ಮಹಾರಾಷ್ಟ್ರದಲ್ಲಿ ಭಾರೀ ರಾಜಕೀಯ ಬೆಳವಣಿಗೆ ನಡೆದಿದ್ದು, ಲೋಕಸಭೆ ಚುನಾವಣೆಯಲ್ಲಿ ಪ್ರಕಾಶ್ ಅಂಬೇಡ್ಕರ್ ನೇತೃತ್ವದ ವಂಚಿತ್ ಬಹುಜನ ಅಘಾಡಿ (ವಿಬಿಎ) ಕಾಂಗ್ರೆಸ್ ಪಕ್ಷಕ್ಕೆ ಬೆಂಬಲವನ್ನು ಸೂಚಿಸಿದೆ.
ಪ್ರತಿಪಕ್ಷ ಶಿವಸೇನೆಯ ಉದ್ದವ್ ಬಣ ಮತ್ತು ಎನ್‌ಸಿಪಿಯ (ಶರದ್ ಪವಾರ್ ಬಣದ) ಮೇಲೆ ಅವಿಶ್ವಾಸ ವ್ಯಕ್ತಪಡಿಸಿದ ಪ್ರಕಾಶ್ ಅಂಬೇಡ್ಕರ್ ನೇತೃತ್ವದ ವಂಚಿತ್ ಬಹುಜನ ಅಘಾಡಿ, ಈ ಎರಡೂ ಪಕ್ಷಗಳಲ್ಲಿ ನಂಬಿಕೆಯನ್ನು ಕಳೆದುಕೊಂಡಿದ್ದೇವೆ, ಆದ್ದರಿಂದ ಕಾಂಗ್ರೆಸ್ ಸ್ಪರ್ಧಿಸುವ ಏಳು ಕ್ಷೇತ್ರಗಳಲ್ಲಿ ಬೆಂಬಲವನ್ನು ಸೂಚಿಸುತ್ತೇವೆ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ.
ಫ್ಯಾಸಿಸ್ಟ್, ವಿಭಜಕ, ಪ್ರಜಾಸತ್ತಾತ್ಮಕವಲ್ಲದ ಬಿಜೆಪಿ-ಆರೆಸ್ಸೆಸ್ ಸರ್ಕಾರವನ್ನು ಕಿತ್ತೊಗೆಯುವುದು ನಮ್ಮ ಪ್ರಧಾನ ಕಾರ್ಯಸೂಚಿಯಾಗಿದೆ. ಈ ಚಿಂತನೆಯೊಂದಿಗೆ ಮಹಾರಾಷ್ಟ್ರದ 7 ಸ್ಥಾನಗಳಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ಗೆ ವಂಚಿತ್ ಬಹುಜನ ಅಘಾಡಿಯ ಸಂಪೂರ್ಣ ಬೆಂಬಲವನ್ನು ನೀಡಲು ನಾನು ನಿರ್ಧರಿಸಿದ್ದೇನೆ. ನಿಮ್ಮ ಆಯ್ಕೆಯ ಈ 7ಸ್ಥಾನಗಳಲ್ಲಿ ನಿಮ್ಮ ಪಕ್ಷದ ಅಭ್ಯರ್ಥಿಗಳಿಗೆ ನಮ್ಮ ಪಕ್ಷ ಸಂಪೂರ್ಣ ಬೆಂಬಲವನ್ನು ಮತ್ತು ಸಹಕಾರವನ್ನು ನೀಡಲಿದ್ದಾರೆ ಎಂದು ಮಲ್ಲಿಕಾರ್ಜುನ ಖರ್ಗೆ ಅವರಿಗೆ ಬರೆದ ಪತ್ರದಲ್ಲಿ ಪ್ರಕಾಶ್ ಅಂಬೇಡ್ಕರ್ ಅವರು ತಿಳಿಸಿದ್ದಾರೆ.
ಎಂವಿಎ ಮತ್ತು ವಿಬಿಎ ನಡುವೆ ಹಲವು ಸುತ್ತಿನ ಮಾತುಕತೆ ನಡೆದಿದ್ದರೂ ಪಕ್ಷಗಳು ಒಮ್ಮತಕ್ಕೆ ಬಂದಿಲ್ಲ ಮತ್ತು ವಿಬಿಎಗೆ ನಾಲ್ಕು ಸ್ಥಾನಗಳನ್ನು ನೀಡುವ ಪ್ರಸ್ತಾಪದಿಂದ ಅಸಮಾಧಾನಗೊಂಡಿದೆ ಎಂದು ವರದಿಯಾಗಿದೆ. ಮಹಾರಾಷ್ಟ್ರದಲ್ಲಿ ಎರಡೂ ಪಕ್ಷಗಳು ಮೈತ್ರಿಯನ್ನು ಘೋಷಿಸಿದ ತಿಂಗಳ ನಂತರ ಠಾಕ್ರೆಯೊಂದಿಗೆ ಪ್ರಕಾಶ್ ಅಂಬೇಡ್ಕರ್ ಅವರಿಗೆ ಭಿನ್ನಾಭಿಪ್ರಾಯ ಬಂದಿದೆ.
ಪ್ರತಿಪಕ್ಷಗಳ ಮೈತ್ರಿಕೂಟವಾದಿ ಮಹಾ ವಿಕಾಸ್ ಅಘಾಡಿಯನ್ನು 2019ರ ವಿಧಾನ ಸಭೆ ಚುನಾವಣೆಗಳ ಬಳಿಕ ರೂಪಿಸಲಾಯಿತು. ಈ ಮೈತ್ರಿಕೂಟ ಮುಖ್ಯವಾಗಿ ಶಿವಸೇನೆಯ ಉದ್ಧವ್ ಠಾಕ್ರೆ ಬಣ, ಕಾಂಗ್ರೆಸ್ ಹಾಗೂ ಶರದ್ ಪವಾರ್ ಅವರ ಎನ್ಸಿಪಿ ಬಣವನ್ನು ಒಳಗೊಂಡಿದೆ. ಜನವರಿಯಲ್ಲಿ ಶಿವಸೇನೆ(ಉದ್ಧವ್ ಬಣ) ಸಂಸದ ಸಂಜಯ್ ರಾವತ್ ಅವರು ವಂಚಿತ್ ಬಹುಜನ ಅಘಾಡಿಯನ್ನು ಮೈತ್ರಿಕೂಟಕ್ಕೆ ಸೇರಲಿದೆ ಎಂದು ಹೇಳಿದ್ದರು. ಆದರೆ ಇದೀಗ ವಂಚಿತ್ ಬಹುಜನ ಅಘಾಡಿ ಕಾಂಗ್ರೆಸ್‌ಗೆ ಮಾತ್ರ ಬೆಂಬಲವನ್ನು ಸೂಚಿಸಿದೆ.
ಇದನ್ನು ಓದಿ: ಮೋದಿ ರೋಡ್‌ಶೋ ವೇಳೆ ನೀತಿ ಸಂಹಿತೆ ಉಲ್ಲಂಘನೆ: ಕೇಸರಿ ಬಟ್ಟೆ ಧರಿಸಿ ಶಾಲಾ ಮಕ್ಕಳು ಭಾಗಿ


