ಮುಖ್ಯ ಚುನಾವಣಾ ಆಯುಕ್ತರಾದ ರಾಜೀವ್ ಕುಮಾರ್ ನೇತೃತ್ವದ ಭಾರತೀಯ ಚುನಾವಣಾ ಆಯೋಗ (ಇಸಿಐ) 2024ರ ಲೋಕಸಭಾ ಚುನಾವಣೆಯ ದಿನಾಂಕಗಳನ್ನು ಇಂದು ಪ್ರಕಟಿಸಿದೆ. ಚುನಾವಣಾ ವೇಳಾಪಟ್ಟಿಯ ಘೋಷಣೆಯು ರಾಜಕೀಯ ಬಿಸಿಯನ್ನು ತೀವ್ರಗೊಳಿಸಿದೆ.
ವಿರೋಧ ಪಕ್ಷಗಳು 2024ರ ಲೋಕಸಭಾ ಚುನಾವಣೆಗೆ ತಾವು ಸಿದ್ಧವಾಗಿದ್ದೇವೆ ಎಂದು ಒತ್ತಿಹೇಳಿವೆ. ಆದರೆ, ಏಳು ಹಂತಗಳಲ್ಲಿ ಚುನಾವಣೆ ನಡೆಸುತ್ತಿರುವುದನ್ನು ಪ್ರಶ್ನಿಸಿ, ಪ್ರಜಾಪ್ರಭುತ್ವವನ್ನು ಉಳಿಸಲು ಇದು ಕೊನೆಯ ಅವಕಾಶ ಎಂದು ಕಾಂಗ್ರೆಸ್ ಕರೆದಿದೆ.
ಲೋಕಸಭೆ ಚುನಾವಣೆ 2024 ಏಪ್ರಿಲ್ 19 ರಿಂದ ಪ್ರಾರಂಭವಾಗಿ ಜೂನ್ 1 ರಂದು ಮುಕ್ತಾಯಗೊಳ್ಳಲಿದೆ. ಒಟ್ಟು ಏಳು ಹಂತಗಳಲ್ಲಿ ನಡೆಯಲಿದೆ. ಲೋಕಸಭೆ ಚುನಾವಣೆ 2024 ಮತ್ತು ನಾಲ್ಕು ರಾಜ್ಯಗಳಿಗೆ 2024ರ ವಿಧಾನಸಭೆ ಚುನಾವಣೆಗಳ ಮತಗಳ ಎಣಿಕೆ ಜೂನ್ 4 ರಂದು ನಡೆಯಲಿದೆ.
ಪಶ್ಚಿಮ ಬಂಗಾಳದಲ್ಲಿ ಏಳು ಹಂತಗಳ ಚುನಾವಣೆಗೆ ಅಖಿಲ ಭಾರತ ತೃಣಮೂಲ ಕಾಂಗ್ರೆಸ್ (ಎಐಟಿಎಂಸಿ) ಆಕ್ಷೇಪ ವ್ಯಕ್ತಪಡಿಸಿದೆ. ಈ ರೀತಿಯ ಚುನಾವಣಾ ವ್ಯವಸ್ಥೆಯು ಭಾರತೀಯ ಜನತಾ ಪಕ್ಷಕ್ಕೆ (ಬಿಜೆಪಿ) ತನ್ನ ಹಣಬಲವನ್ನು ಚುನಾವಣೆಯಲ್ಲಿ ಬಳಸಲು ಸಹಾಯ ಮಾಡುತ್ತದೆ ಎಂದು ವಾಗ್ದಾಳಿ ನಡೆಸಿದೆ.
“ಒಂದು ಅಥವಾ ಎರಡು ಹಂತಗಳಲ್ಲಿ ಚುನಾವಣೆ ನಡೆಸುವಂತೆ ನಾವು ಚುನಾವಣಾ ಆಯೋಗವನ್ನು ಕೇಳಿದ್ದೇವೆ. ಆದರೆ, ಚುನಾವಣಾ ಸಮಿತಿಯು ಪಶ್ಚಿಮ ಬಂಗಾಳಕ್ಕೆ ಏಳು ಹಂತದ ಚುನಾವಣೆಯನ್ನು ಘೋಷಿಸಿದೆ; ಇದರಿಂದ ನಮಗೆ ತೃಪ್ತಿ ಇಲ್ಲ. ಚುನಾವಣಾ ಆಯೋಗವನ್ನು ಟೀಕಿಸದೆ, ಈ ರೀತಿಯ ಚುನಾವಣಾ ವ್ಯವಸ್ಥೆಯು ಚುನಾವಣಾ ಪ್ರಕ್ರಿಯೆಯಲ್ಲಿ ಬಿಜೆಪಿ ತನ್ನ ಹಣದ ಬಲವನ್ನು ಬಳಸಲು ಸಹಾಯ ಮಾಡುತ್ತದೆ ಎಂದು ನಾವು ಭಾವಿಸುತ್ತೇವೆ. ಅವರ ನಾಯಕರು ರಾಜ್ಯದಲ್ಲಿ ಸಾಧ್ಯವಾದಷ್ಟು ರ್ಯಾಲಿಗಳನ್ನು ನಡೆಸಲು ಸಾಧ್ಯವಾಗುತ್ತದೆ” ಎಂದು ಟಿಎಂಸಿಯ ಹಿರಿಯ ನಾಯಕಿ ಚಂದ್ರಿಮಾ ಭಟ್ಟಾಚಾರ್ಯ ಹೇಳಿದ್ದಾರೆ.
ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು, ಲೋಕಸಭೆ ಚುನಾವಣೆ 2024ಕ್ಕಾಗಿ ತಮ್ಮ ‘ನ್ಯಾಯ’ ಘೋಷಣೆಯನ್ನು ಪುನರುಚ್ಚರಿಸಿದರು. ‘ಪ್ರಜಾಪ್ರಭುತ್ವವನ್ನು ಉಳಿಸಲು ಇದು ಕೊನೆಯ ಅವಕಾಶ’ ಎಂದು ಕರೆದರು. “2024 ರ ಲೋಕಸಭೆ ಚುನಾವಣೆಯು ಭಾರತಕ್ಕೆ ‘ನ್ಯಾಯದ ಬಾಗಿಲು’ ತೆರೆಯುತ್ತದೆ. ಪ್ರಜಾಪ್ರಭುತ್ವ ಮತ್ತು ನಮ್ಮ ಸಂವಿಧಾನವನ್ನು ಸರ್ವಾಧಿಕಾರದಿಂದ ರಕ್ಷಿಸಲು ಇದು ಬಹುಶಃ ಕೊನೆಯ ಅವಕಾಶವಾಗಿದೆ. ದ್ವೇಷ, ಲೂಟಿ, ನಿರುದ್ಯೋಗ, ಬೆಲೆ ಏರಿಕೆ ಮತ್ತು ದೌರ್ಜನ್ಯಗಳ ವಿರುದ್ಧ ‘ಭಾರತದ ಜನರು ನಾವು’ ಒಟ್ಟಾಗಿ ಹೋರಾಡುತ್ತೇವೆ; ಹಾತ್ ಬದ್ಲೇಗಾ ಹಲಾತ್” ಎಂದು ಕಾಂಗ್ರೆಸ್ ಅಧ್ಯಕ್ಷರು ಹೇಳಿದರು.
“ನಾವು ಸಂಪೂರ್ಣವಾಗಿ ಸಿದ್ಧರಿದ್ದೇವೆ, ಮಹಾರಾಷ್ಟ್ರದಲ್ಲಿ ಐದು ಹಂತಗಳಲ್ಲಿ ಚುನಾವಣೆಗಳು ನಡೆಯಲಿವೆ. ಫಲಿತಾಂಶಗಳು ಅನುಕೂಲಕರವಾಗಿರುತ್ತದೆ ಎಂದು ನಾವು ಭಾವಿಸುತ್ತೇವೆ” ಎಂದು ಶಿವಸೇನೆ (ಯುಬಿಟಿ) ಸಂಸದ ಪ್ರಿಯಾಂಕಾ ಚತುರ್ವೇದಿ ಹೇಳಿದ್ದಾರೆ.
ಇದನ್ನೂ ಓದಿ; ಏ.19 ರಂದು ಅರುಣಾಚಲ-ಸಿಕ್ಕಿಂ; ಮೇ 13ರಂದು ಆಂಧ್ರ-ಒಡಿಶಾದಲ್ಲಿ ವಿಧಾನಸಭೆ ಚುನಾವಣೆ


