ಆಪಾದಿತ ಅಬಕಾರಿ ನೀತಿ ಹಗರಣ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ (ಇಡಿ) ತನ್ನನ್ನು ಬಂಧಿಸಿ 6 ದಿನಗಳ ಕಾಲ ಕಸ್ಟಡಿಗೆ ಪಡೆದಿರುವುದನ್ನು ಪ್ರಶ್ನಿಸಿ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ದೆಹಲಿ ಹೈಕೋರ್ಟ್ ಮೊರೆ ಹೋಗಿದ್ದಾರೆ.
ಮಾರ್ಚ್ 21ರಂದು ರಾತ್ರಿ 9 ಗಂಟೆಯ ಸುಮಾರಿಗೆ ಕೇಜ್ರಿವಾಲ್ ಅವರನ್ನು ಇಡಿ ಅಧಿಕಾರಿಗಳು ಬಂಧಿಸಿದ್ದರು. ನಿನ್ನೆ(ಮಾ.22) ವಿಚಾರಣಾ ನ್ಯಾಯಾಲಯ ಅವರನ್ನು ಮಾರ್ಚ್ 28ರವರೆಗೆ ಇಡಿ ಕಸ್ಟಡಿಗೆ ನೀಡಿದೆ.
ಆಮ್ ಆದ್ಮಿ ಪಕ್ಷದ ಕಾನೂನು ತಂಡದ ಪ್ರಕಾರ, ಕೇಜ್ರಿವಾಲ್ ಅವರ ಬಂಧನ ಮತ್ತು ರಿಮಾಂಡ್ ಕಾನೂನುಬಾಹಿರವಾಗಿದೆ. ಹೀಗಾಗಿ, ಕೇಜ್ರಿವಾಲ್ ಅವರು ತಕ್ಷಣವೇ ಬಿಡುಗಡೆ ಮಾಡಲು ಅರ್ಹರಾಗಿದ್ದಾರೆ ಎಂದು ಹೈಕೋರ್ಟ್‌ಗೆ ಸಲ್ಲಿಸಿದ ಅರ್ಜಿಯಲ್ಲಿ ತಿಳಿಸಲಾಗಿದೆ.
ಈ ವಿಷಯವನ್ನು ತುರ್ತು ವಿಚಾರಣೆಗೆ ಪಟ್ಟಿ ಮಾಡುವಂತೆ ಕೇಜ್ರಿವಾಲ್ ಪರ ವಕೀಲರು ನ್ಯಾಯಾಲಯವನ್ನು ಕೋರಿದ್ದಾರೆ.
ಮಾರ್ಚ್ 21ರಂದು ಕೇಜ್ರಿವಾಲ್ ಅವರನ್ನು ಬಂಧಿಸಿದ್ದ ಇಡಿ, ಮರುದಿನ ವಿಚಾರಣಾ ನ್ಯಾಯಾಲಯಕ್ಕೆ ಹಾಜರುಪಡಿಸಿತ್ತು. ಇಡಿಯ ಬಲವಂತದ ಕ್ರಮದಿಂದ ರಕ್ಷಣೆ ನೀಡಲು ದೆಹಲಿ ಹೈಕೋರ್ಟ್ ನಿರಾಕರಿಸಿದ ಬಳಿಕ ಕೇಜ್ರಿವಾಲ್ ಅವರನ್ನು ಇಡಿ ಬಂಧಿಸಿತ್ತು.
ಇದಕ್ಕೂ ಮುನ್ನ, ಆಪಾದಿತ ದೆಹಲಿ ಅಬಕಾರಿ ನೀತಿ ಹಗರಣ ಪ್ರಕರಣಕ್ಕೆ ಸಂಬಂಧಪಟ್ಟಂತೆ ವಿಚಾರಣೆಗೆ ಹಾಜರಾಗಲು ಇಡಿ ನೀಡಿದ್ದ 9 ಸಮನ್ಸ್‌ಗಳನ್ನು ತಿರಸ್ಕರಿಸಿದ್ದರು.
ಆಮ್ ಆದ್ಮಿ ಪಕ್ಷದ ನಾಯಕರಾದ ಮನೀಶ್ ಸಿಸೋಡಿಯಾ ಮತ್ತು ಸಂಜಯ್ ಸಿಂಗ್ ಕೂಡ ಅಬಕಾರಿ ನೀತಿ ಹಗರಣ ಪ್ರಕರಣದಲ್ಲಿ ಆರೋಪಿಗಳಾಗಿದ್ದು, ಪ್ರಸ್ತುತ ನ್ಯಾಯಾಂಗ ಬಂಧನದಲ್ಲಿದ್ದಾರೆ.
ಕೇಜ್ರಿವಾಲ್ ಅವರನ್ನು ಇಡಿ ಬಂಧಿಸಿದ್ದನ್ನು ಪ್ರಶ್ನಿಸಿ ಮಾರ್ಚ್ 21ರಂದು ರಾತ್ರಿಯೇ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಲಾಗಿತ್ತು. ಆದರೆ, ಅದನ್ನು ಮರುದಿನ ಬೆಳಿಗ್ಗೆ ವಾಪಸ್ ಪಡೆದಿದ್ದರು.
ಇಡಿ ಸಮನ್ಸ್ ನೀಡಿರುವುದನ್ನು ಪ್ರಶ್ನಿಸಿ ಈ ಹಿಂದೆ ಕೇಜ್ರಿವಾಲ್ ದೆಹಲಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಮಧ್ಯಂತರ ರಕ್ಷಣೆ ಕೋರಿಯೂ ಅರ್ಜಿ ಸಲ್ಲಿಸಿದ್ದರು. ಈ ಪ್ರಕರಣವನ್ನು ಏಪ್ರಿಲ್ 22 ರಂದು ವಿಚಾರಣೆಗೆ ನಿಗದಿಪಡಿಸಲಾಗಿದೆ.
ಇದಕ್ಕೂ ಮುನ್ನ ಇಡಿ ಕೇಜ್ರಿವಾಲ್ ವಿರುದ್ಧ ದೆಹಲಿಯ ರೌಸ್ ಅವೆನ್ಯೂ ಕೋರ್ಟ್‌ನಲ್ಲಿ ಎರಡು ಕ್ರಿಮಿನಲ್ ದೂರುಗಳನ್ನು ದಾಖಲಿಸಿತ್ತು. ಕೇಜ್ರಿವಾಲ್ ಸಮನ್ಸ್‌ಗಳನ್ನು ಪಾಲಿಸಿಲ್ಲ ಎಂದು ಆರೋಪಿಸಿತ್ತು. ಕೇಜ್ರಿವಾಲ್ ಅವರು ಸಮನ್ಸ್‌ಗಳನ್ನು ಕಾನೂನುಬಾಹಿರ ಎಂದು ಪ್ರತಿಪಾದಿಸಿದ್ದರು.
ಇದನ್ನೂ ಓದಿ : ಕೇಜ್ರಿವಾಲ್‌ಗೆ ಮಾ.28ರವರೆಗೆ ED ಕಸ್ಟಡಿ: ದೆಹಲಿ ಸಿಎಂನ್ನು ಅಬಕಾರಿ ನೀತಿ ಹಗರಣದ ‘ಕಿಂಗ್‌ಪಿನ್’ ಎಂದು ವಾದಿಸಿದ ಜಾರಿ ನಿರ್ದೇಶನಾಲಯ


