Homeಮುಖಪುಟಸಾಂಸ್ಕೃತಿಕ ರಾಜಕೀಯ: ಪಕ್ಷಗಳು, ಸಿದ್ಧಾಂತಗಳು ಮತ್ತು ಜನಸಾಮಾನ್ಯರ ಮೇಲೆ ಬೀರುವ ಪ್ರಭಾವ

ಸಾಂಸ್ಕೃತಿಕ ರಾಜಕೀಯ: ಪಕ್ಷಗಳು, ಸಿದ್ಧಾಂತಗಳು ಮತ್ತು ಜನಸಾಮಾನ್ಯರ ಮೇಲೆ ಬೀರುವ ಪ್ರಭಾವ

- Advertisement -
- Advertisement -

ಈ ಲೇಖನದಲ್ಲಿ ಸಾಂಸ್ಕೃತಿಕ ರಾಜಕೀಯದ ಅರ್ಥ, ವ್ಯಾಖ್ಯಾನ ಹಾಗೂ ಪರಿಣಾಮಗಳನ್ನು ಚರ್ಚಿಸಿದ್ದೇನೆ. ಪುಸ್ತಕ ಬ್ಯಾನ್ ಮಾಡುವುದು, ಸಿನಿಮಾ ಬ್ಯಾನ್ ಮಾಡಿ ಎಂದು ಪ್ರತಿಭಟಿಸುವುದು, ಪಠ್ಯಪುಸ್ತಕ ಪರಿಷ್ಕರಣೆ ಮಾಡುವುದು, ಶಾಲೆಯಲ್ಲಿ ಮೊಟ್ಟೆ ಕೊಡಬಾರದು ಅಥವಾ ಕೊಡಬೇಕೆಂದು ಹೋರಾಟ ಮಾಡುವುದು, ತಿನ್ನುವ ಉಣ್ಣುವ ವಿಚಾರವನ್ನು ಬಳಸಿಕೊಂಡು ಜನರನ್ನು ಧ್ರುವೀಕರಿಸುವುದು, ತರಕಾರಿ (ವೆಜ್) ಮಾಂಸಾಹಾರಿ (ನಾನ್‌ವೆಜ್) ಭಿನ್ನತೆಯನ್ನು ಬಳಸಿಕೊಂಡು ಜನರನ್ನು ಧ್ರುವೀಕರಿಸುವುದು, ವೆಜ್ ಸಾತ್ವಿಕ ಆಹಾರ ನಾನ್‌ವೆಜ್ ತಾಮಸಿಕ ಆಹಾರ ಎಂದು ಪ್ರಚಾರಪಡಿಸುವುದು, ಸಾತ್ವಿಕ ಆಹಾರ ತಿನ್ನುವವರು ಶಾಂತಿಪ್ರಿಯರು, ಬುದ್ಧಿವಂತರು, ಸರ್ವಗುಣ ಸಂಪನ್ನರಾದರೆ ತಾಮಸಿಕ ಆಹಾರ ತಿನ್ನುವವರು ಹಿಂಸಾಚಾರಿಗಳು, ಬುದ್ಧಿಮತ್ತೆ ಕಡಿಮೆ, ತೋಳ್ಬಲದ ಮೇಲೆ ನಂಬಿಕೆಯುಳ್ಳವರೆಂದು ನಂಬಿಸುವುದು, ಇದೇ ಆಹಾರದ ಸಾಂಸ್ಕೃತಿಕ ರಾಜಕೀಯವನ್ನು ಇನ್ನೂ ಮುಂದುವರಿಸಿ ಮಾಂಸಾಹಾರಿಗಳಲ್ಲಿ ಎರಡು ಗುಂಪುಗಳನ್ನು ಮಾಡುವುದು, ದನದ ಮಾಂಸ ತಿನ್ನುವವರು ಮತ್ತು ತಿನ್ನದವರೆಂದು ವಿಂಗಡಿಸುವುದು, ದನದ ಮಾಂಸದ ಹೆಸರಲ್ಲಿ ಮುಸ್ಲಿಮರ ಮತ್ತು ದಲಿತರ ಮೇಲೆ ಹಲ್ಲೆ ನಡೆಸುವುದು, ಅಂತರ್‌ಜಾತಿ/ಧರ್ಮ ವಿವಾಹಗಳ ವಿರುದ್ಧ ಪ್ರತಿಭಟನೆ ನಡೆಸುವುದು, ಮೇಷ್ಟ್ರುಗಳು ಧರ್ಮಕ್ಕೆ ಅಪಮಾನ ಮಾಡಿದ್ದಾರೆಂದು ಪ್ರತಿಭಟಿಸುವುದು ಇವೆಲ್ಲ ಸಾಂಸ್ಕೃತಿಕ ರಾಜಕೀಯದ ಕೆಲವು ಉದಾಹರಣೆಗಳು. ಇವೆಲ್ಲವನ್ನು ರಾಜಕೀಯ ಪಕ್ಷಗಳು ಏಕೆ ನಡೆಸುತ್ತವೆ ಎನ್ನುವುದು ಅರ್ಥವಾದರೆ ಸಾಂಸ್ಕೃತಿಕ ರಾಜಕೀಯ ಅರ್ಥವಾಗಬಹುದು.

ಏಕೆ ಸಾಂಸ್ಕೃತಿಕ ರಾಜಕೀಯ?

ಇವೆಲ್ಲ ಜನರ ಓದುವ, ಕೇಳುವ, ನೋಡುವ, ತಿನ್ನುವ, ಪ್ರೀತಿಸುವ, ಪೂಜಿಸುವ ವಿಚಾರಗಳಿಗೆ ಸಂಬಂಧಿಸಿವೆ. ಇವುಗಳನ್ನು ನಿಯಂತ್ರಿಸಲು ರಾಜಕೀಯ ಪಕ್ಷಗಳು ಏಕೆ ಪ್ರಯತ್ನಿಸುತ್ತಿವೆ? ಏಕೆಂದರೆ ಓದುವ, ಕೇಳುವ, ನೋಡುವ ವಿಚಾರಗಳು ಜನರಿಗೆ ಹೊಸ ವಿಚಾರಗಳನ್ನು, ಹೊಸ ದೃಷ್ಟಿಕೋನಗಳನ್ನು ಪರಿಚಯಿಸುತ್ತವೆ. ಹೊಸ ವಿಚಾರಗಳು, ಹೊಸ ದೃಷ್ಟಿಕೋನಗಳು ಜನರಲ್ಲಿ ಹೊಸ ಚಿಂತನೆಯನ್ನು ಮತ್ತು ನಡವಳಿಕೆಯನ್ನು ಹುಟ್ಟುಹಾಕುತ್ತವೆ. ನಾವೆಲ್ಲ ದೇವರ ಸೃಷ್ಟಿ-ಲಿಂಗ, ಜಾತಿ, ಧರ್ಮ ತಾರತಮ್ಯಗಳು ಕೂಡ ದೇವರ ಸೃಷ್ಟಿ ಎನ್ನುವುದನ್ನು ನಂಬುವವರು ದೇವರು, ಧರ್ಮದ ಹೆಸರಲ್ಲಿ ಏನು ಮಾಡಿದರೂ ಸತ್ಯ ಎಂದು ನಂಬುವ ಸಾಧ್ಯತೆ ಇದೆ. ಇದೇ ನಂಬಿಕೆಯನ್ನು ಬಳಸಿಕೊಂಡು ರಾಜಕೀಯ ಪಕ್ಷ ಜನಬೆಂಬಲ ಗಳಿಸಬಹುದು. ಇಂತಹ ಪಕ್ಷ ಅಧಿಕಾರಕ್ಕೆ ಏರಿದ ನಂತರ ಅನುಕೂಲಸ್ಥರಲ್ಲಿ ಸಂಪತ್ತು ಕ್ರೋಢಿಕರಣಗೊಳ್ಳುವ ಪಾಲಿಸಿಗಳನ್ನು- ಶ್ರೀಮಂತರ ಮೇಲೆ ಕಡಿಮೆ ತೆರಿಗೆ, ಶಿಕ್ಷಣ, ಆರೋಗ್ಯಗಳನ್ನು ಖಾಸಗೀಕರಣಗೊಳಿಸುವುದು, ಅನುಕೂಲಸ್ಥರಿಗೆ ಕಡಿಮೆ ಬಡ್ಡಿಗೆ ಸಾಲ ನೀಡುವುದು, ಅವರು ಸಾಲ ಕಟ್ಟದಿದ್ದರೆ ಸಾಲ ಮನ್ನಾ ಮಾಡುವುದು ಇತ್ಯಾದಿ ಪಾಲಿಸಿಗಳನ್ನು ಜಾರಿಗೆ ತರಬಹುದು.

ಈ ಪಾಲಿಸಿಗಳಿಂದ ಬಡಜನರಿಗೆ ಕಷ್ಟನಷ್ಟಗಳಾಗಬಹುದು. ಆವಾಗಲೂ ಜನರಿಗೆ ಇವೆಲ್ಲವೂ ತಮ್ಮ ಆಸಕ್ತಿಗೆ ವಿರುದ್ಧ ಅನ್ನಿಸುವುದಿಲ್ಲ. ಏಕೆಂದರೆ ಇವೆಲ್ಲ ಅವರು ನಂಬುವ ದೇವರು, ಧರ್ಮದ ಹೆಸರಲ್ಲಿ ನಡೆಯುತ್ತಿರುತ್ತವೆ. ಇಂತಹ ಸಂದರ್ಭದಲ್ಲಿ ಒಂದುವೇಳೆ ’ನಾವು ದೇವರ ಸೃಷ್ಟಿ ಅಲ್ಲ, ದೇವರು ನಮ್ಮ ಸೃಷ್ಟಿ’, ಲಿಂಗ, ಧರ್ಮ, ಜಾತಿ ತಾರತಮ್ಯಗಳು ಕೂಡ ದೇವರ ಸೃಷ್ಟಿ ಅಲ್ಲ ಮನುಷ್ಯರ ಸೃಷ್ಟಿ ಎನ್ನುವ ಕತೆ ಕಾದಂಬರಿಗಳು, ಸಿನಿಮಾಗಳು, ಭಾಷಣಗಳನ್ನು, ಪಠ್ಯಗಳನ್ನು ಜನರು ಸತತ ಓದಿದರೆ, ಕೇಳಿದರೆ, ನೋಡಿದರೆ ದೇವರ ಕುರಿತ ಜನರ ವಿಚಾರ ಬದಲಾಗಬಹುದು. ದೇವರು, ಧರ್ಮದ ಹೆಸರಲ್ಲಿ ಜನಬೆಂಬಲ ಗಳಿಸುವುದು ಕಷ್ಟವಾಗಬಹುದು, ದೇವರು, ಧರ್ಮದ ಹೆಸರಲ್ಲಿ ಅಧಿಕಾರಕ್ಕೇರುವುದು ಕಷ್ಟವಾಗಬಹುದು. ಆದರೆ, ಇಂತಹ ಬೆಳವಣಿಗೆಯನ್ನು ದೇವರು, ಧರ್ಮದ ಹೆಸರಲ್ಲಿ ಜನಬೆಂಬಲ ಗಳಿಸುವ ಪಕ್ಷಗಳು ಇಷ್ಟಪಡುವುದಿಲ್ಲ. ಆದುದರಿಂದ ಓದುವ, ಕೇಳುವ, ನೋಡುವ ವಿಚಾರಗಳನ್ನು ಹತೋಟಿಯಲ್ಲಿಡಲು ಅವು ಪ್ರಯತ್ನಿಸುತ್ತವೆ.

ಮೇಲಿನ ಉದಾಹರಣೆಗಳಲ್ಲಿ ’ಸಾಂಸ್ಕೃತಿಕ ರಾಜಕೀಯ’ವನ್ನು, ಸಾಂಸ್ಕೃತಿಕ ಸಂಪನ್ಮೂಲಗಳನ್ನು ಬಳಸಿಕೊಂಡು ನಡೆಸುವ ರಾಜಕೀಯ ಎನ್ನುವ ಅರ್ಥದಲ್ಲಿ ನಿರ್ವಚಿಸಲಾಗಿದೆ. ಸಂಸ್ಕೃತಿಯ ಇಂತಹ ಸಾಮಾನ್ಯ ಕಲ್ಪನೆಯ ದೃಷ್ಟಿಯಿಂದ ಸಾಂಸ್ಕೃತಿಕ ರಾಜಕೀಯವನ್ನು ನೋಡಿದರೆ ಧರ್ಮ, ದೇವರು, ಭಾಷೆ, ಉಣ್ಣುವ ತಿನ್ನುವ ವಿಚಾರಗಳು, ಪ್ರೀತಿಸುವ, ಪೂಜಿಸುವ ವಿಚಾರಗಳು ಸಾಂಸ್ಕೃತಿಕ ರಾಜಕೀಯದ ಸರಕುಗಳಾಗುತ್ತವೆ. ಬಿಜೆಪಿಯ ಕಲ್ಚರಲ್ ನ್ಯಾಷನಲಿಸಂ, ಧರ್ಮವನ್ನು ಬಳಸಿಕೊಂಡು ನಡೆಸುವ ಸಾಂಸ್ಕೃತಿಕ ರಾಜಕೀಯಕ್ಕೆ ಉತ್ತಮ ಉದಾಹರಣೆ. ಸಾಂಸ್ಕೃತಿಕ ರಾಜಕೀಯಕ್ಕೆ ಇದೊಂದೇ ರೂಪ ಇರುವುದಲ್ಲ; ಬೇರೆ ರೂಪಗಳೂ ಇವೆ. ಅದರ ಎರಡನೇ ರೂಪ ಕಟ್ಟಿಕೊಂಡ ಸತ್ಯ ಮತ್ತು ಅದರ ಪರಿಣಾಮಗಳ ಮೇಲೆ ಕೇಂದ್ರೀಕೃತವಾಗಿದೆ. ನಮ್ಮ ಸಮಾಜ ಒಂದು ಪಿರಮಿಡ್ ರೂಪದಲ್ಲಿದೆ. ಪಿರಮಿಡ್‌ನ ಮೇಲ್‌ತುದಿಯಲ್ಲಿ ಇರುವವರಲ್ಲಿ ಅಧಿಕಾರ, ಆದಾಯ, ಸ್ಥಾನಮಾನಗಳು ಕ್ರೋಢೀಕೃತಗೊಂಡರೆ ಮಧ್ಯದಲ್ಲಿರುವವರಲ್ಲಿ ಮೇಲಿನವರಿಗಿಂತ ಕಡಿಮೆ ಅಧಿಕಾರ, ಆದಾಯ, ಸ್ಥಾನಮಾನ ಇದೆ. ಪಿರಮಿಡ್‌ನ ಬುಡದಲ್ಲಿರುವವರಲ್ಲಿ ಏನೇನೂ ಅಧಿಕಾರ, ಆದಾಯ, ಸ್ಥಾನಮಾನಗಳಿಲ್ಲ. ಈ ಬಗೆಯ ಸಮಾಜವನ್ನು ರೂಪಿಸುವಲ್ಲಿ ಕೇವಲ ಫೋರ್ಸ್ ಅಥವಾ ಬಲಾತ್ಕಾರ ಮಾತ್ರ ಕೆಲಸ ಮಾಡಿಲ್ಲ. ಫೋರ್ಸ್ ಜೊತೆಗೆ ಅವರ್‍ಯಾಕೆ ಮೇಲಿರಬೇಕು ಇವರ್‍ಯಾಕೆ ಕೆಳಗಿರಬೇಕೆಂದು ಒಪ್ಪಿಸುವ ಹಲವು ’ಕಟ್ಟಿಕೊಂಡ ಸತ್ಯ’ಗಳು ಕೂಡ ಕೆಲಸ ಮಾಡುತ್ತಿವೆ. ಇಂತಹ ಕಟ್ಟಿಕೊಂಡ ಸತ್ಯಗಳನ್ನು ಪ್ರಶ್ನಿಸಿ ಹೊಸ ಸತ್ಯಗಳನ್ನು ಸೃಷ್ಟಿಸುವುದು ಮತ್ತು ಅವುಗಳನ್ನು ಜನರ ಪ್ರಜ್ಞೆಯ ಭಾಗ ಮಾಡುವುದು ಸಾಂಸ್ಕೃತಿಕ ರಾಜಕೀಯದೊಳಗೆ ಬರುತ್ತವೆ.

ಮೂರನೇ ರೂಪದಲ್ಲಿ ಸಾಂಸ್ಕೃತಿಕ ರಾಜಕೀಯ ಇದರಿಂದಲೂ ಒಂದು ಹೆಜ್ಜೆ ಮುಂದೆ ಹೋಗಿ ಜನರ ಪ್ರಜ್ಞೆಯನ್ನು ಪ್ರಭಾವಿಸುವ ಮತ್ತು ರೂಪಿಸುವ ಕೆಲಸವನ್ನು ಮಾಡುತ್ತದೆ. ಒಂದು ಕಾಲದಲ್ಲಿ ಪರಿಸರದಿಂದ ಪ್ರಜ್ಞೆ ಎನ್ನುವ ತಿಳಿವಳಿಕೆ ಕಾರುಬಾರು ಮಾಡುತ್ತಿತ್ತು. ಆವಾಗ ಸರಕಾರಗಳು ಪರಿಸರವನ್ನು ಬದಲಾಯಿಸುವುದಕ್ಕೆ ಹೆಚ್ಚು ಒತ್ತು ನೀಡುತ್ತಿದ್ದವು. ಭೂಸುಧಾರಣೆ ಮಾಡುವುದು, ಬ್ಯಾಂಕ್ ರಾಷ್ಟ್ರೀಕರಣ ಮಾಡುವುದು, ಉಚಿತ ಶಿಕ್ಷಣ, ಆರೋಗ್ಯ ನೀಡುವುದು ಇತ್ಯಾದಿ ಕಾರ್ಯಕ್ರಮಗಳ ಮೂಲಕ ವ್ಯಕ್ತಿ ಬದುಕುವ ಪರಿಸರವನ್ನು ಬದಲಾಯಿಸಲು ಪ್ರಯತ್ನಿಸುತ್ತಿದ್ದವು. ಕಾಲಕ್ರಮೇಣ ಪರಿಸರವನ್ನು ಸುಧಾರಿಸುವುದರಿಂದ ಪ್ರಜ್ಞೆಯನ್ನು ಸುಧಾರಿಸಬಹುದಾದರೆ ಪ್ರಜ್ಞೆಯನ್ನು ಪ್ರಭಾವಿಸುವ ಮೂಲಕ ಪರಿಸರವನ್ನು ಸುಧಾರಿಸಬಹುದೆನ್ನುವ ವಿವರಣೆಗಳು ಮುಂಚೂಣಿಗೆ ಬಂದವು. ಪ್ರಜ್ಞೆಯನ್ನು ಪ್ರಭಾವಿಸುವ, ರೂಪಿಸುವ ಅಂಶಗಳು ಮುಂಚೂಣಿಗೆ ಬಂದವು. ಪರಿಸರವನ್ನು ಬದಲಾಯಿಸುವ ಪ್ರಶ್ನೆಗಳು ಹಿಂದಕ್ಕೆ ಸರಿದವು. ಹೊಸ ಸ್ಕಿಲ್‌ಗಾಗಿ ತರಬೇತಿ ನೀಡುವುದು, ಹೊಸ ಭಾಷೆ ಕಲಿಸುವುದು, ಪಾಸಿಟಿವ್ ಥಿಂಕಿಂಗ್ ಬಗ್ಗೆ ಹೇಳಿಕೊಡುವುದು, ಟೀಮ್‌ವರ್ಕ್ ಬಗ್ಗೆ ತರಬೇತು ನೀಡುವುದು, ನಾಯಕತ್ವದ ಬಗ್ಗೆ ಹೇಳಿಕೊಡುವುದು ಇತ್ಯಾದಿಗಳೆಲ್ಲ ಮುಂಚೂಣಿಗೆ ಬಂದವು. ಅವುಗಳ ಸಾಲಿನಲ್ಲಿ ಓದುವ, ಕೇಳುವ, ನೋಡುವ ಅಂಶಗಳು ಪ್ರಮುಖವಾದವು.

ಆಕಾಡೆಮಿಕ್ ವ್ಯಾಖ್ಯಾನಗಳು

ಆಕೆಡೆಮಿಕ್ ವ್ಯಾಖ್ಯಾನಗಳು ಸಾಂಸ್ಕೃತಿಕ ರಾಜಕೀಯವನ್ನು ಎರಡು ಮೂರು ದೃಷ್ಟಿಯಿಂದ ಅರ್ಥಮಾಡಿಕೊಳ್ಳಲು ಸಹಕರಿಸುತ್ತವೆ. ಅಂಟೋನಿಯ ಗ್ರಾಮ್ಸಿಯ ದೃಷ್ಟಿಯಿಂದ ನೋಡಿದರೆ ಸಾಂಸ್ಕೃತಿಕ ರಾಜಕೀಯವನ್ನು ’ವಾರ್ ಆಫ್ ಪೊಸಿಶನ್’ಗೆ ಹೋಲಿಸಬಹುದು. ಗ್ರಾಮ್ಸಿ ತನ್ನ ಪುಸ್ತಕ ’ಸೆಲೆಕ್ಷನ್ಸ್ ಫ್ರರ್ಮ್ ಪ್ರಿಸನ್ ನೋಟ್‌ಬುಕ್ಸ್’ನಲ್ಲಿ ಎರಡು ವಿಧದ ವಾರ್‌ಗಳನ್ನು (ಯುದ್ಧಗಳನ್ನು) ಗುರುತಿಸುತ್ತಾನೆ. ಒಂದು, ವಾರ್ ಆಫ್ ಮೆನೋವರ್ ಮತ್ತು ಎರಡು, ವಾರ್ ಆಫ್ ಪೊಸಿಶನ್. ನೇರ ಬಲಪ್ರಯೋಗ ಮಾಡಿ ಹತೋಟಿ ಸಾಧಿಸುವುದನ್ನು ವಾರ್ ಆಫ್ ಮೆನೋವರ್ ಎನ್ನಬಹುದು. ಮತ್ತೊಬ್ಬರನ್ನು ಒಪ್ಪಿಸಿ ಅವರ ಸಕ್ರಿಯ ಪಾಲುಗೊಳ್ಳುವಿಕೆಯೊಂದಿಗೆ ಅಧಿಕಾರ ಸಾಧಿಸುವುದನ್ನು ವಾರ್ ಆಫ್ ಪೊಸಿಶನ್ ಎನ್ನಬಹುದು. ವಾರ್ ಆಫ್ ಮೆನೋವರ್‌ಲ್ಲಿ ಬಲಪ್ರಯೋಗ ಮುಖ್ಯ ಪಾತ್ರವಹಿಸಿದರೆ ವಾರ್ ಆಫ್ ಪೊಸಿಶನ್‌ಲ್ಲಿ ಒಪ್ಪಿಸುವುದು, ಮನವರಿಕೆ ಮಾಡುವುದು ಮುಖ್ಯ ಪಾತ್ರ ವಹಿಸುತ್ತವೆ. ವಾರ್ ಆಫ್ ಮೆನೋವರ್‌ಲ್ಲಿ ಸೆಂಟ್ರಲೈಸ್ಡ್ ಮತ್ತು ಕೆಲವೇ ಗುಂಪುಗಳು ಸಕ್ರಿಯವಾಗಿ ಭಾಗವಹಿಸುವುದು ಪ್ರಾಮುಖ್ಯತೆ ಪಡೆದರೆ ವಾರ್ ಆಫ್ ಪೊಸಿಶನ್‌ಲ್ಲಿ ಬಹುತೇಕರು ಸಕ್ರಿಯವಾಗಿ ಭಾಗವಹಿಸುತ್ತಾರೆ. ಕರ್ನಾಟಕದಲ್ಲಿ ನಡೆದ ಪಠ್ಯಪುಸ್ತಕದ ಪರಿಷ್ಕರಣೆ ವಿರುದ್ದದ ಹೋರಾಟ ವಾರ್ ಅಪ್ ಪೊಸಿಶನ್‌ಗೆ ಉತ್ತಮ ಉದಾಹರಣೆ.

ಮೈಕಲ್ ಫುಕೋನ ವಿಚಾರ ಮತ್ತು ಅಧಿಕಾರಗಳ ನಡುವಿನ ಸಂಬಂಧದ ದೃಷ್ಟಿಯಿಂದ ನೋಡಿದರೆ ಸಾಂಸ್ಕೃತಿಕ ರಾಜಕೀಯವನ್ನು ಈ ಕೆಳಗಿನಂತೆ ವ್ಯಾಖ್ಯಾನಿಸಬಹುದು. ಆಚಾರ ವಿಚಾರ ಅಧಿಕಾರಗಳ ನಡುವೆ ಸಂಬಂಧ ಇದೆ. ಇವತ್ತು ಕೆಲವರಲ್ಲೇ ಅಧಿಕಾರ ಕ್ರೋಢೀಕರಣಗೊಂಡಿದೆ. ಮಹಿಳೆಯರಿಗೆ ಹೋಲಿಸಿದರೆ ಪುರುಷರಲ್ಲಿ, ಕೆಳಜಾತಿಗಳಿಗೆ ಹೋಲಿಸಿದರೆ ಮೇಲ್ಜಾತಿ ಜನರಲ್ಲಿ, ಅಲ್ಪಸಂಖ್ಯಾತರಿಗೆ ಹೋಲಿಸಿದರೆ ಬಹುಸಂಖ್ಯಾತರಲ್ಲಿ, ಗ್ರಾಮೀಣ ಜನರಿಗೆ ಹೋಲಿಸಿದರೆ ನಗರದವರಲ್ಲಿ ಹೆಚ್ಚು ಅಧಿಕಾರ ಕ್ರೋಢೀಕರಣಗೊಂಡಿದೆ. ಈ ಬಗೆಯಲ್ಲಿ ಕೆಲವರಲ್ಲೇ ಅಧಿಕಾರ ಕ್ರೋಢೀಕರಣಗೊಂಡಿರುವುದು ಬಲಾತ್ಕಾರದಿಂದ ಅಥವಾ ಹಿಂಸೆ ಅಥವಾ ಹೊಡೆದುಬಡಿದು ಮಾಡಿ ಅಲ್ಲ. ಅದರಬದಲು ಜನರನ್ನು ಒಪ್ಪಿಸಿಯೇ ನಡೆಯುವ ಕ್ರಿಯೆ ಅದು. ಮಹಿಳೆಯರಿಂದ ಪುರುಷರು ಹೆಚ್ಚು ಎನ್ನುವುದನ್ನು ಸಮರ್ಥಿಸುವ ವಿಚಾರಗಳನ್ನು ಹಲವು ರೂಪದಲ್ಲಿ ಜನರ ಪ್ರಜ್ಞೆಯ ಭಾಗ ಮಾಡುವುದರಿಂದ ಲಿಂಗತಾರತಮ್ಯ ಮುಂದುವರಿಯುತ್ತದೆ. ಜಾತಿಶ್ರೇಣೀಕರಣ ಏಕಿದೆ ಎನ್ನುವುದನ್ನು ವಿವರಿಸುವ ಕಥನಗಳನ್ನು (ಬ್ರಹ್ಮ ಸೃಷ್ಟಿ) ಜನರ ಪ್ರಜ್ಞೆಯ ಭಾಗವಾಗಿ ಮಾಡುವುದರಿಂದ ಜಾತಿತಾರತಮ್ಯ ಒಪ್ಪಿತವಾಗಿ ಮುಂದುವರಿಯುತ್ತದೆ. ಅಲ್ಪಸಂಖ್ಯಾತರನ್ನು ಕೆಳಗೆ ತಳ್ಳುವ ಹಲವು ಕಥನಗಳು ಬಹುಸಂಖ್ಯಾತರ ರಾಜಕೀಯ ಬಲವರ್ಧನೆಗೆ ಅವಕಾಶ ಮಾಡಿದೆ. ಬಡತನಕ್ಕೆ ಬಡವರೇ ಕಾರಣ ಎನ್ನುವ ಕಥನಗಳು ಬಡತನವನ್ನು ಸಹಿಸಲು ಶಕ್ತಿ ಕೊಡುತ್ತವೆ. ವಿಚಾರ, ಆಚಾರ, ಅಧಿಕಾರಗಳ ದೃಷ್ಟಿಯಿಂದ ನೋಡಿದರೆ ಲಿಂಗ, ಜಾತಿ, ಧರ್ಮ, ವರ್ಗ ತಾರತಮ್ಯಗಳನ್ನು ಸಮರ್ಥಿಸುವ ವಿಚಾರಗಳು ಇಂದಿನ ಅಧಿಕಾರ ಸಂಬಂಧವನ್ನು ಸಮರ್ಥಿಸುತ್ತವೆ. ಇವನ್ನು ಅಲ್ಲಗಳೆಯುವ ಮತ್ತು ಸಮಾನತೆಯನ್ನು ಪ್ರತಿಪಾದಿಸುವ ವಿಚಾರಗಳನ್ನು ಸೃಷ್ಟಿಸುವುದು ಮತ್ತು ಅವನ್ನು ಜನರ ಪ್ರಜ್ಞೆಯ ಭಾಗ ಮಾಡುವುದು ಪ್ರತಿರೋಧದ ಸಾಂಸ್ಕೃತಿ ರಾಜಕೀಯವಾಗುತ್ತದೆ.

ಲೋಯ್ಡ್ ಐ ರುಡಾಲ್ಫ್ ಪ್ರಕಾರ ಜನರೇನು ಓದಬೇಕು? ಕೇಳಬೇಕು? ನೋಡಬೇಕು? ಎಂದು ತೀರ್ಮಾನಿಸುವ ಪ್ರಕ್ರಿಯೆ ಮೇಲೆ ಹತೋಟಿ ಸಾಧಿಸುವುದು ಸಾಂಸ್ಕೃತಿಕ ರಾಜಕೀಯ. ಯಾರು ಏನನ್ನು, ಯಾವಾಗ, ಎಷ್ಟು ಪ್ರಮಾಣದಲ್ಲಿ ಮತ್ತು ಹೇಗೆ ಪಡೆಯುತ್ತಾರೆನ್ನುವುದನ್ನು ರಾಜಕೀಯ ತೀರ್ಮಾನಿಸುತ್ತದೆ. ಅಂದರೆ ರಾಜಕೀಯ ಆಸಕ್ತಿಗಳು, ಆರ್ಥಿಕ ಭದ್ರತೆ, ಹೊಟ್ಟೆಬಟ್ಟೆಗಳ ಪ್ರಶ್ನೆಗಳು, ಸಂಪತ್ತು, ಅಧಿಕಾರ ಮತ್ತು ಅಂತಸ್ತುಗಳ ಹಂಚುವಿಕೆಯನ್ನು ರಾಜಕೀಯ ಪ್ರಭಾವಿಸುತ್ತದೆ. ನೀವ್ಯಾರು ಮತ್ತು ನಿಮ್ಮ ಯೋಗ್ಯತೆಯೇನೆಂಬುದನ್ನು ಸಾಂಸ್ಕೃತಿಕ ರಾಜಕೀಯ ತೀರ್ಮಾನಿಸುತ್ತದೆ. ವ್ಯಕ್ತಿಯೊಬ್ಬರ ಗುರುತು, ಸ್ಥಾನಮಾನ, ನ್ಯಾಯ ಅನ್ಯಾಯದ ಕಲ್ಪನೆಗಳನ್ನು, ಅಭಿವೃದ್ಧಿ ಅನಭಿವೃದ್ಧಿ ಕಲ್ಪನೆಗಳನ್ನು ಮತ್ತು ಇವುಗಳನ್ನು ತೀರ್ಮಾನಿಸುವ ಮೌಲ್ಯಗಳನ್ನು ಸಾಂಸ್ಕೃತಿಕ ರಾಜಕಾರಣ ಪ್ರಭಾವಿಸುತ್ತದೆ. ನಮ್ಮ ದಿನನಿತ್ಯದ ಬದುಕನ್ನು ಗಾಢವಾಗಿ ಪ್ರಭಾವಿಸುವ ಎಲ್ಲ ಸಂಗತಿಗಳಿಗೆ ಅರ್ಥ ತುಂಬಿಸುವ ಕೆಲಸವನ್ನು ಸಂಸ್ಕೃತಿ ಮಾಡುತ್ತದೆ. ಈ ಪ್ರಕ್ರಿಯೆ ಮೇಲೆ ಹತೋಟಿ ಸ್ಥಾಪಿಸಲು ಮಾಡುವ ಪ್ರಯತ್ನ ಸಾಂಸ್ಕೃತಿಕ ರಾಜಕಾರಣದ ವ್ಯಾಪ್ತಿಗೆ ಬರುತ್ತದೆ. ಬಹುತೇಕ ಸಂದರ್ಭದಲ್ಲಿ ನಾವು ಓದುವ, ಕೇಳುವ, ನೋಡುವ ಸಂಗತಿಗಳನ್ನು ತಜ್ಞರು ಉತ್ಪಾದಿಸುತ್ತಾರೆ ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಜನ ಇದನ್ನು ಅನುಭೋಗಿಸುತ್ತಾರೆ. ಪಬ್ಲಿಕ್ ಕಲ್ಚರ್‌ನ ಉತ್ಪಾದನೆ ಯಾರ ಹತೋಟಿಯಲ್ಲಿದೆ? ಅದನ್ನು ಹೇಗೆ ಉತ್ಪಾದಿಸುತ್ತಾರೆ? ಇವರ ಉತ್ಪಾದನೆಯನ್ನು ಹೇಗೆ ಹಿಡಿತದಲ್ಲಿಟ್ಟುಕೊಳ್ಳಲಾಗುತ್ತದೆ- ಸರಕಾರ ನೀತಿನಿಯಮಗಳಿಂದಲೇ ಅಥವ ಮಾರುಕಟ್ಟೆ ಬಲದಿಂದಲೇ ಅಥವಾ ಮಾಧ್ಯಮಗಳೇ ತಮ್ಮ ಹತೋಟಿಗೆ ಜವಾಬ್ದಾರರೇ ಎನ್ನುವುದು ಕಲ್ಚರಲ್ ಪೊಲಿಟಿಕ್ಸ್‌ಗೆ ಸಂಬಂಧಪಟ್ಟ ವಿಷಯ. ಇದನ್ನು ಸಂಕ್ಷಿಪ್ತವಾಗಿ ಹೇಳುವುದಾದರೆ, ಜನರೇನು ಓದಬೇಕು? ನೋಡಬೇಕು? ಕೇಳಬೇಕು? ಎಂದು ತೀರ್ಮಾನಿಸುವ ಪ್ರಶ್ನೆ ಸಾಂಸ್ಕೃತಿಕ ರಾಜಕಿಯದ ವ್ಯಾಪ್ತಿಗೆ ಬರುತ್ತದ. ನಮ್ಮಲ್ಲಿ ಒಂದು ಹೆಜ್ಜೆ ಮುಂದೆ ಹೋಗಿ ಜನರೇನು ತಿನ್ನಬೇಕು? ಪೂಜಿಸಬೇಕು? ಯಾರನ್ನು ಪ್ರೀತಿಸಬೇಕು/ಮದುವೆ ಆಗಬೇಕು? ಇವೆಲ್ಲವೂ ಸಾಂಸ್ಕೃತಿಕ ರಾಜಕಿಯದ ವ್ಯಾಪ್ತಿಗೆ ಬಂದಿವೆ.

ಪರಿಣಾಮಗಳೇನು?

ನಮ್ಮಲ್ಲಿ ಮೂರು ಪ್ರಮುಖ ರಾಜಕೀಯ ವಿಚಾರಧಾರೆಗಳು ಕೆಲಸ ಮಾಡುತ್ತಿವೆ. ಒಂದು, ಎಡಪಂಥೀಯ (ಸಿಪಿಐ, ಸಿಪಿಐಎಂ ಪಕ್ಷಗಳು), ಎರಡು, ಬಲಪಂಥೀಯ (ಬಿಜೆಪಿ ಪಕ್ಷ) ಮತ್ತು ಮೂರು, ಮಧ್ಯಮಾರ್ಗಿಗಳು (ಕಾಂಗ್ರೆಸ್ ಮತ್ತು ಪ್ರಾದೇಶಿಕ ಪಕ್ಷಗಳು). ಈ ಮೂರು ಪಕ್ಷಗಳಿಗೆ ತಮ್ಮದೇ ಆದ ಆರ್ಥಿಕ ನೀತಿಗಳು ಮತ್ತು ಸಾಂಸ್ಕೃತಿಕ ರಾಜಕೀಯಗಳು ಇವೆ. ಎಡಪಂಥೀಯ ಪಕ್ಷಗಳು ಬಡವರ್ಗದ ಆಸಕ್ತಿಗಳನ್ನು ರಕ್ಷಿಸುವ ಭೂಸುಧಾರಣೆ, ಅಧಿಕಾರದ ವಿಕೇಂದ್ರೀಕರಣ, ಬ್ಯಾಂಕ್ ರಾಷ್ಟ್ರೀಕರಣ, ಸೋಶಿಯಲ್ ವೆಲ್‌ಫೇರ್, ಶಿಕ್ಷಣ, ಆರೋಗ್ಯಗಳ ಮೇಲೆ ಹೆಚ್ಚು ಕರ್ಚು ಮಾಡುವುದು ಇತ್ಯಾದಿ ಆರ್ಥಿಕ ನೀತಿಗಳನ್ನು ಮತ್ತು ಸಮಾನತೆ, ಸ್ವಾತಂತ್ರ್ಯ, ಜಾತ್ಯತೀತತೆ, ಜ್ಞಾನಕ್ಕೆ ಹೆಚ್ಚು ಒತ್ತು ನೀಡುವ, ಮೈಥಾಲಾಜಿಗಿಂತ ಚರಿತ್ರೆಗೆ ಹೆಚ್ಚು ಮಹತ್ವ ನೀಡುವ ಸಾಂಸ್ಕೃತಿಕ ರಾಜಕೀಯವನ್ನು ಮುಂಚೂಣಿಗೆ ತರುತ್ತವೆ. ಬಲಪಂಥೀಯ ಪಕ್ಷಗಳು ಅನುಕೂಲಸ್ಥರ ಆಸಕ್ತಿಗಳನ್ನು ರಕ್ಷಿಸುವ, ಭೂಸ್ವಾಧೀನ ಮಸೂದೆ, ಅಧಿಕಾರದ ಕೇಂದ್ರೀಕರಣ, ಖಾಸಗೀಕರಣ, ಶಿಕ್ಷಣ, ಆರೋಗ್ಯಗಳ ಮೇಲೆ ಕಡಿಮೆ ಖರ್ಚು ಮಾಡುವುದು, ಸೋಶಿಯಲ್ ವೆಲ್‌ಫೇರ್ ಮೇಲೆ ಕಡಿಮೆ ಖರ್ಚು ಮಾಡುವುದು ಇತ್ಯಾದಿ ಆರ್ಥಿಕ ನೀತಿಗಳನ್ನು ಮತ್ತು ಜಾತ್ಯತೀತ ಸಮಾಜದ ಬದಲು ಧರ್ಮದ ನೆಲೆಯಲ್ಲಿ ಸಮಾಜವನ್ನು ಕಟ್ಟುವುದು, ಜ್ಞಾನಕ್ಕಿಂತ ಹೆಚ್ಚು ನಂಬಿಕೆಗೆ ಮಹತ್ವ ನೀಡುವುದು, ಚರಿತ್ರೆ ಬದಲು ಮೈಥಾಲಾಜಿ ಮುಖ್ಯ ಎನ್ನುವ ಸಾಂಸ್ಕೃತಿಕ ರಾಜಕೀಯವನ್ನು ನಡೆಸುತ್ತದೆ. ಇವೆಲ್ಲವೂ ತಳಸ್ತರದ ಜನರ ದೃಷ್ಟಿಯಿಂದ ರಿಗ್ರೆಸಿವ್ ಅಥವಾ ಅವರ ಮೇಲ್ಮುಖ ಚಲನೆಗೆ ಅಡ್ಡಿಯಾಗುವ ಮೌಲ್ಯಗಳು. ಏಕೆಂದರೆ ಇವೇ ಮೌಲ್ಯಗಳು ಅವರನ್ನು ಶತಮಾನಗಳಿಂದ ಏಣಿಯ ಬುಡದಲ್ಲಿರಿಸಿವೆ. ಮಧ್ಯಮಾರ್ಗೀಯ ಪಕ್ಷಗಳು ಅನುಕೂಲಸ್ಥರ ಪರ ಇರುವ ಆರ್ಥಿಕ ನೀತಿಗಳ ಜೊತೆಗೆ ಬಡತನ ನಿವಾರಣೆಯ ಪಾಲಿಸಿಗಳನ್ನು ಮತ್ತು ತಳಸ್ತರ ಪರ ಇರುವ ಸಾಂಸ್ಕೃತಿ ರಾಜಕೀಯವನ್ನು ನಡೆಸುತ್ತವೆ.

ಇದನ್ನೂ ಓದಿ: ಸಾಂಸ್ಕೃತಿಕ ರಾಜಕಾರಣದ ಸವಾಲುಗಳು

ಪಕ್ಷವೊಂದರ ಆರ್ಥಿಕ ನೀತಿ ತಳಸ್ತರದ ಜನರ ಪರ ಇದ್ದಾಗ ಪ್ರಗತಿಪರ ಮೌಲ್ಯಗಳನ್ನು ಪ್ರತಿಪಾದಿಸುವ ಸಾಂಸ್ಕೃತಿಕ ರಾಜಕೀಯ ನಡೆಯಬಹುದು ಅಥವಾ ಜನಬೆಂಬಲ ಸಿಗಬಹುದು. ಇತ್ತೀಚಿನ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಗೆಲುವಿನಲ್ಲಿ ಗ್ಯಾರಂಟಿಗಳು ವಹಿಸಿದ ಪಾತ್ರದಿಂದ ಇದನ್ನು ಅರ್ಥಮಾಡಿಕೊಳ್ಳಬಹುದು. ಇದೇರೀತಿ ತೊಂಭತ್ತರ ದಶಕದಲ್ಲಿ ಕಾಂಗ್ರೆಸ್ ಪಕ್ಷ ಮಾರುಕಟ್ಟೆ ಆರ್ಥಿಕ ನೀತಿಗಳನ್ನು ಜಾರಿಗೆ ತರುವ ಮುನ್ನ ಬಡವರ ಪಕ್ಷ ಎನ್ನುವ ಇಮೇಜ್ ಹೊಂದಿತ್ತು. ಮಾರುಕಟ್ಟೆ ನೀತಿಗಳು ಕಾಂಗ್ರೆಸ್‌ನ ಬಡವರ ಪಕ್ಷದ ಇಮೇಜನ್ನು ಬದಲಾಯಿಸಿ ಅನುಕೂಲಸ್ಥರ ಪಕ್ಷ ಎನ್ನುವ ಚಿತ್ರಣ ನೀಡಿದೆ. ಜೊತೆಗೆ ಕಾಂಗ್ರೆಸ್ ಪಕ್ಷದ ಸಮಾನತೆ, ಸ್ವಾತಂತ್ರ್ಯ, ಜಾತ್ಯತೀತ ಮೌಲ್ಯಗಳಿಗೆ ಮಹತ್ವ ನೀಡುವ ಸಾಂಸ್ಕೃತಿಕ ರಾಜಕೀಯ ಜನರಿಗೆ ಪರಕೀಯವಾಗಿದೆ. ಏಕೆಂದರೆ ಕಾಂಗ್ರೆಸ್ ಪಕ್ಷ ಹಲವು ದಶಕಗಳ ಕಾಲ ಅಧಿಕಾರ ನಡೆಸಿದರೂ ಬ್ರಾಹ್ಮಣ್ಯದ ಪ್ರಭಾವವನ್ನು ಕುಗ್ಗಿಸುವ ಸಾಂಸ್ಕೃತಿ ರಾಜಕೀಯವನ್ನು ಸಮರ್ಥವಾಗಿ ನಡೆಸಲಿಲ್ಲ. ಹೀಗೆ ಪಕ್ಷವೊಂದರ ಆರ್ಥಿಕ ನೀತಿಗಳು ಅನುಕೂಲಸ್ಥರ ಪರವಾಗಿ ಇದ್ದಾಗ ಪ್ರಗತಿಪರ ಮೌಲ್ಯಗಳನ್ನು ಪ್ರತಿಪಾದಿಸುವ ಸಾಂಸ್ಕೃತಿಕ ರಾಜಕೀಯದ ಮೂಲಕ ಜನಬೆಂಬಲ ಗಳಿಸುವುದು ಕಷ್ಟವಾಗುತ್ತದೆ. ಆವಾಗ ಧರ್ಮ, ಜಾತಿ, ಜ್ಞಾನದ ಬದಲು ನಂಬಿಕೆಗೆ- ಚರಿತ್ರೆಯ ಬದಲು ಮೈಥಾಲಾಜಿಗೆ- ಸಮಾನತೆ, ಸ್ವಾತಂತ್ರ್ಯಗಳ ಬದಲು ಬ್ರಾಹ್ಮಣ್ಯಕ್ಕೆ ಮಹತ್ವ ನೀಡುವ ಸಾಂಸ್ಕೃತಿಕ ರಾಜಕೀಯ ನೆಲೆ ಕಂಡುಕೊಳ್ಳುತ್ತದೆ. ಏಕೆಂದರೆ ಮೇಲಿನ ಎಲ್ಲವೂ ಚರಿತ್ರೆಯಿಂದ ಬಂದವು. ಇವನ್ನು ಜನರು ಕಷ್ಟಪಟ್ಟು ರೂಢಿಸಿಕೊಳ್ಳುವ ಅಗತ್ಯವಿಲ್ಲ. ಇವೇ ಕಾರಣಗಳಿಂದ ಬಿಜೆಪಿ ಅನಾಯಸವಾಗಿ ಅಧಿಕಾರದ ಚುಕ್ಕಾಣಿ ಹಿಡಿಯುತ್ತಿದೆ ಮತ್ತು ಕಾಂಗ್ರೆಸ್ ಮತ್ತು ಎಡಪಂಥೀಯ ಪಕ್ಷಗಳು ಅಧಿಕಾರಕ್ಕೇರಲು ಪರದಾಡುವ ಸ್ಥಿತಿ ಇದೆ. ರಿಗ್ರೆಸಿವ್ ಸಾಂಸ್ಕೃತಿಕ ರಾಜಕೀಯ ಪಕ್ಷಗಳ ಮೇಲೆ ಮಾತ್ರ ಪರಿಣಾಮ ಬೀರುವುದಲ್ಲ; ವ್ಯಕ್ತಿ ಸಮುದಾಯಗಳ ಮೇಲೂ ಪರಿಣಾಮ ಬೀರುತ್ತದೆ.

ವ್ಯಕ್ತಿ, ಸಮುದಾಯಗಳು

ಭಾವನೆಗಳ ದಿವಾಳಿತನ– ತಳಸ್ತರದ ಜನರಲ್ಲಿ ಬಾಡಿಗೆ ತರುವ ಆಸ್ತಿ ಇಲ್ಲ, ಬಡ್ಡಿ ತರುವ ಬಂಡವಾಳ ಇಲ್ಲ, ನಿಗದಿತ ಸಂಬಳ ತರುವ ಉದ್ಯೋಗವೂ ಇಲ್ಲ. ಅವರಲ್ಲಿ ಧಾರಾಳ ಇರುವುದು ಅವರ ಸಂಖ್ಯೆ ಮಾತ್ರ. ಈ ಸಂಖ್ಯೆ ಅವರ ಪರ ಕೆಲಸ ಮಾಡಬೇಕಾದರೆ ಅವರಲ್ಲಿ ಪ್ರೀತಿ, ಪ್ರೇಮ, ಎಂಪಥಿ (ಮತ್ತೊಬ್ಬರ ಸ್ಥಾನದಲ್ಲಿ ನಿಂತು ಆಲೋಚಿಸುವ ಶಕ್ತಿ) ಇರಬೇಕು. ಇವು ಇದ್ದರೆ ಮಾತ್ರ ಅವರು ಪರಸ್ಪರ ಸಹಕರಿಸಿಕೊಂಡು ಸಹಬಾಳ್ವೆ ಮಾಡಲು ಸಾಧ್ಯ. ಪ್ರೀತಿ, ಪ್ರೇಮ, ಪರಸ್ಪರ ನಂಬಿಕೆ, ಎಂಪಥಿ ಇವೆಲ್ಲ ಸಹಕಾರ ಸಹಬಾಳ್ವೆಯ ಮೂಲದ್ರವ್ಯಗಳು. ಆದರೆ ಇಂದು ಯಜಮಾನಿಕೆ ಮಾಡುತ್ತಿರುವ ಸಾಂಸ್ಕೃತಿಕ ರಾಜಕೀಯ ಈ ಮೂಲ ದ್ರವ್ಯಗಳನ್ನು ನಾಶ ಮಾಡುತ್ತಿದೆ. ಪ್ರೀತಿ ಪ್ರೇಮದ ಜಾಗದಲ್ಲಿ ದ್ವೇಷ ಕಾರುಬಾರು ಮಾಡುತ್ತಿದೆ, ನಂಬಿಕೆಯ ಬದಲು ಅಪನಂಬಿಕೆ ಯಜಮಾನಿಕೆ ನಡೆಸುತ್ತಿದೆ, ಸಹಕಾರದ ಬದಲು ಅಸಹಕಾರ ಮೇಲುಗೈ ಸಾಧಿಸಿದೆ, ಮತ್ತೊಬ್ಬರ ಜಾಗದಲ್ಲಿ ನಿಂತು ಅವರ ಕಷ್ಟನಷ್ಟಗಳನ್ನುಅರ್ಥಮಾಡಿಕೊಳ್ಳುವ ಮನೋಭಾವವನ್ನು ಹುಟ್ಟುಹಾಕಲು ಸಮಾಜ ವಿಫಲ ಆಗುತ್ತಿದೆ. ಇವೆಲ್ಲ ತುಂಬಾ ಅಪಾಯಕಾರಿ ಬೆಳವಣಿಗೆಗಳು. ಇವು ತಳಸ್ತರದ ಜನರ ಸಹಕಾರ, ಸಹಬಾಳ್ವೆಯನ್ನು ನಾಶ ಮಾಡುತ್ತವೆ. ಅವರು ಸಂಘಟಿತರಾಗಿ ತಮಗಾಗುವ ಅನ್ಯಾಯದ ವಿರುದ್ಧ ಹೋರಾಡಲು ಸಾಧ್ಯವಿಲ್ಲದ ಸ್ಥಿತಿ ನಿರ್ಮಾಣ ಮಾಡುತ್ತವೆ.

ಸಾಂಸ್ಕೃತಿಕ ನಿಕೃಷ್ಟೀಕರಣ: ಇಂದು ಕಾರುಬಾರು ಮಾಡುತ್ತಿರುವ ಸಾಂಸ್ಕೃತಿಕ ರಾಜಕೀಯ ತಳಸ್ತರದ ಜನರ ಊಟ ಉಪಚಾರ, ದೇವರು ದಿಂಡ್ರು, ಹಾಡು ಕುಣಿತಗಳನ್ನು, ಪ್ರೀತಿಪ್ರೇಮಗಳನ್ನು ಎರಡನೇ ದರ್ಜೆ ಸ್ಥಾನಮಾನಕ್ಕೆ ಇಳಿಸುತ್ತಿದೆ. ಎಮ್ಮೆ ಹಾಲಿಗಿಂತ ದನದ ಹಾಲು ಉತ್ತಮ, ಮಾಂಸಾಹಾರಕ್ಕಿಂತ ತರಕಾರಿ ಉತ್ತಮ, ಮೊಟ್ಟೆಗಿಂತ ಬಾಳೆಹಣ್ಣು ಉತ್ತಮ ಎನ್ನುವ ನೇರ ಮತ್ತು ಪರೋಕ್ಷ ಸಂದೇಶ ತಳಸ್ತರದ ಜನರ ಆರೋಗ್ಯದ ಮೇಲೆ ದೊಡ್ಡ ಪರಿಣಾಮ ಬೀರಿದೆ. ಶೇ.35ರಷ್ಟು ಮಕ್ಕಳು ಪೌಷ್ಟಿಕಾಂಶದ ಕೊರತ ಅನುಭವಿಸುತ್ತಿದ್ದಾರೆ, ಶೇ.50ಕ್ಕಿಂತಲೂ ಹೆಚ್ಚು ಮಹಿಳೆಯರು ರಕ್ತಹೀನತೆಯಿಂದ ಬಳಲುತ್ತಿದ್ದಾರೆ. ದೈಹಿಕ ಪರಿಣಾಮ ಮಾತ್ರ ಅಲ್ಲ; ಮಾನಸಿಕ ಆರೋಗ್ಯದ ಮೇಲೂ ಪರಿಣಾಮ ಬೀರುತ್ತದೆ. ಇದು ಅವರ ಸಾಂಸ್ಕೃತಿಕ ನಿಕೃಷ್ಟೀಕರಣಕ್ಕೆ ಎಡೆ ಮಾಡಿಕೊಡುತ್ತದೆ. ಸಾಂಸ್ಕೃತಿಕ ನಿಕೃಷ್ಟೀಕರಣ ಎಂದರೆ ತಮ್ಮ ಸಂಸ್ಕೃತಿ ಬಗ್ಗೆ ಕೀಳರಿಮೆ ಹೊಂದುವುದು. ಸಾಂಸ್ಕೃತಿಕ ನಿಕೃಷ್ಟೀಕರಣ ತಮಗೆ ಆಗುವ ಅನ್ಯಾಯಗಳನ್ನು ಸಹಿಸಿಕೊಳ್ಳಲು ಮತ್ತು ಚಾರಿತ್ರಿಕವಾಗಿ ಯಜಮಾನಿಕೆ ಮಾಡುತ್ತಿರುವವರ ಯಜಮಾನಿಕೆಯನ್ನು ಸಹಜವೆಂದು ಒಪ್ಪಿಕೊಳ್ಳುವ ಮನಸ್ಥಿತಿಯನ್ನು ಹುಟ್ಟುಹಾಕುತ್ತದೆ. ಅವರ್‍ಯಾಕೆ ಅಲ್ಲಿ ನಾವ್ಯಾಕೆ ಇಲ್ಲಿ ಎನ್ನುವ ಪ್ರಶ್ನೆಗಳು, ಅವರಿಗೆ ಏಕೆ ಹೆಚ್ಚು ನಮಗ್ಯಾಕೆ ಕಡಿಮೆ, ಯಾವಾಗಲೂ ಅವರೇ ಏಕೆ ನಾಯಕರು ನಾವ್ಯಾಕೆ ಹಿಂಬಾಲಕರು ಎನ್ನುವ ಪ್ರಶ್ನೆಗಳನ್ನು ಹುಟ್ಟುಹಾಕಲು ಸಾಂಸ್ಕೃತಿಕ ನಿಕೃಷ್ಟೀಕರಣ ಅಡ್ಡಿ ಆಗುತ್ತದೆ.

ರಾಜಕೀಯ ವ್ಯವಸ್ಥೆ

ಸಾಮಾಜಿಕ ನ್ಯಾಯದ ಕಲ್ಪನೆಯನ್ನು ಬುಡಮೇಲುಗೊಳಿಸುವುದು– ಏಣಿಯ ಬುಡದಲ್ಲಿರುವವರಿಗೆ ಹಿಂದೆ ಆದ ಮತ್ತು ಈಗ ಆಗುತ್ತಿರುವ ಅನ್ಯಾಯಗಳನ್ನು ಸರಿಪಡಿಸುವುದು ಸಾಮಾಜಿಕ ನ್ಯಾಯದ ಕಲ್ಪನೆಯ ಸಾಮಾನ್ಯ ತಿಳಿವಳಿಕೆ. ಆದರೆ ಇತ್ತೀಚಿನ ದಿನಗಳಲ್ಲಿ ಏಣಿಯ ಬುಡದಲ್ಲಿರುವವರಿಗಿಂತ ಹೆಚ್ಚು ಮೇಲಿದ್ದವರ ಡಿಮಾಂಡ್‌ಗಳನ್ನು ಪೂರೈಸುವುದು ಸಾಮಾಜಿಕನ್ಯಾಯ ಆಗಿಬಿಟ್ಟಿದೆ! ಮೀಸಲಾತಿ ಹೋರಾಟವನ್ನು ಬಲಾಢ್ಯ ಸಮುದಾಯಗಳು ಮಾಡುತ್ತಿವೆ. ಸಾಮಾಜಿಕ ನ್ಯಾಯವನ್ನು ಆರ್ಥಿಕ ನ್ಯಾಯಕ್ಕೆ ಸಮೀಕರಿಸಲಾಗಿದೆ. ಅಂದರೆ ಮೀಸಲಾತಿಯನ್ನು ಬಡತನ ನಿವಾರಣ ಕಾರ್ಯಕ್ರಮಕ್ಕೆ ಸಮೀಕರಿಸಲಾಗಿದೆ. ಪಾರ್ಲಿಮೆಂಟ್ ಮತ್ತು ವಿಧಾನಸಭೆಗಳಲ್ಲಿ ಮಹಿಳೆಯರ ಮೀಸಲಾತಿ ಪ್ರಶ್ನೆ ಮೂಲೆಗುಂಪಾಗಿದೆ. 2013ರಲ್ಲಿ ಸಿದ್ಧಪಡಿಸಿದ ವಿವಾಹ ವಿಚ್ಛೇದನ ಕಾಯಿದೆ ತಿದ್ದುಪಡಿ ಬಿಲ್ ಇನ್ನೂ ಕೂಡ ಪಾರ್ಲಿಮೆಂಟ್‌ಗೆ ಬಂದಿಲ್ಲ. ಇನ್ನು ತಳಸ್ತರದ ಜನರಿಗೆ ಅಲ್ಪಸ್ವಲ್ಪ ಲಾಭ ತರುವ ಆಹಾರ ಭದ್ರತ ಕಾಯಿದೆ, ರೈಟ್ ಟು ಎಜುಕೇಶನ್ ಕಾಯಿದೆ, ಮಾಹಿತಿ ಹಕ್ಕು ಕಾಯಿದೆ, ಉದ್ಯೋಗ ಖಾತರಿ ಯೋಜನೆ ಎಲ್ಲವನ್ನು ಸಡಿಲಗೊಳಿಸಲಾಗಿದೆ.

ಅಲುಗಾಡುತ್ತಿರುವ ಫೆಡರಲ್ ಸ್ಟ್ರಕ್ಚರ್– ಒಂದು ದೇಶ ಒಂದು ಭಾಷೆ, ಒಂದು ಸಂಸ್ಕೃತಿ, ಒಂದು ಚುನಾವಣೆ, ಒಂದು ಪರೀಕ್ಷೆ, ಒಂದು ತೆರಿಗೆ, ಒಂದು ರೇಶನ್, ಒಂದು ಮಾರುಕಟ್ಟೆ ಇವೆಲ್ಲವೂ ಅಧಿಕಾರವನ್ನು ಕೇಂದ್ರೀಕರಿಸುವ ಘೋಷಣೆಗಳು. ಗವರ್ನರ್‌ಗಳ ಮೂಲಕ ರಾಜ್ಯ ಸರಕಾರಗಳನ್ನು ಅಸ್ಥಿರಗೊಳಿಸುವುದು, ಎಂಎಲ್‌ಎಗಳನ್ನು ಖರೀದಿಸಿ ರಾಜ್ಯ ಸರಕಾರಗಳನ್ನು ಉರುಳಿಸುವುದು ಇತ್ಯಾದಿಗಳೆಲ್ಲ ಸಾಮಾನ್ಯ ಎನ್ನುವಂತಾಗಿದೆ. ಕೇಂದ್ರ ಸರಕಾರದ 2022ರ ಅಧಿಕೃತ ಭಾಷೆ ಮೇಲಿನ ವರದಿ ಭಾಷಾವಾರು ಪ್ರಾಂತಗಳ ರಚನೆಯ ಮೂಲ ಉದ್ದೇಶಕ್ಕೆ ವಿರುದ್ಧವಾಗಿದೆ. ಕೇಂದ್ರದ ಎಲ್ಲ ಶಿಕ್ಷಣ ಸಂಸ್ಥೆಗಳಲ್ಲಿ ಹಿಂದಿ ಮಾಧ್ಯಮದಲ್ಲಿ ಪಠ್ಯಪ್ರವಚನಗಳು ನಡೆಯಬೇಕು, ಕೇಂದ್ರ ಸರಕಾರದ ಇಲಾಖೆಗಳಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ನಡೆಸುವ ಪರೀಕ್ಷೆಗಳನ್ನು ಹಿಂದಿಯಲ್ಲೇ ನಡೆಸಬೇಕು ಇತ್ಯಾದಿ ಶಿಫಾರಸ್ಸುಗಳನ್ನು ಅಧಿಕೃತ ಭಾಷೆ ಮೇಲಿನ ವರದಿ ಮಾಡಿದೆ. ಜಿಎಸ್‌ಟಿ, 14ನೇ ಹಣಕಾಸು ಸಮಿತಿ ವರದಿ, 15ನೇ ಹಣಕಾಸು ವರದಿ, ಆರ್ಟಿಕಲ್ 370 ರದ್ದತಿ ಇತ್ಯಾದಿಗಳು ಪಡರಲ್ ಸ್ಟ್ರಕ್ಚರ್ ಮೇಲೆ ಗಾಢ ಪರಿಣಾಮ ಬೀರುತ್ತಿವೆ. ಆದರೆ ಒಂದು ಭಾಷೆ, ಒಂದು ಸಂಸ್ಕೃತಿ, ಒಂದು ಧರ್ಮ, ಒಂದು ದೇಶದ ಹೆಸರಲ್ಲಿ ನಡೆಯುತ್ತಿರುವ ಸಾಂಸ್ಕೃತಿಕ ರಾಜಕೀಯ ಮೇಲಿನ ಎಲ್ಲ ಆಪಾಯಗಳ ಮೇಲೆ ದಪ್ಪನೆಯ ಕಂಬಳಿ ಹೊದಿಸಿದೆ.

ಸಾಂಸ್ಕೃತಿಕ ರಾಜಕೀಯದ ಮೌಲ್ಯಮಾಪನ

ಎಲ್ಲ ರಾಜಕೀಯ ಪಕ್ಷಗಳು ಜನರೇನು ಓದಬೇಕು? ನೋಡಬೇಕು? ಕೇಳಬೇಕು? ಎನ್ನುವ ಸಾಂಸ್ಕೃತಿಕ ರಾಜಕೀಯವನ್ನು ನಡೆಸುತ್ತಿವೆ. ಎಲ್ಲರೂ ಈ ಬಗೆಯ ಸಾಂಸ್ಕೃತಿಕ ರಾಜಕೀಯ ಮಾಡುವುದರಿಂದ ಯಾವುದು ಸಕಾರಾತ್ಮಕ ಯಾವುದು ನಕಾರಾತ್ಮಕ ಎನ್ನುವ ತೀರ್ಮಾನ ಮಾಡುವುದು ಹೇಗೆ? ಅಥವಾ ಪಕ್ಷವೊಂದರ ಸಾಂಸ್ಕೃತಿಕ ರಾಜಕೀಯದ ಮೌಲ್ಯಮಾಪನ ಮಾಡುವುದು ಹೇಗೆ? ಪಕ್ಷವೊಂದರ ಸಾಂಸ್ಕೃತಿಕ ರಾಜಕೀಯದ ಉದ್ದೇಶ ಏನು? ಅಥವಾ ಯಾವ ಬಗೆಯ ಸಮಾಜ, ಅರ್ಥ, ರಾಜಕೀಯವನ್ನು ಪಕ್ಷದ ಸಾಂಸ್ಕೃತಿಕ ರಾಜಕೀಯ ಸೃಷ್ಟಿಸುವ ಉದ್ದೇಶ ಹೊಂದಿದೆ? ಎನ್ನುವುದನ್ನು ಅರ್ಥಮಾಡಿಕೊಳ್ಳುವ ಮೂಲಕ ಸಾಂಸ್ಕೃತಿಕ ರಾಜಕೀಯ ಮೌಲ್ಯಮಾಪನ ಮಾಡಬಹುದು; ಸಂಬಂಧ, ಸಂಸ್ಥೆ, ಮೌಲ್ಯಗಳು ಎಲ್ಲ ಸಮಾಜದ ಮೂಲ ಪರಿಕರಗಳು. ಇವನ್ನು ಕಟ್ಟಿಕೊಳ್ಳುವಾಗ ಯಾವ ಮೌಲ್ಯವನ್ನು ಅನುಸರಿಸಬೇಕೆನ್ನುವ ಸೂಚನೆಯನ್ನು ಪಕ್ಷವೊಂದರ ಸಾಂಸ್ಕೃತಿಕ ರಾಜಕೀಯ ನೇರವಾಗಿ ಮತ್ತು ಪರೋಕ್ಷವಾಗಿ ನೀಡುತ್ತದೆ.

  1. ಸಂಬಂಧ, ಸಂಸ್ಥೆ, ಮೌಲ್ಯಗಳನ್ನು ಸಮಾನತೆಯ ನೆಲೆಯಲ್ಲಿ ಕಟ್ಟಿಕೊಳ್ಳಬೇಕೆ? ಅಥವಾ ಶ್ರೇಣೀಕೃತವಾಗಿ ಕಟ್ಟಿಕೊಳ್ಳಬೇಕೇ?
  2. ಜ್ಞಾನಕ್ಕೆ ಹೆಚ್ಚು ಒತ್ತು ನೀಡಬೇಕೇ? ಅಥವಾ ನಂಬಿಕೆಗೆ ಹೆಚ್ಚು ಒತ್ತು ನೀಡಬೇಕೇ?
  3. ವ್ಯಕ್ತಿ ಸ್ವಾತಂತ್ರ್ಯಕ್ಕೆ ಮಹತ್ವ ನೀಡಬೇಕೇ? ಅಥವಾ ಸಮಷ್ಠಿ ಹತೋಟಿಗ ಮಹತ್ವ ನೀಡಬೇಕೇ?
  4. ಜಾತ್ಯತೀತ ಸಮಾಜವೇ? ಅಥವಾ ಧರ್ಮಾಧಾರಿತ ಸಮಾಜವೇ?
  5. ಚರಿತ್ರೆ ಮುಖ್ಯವೇ? ಅಥವಾ ಮೈಥಾಲಾಜಿ ಮುಖ್ಯವೇ?

ಈ ಎಲ್ಲ ಮಾನದಂಡಗಳನ್ನು ಬಳಸಿಕೊಂಡು ಪಕ್ಷವೊಂದರ ಸಾಂಸ್ಕೃತಿಕ ರಾಜಕೀಯವನ್ನು ಮೌಲ್ಯಮಾಪನ ಮಾಡಬಹುದು. ಶ್ರೇಣೀಕರಣಕ್ಕೆ, ನಂಬಿಕೆಗೆ, ಮೈಥಾಲಾಜಿಗೆ, ಧರ್ಮಾಧಾರಿತ ಸಮಾಜಕ್ಕೆ, ಸಮಷ್ಠಿ ಹತೋಟಿಗೆ ಮಹತ್ವ ನೀಡುವ ಸಾಂಸ್ಕೃತಿಕ ರಾಜಕೀಯ ತಳಸ್ತರದ ಜನರ ಆಸಕ್ತಿಗೆ ವಿರುದ್ಧ ಇದೆ ಮತ್ತು ಮೇಲ್‌ಸ್ತರದ ಜನರ ಆಸಕ್ತಿ ಪರ ಇದೆ. ಇದೇ ರೀತಿಯಲ್ಲಿ ಸಮಾನತೆ, ಸ್ವಾತಂತ್ರ್ಯ, ಜಾತ್ಯತೀತ, ಜ್ಞಾನ, ಚರಿತ್ರೆಗೆ ಮಹತ್ವ ನೀಡುವ ಸಾಂಸ್ಕೃತಿಕ ರಾಜಕೀಯ ತಳಸ್ತರ ಪರ ಇರುತ್ತದೆ.

ಪರಿಹಾರಗಳೇನು?

ತಳಸ್ತರದ ಜನರ ಆಸಕ್ತಿಯನ್ನು ರಕ್ಷಿಸುವ ಸಾಂಸ್ಕೃತಿಕ ರಾಜಕೀಯವನ್ನು ಕಟ್ಟಿಕೊಳ್ಳುವುದು ಈ ಸಮಸ್ಯೆಗೆ ಪರಿಹಾರ. ಇಂತಹ ಸಾಂಸ್ಕೃತಿಕ ರಾಜಕೀಯವನ್ನು ನಡೆಸಬೇಕಾದರೆ ತಳಸ್ತರದ ಆರ್ಥಿಕ ಹಿತಾಸಕ್ತಿಯನ್ನು ರಕ್ಷಿಸುವ ಪಾಲಿಸಿಗಳ ಜೊತೆಗೆ ಆರ್ಥಿಕೇತರ ವಿಚಾರಗಳು ಮಹತ್ವ ಪಡೆಯಬೇಕಾಗುತ್ತದೆ. ಭೂಮಿ, ಬಂಡವಾಳ, ವಸತಿ, ಶಿಕ್ಷಣ, ಉದ್ಯೋಗ ಇತ್ಯಾದಿಗಳ ಜೊತೆಗೆ ಆರ್ಥಿಕೇತರ ವಿಚಾರಗಳು ಮಹತ್ವ ಪಡೆಯಬೇಕು. ಒಬ್ಬ ವ್ಯಕ್ತಿ/ಕುಟುಂಬದ ದಿನದ ಬಹುಭಾಗ ಆರ್ಥಿಕೇತರ ಆಚಾರವಿಚಾರಗಳಿಗೆ ಬಳಕೆಯಾಗುತ್ತಿದೆ. ಅಂದರೆ ವ್ಯಕ್ತಿಯ ಒಂದು ದಿನದ 24 ಗಂಟೆಗಳಲ್ಲಿ 8 ಗಂಟೆಗಳು ದುಡಿತ ಅಥವಾ ಆರ್ಥಿಕ ಚಟುವಟಿಕೆಗೆ ಬಳಕೆಯಾಗಬಹುದು. ಉಳಿದ 16 ಗಂಟೆಗಳು ಆರ್ಥಿಕೇತರ ಆಚಾರವಿಚಾರಗಳಿಗೆ ಬಳಕೆ ಆಗುತ್ತಿವೆ. ಅಂದರೆ ಆರ್ಥಿಕ ವಿಚಾರಗಳಿಗೆ ಮಹತ್ವ ನೀಡುವ ಪಕ್ಷ ದಿನದ ಬಹುಭಾಗ ವ್ಯಕ್ತಿಯ/ಕುಟುಂಬದ ಜೊತೆಗಿರುವುದಿಲ್ಲ. ಇದನ್ನೇ ಮತ್ತೊಂದು ವಿಧದಲ್ಲಿ ಹೇಳುವುದಾದರೆ ಆರ್ಥಿಕೇತರ ವಿಚಾರಗಳಿಗೆ ಮಹತ್ವ ನೀಡುವ ಪಕ್ಷ ದಿನದ ಬಹುಭಾಗ ವ್ಯಕ್ತಿ/ಕುಟುಂಬದ ಜೊತೆಗಿರುತ್ತದೆ.

ಅಷ್ಟು ಮಾತ್ರವಲ್ಲ, ಬೇರೆಬೇರೆ ಜಾತಿ, ಧರ್ಮದ ಹಿನ್ನೆಲೆಯಿಂದ ಬಂದ ಜನರು ಜೊತೆಗೆ ದುಡಿಯುವಾಗ ಮತ್ತು ದುಡಿತಕ್ಕೆ ಸಂಬಂಧಿಸಿದ (ಸಂಬಳ, ಕೆಲಸದ ಅವಧಿ ಇತ್ಯಾದಿಗಳ) ಹೋರಾಟ ನಡೆಸುವಾಗ ದುಡಿಯುವ ನಾವೆಲ್ಲಾ ಒಂದೇ ಎನ್ನುವ ಭಾವನೆ ಹೊಂದಬಹುದು. ಆದರೆ ದುಡಿತ ಅಥವಾ ಹೋರಾಟ ಮುಗಿಸಿ ಮನೆ ಸೇರಿದ ನಂತರ ಜಾತಿ, ಧರ್ಮಗಳು ಮತ್ತು ಇತರ ಸಾಮಾಜಿಕ ಸಾಂಸ್ಕೃತಿಕ ಸಂಬಂಧ ಮತ್ತು ಮೌಲ್ಯಗಳು ಕಾರುಬಾರು ಮಾಡಲು ಶುರುಮಾಡುತ್ತವೆ. ಇದೇ ಕಾರಣದಿಂದ ಒಂದೇ ಘಟನೆ ಅಥವಾ ಬೆಳವಣಿಗೆ ಒಂದೇ ವರ್ಗಕ್ಕೆ ಸೇರಿದ ಆದರೆ ಬೇರೆ ಜಾತಿ, ಧರ್ಮಕ್ಕೆ ಸೇರಿದ ಜನರಿಗೆ ಬೇರೆಬೇರೆ ರೀತಿ ಕಾಣುತ್ತದೆ. ಮಾಂಸಾಹಾರದ ಪ್ರಶ್ನೆಯನ್ನು ಒಂದೇ ವರ್ಗಕ್ಕೆ ಸೇರಿದ ಆದರೆ ಮಾಂಸಾಹಾರಿಗಳು ನೋಡುವುದಕ್ಕೂ ಮಾಂಸಾಹಾರಿಗಳಲ್ಲದವರು ನೋಡುವುದಕ್ಕೂ ವ್ಯತ್ಯಾಸ ಇದೆ. ಅಂತರ್‌ಜಾತಿ, ಅಂತರ್‌ಧರ್ಮೀಯ ವಿವಾಹವನ್ನು ಒಂದೇ ವರ್ಗಕ್ಕೆ ಸೇರಿದ ಆದರೆ ಬೇರೆಬೇರೆ ಜಾತಿ, ಧರ್ಮಕ್ಕೆ ಸೇರಿದ ಬಡವರು ಒಂದೇ ದೃಷ್ಟಿಯಿಂದ ನೋಡುವುದಿಲ್ಲ. ಇವರೆಲ್ಲ ಒಂದು ಬೆಳವಣಿಗೆಯನ್ನು ಒಂದೇ ದೃಷ್ಟಿಯಿಂದ ನೋಡಬೇಕಾದರೆ ಇವರ ಸಾಮಾಜಿಕ, ಸಾಂಸ್ಕೃತಿಕ ಹಿನ್ನೆಲೆಯನ್ನು ಗಮನದಲ್ಲಿಟ್ಟುಕೊಂಡು ಸಂಸ್ಕೃತಿ ಮುನ್ನಡೆಯಬೇಕಾಗುತ್ತದೆ.

ಇದು ಸಾಧ್ಯವಾಗಬೇಕಾದರೆ ಮತ್ತೊಬ್ಬರನ್ನು ಮತ್ತೊಂದು ಸಂಸ್ಕೃತಿಯನ್ನು ಅರ್ಥಮಾಡಿಕೊಳ್ಳುವ ಕಾರ್ಯಕ್ರಮಗಳು ಹೆಚ್ಚಾಗಬೇಕು. ಕಸುಬಿನ ಮೇಳ ಮತ್ತು ಸ್ಪರ್ಧೆಗಳು, ಆಹಾರದ ಮೇಳ ಮತ್ತು ಸ್ಪರ್ಧೆಗಳು, ಉಡುಗೆತೊಡುಗೆ ಮೇಳ ಮತ್ತು ಸ್ಪರ್ಧೆಗಳು, ವಿಚಾರಸಂಕಿರಣಗಳು ನಡೆಯಬೇಕು. ತಳಸ್ತರದ ಜನರ ಹಾಡು, ಕುಣಿತ, ಕಥನ, ಕಾವ್ಯ, ಉಡುಗೆತೊಡುಗೆ, ಊಟ ಉಪಚಾರ, ದೇವರು ಇವನ್ನು ಮುಖ್ಯವಾಹಿನಿಗೆ ತರುವ ಕಾರ್ಯಕ್ರಮಗಳು ಹೆಚ್ಚುಹೆಚ್ಚು ನಡೆಯಬೇಕು. ಇವೆಲ್ಲವೂ ಜಾತ್ಯತೀತ ಪ್ರಜ್ಞೆಯನ್ನು ಬಲಗೊಳಿಸಬೇಕಾದರೆ ಜಾತ್ಯತೀತತೆಯ ಚರ್ಚೆಯನ್ನು ಧರ್ಮದಿಂದ ಬೇರ್ಪಡಿಸುವ ಅಗತ್ಯ ಇದೆ. ಇಂಗ್ಲಿಷ್‌ನ ಸೆಕ್ಯುಲರ್ ಪರಿಭಾಷೆಗಿಂತ ಕನ್ನಡದ ಜಾತ್ಯತೀತ ಪರಿಭಾಷೆ ಹೆಚ್ಚು ಉಪಯುಕ್ತ. ಜಾತ್ಯತೀತ ಅಂದರೆ ಜಾತಿಧರ್ಮಗಳನ್ನು ಮೀರಿದ್ದು. ಏಕೆ? ಹೇಗೆ? ಮೀರಿದ್ದು. ಮತ್ತೊಬ್ಬ ವ್ಯಕ್ತಿಯ ಇರುವಿಕೆಯನ್ನು ಪರಿಗಣಿಸುವಾಗ, ಮತ್ತೊಬ್ಬರೊಂದಿಗೆ ವ್ಯವಹರಿಸುವಾಗ ಜಾತಿ, ಧರ್ಮಗಳು ಮುಖ್ಯವಾಗಬಾರದೆಂದು ಜಾತ್ಯತೀತ ಕಲ್ಪನೆ ಹೇಳುತ್ತದೆ. ಜಾತಿ, ಧರ್ಮಗಳು ಮುಖ್ಯ ಅಲ್ಲದಿದ್ದರೆ ಮತ್ಯಾವ ಮೌಲ್ಯ ನಮ್ಮ ನಡವಳಿಕೆಯನ್ನು ಪ್ರಭಾವಿಸಬೇಕು? ಮತ್ತೊಬ್ಬರು ನಮ್ಮ ಹಾಗೆ ಮನುಷ್ಯರು, ನಾವು ಮತ್ತೊಬ್ಬರಿಂದ ಯಾವ ಗೌರವ, ಮಾನಸಮ್ಮಾನಗಳನ್ನು ನಿರೀಕ್ಷಿಸುತ್ತೇವೆಯೋ ಅದೇ ಗೌರವ ಮಾನಸಮ್ಮಾನದಿಂದ ಮತ್ತೊಬ್ಬರನ್ನು ನೋಡುವುದು, ವ್ಯವಹರಿಸುವುದು ಜಾತ್ಯತೀತ ಕಲ್ಪನೆಯ ಉದ್ದೇಶ.

ಸಮಾರೋಪ

ಸಾಂಸ್ಕೃತಿಕ ರಾಜಕೀಯದ ಕಿರುಪರಿಚಯವನ್ನು ಹಿಂದಿನ ಪುಟಗಳಲ್ಲಿ ನೀಡಿದ್ದೇನೆ. ಜನರ ಧರ್ಮ, ದೇವರು, ಉಣ್ಣುವ, ತಿನ್ನುವ, ಪ್ರೀತಿಸುವ, ಪೂಜಿಸುವ ವಿಚಾರಗಳನ್ನು ಬಳಸಿಕೊಂಡು ನಡೆಸುವ ರಾಜಕೀಯ ಎನ್ನುವ ಅರ್ಥದಲ್ಲಿ ಸಾಂಸ್ಕೃತಿಕ ರಾಜಕೀಯನ್ನು ನೋಡುವ ಕ್ರಮ ಇದೆ. ಇದೊಂದು ಸೀಮಿತ ದೃಷ್ಟಿಕೋನ. ಏಕೆಂದರೆ ಇವೆಲ್ಲವೂ ಜನರ ಆಚಾರಗಳಿಗೆ ಸಂಬಂಧಿಸಿದ ವಿಚಾರಗಳು. ಇದು ಸಾಂಸ್ಕೃತಿಕ ರಾಜಕೀಯದ ಎಲ್ಲ ಆಯಾಮಗಳನ್ನು ಪರಿಚಯಿಸುವುದಿಲ್ಲ. ಆಳದಲ್ಲಿ ಸಾಂಸ್ಕೃತಿಕ ರಾಜಕೀಯ ಜನರ ವಿಚಾರಗಳಿಗೆ, ದೃಷ್ಟಿಕೋನಕ್ಕೆ, ಲೋಕದೃಷ್ಟಿಗೆ ಸಂಬಂಧಿಸಿದ ವಿಚಾರ. ಏಕೆಂದರೆ ವಿಚಾರ ಆಚಾರ ಅಧಿಕಾರಗಳ ನಡುವೆ ನೇರ ಸಂಬಂಧ ಇದೆ. ಇವತ್ತು ಕೆಲವರಲ್ಲೇ ಅಧಿಕಾರ ಕ್ರೋಢೀಕರಣಗೊಂಡಿದ್ದರೆ ಅದು ಬಲಾತ್ಕಾರದಿಂದ ನಡೆಯುವ ಪ್ರಕ್ರಿಯೆ ಅಲ್ಲ. ಜನರ ಒಪ್ಪಿಗೆಯಿಂದಲೇ ನಡೆಯುವ ಪ್ರಕ್ರಿಯೆ. ಜನರ ಒಪ್ಪಿಗೆಯನ್ನು ಪಡೆಯಲು (ಬೆಂಬಲ ಪಡೆಯಲು) ಚರಿತ್ರೆಯಿಂದ ಬಂದ ಕಥನಗಳ ಜೊತೆಗೆ ಹೊಸ ಕಥನಗಳನ್ನು ಬಳಸಿಕೊಳ್ಳಲಾಗುತ್ತಿದೆ. ಚರಿತ್ರೆಯಿಂದ ಬಂದ ಕಥನಗಳು ಈಗಾಗಲೇ ಜನರ ಪ್ರಜ್ಞೆಯ ಭಾಗವಾಗಿವೆ. ಸಂಘ, ಸಂಸ್ಥೆ, ಸಂಪನ್ಮೂಲ ಬಳಸಿಕೊಂಡು ಹೊಸ ಕಥನಗಳನ್ನು ಜನರ ಪ್ರಜ್ಞೆಯ ಭಾಗ ಮಾಡಲಾಗುತ್ತಿದೆ. ಸಮಾಜದ ಎಲ್ಲ ವರ್ಗದ ಜನರು ಕಥನಗಳನ್ನು ಕಟ್ಟಿಕೊಳ್ಳುತ್ತಾರೆ. ಆದರೆ ಎಲ್ಲ ವರ್ಗದ ಜನರ ಕಥನಗಳು ಸಮಷ್ಠಿಯ ಕಥನಗಳಾಗುವುದಿಲ್ಲ. ಏಕೆಂದರೆ ಕಥನಗಳು ಅವೇ ಚಲಿಸಿ ಜನರ ಪ್ರಜ್ಞೆಯ ಭಾಗವಾಗುವುದಿಲ್ಲ. ಕಥನಗಳನ್ನು ಜನರ ಪ್ರಜ್ಞೆಯ ಭಾಗ ಮಾಡಲು ಸಂಪನ್ಮೂಲ, ಸಂಸ್ಥೆ, ಸಂಘಟನೆಗಳು ಬೇಕು. ಇವೆಲ್ಲವೂ ಮೇಲ್ವರ್ಗದವರಲ್ಲಿ ಇದ್ದಷ್ಟು ತಳಸ್ತರದ ಜನರಲ್ಲಿ ಇಲ್ಲ. ಇದೇ ಕಾರಣದಿಂದ ತಳಸ್ತರದ ಜನರು ಮೇಲ್ವರ್ಗದವರ ಕನ್ನಡಕ ಹಾಕಿಕೊಂಡು ಲೋಕ ನೋಡುವ ಅನಿವಾರ್‍ಯತೆ ಇದೆ. ಈ ಅನಿವಾರ್‍ಯತೆಯಿಂದ ಹೊರಬರಲು ಅವರಿಗಿರುವುದು ಒಂದೇ ದಾರಿ. ಅದೇನೆಂದರೆ ಅವರ ಸಂಖ್ಯೆಯನ್ನು ಸಮರ್ಥವಾಗಿ ಬಳಸಿಕೊಳ್ಳುವುದು. ಸಮಾಜದ ಬಹುತೇಕರು ಈ ತಳಸ್ತರಕ್ಕೆ ಸೇರಿದವರು. ಈ ಸಂಖ್ಯೆ ಶಕ್ತಿ ಆಗಬೇಕಾದರೆ ಅವರೆಲ್ಲ ಸಂಘಟಿತರಾಗಬೇಕು. ಸಂಘಟಿತರಾಗಲು ಸಾಂಸ್ಕೃತಿಕ ರಾಜಕೀಯ ಅತೀ ಅವಶ್ಯ.

ಎಂ. ಚಂದ್ರ-ಪೂಜಾರಿ

ಎಂ.ಚಂದ್ರ ಪೂಜಾರಿ
ಮಂಗಳೂರಿನವರು. ಹಂಪಿ ಕನ್ನಡ ವಿವಿಯ ಅಭಿವೃದ್ಧಿ ಅಧ್ಯಯನ ವಿಭಾಗದ ನಿವೃತ್ತ ಪ್ರೊಫೆಸರ್

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

1 COMMENT

  1. Very balanced and thought provoking article. There are several productive suggestions for alternative cultural politics. Thanks to naanugauri and Chandra Poojari

LEAVE A REPLY

Please enter your comment!
Please enter your name here

- Advertisment -

Must Read

ಹೇಮಂತ್ ಕರ್ಕರೆ ಆರೆಸ್ಸೆಸ್‌ ನಂಟಿನ ಪೊಲೀಸ್ ಅಧಿಕಾರಿಯ ಗುಂಡಿಗೆ ಬಲಿಯಾಗಿದ್ದು: ವಿಜಯ್ ವಡೆಟ್ಟಿವಾರ್

0
2008ರ ಮುಂಬೈ ಭಯೋತ್ಪಾದಕ ದಾಳಿಯ ಸಮಯದಲ್ಲಿ ರಾಜ್ಯ ಭಯೋತ್ಪಾದನಾ ನಿಗ್ರಹ ದಳದ(ಎಟಿಎಸ್) ಮಾಜಿ ಮುಖ್ಯಸ್ಥ ಹೇಮಂತ್ ಕರ್ಕರೆ ಅವರನ್ನು ಹತ್ಯೆಗೈದಿದ್ದು ಭಯೋತ್ಪಾದಕ ಅಜ್ಮಲ್ ಅಮೀರ್ ಕಸಬ್ ಅಲ್ಲ, ಆರೆಸ್ಸೆಸ್‌ ಜೊತೆ ನಂಟು ಹೊಂದಿದ್ದ...