Homeಮುಖಪುಟಶಹಜಹಾನ್ ಶೇಖ್‌ನ್ನು ಸಿಬಿಐಗೆ ಒಪ್ಪಿಸಲು ನಕಾರ: ಸುಪ್ರೀಂ ಮೊರೆ ಹೋದ ಪಶ್ಚಿಮ ಬಂಗಾಳ ಸರ್ಕಾರ

ಶಹಜಹಾನ್ ಶೇಖ್‌ನ್ನು ಸಿಬಿಐಗೆ ಒಪ್ಪಿಸಲು ನಕಾರ: ಸುಪ್ರೀಂ ಮೊರೆ ಹೋದ ಪಶ್ಚಿಮ ಬಂಗಾಳ ಸರ್ಕಾರ

- Advertisement -
- Advertisement -

ಜಾರಿ ನಿರ್ದೇಶನಾಲಯ (ಇಡಿ) ಅಧಿಕಾರಿಗಳ ಮೇಲೆ ಸಂದೇಶ್ ಖಾಲಿಯಲ್ಲಿ ನಡೆದ ದಾಳಿ ಪ್ರಕರಣದ ತನಿಖೆಯನ್ನು ಸಿಬಿಐಗೆ ಹಸ್ತಾಂತರಿಸುವಂತೆ ಪಶ್ಚಿಮ ಬಂಗಾಳ ಸರ್ಕಾರಕ್ಕೆ ಕಲ್ಕತ್ತಾ ಹೈಕೋರ್ಟ್‌ ಮಂಗಳವಾರ ನಿರ್ದೇಶನ ನೀಡಿದೆ.

ಅಲ್ಲದೆ, ಪ್ರಕರಣ ಪ್ರಮುಖ ಆರೋಪಿ, ಟಿಎಂಸಿಯಿಂದ ಅಮಾನತುಗೊಂಡಿರುವ ಶಹಜಹಾನ್ ಶೇಖ್ ಅವರನ್ನು ಸಿಬಿಐ ವಶಕ್ಕೆ ಒಪ್ಪಿಸುವಂತೆ ಸೂಚಿಸಿದೆ.

ಆದರೆ, ಶಹಜಹಾನ್ ಶೇಖ್ ಅವರನ್ನು ವಶಕ್ಕೆ ಪಡೆಯುವಲ್ಲಿ ಸಿಬಿಐ ವಿಫಲವಾಗಿದೆ. ಹೈಕೋರ್ಟ್‌ ಆದೇಶದ ಬೆನ್ನಲ್ಲೇ ಶಹಜಹಾನ್ ಅವರನ್ನು ವಶಕ್ಕೆ ಪಡೆಯುವುದಕ್ಕಾಗಿ ಮಂಗಳವಾರ ಸಂಜೆ ಸಿಬಿಐ ಅಧಿಕಾರಿಗಳ ತಂಡ ಸಿಆರ್‌ಪಿಎಫ್ ಸಿಬ್ಬಂದಿಯೊಂದಿಗೆ ಕೊಲ್ಕತ್ತಾದ ಭವಾನಿ ಭವನದಲ್ಲಿರುವ ಸಿಐಡಿ ಕೇಂದ್ರ ಕಚೇರಿಗೆ ತೆರಳಿತ್ತು. ಆದರೆ, ಸಂಜೆ 7:30ರವರೆಗೆ ಕಾದ ತಂಡ ಬರಿಗೈಯಲ್ಲಿ ವಾಪಸಾಗಿದೆ.

ಹೈಕೋರ್ಟ್‌ ಆದೇಶ ಪ್ರಶ್ನಿಸಿ ರಾಜ್ಯ ಸರ್ಕಾರ ಸುಪ್ರೀಂ ಕೋರ್ಟ್ ಮೊರೆ ಹೋಗಿದೆ. ಹಾಗಾಗಿ, ಶಹಜಹಾನ್ ಅವರನ್ನು ಸಿಬಿಐಗೆ ಹಸ್ತಾಂತರಿಸಿಲ್ಲ ಎಂದು ಸಿಐಡಿ ಅಧಿಕಾರಿಗಳು ತಿಳಿಸಿದ್ದಾರೆ.

ವರದಿಗಳ ಪ್ರಕಾರ, ಸಂದೇಶ್‌ ಖಾಲಿಯಲ್ಲಿ ಇಡಿ ಅಧಿಕಾರಿಗಳ ಮೇಲೆ ನಡೆದ ದಾಳಿ ಪ್ರಕರಣದ ತನಿಖೆಯನ್ನು ಸಿಐಡಿ ಅಧಿಕಾರಿಗಳು ನಡೆಸುತ್ತಿದ್ದಾರೆ. ಈ ನಡುವೆ ಹೈಕೋರ್ಟ್‌ ತನಿಖೆಯನ್ನು ಸಿಬಿಐಗೆ ವಹಿಸುವಂತೆ ಆದೇಶಿಸಿದೆ. ಈ ಆದೇಶದ ವಿರುದ್ದ ಪಶ್ಚಿಮ ಬಂಗಾಳ ಸರ್ಕಾರ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದೆ.

ಪಶ್ಚಿಮ ಬಂಗಾಳ ಸರ್ಕಾರದ ಪರ ಹಿರಿಯ ವಕೀಲ ಅಭಿಷೇಕ್ ಮನು ಸಿಂಘ್ವಿ ಅವರನ್ನು ನೇಮಿಸಲಾಗಿದೆ. ವಕೀಲರು ಪಶ್ಚಿಮ ಬಂಗಾಳ ಸರ್ಕಾರದ ಅರ್ಜಿಯನ್ನು ತುರ್ತು ವಿಚಾರಣೆ ನಡೆಸುವಂತೆ ಮಂಗಳವಾರ ನ್ಯಾಯಮೂರ್ತಿಗಳಾದ ದೀಪಂಕರ್ ದತ್ತಾ ಮತ್ತು ಸಂಜೀವ್ ಖನ್ನಾ ಅವರಿದ್ದ ಪೀಠಕ್ಕೆ ಮನವಿ ಮಾಡಿದ್ದಾರೆ.

ಆದರೆ, ಸುಪ್ರೀಂ ಕೋರ್ಟ್‌ ತುರ್ತು ವಿಚಾರಣೆಗೆ ನಿರಾಕರಿಸಿದೆ. ಅರ್ಜಿಯ ವಿಚಾರಣೆಯನ್ನು ಪಟ್ಟಿಗೆ ಸೇರಿಸುವ ಸಂಬಂಧ ಸುಪ್ರೀಂ ಕೋರ್ಟ್‌ನ ರಿಜಿಸ್ಟ್ರಾರ್ ಜನರಲ್ ಅವರಿಗೆ ಮನವಿ ಸಲ್ಲಿಸುವಂತೆ ನಿರ್ದೇಶನ ನೀಡಿದೆ.

ಪಶ್ಚಿಮ ಬಂಗಾಳದ ಉತ್ತರ 24 ಪರಗಣ ಜಿಲ್ಲೆಯ ಸಂದೇಶ್ ಖಾಲಿಯಲ್ಲಿ ಇಡಿ ಅಧಿಕಾರಿಗಳ ಮೇಲೆ ನಡೆದ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ 42 ವರ್ಷದ ಶಹಜಹಾನ್ ವಿರುದ್ದ ಪ್ರಕರಣ ದಾಖಲಾದರೂ ಬಂಧನವಾಗಿರಲಿಲ್ಲ. ಈ ನಡುವೆ, ಶಹಜಹಾನ್ ಶೇಖ್ ಮತ್ತು ಅವರ ಆಪ್ತರಾದ ಶಿವಪ್ರಸಾದ್ ಹಜಾರ, ಉತ್ತಮ್ ಸರ್ದಾರ್ ಟಿಎಂಸಿ ಕಚೇರಿಯಲ್ಲಿ ತಮ್ಮ ಮೇಲೆ ಅತ್ಯಾಚಾರವೆಸಗಿದ್ದಾರೆ ಎಂದು ಆರೋಪಿಸಿ ಫೆಬ್ರವರಿ 18ರಂದು ಹಲವು ಮಹಿಳೆಯರು ಬೀದಿಗಿಳಿದ್ದರು.

ಫೆಬ್ರವರಿ 26ರಂದು ಆದೇಶ ನೀಡಿದ್ದ ಕಲ್ಕತ್ತಾ ಹೈಕೋರ್ಟ್, ಶಹಜಹಾನ್ ಬಂಧನಕ್ಕೆ ಯಾವುದೇ ತಡೆಯಿಲ್ಲ. ಅವರನ್ನು ಬಂಧಿಸಲೇಬೇಕು ಎಂದು ಆದೇಶಿಸಿತ್ತು. ಅಂತಿಮವಾಗಿ ಮಾರ್ಚ್ 1 ರಂದು ಉತ್ತರ 24 ಪರಗಣ ಜಿಲ್ಲೆಯ ಮನೆಯೊಂದರಿಂದ ಶಹಜಹಾನ್ ಅವರನ್ನು ಬಂಧಿಸಲಾಗಿದೆ.

ಇದನ್ನೂ ಓದಿ: ಹೈಕೋರ್ಟ್ ಜಡ್ಜ್‌ ಅಭಿಜಿತ್ ಗಂಗೋಪಾಧ್ಯಾಯ ಬಿಜೆಪಿ ಸೇರ್ಪಡೆ?

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮಹಿಳೆಯ ಅಪಹರಣ ಪ್ರಕರಣ : ಶಾಸಕ ಹೆಚ್‌.ಡಿ ರೇವಣ್ಣ ಎಸ್‌ಐಟಿ ವಶಕ್ಕೆ

0
ಲೈಂಗಿಕ ದೌರ್ಜನ್ಯ ಆರೋಪಕ್ಕೆ ಹೊಂದಿಕೊಂಡಿರುವ ಮಹಿಳೆಯೊಬ್ಬರ ಅಪಹರಣ ಪ್ರಕರಣದಲ್ಲಿ ನ್ಯಾಯಾಲಯ ನಿರೀಕ್ಷಣಾ ಜಾಮೀನು ನಿರಾಕರಿಸಿದ ಬೆನ್ನಲ್ಲೇ ಶಾಸಕ ಹೆಚ್‌.ಡಿ ರೇವಣ್ಣ ಅವರನ್ನು ವಿಶೇಷ ತನಿಖಾ ತಂಡ (ಎಸ್‌ಐಟಿ) ವಶಕ್ಕೆ ಪಡೆದಿದೆ. ಲೈಂಗಿಕ ದೌರ್ಜನ್ಯ ಪ್ರಕರಣದ...