡಿದ್ದಾರೆ.
ಮಂಗಳವಾರ ಸಂಜೆ ಎಕ್ಸ್ ಪೋಸ್ಟ್ ಹಾಕಿರುವ ನೇತಾಜಿ ಮೊಮ್ಮಗ, “ನೀವು ಸಾವರ್ಕರ್ ಕುರಿತು ಚಲನಚಿತ್ರವನ್ನು ಮಾಡುತ್ತಿರುವುದನ್ನು ನಾನು ಪ್ರಶಂಸಿಸುವೆ. ಆದರೆ, ನಿಜವಾದ ವ್ಯಕ್ತಿತ್ವವನ್ನು ಪ್ರದರ್ಶಿಸುವುದು ಮುಖ್ಯ” ಎಂದಿದ್ದಾರೆ.
https://t.co/nVzhlpE1m2@RandeepHooda – appreciate your making a film on 'Savarkar',but its important to project the true personality! Please refrain from linking 'Netaji Subhas Chandra Bose's' name with Savarkar.Netaji was an inclusive secular leader & patriot of patriots.
— Chandra Kumar Bose (@Chandrakbose) March 5, 2024
“ದಯವಿಟ್ಟು ಸಾವರ್ಕರ್ ಜೊತೆಗೆ ‘ನೇತಾಜಿ ಸುಭಾಷ್ ಚಂದ್ರ ಬೋಸ್’ ಅವರ ಹೆಸರನ್ನು ಲಿಂಕ್ ಮಾಡಬೇಡಿ. ನೇತಾಜಿ ಅಪ್ಪಟ ಜಾತ್ಯತೀತ ನಾಯಕ ಮತ್ತು ದೇಶ ದೇಶಭಕ್ತರಾಗಿದ್ದರು” ಎಂದು ಟ್ರೇಲರ್‌ನಲ್ಲಿ ನೇತಾಜಿ ಸುಭಾಷ್ ಚಂದ್ರ ಬೋಸ್ ಪಾತ್ರಧಾರಿಯು ಸಾವರ್ಕರ್ ಪಾತ್ರಧಾರಿಯಾದ ರಣದೀಪ್ ಹೂಡಾ ಅವರನ್ನು ಅಪ್ಪಿಕೊಳ್ಳುವ ದೃಶ್ಯಕ್ಕೆ ಚಂದ್ರ ಕುಮಾರ್ ಬೋಸ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ನೇತಾಜಿ ಮೊಮ್ಮಗ ಚಂದ್ರ ಕುಮಾರ್ ಬೋಸ್ ಅವರು 2016ರಲ್ಲಿ ಬಿಜೆಪಿಗೆ ಸೇರ್ಪಡೆಗೊಂಡಿದ್ದರು. ಬಳಿಕ 2016ರ ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯಲ್ಲಿ ಮತ್ತು ನಂತರ 2019ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಎರಡು ಬಾರಿ ಚುನಾವಣೆಗೆ ಸ್ಪರ್ಧಿಸಿದ್ದರು. ಆ ಬಳಿಕ 2023ರ ಸೆಪ್ಟೆಂಬರ್‌ನಲ್ಲಿ ಬಿಜೆಪಿಗೆ ರಾಜೀನಾಮೆ ನೀಡಿ ಹೊರ ಬಂದಿದ್ದರು.
“ನಾನು ಬಿಜೆಪಿಗೆ ಸೇರಿದಾಗ ನೇತಾಜಿ ಸುಭಾಷ್ ಚಂದ್ರ ಬೋಸ್ ಮತ್ತು ಶರತ್ ಚಂದ್ರ ಬೋಸ್ ಅವರ ಸಿದ್ಧಾಂತವನ್ನು ಪ್ರಚಾರ ಮಾಡಲು ನನಗೆ ಅವಕಾಶ ನೀಡಲಾಗುವುದು ಎಂದು ಭರವಸೆ ನೀಡಲಾಗಿತ್ತು. ಆದರೆ ಅದ್ಯಾವುದಕ್ಕೂ ಅವಕಾಶವೇ ನೀಡಿರಲಿಲ್ಲ” ಎಂದು ಚಂದ್ರ ಕುಮಾರ್ ಬೋಸ್ ರಾಜೀನಾಮೆ ವೇಳೆ ಹೇಳಿಕೆ ನೀಡಿದ್ದರು.
ಇದನ್ನೂ ಓದಿ: ಶಹಜಹಾನ್ ಶೇಖ್‌ನ್ನು ಸಿಬಿಐಗೆ ಒಪ್ಪಿಸಲು ನಕಾರ: ಸುಪ್ರೀಂ ಮೊರೆ ಹೋದ ಪಶ್ಚಿಮ ಬಂಗಾಳ ಸರ್ಕಾರ


