Homeಮುಖಪುಟಚುನಾವಣಾ ಬಾಂಡ್ ವಿವರ: ಸುಪ್ರೀಂ ಕೋರ್ಟ್ ಕೇಳಿದರೆ ತಿಂಗಳುಗಳು ಬೇಕು, ಸರ್ಕಾರ ಕೇಳಿದರೆ ಗಂಟೆಗಳು ಸಾಕು!

ಚುನಾವಣಾ ಬಾಂಡ್ ವಿವರ: ಸುಪ್ರೀಂ ಕೋರ್ಟ್ ಕೇಳಿದರೆ ತಿಂಗಳುಗಳು ಬೇಕು, ಸರ್ಕಾರ ಕೇಳಿದರೆ ಗಂಟೆಗಳು ಸಾಕು!

ಸ್ಟೇಟ್‌ ಬ್ಯಾಂಕ್ ಆಫ್ ಇಂಡಿಯಾದ ಕಳ್ಳಾಟ ಬಯಲು ಮಾಡಿದ ದಾಖಲೆಗಳು

- Advertisement -
- Advertisement -

ಚುನಾವಣಾ ಬಾಂಡ್‌ಗಳ ಕುರಿತ ವಿವರಗಳನ್ನು ಚುನಾವಣಾ ಆಯೋಗಕ್ಕೆ ಒದಗಿಸಲು ಜೂನ್ 30ರವರೆಗೆ ಸಮಯ ವಿಸ್ತರಿಸುವಂತೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ಸುಪ್ರೀಂ ಕೋರ್ಟ್‌ಎ ಅರ್ಜಿ ಸಲ್ಲಿಸಿದೆ. ರಾಜಕೀಯ ಪಕ್ಷಗಳಿಗೆ ಗುಟ್ಟಾಗಿ ದೇಣಿಗೆ ನೀಡಿದವರ ಮಾಹಿತಿ ಒದಗಿಸುವುದು ಕಷ್ಟದ ಕೆಲಸ ಎಂದಿದೆ.

ಎಸ್‌ಬಿಐ ಈ ಹಿಂದೆಯೂ ಸರ್ಕಾರಿ ವಿಚಾರಣೆಗಳ ಸಂದರ್ಭಗಳಲ್ಲಿ ಈ ರೀತಿ ನಿಧಾನಗತಿ ಮತ್ತು ಚಾಣಾಕ್ಷತೆಯನ್ನು ಪ್ರದರ್ಶಿಸಿದೆ.

ಚುನಾವಣಾ ಬಾಂಡ್ ಯೋಜನೆ ರದ್ದುಗೊಳಿಸಿದ ನಂತರ ನ್ಯಾಯಾಲಯ ಬಾಂಡ್‌ ವಿವರಗಳನ್ನು ಬಹಿರಂಗಪಡಿಸಲು ಎಸ್‌ಬಿಐಗೆ ಸೂಚಿಸಿತ್ತು. ಆ ಕೆಲಸ ತಿಂಗಳುಗಟ್ಟಲೆ ಸಮಯ ತೆಗೆದುಕೊಳ್ಳುತ್ತದೆ ಎಂಬುವುದು ಈಗ ಎಸ್‌ಬಿಐ ನ್ಯಾಯಾಲಯ ನೀಡುತ್ತಿರುವ ಸಬೂಬು.

ಆದರೆ, ಸಾಮಾಜಿಕ ಹೋರಾಟಗಾರ ಕೊಮೋಡೋರ್ ಲೋಕೇಶ್ ಬಾತ್ರಾ ಅವರು ‘ರಿಪೋರ್ಟರ್ಸ್ ಕಲೆಕ್ಟಿವ್‌’ ಜೊತೆ ಹಂಚಿಕೊಂಡ ದಾಖಲೆಗಳ ಪ್ರಕಾರ, ಸರ್ಕಾರಕ್ಕೆ ಎಸ್‌ಬಿಐ ಚುನಾವಣಾ ಬಾಂಡ್‌ಗಳ ಮಾಹಿತಿಯನ್ನು ಅತಿ ಕಡಿಮೆ ಸಮಯದಲ್ಲಿ, ಅಂದರೆ ಕೆಲವೊಮ್ಮೆ ಬರೀ 48 ಗಂಟೆಗಳಲ್ಲಿ ಒದಗಿಸಿರುವುದನ್ನು ಸಾಬೀತುಪಡಿಸುವ ಹಲವು ಪ್ರಮುಖ ಪುರಾವೆಗಳಿವೆ.

ಕೇಂದ್ರ ಹಣಕಾಸು ಸಚಿವಾಲಯದ ಸೂಚನೆಯ ಮೇರೆಗೆ ಎಸ್‌ಬಿಐ ಬಾಂಡ್‌ಗಳನ್ನು ನಗದುಗೊಳಿಸುವ ಗಡುವು ಮುಗಿದ 48 ಗಂಟೆಗಳ ಒಳಗೆ ದೇಶದಾದ್ಯಂತ ಚುನಾವಣಾ ಬಾಂಡ್‌ಗಳ ಡೇಟಾವನ್ನು ಒಟ್ಟುಗೂಡಿಸಿದ್ದಿದೆ ಎಂದು ದಾಖಲೆಗಳು ಬಹಿರಂಗಪಡಿಸುತ್ತವೆ.

ಬಾಂಡ್ ಮಾರಾಟದ ಪ್ರತಿ ವಿಂಡೋ ಅವಧಿಯ ನಂತರ ಅಂತಹ ಮಾಹಿತಿಯನ್ನು ಅದು ಕೇಂದ್ರ ಹಣಕಾಸು ಸಚಿವಾಲಯಕ್ಕೆ ಕಳಿಸಿದೆ. 2020ರವರೆಗಿನ ಅಂತಹ ದಾಖಲೆಗಳನ್ನು ರಿಪೋರ್ಟರ್ಸ್ ಕಲೆಕ್ಟಿವ್ ಡಾಟ್ ಇನ್ ಪರಿಶೀಲಿಸಿದೆ. ಮಾರಾಟವಾದ ಮತ್ತು ರಾಜಕೀಯ ಪಕ್ಷಗಳು ನಗದೀಕರಿಸಿಕೊಂಡ ಬಾಂಡ್‌ಗಳ ಆಡಿಟ್ ಟ್ರಯಲ್ ಅನ್ನು ಎಸ್‌ಬಿಐ ನಿರ್ವಹಿಸುವುದರ ಬಗ್ಗೆ ದಾಖಲೆಗಳು ಹೇಳುತ್ತವೆ.

ಪ್ರತಿ ಬಾಂಡ್‌ನ ಸೀರಿಯಲ್ ನಂಬರ್ ಬಳಸಿ ಅದರ ಜಾಡನ್ನು ಎಸ್‌ಬಿಐ ನಿರ್ವಹಿಸುತ್ತದೆ. ಇದು, 2018ರಲ್ಲಿ ಕೇಂದ್ರ ಸರ್ಕಾರ ಚುನಾವಣಾ ಬಾಂಡ್ ಯೋಜನೆ ಪ್ರಾರಂಭಿಸಿದಾಗಲೇ ಎಸ್‌ಬಿಐ ಸ್ವತಃ ಬೇಡಿಕೆಯಿಟ್ಟು ಮಾಡಿಕೊಂಡಿರುವ ವ್ಯವಸ್ಥೆ.

ಆಗ ಇಂತಹ ಜಾಣತನ ತೋರಿದ್ದ ಎಸ್‌ಬಿಐ, ಈಗ ಮಾತ್ರ ಖರೀದಿ ಸಮಯದಲ್ಲಿ ಬಾಂಡ್ ಖರೀದಿಸಿದ ದಾನಿಗಳ ವಿವರಗಳನ್ನು, ಅವನ್ನು ಪಡೆದ ರಾಜಕೀಯ ಪಕ್ಷಗಳ ವಿವರಗಳಿಂದ ಪ್ರತ್ಯೇಕವಾಗಿ ಇರಿಸಲಾಗಿದೆ ಎಂದು ಕೋರ್ಟ್‌ಗೆ ಹೇಳುತ್ತಿದೆ.

ಬಾಂಡ್‌ಗಳ ಮಾರಾಟದ ಕುರಿತ ಡೇಟಾವನ್ನು ನಿಗದಿತ ಶಾಖೆಗಳು ಮುಚ್ಚಿದ ಕವರ್‌ಗಳಲ್ಲಿ ಮುಂಬೈ ಪ್ರಧಾನ ಕಚೇರಿಗೆ ಕಳುಹಿಸುತ್ತವೆ ಎಂಬುದು ಎಸ್‌ಬಿಐ ಹೇಳಿಕೆ. ಅದೇ ರೀತಿ, ಬಾಂಡ್‌ಗಳನ್ನು ನಗದು ಮಾಡಿಕೊಂಡ ರಾಜಕೀಯ ಪಕ್ಷಗಳ ಡೇಟಾವನ್ನು ಕೂಡ ಸೀಲ್ ಮಾಡಿದ ಕವರ್‌ನಲ್ಲಿ ಮುಂಬೈ ಕಚೇರಿಗೆ ಕಳಿಸಲಾಗುತ್ತದೆ.

ದೇಣಿಗೆ ನೀಡಿದವರ ಮತ್ತು ಪಡೆದ ರಾಜಕೀಯ ಪಕ್ಷಗಳ ಹೆಸರು ಬಹಿರಂಗವಾಗದಂತೆ ನೋಡಿಕೊಳ್ಳಲು ಹೀಗೆ ಡೇಟಾವನ್ನು ಬೇರ್ಪಡಿಸಲಾಗಿರುತ್ತದೆ ಎಂದು ಬ್ಯಾಂಕ್ ಹೇಳಿದೆ. ಹೀಗಾಗಿ, 2019ರಿಂದ ನೀಡಲಾದ ಒಟ್ಟು 22,217 ಚುನಾವಣಾ ಬಾಂಡ್‌ಗಳ ಖರೀದಿದಾರರ ವಿವರಗಳನ್ನು ಫಲಾನುಭವಿ ಪಕ್ಷಗಳ ವಿವರಗಳೊಂದಿಗೆ ಜೋಡಿಸಲು ತಿಂಗಳುಗಟ್ಟಲೆ ಸಮಯ ಬೇಕು ಎಂದು ಎಸ್‌ಬಿಐ ಹೇಳುತ್ತಿದೆ.

ಆದರೆ ದಾಖಲೆಗಳು ಪ್ರಕಾರ, 2017ರಲ್ಲಿ ಕೇಂದ್ರ ಹಣಕಾಸು ಸಚಿವಾಲಯ ಒಪ್ಪಿಕೊಂಡಂತೆ, ಚುನಾವಣಾ ಬಾಂಡ್‌ಗಳು ಬ್ಯಾಂಕ್‌ಗೆ ನಗದೀಕರಣಕ್ಕಾಗಿ ಬಂದಾಗ ಆ ರಾಜಕೀಯ ಪಕ್ಷದೊಂದಿಗೆ ದಾನಿಯ ವಿವರವನ್ನು ನೈಜ ಸಮಯದಲ್ಲೇ ಸಂಪರ್ಕಿಸುವ ವ್ಯವಸ್ಥೆಯನ್ನು ಎಸ್‌ಬಿಐ ಹೊಂದಿದೆ. ಬಾಂಡ್‌ಗಳ ಖರೀದಿ ಮತ್ತು ನಗದೀಕರಣ ಎಲೆಕ್ಟ್ರಾನಿಕ್ ಆಗಿ ನಡೆದದ್ದೆ ಅಥವಾ ನೇರವಾಗಿ ನಡೆದದ್ದೆ ಎಂಬುದು ಕೂಡ ಇಲ್ಲಿ ಗಣನೆಗೆ ಬರುವುದಿಲ್ಲ.

ಖರೀದಿದಾರರನ್ನು ಗುರುತಿಸಲು ಕೆವೈಸಿ ಪ್ರಕ್ರಿಯೆ ಮತ್ತು ಬಾಂಡ್‌ಗಳ ಮೇಲೆ ರಹಸ್ಯ ಸೀರಿಯಲ್ ನಂಬರ್ ಹಾಕಿದ ಬಳಿಕವೇ ನಿಗದಿತ ಎಸ್‌ಬಿಐ ಶಾಖೆಗಳು ಬಾಂಡ್ ಮಾರಾಟವನ್ನು ಪೂರ್ಣಗೊಳಿಸುವ ಕ್ರಮವನ್ನು ಅನುಸರಿಸಿವೆ.

ಪಾರದರ್ಶಕವಾಗಿಲ್ಲ ಎಂಬ ಆರೋಪಗಳಿಗೆ ಸುಪ್ರೀಂ ಕೋರ್ಟ್‌ನಲ್ಲಿ ಉತ್ತರಿಸುವಾಗಲೂ ಕೇಂದ್ರ ಸರ್ಕಾರ ಕೆವೈಸಿ ಮತ್ತು ಆಡಿಟ್ ಟ್ರಯಲ್ ಮೂಲಕ ಈ ಯೋಜನೆ ಪಾರದರ್ಶಕತೆ ಹೊಂದಿದ್ದಾಗಿ ಹೇಳಿಕೊಂಡಿತ್ತು.

ನ್ಯಾಯಾಲಯದಲ್ಲಿ ಯೋಜನೆಯನ್ನು ಸಮರ್ಥಿಸಿಕೊಳ್ಳುವುದು ಹೇಗೆ ಎಂಬುದರ ಕುರಿತ ತನ್ನ ಆಂತರಿಕ ಚರ್ಚೆಗಳಲ್ಲಿಯೂ ಹಣಕಾಸು ಸಚಿವಾಲಯ, ಬಾಂಡ್ ಖರೀದಿದಾರರ ದಾಖಲೆಗಳು ಬ್ಯಾಂಕ್ ಬಳಿ ಲಭ್ಯವಿದ್ದು, ಜಾರಿ ಏಜನ್ಸಿಗಳು ತಮಗೆ ಬೇಕಿರುವಾಗ ಪರಿಶೀಲಿಸಬಹುದೆಂದು ಖಾತರಿಪಡಿಸಿದ್ದಿದೆ.

ಹೆಚ್ಚಿನ ಸಮಯ ಕೋರಿ ಸುಪ್ರೀಂ ಕೋರ್ಟ್‌ನಲ್ಲಿ ಎಸ್‌ಬಿಐ ಅರ್ಜಿ ಸಲ್ಲಿಸಿರುವ ಬಗ್ಗೆ ಸಿಕ್ಕಾಪಟ್ಟೆ ಮೀಮ್ ಗಳು ಹರಿದಾಡತೊಡಗಿವೆ. ಗ್ರಾಹಕರೊಂದಿಗೆ ವ್ಯವಹರಿಸುವಾಗ ಹೇಗೆ ಎಸ್‌ಬಿಐ ತನ್ನದೇ ವಿಶೇಷತೆಯಾದ ನಿಧಾನಗತಿಯನ್ನು ತೋರಿಸುತ್ತದೆಯೊ ಹಾಗೆಯೇ ಸುಪ್ರೀಂ ಕೋರ್ಟ್ ಎದುರಲ್ಲಿಯೂ ತೋರಿಸುತ್ತಿದೆ ಎಂದು ಅವು ಅಣಕಿಸಿವೆ.

ಸರ್ಕಾರಕ್ಕೆ ಮಾಹಿತಿಯನ್ನು ಕೊಡಬೇಕಾದಾಗ ಮಾತ್ರ ಎಸ್‌ಬಿಐ ಬಹಳ ಬೇಗ ಸ್ಪಂದಿಸಿದ್ದಿದೆ. ಕೆಲವೊಮ್ಮೆ ಒಂದು ಫೋನ್ ಕರೆಯಲ್ಲೇ ಅದು ಕೆಲಸ ಮುಗಿಸಿರುವುದೂ ಇದೆ.

ಉದಾಹರಣೆಗೆ, ಒಮ್ಮೆ 2018ರಲ್ಲಿ ರಾಜಕೀಯ ಪಕ್ಷವೊಂದು ತನ್ನ ಶೆಲ್ಫ್ ಲೈಫ್ ಕಳೆದ ಬಾಂಡ್‌ಗಳನ್ನು ನಗದೀಕರಿಸಲು ಎಸ್‌ಬಿಐನ ಹೊಸದಿಲ್ಲಿ ಶಾಖೆಯನ್ನು ಸಂಪರ್ಕಿಸಿತ್ತು. ಆಗ, ಚುನಾವಣಾ ಬಾಂಡ್‌ನ ಕಾಲಾವಧಿಯ ಬಗ್ಗೆ ನೋಡಿಕೊಳ್ಳುವುದಕ್ಕೆಂದೇ ಇರುವ ಮುಂಬೈನಲ್ಲಿನ ಎಸ್‌ಬಿಐ ಕಾರ್ಪೊರೇಟ್ ಕಚೇರಿಯಲ್ಲಿನ ನಿರ್ದಿಷ್ಟ ತಂಡವಾದ ಟ್ರಾನ್ಸಾಕ್ಷನ್ ಬ್ಯಾಂಕಿಂಗ್ ಘಟಕಕ್ಕೆ ದೆಹಲಿ ಶಾಖೆ ಕೆಲವೇ ಗಂಟೆಗಳೊಳಗೆ ಮಾಹಿತಿ ನೀಡಿತ್ತು.

ಆ ತಂಡ ಅಲ್ಪಾವಧಿಯಲ್ಲಿಯೇ ಮಾಹಿತಿಯನ್ನು ಸಂಗ್ರಹಿಸಿತ್ತು ಮತ್ತು ಅದರ ಬಗ್ಗೆ ಹಣಕಾಸು ಸಚಿವಾಲಯದ ಉನ್ನತ ಅಧಿಕಾರಿಗಳ ಗಮನಕ್ಕೆ ತಂದಿತ್ತು. ಎಲೆಕ್ಟೋರಲ್ ಬಾಂಡ್ ಕೇವಲ 15 ದಿನಗಳ ಶೆಲ್ಫ್ ಲೈಫ್ ಹೊಂದಿರುತ್ತದೆ ಎಂದು ಕಾನೂನಿನಲ್ಲಿ ಇದ್ದುದರಿಂದ ಎಸ್‌ಬಿಐ ಕಾರ್ಪೊರೇಟ್ ಕಚೇರಿ ಹಣಕಾಸು ಸಚಿವಾಲಯದ ಸಲಹೆ ಕೇಳಿತ್ತು.

ತಕ್ಷಣ ಪ್ರತಿಕ್ರಿಯಿಸಿದ್ದ ಹಣಕಾಸು ಸಚಿವಾಲಯ, ಬಾಂಡ್‌ಗಳು ಅವಧಿ ಮೀರಿದ್ದರೂ ರಾಜಕೀಯ ಪಕ್ಷ ಅವುಗಳನ್ನು ನಗದೀಕರಿಸಲು ಅವಕಾಶ ನೀಡುವಂತೆ ಸೂಚಿಸಿತ್ತು. ಆ ಸೂಚನೆ ಬಳಿಕ ಮಿಂಚಿನ ವೇಗದಲ್ಲಿ ಕಾರ್ಯೋನ್ಮುಖವಾದ ಕಾರ್ಪೊರೇಟ್ ಕಚೇರಿ, ದೆಹಲಿ ಕಚೇರಿಗೆ ಆ ವಿಚಾರವನ್ನು ಮುಟ್ಟಿಸಿತ್ತು.

ಇವೆಲ್ಲವೂ 24 ಗಂಟೆಗಳ ಅವಧಿಯಲ್ಲಿ ನಡೆದಿದ್ದವು ಮತ್ತು ಅವಧಿ ಮೀರಿದ್ದ ಚುನಾವಣಾ ಬಾಂಡ್‌ಗಳನ್ನು ನಗದೀಕರಿಸಲು ಆ ರಾಜಕೀಯ ಪಕ್ಷಕ್ಕೆ ಅವಕಾಶ ಮಾಡಿಕೊಡಲಾಗಿತ್ತು.

ಹಣಕಾಸು ಸಚಿವಾಲಯವಾಗಲೀ ಅಥವಾ ಎಸ್‌ಬಿಐ ಆಗಲೀ ಅಧಿಕೃತ ದಾಖಲೆಗಳಲ್ಲಿ ಯಾವ ರಾಜಕೀಯ ಪಕ್ಷದ ಹೆಸರನ್ನೂ ಉಲ್ಲೇಖಿಸಿಲ್ಲ. ಆದರೆ ಆ ಪಕ್ಷ ತಲಾ 1 ಕೋಟಿಯ 10 ಅವಧಿ ಮೀರಿದ ಬಾಂಡ್‌ಗಳನ್ನು ಹೊಂದಿತ್ತು ಮತ್ತು ದೆಹಲಿಯಲ್ಲಿ ಅವುಗಳನ್ನು ಖರೀದಿಸಿದ ನಿರ್ದಿಷ್ಟ ದಿನಾಂಕಗಳ ಬಗ್ಗೆ ಎಸ್‌ಬಿಐ ಬಳಿ ಮಾಹಿತಿ ಇತ್ತು ಮತ್ತು ಅದನ್ನೇ ಅದು ಹಣಕಾಸು ಸಚಿವಾಲಯದ ಗಮನಕ್ಕೆ ತಂದಿತ್ತು.

ಸ್ವತಂತ್ರ ಸಂಸ್ಥೆಯಾಗಿದ್ದರೂ ಎಸ್‌ಬಿಐ ಹಲವಾರು ಸಂದರ್ಭಗಳಲ್ಲಿ ಸರ್ಕಾರದ ಭಾಗವಾಗಿ ಕಾರ್ಯನಿರ್ವಹಿಸಿದೆ. 2018 ರಲ್ಲಿ, ಮಾಹಿತಿ ಹಕ್ಕು ಕಾಯ್ದೆಯಡಿಯಲ್ಲಿ ಬಾಂಡ್‌ಗಳ ಡೇಟಾವನ್ನು ಹಂಚಿಕೊಳ್ಳಲು ಹಣಕಾಸು ಸಚಿವಾಲಯದಿಂದ ಅದು ಅನುಮತಿಯನ್ನು ಪಡೆದುಕೊಂಡಿತ್ತು.

ಎಸ್‌ಬಿಐನ ಈ ಹಿಂದಿನ ಕಾರ್ಯನಿರ್ವಹಣೆಯ ಈ ಇತಿಹಾಸವನ್ನು ಗಮನಿಸಿದರೆ, ಅದು ಈಗ ಸುಪ್ರೀಂ ಕೋರ್ಟ್ ಕೇಳಿರುವ ವಿವರಗಳನ್ನು ಒದಗಿಸಲು ಸಮಯ ಬೇಕೆನ್ನುತ್ತಿರುವುದು ಹಲವು ಅನುಮಾನಗಳನ್ನು ಹುಟ್ಟುಹಾಕುತ್ತಿದೆ.

ನಿವೃತ್ತ ಸರ್ಕಾರಿ ಅಧಿಕಾರಿ ಸುಭಾಷ್ ಚಂದ್ರ ಗಾರ್ಗ್ ಅವರಲ್ಲಿ ಬಹುಶಃ ಇದಕ್ಕೆ ಉತ್ತರ ಇರಬಹುದು. ಹಣಕಾಸು ಮತ್ತು ಅರ್ಥಶಾಸ್ತ್ರ ವ್ಯವಹಾರಗಳ ಕಾರ್ಯದರ್ಶಿಯಾಗಿ ಅವರು 2017 ಮತ್ತು 2018ರಲ್ಲಿ ಚುನಾವಣಾ ಬಾಂಡ್‌ ಯೋಜನೆಯ ರಚನೆ ಮತ್ತು ಅನುಷ್ಠಾನದಲ್ಲಿ ಪಾತ್ರ ವಹಿಸಿದ್ದರು ಎಂದು ರಿಪೋಟರ್ಸ್‌ ಕಲೆಕ್ಟಿವ್ ಹೇಳಿದೆ.

ಎಸ್‌ಬಿಐ ಹೆಚ್ಚು ಸಮಯ ಕೇಳಲು ನಿರ್ದಿಷ್ಟ ಕಾರಣಗಳಿವೆಯೆ ಎಂದು ಮಾರ್ಚ್ 6ರಂದು ಮೋಜೋ ಸ್ಟೋರಿ ಗಾರ್ಗ್ ಅವರನ್ನು ಕೇಳಿದ್ದಕ್ಕೆ, ಅವರು ಹೇಳಿರುವುದು ಹೀಗೆ:

“ನನಗೆ ಅನ್ನಿಸುವುದು ಇದೊಂದು ಕುಂಟು ನೆಪವಷ್ಟೆ. ಈ ಮಾಹಿತಿಯನ್ನು ಒದಗಿಸಲು ಎಸ್‌ಬಿಐಗೆ ಸಮಯವೇ ಬೇಕಾಗಿಲ್ಲ. ಬಾಂಡ್‌ಗಳ ಖರೀದಿದಾರರು ಮತ್ತು ಬಾಂಡ್‌ಗಳನ್ನು ಸ್ವೀಕರಿಸುವವರ ವಿವರ ಜೋಡಿಸಬೇಕಿದೆ ಎಂದು ಅದು ಹೇಳುತ್ತಿದೆ. ಅದರ ಅಗತ್ಯವೇ ಇಲ್ಲ ಮತ್ತು ಅದಕ್ಕೆ ಸಮಯವೇ ಬೇಕಿಲ್ಲ. ನಾನು ಮೊದಲೇ ಹೇಳಿದಂತೆ, ಪ್ರತಿ ಬಾಂಡ್‌ಗೆ ಒಂದು ಸಂಖ್ಯೆ ಇರುತ್ತದೆ. ಆ ಸಂಖ್ಯೆಯ ಮಾಹಿತಿಯನ್ನು ಬೇರ್ಪಡಿಸಿದರೆ ಅಗತ್ಯ ಮಾಹಿತಿಯನ್ನು ಸುಲಭವಾಗಿ ಪಡೆಯಬಹುದು. ಬಹುಶಃ ಹೀಗೊಂದು ಅರ್ಜಿ ಸಲ್ಲಿಸುವಂತೆ ಎಸ್‌ಬಿಐ ಅನ್ನು ಪ್ರಚೋದಿಸಿದಂತೆ ಕಾಣುತ್ತದೆ”.

ಗಾರ್ಗ್ ಅವರಿಗೆ ಖಂಡಿತ ಗೊತ್ತಿರುತ್ತದೆ. ಎಸ್‌ಬಿಐ ಬೇಡಿಕೆಯಂತೆ ಚುನಾವಣಾ ಬಾಂಡ್‌ಗಳಲ್ಲಿ ರಹಸ್ಯ ಸೀರಿಯಲ್ ನಂಬರ್‌ಗಳ ಜೋಡಣೆಯನ್ನು ನೋಡಿಕೊಂಡಿದ್ದವರೇ ಅವರು ಎಂದು ರಿಪೋಟರ್ಸ್‌ ಕಲೆಕ್ಟಿವ್ ತಿಳಿಸಿದೆ.

ಮಾಹಿತಿ ಕೃಪೆ: https://www.reporters-collective.in/

ಇದನ್ನೂ ಓದಿ : ಚುನಾವಣಾ ಬಾಂಡ್ ಮಾಹಿತಿ ಒದಗಿಸದ ಎಸ್‌ಬಿಐ: ನ್ಯಾಯಾಂಗ ನಿಂದನೆ ಕ್ರಮಕ್ಕೆ ಕೋರಿ ಸುಪ್ರೀಂ ಮೊರೆ ಹೋದ ಎಡಿಆರ್

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...