ಗುಜರಾತ್‌ನ ಸೂರತ್ ಲೋಕಸಭೆ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯ ನಾಮಪತ್ರವನ್ನು ತಿರಸ್ಕರಿಸಲಾಗಿದ್ದು, ಇದನ್ನು ಪ್ರಶ್ನಿಸಿ ಕಾಂಗ್ರೆಸ್ ಹೈಕೋರ್ಟ್ ಮೊರೆ ಹೋಗಲು ನಿರ್ಧರಿಸಿದೆ.
ಸೂರತ್ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ನೀಲೇಶ ಕುಂಭಾನಿಯವರ ನಾಮಪತ್ರವನ್ನು ಸಹಿಯಲ್ಲಿನ ವ್ಯತ್ಯಾಸದ ಕಾರಣ ನೀಡಿ ಭಾನುವಾರ ತಿರಸ್ಕರಿಸಲಾಗಿದೆ. ಸೂರತ್ ಜಿಲ್ಲಾ ಚುನಾವಣಾ ಅಧಿಕಾರಿ (ಡಿಇಒ) ಮತ್ತು ಜಿಲ್ಲಾಧಿಕಾರಿ ಸೌರಭ್ ಪರ್ಘಿ ಅವರು ಭಾನುವಾರ ನಾಮಪತ್ರದಲ್ಲಿ ಮೂವರು ಅನುಮೋದಕರ ಸಹಿಗಳಲ್ಲಿ ವ್ಯತ್ಯಾಸದ ಕಾರಣವನ್ನು ನೀಡಿ ನೀಲೇಶ್ ಕುಂಭಾನಿ ಅವರ ನಾಮಪತ್ರವನ್ನು ತಿರಸ್ಕರಿಸಿದ್ದಾರೆ. ಸೂರತ್‌ನ ಕಾಂಗ್ರೆಸ್‌ನ ಬದಲಿ ಅಭ್ಯರ್ಥಿ ಸುರೇಶ್ ಪಡಸಾಲ ಅವರ ನಾಮಪತ್ರವನ್ನು ಕೂಡ ಇದೇ ಕಾರಣ ನೀಡಿ ರದ್ದುಗೊಳಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪಕ್ಷದ ಅಭ್ಯರ್ಥಿಯ ನಾಮಪತ್ರ ತಿರಸ್ಕಾರಗೊಂಡ ಬಗ್ಗೆ ಆಕ್ರೋಶಗೊಂಡ ಕಾಂಗ್ರೆಸ್, ಇದರಲ್ಲಿ ಆಡಳಿತಾರೂಢ ಬಿಜೆಪಿಯ ಕೈವಾಡ ಎಂದು ಆರೋಪಿಸಿದೆ ಮತ್ತು ಕ್ಷೇತ್ರದ ಚುನಾವಣೆಗೆ ತಡೆಯಾಜ್ಞೆ ನೀಡಲು ಗುಜರಾತ್ ಹೈಕೋರ್ಟ್ ಮೊರೆ ಹೋಗಲು ನಿರ್ಧರಿಸಿದೆ. ಚುನಾವಣೆಗಳಲ್ಲಿ ಸೋಲನ್ನು ಗ್ರಹಿಸಿ ಆತಂಕಗೊಂಡಿರುವ ಬಿಜೆಪಿಯ ಸೂರತ್ ಲೋಕಸಭಾ ಕ್ಷೇತ್ರದಲ್ಲಿ ಪಕ್ಷದ ಅಭ್ಯರ್ಥಿ ನೀಲೇಶ ಕುಂಭಾನಿಯವರ ನಾಮಪತ್ರವನ್ನು ತಿರಸ್ಕರಿಸಲಾಗಿದೆ ಎಂದು ಗುಜರಾತ್ ಕಾಂಗ್ರೆಸ್ ಅಧ್ಯಕ್ಷ ಶಕ್ತಿಸಿಂಹ ಗೋಹಿಲ್ ಆರೋಪಿಸಿದ್ದು, ಇದು ಪ್ರಜಾಪ್ರಭುತ್ವದ ಕಗ್ಗೊಲೆ ಎಂದು ಹೇಳಿದ್ದಾರೆ. ಈ ಆದೇಶದ ವಿರುದ್ಧ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸುತ್ತೇವೆ ಮತ್ತು ಅಗತ್ಯವಿದ್ದರೆ ಸುಪ್ರೀಂ ಕೋರ್ಟ್‌ನ ಬಾಗಿಲು ತಟ್ಟುತ್ತೇವೆ ಎಂದು ಗೋಹಿಲ್ ಹೇಳಿದ್ದು, ಚುನಾವಣಾಧಿಕಾರಿಯು ಫೋರೆನ್ಸಿಕ್ ತಜ್ಞರ ಸಹಾಯವನ್ನು ಪಡೆಯಬೇಕು ಎಂದು ಹೇಳಿದ್ದಾರೆ.
ನೀಲೇಶ್ ಕುಂಭಾಣಿ ಅವರ ನಾಮಪತ್ರಕ್ಕೆ ಸಹಿ ಮಾಡಿಲ್ಲ ಎಂದು ಮೂವರು ಅನುಮೋದಕರು ಜಿಲ್ಲಾ ಚುನಾವಣಾಧಿಕಾರಿಗೆ ಅಫಿಡವಿಟ್‌ನಲ್ಲಿ ಹೇಳಿದ್ದಾರೆ ಎನ್ನಲಾಗಿದೆ. ಇದೇರೀತಿ ಸೂರತ್‌ನ ಕಾಂಗ್ರೆಸ್‌ನ ಬದಲಿ ಅಭ್ಯರ್ಥಿ ಸುರೇಶ್ ಪಡಸಾಲ ಅವರ ಅನುಮೋದಕರು ಕೂಡ ನಾಮಪತ್ರದಲ್ಲಿ ಸಹಿ ಮಾಡಿರುವುದನ್ನು ನಿರಾಕರಿಸಿದ್ದಾನೆ ಎನ್ನಲಾಗಿದೆ.
ಗುಜರಾತ್‌ನ ಎಲ್ಲಾ 26 ಲೋಕಸಭಾ ಸ್ಥಾನಗಳಿಗೆ ಮೇ 7 ರಂದು ಮೂರನೇ ಹಂತದಲ್ಲಿ ಮತದಾನ ನಡೆಯಲಿದೆ. ನಾಮಪತ್ರ ಸಲ್ಲಿಸಲು ಕೊನೆಯ ದಿನಾಂಕ ಏಪ್ರಿಲ್ 19 ಆಗಿತ್ತು.
ಈ ಕುರಿತು ಪ್ರತಿಕ್ರಿಯಿಸಿದ ಚುನಾವಣಾಧಿಕಾರಿ ಸೌರಭ್, ಕುಂಭಣಿ ಮತ್ತು ಪಡಸಾಲ ಅವರು ಸಲ್ಲಿಸಿದ್ದ ನಾಮಪತ್ರದಲ್ಲಿ ಅನುಮೋದಕರ ಸಹಿಯಲ್ಲಿ ವ್ಯತ್ಯಾಸ ಕಂಡು ಬಂದಿದ್ದು, ಅವು ಅಸಲಿ ಎಂದು ತೋರದ ಹಿನ್ನೆಲೆಯಲ್ಲಿ ತಿರಸ್ಕರಿಸಲಾಗಿದೆ ಎಂದು ತಿಳಿಸಿದ್ದಾರೆ.
ಇದನ್ನು ಓದಿ: ಮುಸ್ಲಿಂ ಸಮುದಾಯದ ಬಗ್ಗೆ ಪ್ರಧಾನಿ ದ್ವೇಷ ಭಾಷಣ: ಮೋದಿ ವಿರುದ್ಧ ರಾಹುಲ್, ಖರ್ಗೆ ಸೇರಿ ಪ್ರತಿಪಕ್ಷಗಳ ನಾಯಕರಿಂದ ವಾಗ್ಧಾಳಿ


