ಏಪ್ರಿಲ್ 26 ಶುಕ್ರವಾರದಂದು ಮತದಾನದ ವೇಳೆ ಘರ್ಷಣೆ ಉಂಟಾದ ಚಾಮರಾಜನಗರ ಜಿಲ್ಲೆ ಹನೂರು ತಾಲೂಕಿನ ಇಂಡಿಗನತ್ತ ಗ್ರಾಮದಲ್ಲಿ ಸೋಮವಾರ (ಏ.29) ಮರು ಮತದಾದ ನಡೆಯಲಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ.
ಈ ಕುರಿತು ಎಕ್ಸ್‌ನಲ್ಲಿ ಮಾಹಿತಿ ಹಂಚಿಕೊಂಡಿರುವ ಕರ್ನಾಟಕದ ಮುಖ್ಯ ಚುನಾವಣಾಧಿಕಾರಿ “ಚಾಮರಾಜನಗರ ಲೋಕಸಭಾ ಕ್ಷೇತ್ರದ, ಹನೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಇಂಡಿಗನತ್ತ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಮತಗಟ್ಟೆ ಸಂಖ್ಯೆ 146ರಲ್ಲಿ ನಡೆದ ಮತದಾನವನ್ನು ಅನೂರ್ಜಿತಗೊಳಿಸಿ ಮರು ಮತದಾನ ನಡೆಸಲು ಭಾರತ ಚುನಾವಣಾ ಆಯೋಗ ಆದೇಶಿಸಿದೆ” ಎಂದು ತಿಳಿಸಿದ್ದಾರೆ.
ದಿನಾಂಕ 27-04-2024 ರ ಪತ್ರಿಕಾ ಪ್ರಕಟಣೆ.#ceokarnataka #LokaSabhaElection2024 #Election2024 #seizure #management #illegal #saynotoinducements #beafairvoter pic.twitter.com/tW1ej2MZ2n
— Chief Electoral Officer, Karnataka (@ceo_karnataka) April 27, 2024
ಚಾಮರಾಜನಗರ ಲೋಕಸಭಾ ಕ್ಷೇತ್ರದ ಚುನಾವಣಾಧಿಕಾರಿಗಳು ಮತ್ತು ಆಯೋಗ ನಿಯೋಜಿತ ಸಾಮಾನ್ಯ ವೀಕ್ಷಕರು ಸಲ್ಲಿಸಿದ ವರದಿಗಳ ಆಧಾರದ ಮೇಲೆ ಮತ್ತು ಎಲ್ಲಾ ಸಂಬಂಧಿತ ಸಂದರ್ಭಗಳನ್ನು ಪರಿಗಣಿಸಿದ ನಂತರ ಭಾರತ ಚುನಾವಣಾ ಆಯೋಗ ಪ್ರಜಾ ಪ್ರತಿನಿಧಿ ಕಾಯ್ದೆಯ ಸೆಕ್ಷನ್ 58 (2) ಮತ್ತು 58ಎ (2) ಪ್ರಕಾರ 29 ಏಪ್ರಿಲ್ 2024ರಂದು ಸೋಮವಾರ ಮರು ಮತದಾನ ನಡೆಸಲು ನಿರ್ಧಿರಿಸಿದೆ ಎಂದು ಮಾಹಿತಿ ನೀಡಿದ್ದಾರೆ.
ಸೋಮವಾರ ಬೆಳಿಗ್ಗೆ 7ರಿಂದ ಸಂಜೆ 6 ಗಂಟೆಯವರೆಗೆ ಮರು ಮತದಾನ ನಡೆಯಲಿದೆ. ಈ ಮತಗಟ್ಟೆ ವ್ಯಾಪ್ತಿಯಲ್ಲಿ 528 ಮತದಾರರಿದ್ದಾರೆ. ಆದರೆ, ಶುಕ್ರವಾರ ಕೇವಲ ಒಂಬತ್ತು ಮಂದಿಯಷ್ಟೇ ಮತದಾನ ಮಾಡಿದ್ದರು.
ಮತದಾನ ಬಹಿಷ್ಕಾರದ ವಿಚಾರದಲ್ಲಿ ಇಂಡಿಗನತ್ತ, ಮೆಂದಾರೆ ಗ್ರಾಮಸ್ಥರು ಹಾಗೂ ಪೊಲೀಸರ ನಡುವೆ ಉಂಟಾದ ಘರ್ಷಣೆ ಸಂದರ್ಭದಲ್ಲಿ, ಉದ್ರಿಕ್ತರು ಇಂಡಿಗನತ್ತ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ತೆರೆಯಲಾಗಿದ್ದ ಮತಗಟ್ಟೆಯ ಮೇಲೆ ಕಲ್ಲು ತೂರಾಟ ನಡೆಸಿದ್ದರು. ಮತಗಟ್ಟೆಗೆ ನುಗ್ಗಿ ಇವಿಎಂಗೆ ಬೆಂಕಿ ಹಚ್ಚಲೂ ಯತ್ನಿಸಿದ್ದರು. ಇನ್ನಿತರ ಪರಿಕರಗಳನ್ನು ಕೆಳಕ್ಕೆ ಎಸೆದು ಹಾನಿ ಮಾಡಿದ್ದರು ಎಂದು ತಿಳಿದು ಬಂದಿದೆ.
ಶುಕ್ರವಾರ ಮತದಾನದ ದಿನ ನಡೆದ ಘರ್ಷಣೆಗೆ ಸಂಬಂಧಿಸಿದಂತೆ 41 ಗ್ರಾಮಸ್ಥರ ವಿರುದ್ಧ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ. ಪ್ರಸ್ತುತ ಗ್ರಾಮದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ.
ಇದನ್ನೂ ಓದಿ : ಬೆಂಗಳೂರು ದಕ್ಷಿಣ ಕ್ಷೇತ್ರದ ಮತಗಟ್ಟೆಯೊಂದರಲ್ಲಿ ‘ನಕಲಿ ಮತದಾನ’!


