ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸಮಿತಿಯು ಗುರುವಾರ ನಿವೃತ್ತ ಐಎಎಸ್ ಅಧಿಕಾರಿಗಳಾದ ಜ್ಞಾನೇಶ್ ಕುಮಾರ್ ಮತ್ತು ಸುಖಬೀರ್ ಸಿಂಗ್ ಸಂಧು ಅವರನ್ನು ನೂತನ ಚುನಾವಣಾ ಆಯುಕ್ತರನ್ನಾಗಿ ಆಯ್ಕೆ ಮಾಡಿದೆ. ಈ ಸಮಿತಿಯ ಸದಸ್ಯರಾಗಿರುವ ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧರಿ ಅವರು ತಮ್ಮ ಭಿನ್ನಾಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ ಮತ್ತು ಆಯ್ಕೆ ಪ್ರಕ್ರಿಯೆಯನ್ನು ಪ್ರಶ್ನಿಸಿದ್ದಾರೆ.
ನೂತನ ಚುನಾವಣಾ ಆಯುಕ್ತರನ್ನು ಆಯ್ಕೆ ಮಾಡುವ ಮುನ್ನ ಶಾರ್ಟ್ ಲಿಸ್ಟ್ ಮಾಡಿದ ಅಧಿಕಾರಿಗಳ ಹೆಸರುಗಳನ್ನು ನನಗೆ ಮೊದಲೇ ಕೊಟ್ಟಿರಲಿಲ್ಲ. ಸುದೀರ್ಘ ಪಟ್ಟಿಯಲ್ಲಿ ಭಾರತ ಸರ್ಕಾರದಲ್ಲಿ ಕಾರ್ಯದರ್ಶಿ ಮತ್ತು ಸಮಾನ ಕಾರ್ಯದರ್ಶಿಯಾಗಿ ನಿವೃತ್ತರಾದ 92 ಅಧಿಕಾರಿಗಳು, ಭಾರತ ಸರ್ಕಾರದಲ್ಲಿ ಕಾರ್ಯದರ್ಶಿ ಮತ್ತು ಕಾರ್ಯದರ್ಶಿ ಸಮಾನ ಅಧಿಕಾರಿಗಳಾಗಿ ಸೇವೆ ಸಲ್ಲಿಸುತ್ತಿರುವ 93 ಅಧಿಕಾರಿಗಳು, ಕಳೆದ ಒಂದು ವರ್ಷದಲ್ಲಿ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಮುಖ್ಯ ಕಾರ್ಯದರ್ಶಿಗಳಾಗಿ ನಿವೃತ್ತರಾದ 15 ಅಧಿಕಾರಿಗಳು, 28 ಮತ್ತು 8 ಅಧಿಕಾರಿಗಳು ಕ್ರಮವಾಗಿ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಮುಖ್ಯ ಕಾರ್ಯದರ್ಶಿಗಳಾಗಿ ಸೇವೆ ಸಲ್ಲಿಸುತ್ತಿರುವವರು ಸೇರಿದ್ದರು ಎಂದು ಅಧೀರ್ ರಂಜನ್ ಚೌಧರಿ ತಿಳಿಸಿದ್ದಾರೆ.
VIDEO | “They (the government) gave me the list of 212 names just 10 minutes before the meeting. It was impossible for me to know about the integrity and experience of people named on the list, then and there. I didn't agree with the procedure through which the names have been… pic.twitter.com/WmeqPeq9xw
— Press Trust of India (@PTI_News) March 14, 2024
ಚುನಾವಣಾ ಆಯುಕ್ತರ ಆಯ್ಕೆ ಸಭೆ ಪ್ರಾರಂಭವಾಗುವ ಕೇವಲ 8 ರಿಂದ 10 ನಿಮಿಷ ಮೊದಲು ಆರು ಶಾರ್ಟ್‌ಲಿಸ್ಟ್ ಮಾಡಿದ ಅಧಿಕಾರಿಗಳ ಹೆಸರನ್ನು ಸರ್ಕಾರ ನನಗೆ ನೀಡಿತ್ತು. ಕಾನೂನು ಸಚಿವ ಅರ್ಜುನ್ ರಾಮ್ ಮೇಘವಾಲ್ ಅವರು ಈ 6 ಅಧಿಕಾರಿಗಳ ವಿವರಗಳು, ಅವರು ನಿರ್ವಹಿಸಿದ ಹುದ್ದೆಗಳು, ಅವರ ಆಡಳಿತ ದಾಖಲೆ ಮತ್ತು ಎಲ್ಲದರ ವಿವರಗಳನ್ನು ಆಯ್ಕೆ ಸಮಿತಿಗೆ ತಿಳಿಸಿದರು. ಈ 6 ಅಧಿಕಾರಿಗಳ ಪಟ್ಟಿಯಿಂದ ಸಮಿತಿಯು ಇಬ್ಬರ ಹೆಸರನ್ನು ಆಯ್ಕೆ ಮಾಡಬೇಕಾಗಿತ್ತು ಎಂದು ಚೌಧರಿ ಹೇಳಿದ್ದಾರೆ.
ಚೌಧರಿ ಅವರ ಪ್ರಕಾರ ಆರು ಅಧಿಕಾರಿಗಳ ಹೆಸರುಗಳು ಹೀಗಿವೆ.. ಉತ್ಪಲ್ ಕುಮಾರ್ ಸಿಂಗ್, ಪ್ರದೀಪ್ ಕುಮಾರ್ ತ್ರಿಪಾಠಿ, ಜ್ಞಾನೇಶ್ ಕುಮಾರ್, ಇಂದೇವರ್ ಪಾಂಡೆ, ಸುಖಬೀರ್ ಸಿಂಗ್ ಸಂಧು ಮತ್ತು ಸುಧೀರ್ ಕುಮಾರ್ ಗಂಗಾಧರ್ ರಹಾಟೆ.
ಕಾನೂನು ಸಚಿವರು ಶಾರ್ಟ್ ಲಿಸ್ಟ್ ಮಾಡಲಾದ ಅಧಿಕಾರಿಗಳ ಬಗ್ಗೆ ಮಾಹಿತಿ ನೀಡಿದ ಬಳಿಕ, ಅಮಿತ್ ಶಾ ಅವರು ಜ್ಞಾನೇಶ್ ಕುಮಾರ್ ಮತ್ತು ಸುಖಭೀರ್ ಸಿಂಗ್ ಸಂಧು ಅವರ ಹೆಸರುಗಳನ್ನು ಪ್ರಸ್ತಾಪಿಸಿದರು. ಬಳಿಕ ನಿಮಗೆ ಏನಾದರು ಹೇಳಲಿಕ್ಕೆ ಇದೆಯಾ? ಎಂದು ನನ್ನನ್ನು ಕೇಳಿದರು. ಆಗ ನಾನು, “ಈಗಾಗಲೇ ಶಾರ್ಟ್ ಲಿಸ್ಟ್ ಮಾಡಲಾದ ಅಧಿಕಾರಿಗಳ ಪ್ರೊಪೈಲ್ ನನಗೆ ಕಳಿಸಿ, ಅದನ್ನು ಪರಿಶೀಲಿಸಿದ ಬಳಿಕ ನನಗೆ ಅಭಿಪ್ರಾಯ ತಿಳಿಸಲು ಸಹಾಯವಾಗುತ್ತದೆ ಎಂದೆ” ಎಂದು ಚೌಧರಿ ಹೇಳಿದ್ದಾರೆ.
“ನಾನು ನಿನ್ನೆ ರಾತ್ರಿ ನನ್ನ ಕ್ಷೇತ್ರದಿಂದ ದೆಹಲಿ ತಲುಪಿದ್ದೆ. ರಾತ್ರಿಯಷ್ಟೇ 212 ಅಧಿಕಾರಿಗಳ ಸಂಪೂರ್ಣ ಪಟ್ಟಿಯನ್ನು ನನಗೆ ನೀಡಲಾಗಿತ್ತು. ಕಡಿಮೆ ಸಮಯದಲ್ಲಿ 212 ಅಧಿಕಾರಿಗಳ ವಿವರ, ಅವರ ಸಮಗ್ರತೆ, ಅನುಭವ ಮತ್ತು ಆಡಳಿತ ಸಾಮರ್ಥ್ಯದ ವಿವರಗಳನ್ನು ನಾನು ಹೇಗೆ ಪರಿಶೀಲಿಸುವುದು? ಹಾಗಾಗಿಯೇ ಶಾರ್ಟ್ ಲಿಸ್ಟ್ ಮಾಡಿದ ಅಧಿಕಾರಿಗಳ ಫ್ರೊಫೈಲ್ ಕೇಳಿದ್ದೇನೆ” ಎಂದು ಎಂದಿದ್ದಾರೆ.
“ಪ್ರಧಾನಿ ಮತ್ತು ಗೃಹ ಸಚಿವರು ನನ್ನ ಅಭಿಪ್ರಾಯ ಕೇಳಿದಾಗ, ನಿಮಗೆ ಬಹುಮತ ಇದೆ. ಏನು ಬೇಕಾದರು ಮಾಡಬಹುದು ಎಂದು ನಾನು ಹೇಳಿದೆ. ಇಲ್ಲದಿದ್ದರೂ ನಾನೇನು ಮಾಡಲು ಸಾಧ್ಯ? ನನಗೆ ಅಧಿಕಾರಿಗಳ ಬಗ್ಗೆ ಯಾವುದೇ ಅಸಮಧಾನ ಇಲ್ಲ. ಅವರು ಸಮರ್ಥರಾಗಿದ್ದರೆ ಆಯ್ಕೆ ಆಗಲಿ. ಶಾರ್ಟ್ ಲಿಸ್ಟ್ ಮಾಡಲಾದ ಯಾವುದೇ ಅಧಿಕಾರಿ ನನಗೆ ಪರಿಚಯಸ್ಥರೂ ಅಲ್ಲ. ಅವರ ಬಗ್ಗೆ ನನಗೆ ಏನೂ ಗೊತ್ತಿಲ್ಲ. ಪಟ್ಟಿಯಲ್ಲಿ ನನ್ನ ರಾಜ್ಯ ಪಶ್ಚಿಮ ಬಂಗಾಳದ ಇಂದೇವರ್ ಪಾಂಡೆ ಕೂಡ ಇದ್ದರು. ಅವರ ಬಗ್ಗೆ ನನಗೆ ಗೊತ್ತಿದೆ. ಅವರು ಉತ್ತಮ ಸಮರ್ಥ ಅಧಿಕಾರಿ. ಅಧಿಕಾರಿಗಳು ಯಾರು ಬೇಕಾದರು ಆಯ್ಕೆಯಾಗಲಿ. ಆದರೆ, ಆಯ್ಕೆ ಮಾಡಿದ ವಿಧಾನದ ಬಗ್ಗೆ ನನಗೆ ಅಸಮಧಾನವಿದೆ. ಪ್ರತಿಪಕ್ಷ ಸದಸ್ಯರು ಆಯ್ಕೆ ಪ್ರಕ್ರಿಯೆ ಭಾಗವಾಗಬೇಕಾದರೆ, ಅದನ್ನು ಸರಿಯಾಗಿ ಮಾಡಲಿ. ಆಗ ನಾವೇನಾದರು ಸಲಹೆ ನೀಡಲು ಸಾಧ್ಯ” ಎಂದು ಅಧೀರ್ ರಂಜನ್ ಚೌಧರಿ ಅಸಮಧಾನ ವ್ಯಕ್ತಪಡಿಸಿದ್ದಾರೆ.
“ನೀವು ಔಪಚಾರಿಕವಾಗಿ ನನ್ನನ್ನು ಸಮಿತಿಯಲ್ಲಿ, ಆಯ್ಕೆ ಪ್ರಕ್ರಿಯೆಯಲ್ಲಿ ಪರಿಗಣಿಸಿದ್ದೀರಿ. ನಾನೂ ಅದೇ ರೀತಿ ಪರಿಗಣಿಸಿದ್ದೇನೆ. ನನ್ನ ಭಿನ್ನಭಿಪ್ರಾಯವನ್ನು ದಾಖಲೆಗೆ ಸೇರಿಸುವಂತೆ ಕೇಳಿಕೊಂಡಿದ್ದೇನೆ. ಇಲ್ಲದಿದ್ದರೆ, ಅವರು ಕೊಟ್ಟ 212 ಅಧಿಕಾರಿಗಳ ಹೆಸರುಗಳನ್ನು ಕಡಿಮೆ ಅವಧಿಯಲ್ಲಿ ಪರಿಶೀಲಿಸಿದ ಅಭಿಪ್ರಾಯ ಹೇಳಲು ನಾನು ಜಾದುಗಾರನಲ್ಲ” ಎಂದು ಚೌಧರಿ ಕಿಡಿಕಾರಿದ್ದಾರೆ.
ಇದನ್ನೂ ಓದಿ : ಕೇಂದ್ರ ಚುನಾವಣಾ ಆಯುಕ್ತರಾಗಿ ಜ್ಞಾನೇಶ್ ಕುಮಾರ್, ಸುಖಬೀರ್ ಸಂಧು ಆಯ್ಕೆ


