ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಬಂಧನ ಬಿಜೆಪಿಯ ಶವಪಟ್ಟಿಗೆಗಿರುವ ಕೊನೆಯ ಮೊಳೆ, ಎಎಪಿಯ ಉಪವಾಸ ಸತ್ಯಾಗ್ರಹ ಬಿಜೆಪಿಗರ ನಿದ್ದೆಗೆಡಿಸಿದೆ ಎಂದು ಎಎಪಿ ಹೇಳಿಕೊಂಡಿದೆ.
ಅರವಿಂದ್ ಕೇಜ್ರಿವಾಲ್ ಅವರ ಬಂಧನವನ್ನು ಖಂಡಿಸಿ ಎಎಪಿಯ ಹಿರಿಯ ನಾಯಕರು, ದೆಹಲಿ ಕ್ಯಾಬಿನೆಟ್ ಮಂತ್ರಿಗಳು ಮತ್ತು ಶಾಸಕರು ಭಾನುವಾರ ಜಂತರ್ ಮಂತರ್‌ನಲ್ಲಿ ಸಾಮೂಹಿಕವಾಗಿ ಉಪಾಸ ಕೈಗೊಂಡಿದ್ದರು. ಈ ವೇಳೆ ಬಿಜೆಪಿ ಸರ್ವಾಧಿಕಾರ ಧೋರಣೆಯನ್ನು ತೋರುತ್ತಿದೆ. ಮುಂಬರುವ ಲೋಕಸಭೆ ಚುನಾವಣೆಯಲ್ಲಿ “ಜನರು ತಮ್ಮ ಮತಗಳ ಮೂಲಕ ಇದಕ್ಕೆ ಉತ್ತರ ನೀಡಲಿದ್ದಾರೆ ಎಂದು ಹೇಳಿದ್ದಾರೆ. .
ಬೆಳಿಗ್ಗೆ 11 ಗಂಟೆಗೆ ಉಪವಾಸ ಸತ್ಯಾಗ್ರಹವನ್ನು ಆರಂಭಿಸಿದ್ದರು. ಪ್ರತಿಭಟನೆಯಲ್ಲಿ ದೆಹಲಿ ವಿಧಾನಸಭಾ ಸ್ಪೀಕರ್ ರಾಮ್ ನಿವಾಸ್ ಗೋಯೆಲ್, ಉಪ ಸ್ಪೀಕರ್ ರಾಖಿ ಬಿರ್ಲಾ, ಕ್ಯಾಬಿನೆಟ್ ಸಚಿವರಾದ ಗೋಪಾಲ್ ರೈ, ಸೌರಭ್ ಭಾರದ್ವಾಜ್, ಅತಿಶಿ, ಕೈಲಾಶ್ ಗಹ್ಲೋಟ್, ಇಮ್ರಾನ್ ಹುಸೇನ್, ರಾಜ್ಯಸಭಾ ಸಂಸದ ಸಂಜಯ್ ಸಿಂಗ್ ಮತ್ತು ಮೇಯರ್ ಶೆಲ್ಲಿ ಒಬೆರಾಯ್ ಸೇರಿದಂತೆ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು.
ದೆಹಲಿಯ ಸಚಿವೆ ಪ್ರತಿಭಟನೆಯ ವೇಳೆ ಮಾತನಾಡಿದ್ದು, ಬಿಜೆಪಿ ಸರ್ವಾಧಿಕಾರವನ್ನು ಆಶ್ರಯಿಸುತ್ತಿದೆ. ಎಎಪಿಯ ಉಪವಾಸವು ಬಿಜೆಪಿಗೆ “ನಿದ್ರೆಯಿಲ್ಲದ ರಾತ್ರಿಗಳನ್ನು” ನೀಡುತ್ತಿದೆ. ಕೇಜ್ರಿವಾಲ್ ಬಂಧನವು ಬಿಜೆಪಿಯ ಶವಪೆಟ್ಟಿಗೆಗೆ ಕೊನೆಯ ಮೊಳೆ ಎಂದು ಸಾಬೀತುಪಡಿಸುತ್ತದೆ. ಸ್ವಾತಂತ್ರ್ಯದ ಮೊದಲು, ಮಹಾತ್ಮರ ಉಪವಾಸವು ಭಾರತದಲ್ಲಿ ಬ್ರಿಟಿಷ್ ಆಳ್ವಿಕೆಯ ಅಡಿಪಾಯವನ್ನು ಅಲ್ಲಾಡಿಸಿತು. ಇಂದು ಎಎಪಿಯ ಈ ಉಪವಾಸ ಬಿಜೆಪಿಯ ಸರ್ವಾಧಿಕಾರಿ ಆಡಳಿತವನ್ನು ಕಸಿದುಕೊಳ್ಳಲಿದೆ. ಈ ದೇಶ ಈಗ ಎಚ್ಚೆತ್ತುಕೊಂಡಿದೆ, ಸರ್ವಾಧಿಕಾರಿಯ ಅಂತ್ಯ ಹತ್ತಿರವಾಗಿದೆ ಎಂದು ಹೇಳಿದ್ದಾರೆ.
ದೆಹಲಿ ಅಬಕಾರಿ ಪ್ರಕರಣದಲ್ಲಿ ಇತ್ತೀಚೆಗೆ ಸುಪ್ರೀಂ ಕೋರ್ಟ್‌ನಿಂದ ಜಾಮೀನು ಪಡೆದಿರುವ ಸಂಜಯ್ ಸಿಂಗ್ ಮಾತನಾಡಿ, ಸುಳ್ಳು ಸಾಕ್ಷಿಗಳ ಸಹಾಯದಿಂದ ಅಮಾಯಕನನ್ನು ನಕಲಿ ಪ್ರಕರಣದಲ್ಲಿ ಜೈಲಿಗೆ ಹಾಕಲಾಗಿದೆ ಎಂದು ಹೇಳಿದರು. ಕೇಜ್ರಿವಾಲ್ ಅವರನ್ನು ಬೆಂಬಲಿಸಿ ದೇಶದಲ್ಲಿ ಮಾತ್ರವಲ್ಲದೆ ವಿಶ್ವದ ವಿವಿಧ ಸ್ಥಳಗಳಲ್ಲಿ ಪ್ರತಿಭಟನೆಗಳು ನಡೆಯುತ್ತಿವೆ. ಇದು ನಮ್ಮ ದೊಡ್ಡ ಸಾಧನೆ, ಸರ್ವಾಧಿಕಾರಿ ಸರ್ಕಾರದ ವಿರುದ್ಧ ನಮ್ಮ ಸಂದೇಶ ಜನರಿಗೆ ತಲುಪುತ್ತಿದೆ. ನಿಜವಾದ ಮದ್ಯದ ಹಗರಣವನ್ನು ಬಿಜೆಪಿ ಮಾಡಿದ್ದು, ಅದರ ಹಣದ ಜಾಡು ಕೂಡ ಪತ್ತೆಯಾಗಿದೆ. ಕೇಂದ್ರೀಯ ತನಿಖಾ ದಳ (ಸಿಬಿಐ), ಜಾರಿ ನಿರ್ದೇಶನಾಲಯ (ಇಡಿ) ಮತ್ತು ಆದಾಯ ತೆರಿಗೆ (ಐಟಿ) ಇಲಾಖೆ ಬಿಜೆಪಿ ನಾಯಕರ ವಿರುದ್ಧ ತನಿಖೆ ನಡೆಸಬೇಕು ಎಂದು ಸಿಂಗ್ ಹೇಳಿದ್ದಾರೆ. ಪಕ್ಷದ ಕಾರ್ಯಕರ್ತರು ಈಗ ಎಎಪಿಯ ಸಂದೇಶವನ್ನು ತಲುಪಿಸಲು ಮನೆ- ಮನೆಗೆ ತೆರಳುತ್ತಾರೆ ಎಂದು ಹೇಳಿದ್ದಾರೆ.
ಪ್ರಕರಣದ ತನಿಖೆ ನಡೆಸುತ್ತಿರುವ ‘ಸಿಬಿಐ’ ಮತ್ತು ‘ಇಡಿ’ಯ 456 ಸಾಕ್ಷಿಗಳಲ್ಲಿ ಕೇವಲ ನಾಲ್ವರು ಎಎಪಿ ರಾಷ್ಟ್ರೀಯ ಸಂಚಾಲಕರ ಹೆಸರನ್ನು ಉಲ್ಲೇಖಿಸಿದ್ದಾರೆ. ಈ ಸಾಕ್ಷಿಗಳು ಯಾವ ಸಂದರ್ಭದಲ್ಲಿ ಕೇಜ್ರಿವಾಲ್ ಹೆಸರನ್ನು ಹೇಳಿದ್ದಾರೆ ಎಂಬುವುದು ಜನರಿಗೆ ಚೆನ್ನಾಗಿ ತಿಳಿದಿದೆ ಎಂದು ಹೇಳಿದ್ದಾರೆ.
ಪ್ರತಿಭಟನೆಯ ವೇಳೆ ಭಗತ್ ಸಿಂಗ್, ಡಾ ಬಿಆರ್ ಅಂಬೇಡ್ಕರ್ ಮತ್ತು ಮಹಾತ್ಮ ಗಾಂಧಿಯವರ ಫೋಟೋಗಳನ್ನು ಹಾಕಿ ಅವರಿಗೆ ಪುಷ್ಪ ನಮನ ಸಲ್ಲಿಸಲಾಗಿದೆ. ಎಎಪಿ ಕಾರ್ಯಕರ್ತರು ದೇಶಭಕ್ತಿ ಗೀತೆಗಳನ್ನು ಹಾಡುತ್ತಾ, ಕವಿತೆಗಳನ್ನು ಓದುತ್ತಾ, ಕೇಜ್ರಿವಾಲ್ ಅವರ ಪೋಟೋಗಳನ್ನು ಪ್ರದರ್ಶಿಸಿದ್ದಾರೆ. ಎಎಪಿ ರಾಜ್ಯ ಘಟಕಗಳಿಂದ ಇತರ ರಾಜ್ಯಗಳಲ್ಲಿ ಕೂಡ ಇದೇ ರೀತಿಯ ಪ್ರತಿಭಟನೆಗಳು ನಡೆದಿದೆ.
ಇದನ್ನು ಓದಿ: ಇಸ್ರೇಲ್‌ನ ಯಾವುದೇ ರಾಯಭಾರಿ ಕಚೇರಿಗಳು ಇನ್ನು ಸುರಕ್ಷಿತವಾಗಿರಲ್ಲ: ಪ್ರತಿಕಾರದ ಎಚ್ಚರಿಕೆ ನೀಡಿದ ಇರಾನ್


