2023ರಲ್ಲಿ ವಿಶ್ವದಾದ್ಯಂತ ಕೊಲ್ಲಲ್ಪಟ್ಟ 99 ಪತ್ರಕರ್ತರು ಮತ್ತು ಮಾದ್ಯಮ ಕಾರ್ಯಕರ್ತರಲ್ಲಿ ಮುಕ್ಕಾಲು ಭಾಗದಷ್ಟು ಜನರು ಇಸ್ರೇಲ್-ಗಾಝಾ ಯುದ್ಧದಲ್ಲಿ ಸಾವನ್ನಪ್ಪಿದ್ದಾರೆ ಎಂದು ಪತ್ರಕರ್ತರನ್ನು ರಕ್ಷಿಸುವ ಸಮಿತಿ (ಸಿಪಿಜೆ) ತಿಳಿಸಿದ್ದು, ಇಸ್ರೇಲ್ ಗಾಝಾದಲ್ಲಿ ನಡೆಸಿರುವ ಹತ್ಯಾಕಾಂಡದಲ್ಲಿ ಪತ್ರಕರ್ತರು ಕೂಡ ಹೆಚ್ಚಿನ ಸಂಖ್ಯೆಯಲ್ಲಿ ಸಂತ್ರಸ್ತರಾಗಿದ್ದಾರೆ ಎಂಬವುದನ್ನು ವರದಿಯು ಬಹಿರಂಗಪಡಿಸಿದೆ.
ಇದಲ್ಲದೆ 2023ರ ಇಡೀ ವರ್ಷದಲ್ಲಿ ಹತ್ಯೆಗೀಡಾದ ಪತ್ರಕರ್ತರಿಗಿಂತ ಮೂರು ತಿಂಗಳಲ್ಲಿ ಸಂಘರ್ಷವು ಗಾಝಾದಲ್ಲಿ ಹೆಚ್ಚು ಪತ್ರಕರ್ತರನ್ನು ಬಲಿ ತೆಗೆದುಕೊಂಡಿದೆ ಎಂದು CPJ ವರದಿ ಹೇಳಿದೆ. ಗಾಝಾದಲ್ಲಿ ನಾಗರಿಕರಲ್ಲದೆ ಅನೇಕ ಪತ್ರಕರ್ತರನ್ನು ಮತ್ತು ಅವರ ಕುಟುಂಬಸ್ಥರನ್ನು ಕೊಲ್ಲಲಾಯಿತು, ಆದರೆ ಇಸ್ರೇಲ್ ಮಿಲಿಟರಿ ಅಧಿಕಾರಿಗಳು ಪತ್ರಕರ್ತರನ್ನು ಗುರಿಯಾಗಿಸಿಕೊಂಡಿರುವುದನ್ನು ನಿರಾಕರಿಸಿದ್ದಾರೆ ಮತ್ತು ಪತ್ರಕರ್ತರ ಹತ್ಯೆಗಳ ಬಗ್ಗೆ ಪ್ರಶ್ನಿಸಿದಾಗ ಅಲ್ಪ ಮಾಹಿತಿಯನ್ನು ಮಾತ್ರ ನೀಡಿದ್ದಾರೆ ಎಂದು ಹೇಳಿದ್ದಾರೆ.
1997ರಿಂದ 2023ರವರೆಗೆ ಪತ್ರಕರ್ತರ ಹತ್ಯೆಗಳು ವರದಿಯಾದ ದೇಶಗಳಲ್ಲಿ ಭಾರತವು ಸೇರಿದೆ. ಪಟ್ಟಿಯಲ್ಲಿರುವ ಇತರ ದೇಶಗಳಲ್ಲಿ ಇರಾಕ್, ಫಿಲಿಪೈನ್ಸ್, ಮೆಕ್ಸಿಕೊ, ಪಾಕಿಸ್ತಾನ ಮತ್ತು ಸೊಮಾಲಿಯಾ ಸೇರಿವೆ ಎಂದು ವರದಿ ಉಲ್ಲೇಖಿಸಿದೆ.
2023ರ ಜಾಗತಿಕವಾಗಿ ಪತ್ರಕರ್ತರ ಒಟ್ಟು ಸಾವಿನ ಅಂಕಿ-ಅಂಶಗಳು 2015ರಿಂದ ಅತ್ಯಧಿಕವಾಗಿದೆ ಮತ್ತು 2022ರಿಂದ ಸುಮಾರು 44% ಏರಿಕೆಯಾಗಿದೆ. ವರದಿಯ ಪ್ರಕಾರ, ಈ ಸಾವುಗಳು ಪತ್ರಕರ್ತರ ಕರ್ತವ್ಯಕ್ಕೆ ಸಂಬಂಧಿಸಿದೆ, ಪ್ರಸ್ತುತ 8 ಹೆಚ್ಚುವರಿ ಪ್ರಕರಣಗಳು ತನಿಖೆಯಲ್ಲಿವೆ ಎಂದು ವರದಿ ಉಲ್ಲೇಖಿಸಿದೆ.
ಗಾಝಾ, ಇಸ್ರೇಲ್ ಮತ್ತು ಲೆಬನಾನ್‌ನಲ್ಲಿನ ಸಾವುಗಳನ್ನು ಹೊರತುಪಡಿಸಿದರೆ, 2022ಕ್ಕೆ ಹೋಲಿಸಿದರೆ ಪತ್ರಕರ್ತರ ಹತ್ಯೆಗಳು ಗಮನಾರ್ಹವಾಗಿ ಕಡಿಮೆಯಾಗಿದೆ. 2022ರಲ್ಲಿ CPJ ಒಟ್ಟು 69 ಸಾವುಗಳನ್ನು ಪತ್ತೆಹಚ್ಚಿದೆ. ಅದರಲ್ಲಿ 43 ವೃತ್ತಿಗೆ ಸಂಬಂಧಿಸಿದ ಹತ್ಯೆ ನಡೆದಿದೆ ಎಂದು ವರದಿ ಉಲ್ಲೇಖಿಸಿದೆ.
ಆದರೆ, ಇಳಿಮುಖವಾಗುತ್ತಿರುವ ಪತ್ರಕರ್ತರ ಸಾವಿನ ಸಂಖ್ಯೆಯು ಪ್ರಪಂಚದ ಇತರ ಭಾಗಗಳಲ್ಲಿ ಪತ್ರಿಕೋದ್ಯಮವು ಸುರಕ್ಷಿತವಾಗಿದೆ ಎಂಬುವುದರ ಸೂಚನೆಯಲ್ಲ. ವಾಸ್ತವವಾಗಿ ಪತ್ರಕರ್ತರ ವಾರ್ಷಿಕ ಜೈಲು ಜನಗಣತಿ, ಪತ್ರಿಕಾ ಸ್ವಾತಂತ್ರ್ಯದ ಪರಿಸ್ಥಿತಿಗಳ ಬಗೆಗಿನ ಪ್ರಮುಖ ಸೂಚಕ 2022ರ ದಾಖಲೆಯ ಗರಿಷ್ಠ ಮಟ್ಟಕ್ಕೆ ಹತ್ತಿರದಲ್ಲಿದೆ ಎಂದು ವರದಿಯು ತಿಳಿಸಿದೆ.
ಏಷ್ಯಾದಲ್ಲಿ ಅತಿಹೆಚ್ಚು ಸಂಖ್ಯೆಯಲ್ಲಿ ಪತ್ರಕರ್ತರು ಜೈಲಿನಲ್ಲಿದ್ದಾರೆ ಎಂದು ವರದಿಯು ತಿಳಿಸಿದೆ. ಸಿಪಿಜೆ 2023ರ ಜೈಲು ಜನಗಣತಿಯಲ್ಲಿ ಭಾರತದಲ್ಲಿ 7 ಪತ್ರಕರ್ತರನ್ನು ಮೌನಗೊಳಿಸಲು ಕಾನೂನುಬಾಹಿರ ಚಟುವಟಿಕೆಗಳ ತಡೆಗಟ್ಟುವಿಕೆ ಕಾಯಿದೆ (UAPA) ಮತ್ತು ಜಮ್ಮು ಮತ್ತು ಕಾಶ್ಮೀರ ಸಾರ್ವಜನಿಕ ಸುರಕ್ಷತಾ ಕಾಯಿದೆಗಳನ್ನು ಬಳಸಲಾಗಿದೆ ಎಂದು ಸೂಚಿಸುತ್ತದೆ.
ಇದನ್ನು ಓದಿ: ರಾರಾಜಿಸಿದ ಮೋದಿ: ನಿರಾಶೆಗೊಳಿಸಿದ ಬಿಜೆಪಿ ಪ್ರಣಾಳಿಕೆ


