ಮಣಿಪುರದಲ್ಲಿ ಹಿಂಸಾಚಾರ ಪ್ರಾರಂಭಗೊಂಡು ಇಂದಿಗೆ (ಮೇ 3, 2024) ಒಂದು ವರ್ಷ ಪೂರ್ಣಗೊಂಡಿದೆ. ಭಾರತದ ಈಶಾನ್ಯದಲ್ಲಿರುವ ಪ್ರಶಾಂತವಾದ ಬೆಟ್ಟ ಗುಡ್ಡಗಳಾವೃತ ಪುಟ್ಟ ರಾಜ್ಯದ ಮೇ 3, 2023ರಿಂದ ಹಿಂಸಾಚಾರದ ಸುಳಿಯಲ್ಲಿ ಸಿಲುಕಿ ಹೆಣಗಾಡುತ್ತಿದೆ. ರಾಜ್ಯದ ಸಾವಿರಾರು ಜನರು ಸ್ಥಳಾಂತರಗೊಂಡಿದ್ದಾರೆ. ನೂರಾರು ಜನರು ಕೊಲ್ಲಲ್ಪಟ್ಟಿದ್ದಾರೆ. ಹಲವಾರು ಮಂದಿ ಇನ್ನೂ ಕಾಣೆಯಾಗಿದ್ದಾರೆ. ಒಂದು ವರ್ಷದ ಹಿಂಸಾಚಾರ ಜನರು ತಮ್ಮ ವ್ಯವಹಾರ, ಮನೆ, ಆಸ್ತಿ ಮತ್ತು ಪ್ರೀತಿ ಪಾತ್ರರನ್ನು ಕಳೆದುಕೊಳ್ಳುವಂತೆ ಮಾಡಿದೆ. ರಾಜ್ಯ ಈ ಹಿಂದಿನಂತೆ ಶಾಂತಿಯುತ ಸಹಜ ಸ್ಥಿತಿಗೆ ಮರಳುವ ಲಕ್ಷಣ ಇನ್ನೂ ಕಾಣುತ್ತಿಲ್ಲ.
ದಾಖಲೆಗಳ ಪ್ರಕಾರ, ಒಂದು ವರ್ಷದ ಹಿಂಸಾಚಾರದಲ್ಲಿ 200ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ ಮತ್ತು ನೂರಾರು ಜನರು ಗಾಯಗೊಂಡಿದ್ದಾರೆ. ದೌರ್ಜನ್ಯದ ವರದಿಗಳು ಅತ್ಯಂತ ಭೀಕರವಾಗಿದೆ. ಹಿಂಸಾಚಾರದಿಂದ ರಾಜ್ಯ ಎರಡು ಭಾಗಗಳಾಗಿದ್ದು, ಭೂಮಿ ಮತ್ತು ಇತರ ಸೌಲಭ್ಯಗಳು ಮೈತೇಯಿ ಮತ್ತು ಕುಕಿ ಎಂಬ ಎರಡು ಸಮುದಾಯಗಳ ನಡುವೆ ಧಾರ್ಮಿಕ ಮತ್ತು ಜನಾಂಗೀಯ ರೇಖೆಗಳಲ್ಲಿ ವಿಂಗಡಣೆಯಾಗಿದೆ.
ಮಣಿಪುರದ ಒಟ್ಟು ಜನ ಸಂಖ್ಯೆಯ ಶೇ. 53ರಷ್ಟು ಇರುವ ಮೈತೇಯಿ ಸಮುದಾಯವನ್ನು ಪರಿಶಿಷ್ಟ ಪಂಗಡಗಳ (ಎಸ್‌ಟಿ) ಪಟ್ಟಿಗೆ ಸೇರಿಸಲು ಕಳೆದ ವರ್ಷ ಮಾರ್ಚ್‌ನಲ್ಲಿ ಹೈಕೋರ್ಟ್ ನೀಡಿದ ಆದೇಶದಿಂದ ಹಿಂಸಾಚಾರ ಭುಗಿಲೆದ್ಧಿತ್ತು.
ಆರಂಭದಲ್ಲಿ ಶಾಂತಿಯುತ ಪ್ರತಿಭಟನೆಗಳು ನಡೆದರೂ, ಬಳಿಕ ಅದು ಹಿಂಸಾಚಾರಕ್ಕೆ ತಿರುಗಿತು. ಸಿಎಂ ಬಿರೇನ್ ಸಿಂಗ್ ಅವರು ಏಪ್ರಿಲ್ 27 ರಂದು ಚುರಾಚಂದ್‌ಪುರಕ್ಕೆ ಭೇಟಿ ನೀಡುವ ಒಂದು ದಿನದ ಮೊದಲು, ಅವರು ಉದ್ಘಾಟಿಸಲು ಹೊರಟಿದ್ದ ಜಿಮ್‌ಗೆ ಬೆಂಕಿ ಹಚ್ಚಲಾಯಿತು. ಪರಿಣಾಮ ರಾಜ್ಯದ ವಿವಿದೆಡೆ ಕರ್ಫ್ಯೂ ವಿಧಿಸಲಾಯಿತು ಮತ್ತು ಇಂಟರ್ನೆಟ್ ಸ್ಥಗಿತಗೊಳಿಸಲಾಯಿತು. ಮಣಿಪುರದ ಆಲ್ ಟ್ರೈಬಲ್ ಸ್ಟೂಡೆಂಟ್ಸ್ ಯೂನಿಯನ್ (ಎಟಿಎಸ್‌ಯುಎಂ) ಆಯೋಜಿಸಿದ ಬುಡಕಟ್ಟು ಒಗ್ಗಟ್ಟಿನ ಮೆರವಣಿಗೆಯ ನಂತರ ಉದ್ವಿಗ್ನತೆ ಉಲ್ಬಣಗೊಂಡಿತು. ಈ ಮೆರವಣಿಗೆಯಲ್ಲಿ ಸುಮಾರು 60,000 ಜನರು ಭಾಗವಹಿಸಿದ್ದರು ಎಂದು ಹೇಳಲಾಗುತ್ತಿದೆ.
ಹಿಂಸಾಚಾರ ಉಲ್ಬಣಗೊಂಡಾಗ, ಅದು ರಾಷ್ಟ್ರ ಮಟ್ಟದಲ್ಲಿ ಗಮನ ಸೆಳೆಯಿತು. ಮಣಿಪುರ ಅಕ್ಷರಶಃ ಯುದ್ಧ ಭೂಮಿಯಾಗಿ ಮಾರ್ಪಟ್ಟಿತು. ಮೈತೇಯಿ ಮತ್ತು ಕುಕಿ-ಝೋ ಬುಡಕಟ್ಟುಗಳ ನಡುವಿನ ಬಿರುಕು ಮತ್ತಷ್ಟು ಆಳವಾಯಿತು. ಹಿಂಸಾಚಾರ ಇಂಫಾಲ್ ಮತ್ತು ಚುರಾಚಂದ್‌ಪುರದಿಂದ ಇಂಫಾಲ್ ಕಣಿವೆಯ ಹೊರ ಪ್ರದೇಶಗಳಿಗೂ ಹಬ್ಬಿತು. ಎರಡೂ ಕಡೆಯವರು ತೀವ್ರವಾದ ಗುಂಡಿನ ಚಕಮಕಿ ಮತ್ತು ಹೊಂಚುದಾಳಿಗಳನ್ನು ಪ್ರಾರಂಭಿಸಿದರು.
ಮೈತೇಯಿ ಮತ್ತು ಕುಕಿ ಝೋ ಸಮುದಾಯಗಳ ನಡುವಿನ ಸಂಘರ್ಷಕ್ಕೆ ಪ್ರಸ್ತುತ ಒಂದು ವರ್ಷ ತುಂಬಿದೆ. ಎರಡೂ ಸಮುದಾಯಗಳು ಜನಾಂಗೀಯ ರೇಖೆಗಳ ಮೇಲೆ ವಿಭಜಿಸಲ್ಪಟ್ಟಿವೆ. ಒಂದು ಸಮುದಾಯದ ಜನರು ಮತ್ತೊಂದು ಸಮುದಾಯದವರು ಇರುವ ಪ್ರದೇಶಗಳಿಗೆ ತೆರಳದಂತಹ ಪರಿಸ್ಥಿತಿಯಿದೆ. ಅನೇಕ ಪ್ರದೇಶಗಳನ್ನು ಸೂಕ್ಷ್ಮ ವಲಯಗಳು ಎಂದು ಗುರುತಿಸಿ ಸೇನಾ ಸಿಬ್ಬಂದಿಯನ್ನು ನೇಮಿಸಲಾಗಿದೆ.
ಮಣಿಪುರ ಹಿಂಸಾಚಾರಕ್ಕೆ ಒಂದು ವರ್ಷ ತುಂಬಿರುವ ಹಿನ್ನೆಲೆ ದೆಹಲಿ, ಬೆಂಗಳೂರು ಸೇರಿದಂತೆ ದೇಶದ ವಿವಿಧ ನಗರಗಳಲ್ಲಿ ಕುಕಿ ಮತ್ತು ಮೈತೇಯಿ ಎರಡೂ ಸಮುದಾಯಗಳ ಜನರು ವಿಶೇಷ ಸಭೆ, ಪ್ರತಿಭಟನೆಗಳನ್ನು ಹಮ್ಮಿಕೊಂಡಿದ್ದಾರೆ.
ಪ್ರಸ್ತುತ ಸುಮಾರು 50 ಸಾವಿರ ಆಂತರಿಕವಾಗಿ ಸ್ಥಳಾಂತರಗೊಂಡ ಜನರು ಇನ್ನೂ ಪರಿಹಾರ ಶಿಬಿರಗಳಲ್ಲಿ ವಾಸಿಸುತ್ತಿದ್ದಾರೆ. ಕನಿಷ್ಠ 13,247 ಕಟ್ಟಡಗಳನ್ನು ನಾಶಪಡಿಸಲಾಗಿದೆ ಅಥವಾ ನಾಶವಾಗಿವೆ. ಕಳೆದ 12 ತಿಂಗಳಲ್ಲಿ ಅಧಿಕೃತವಾಗಿ ಸುಮಾರು 28 ಜನರು ಕಾಣೆಯಾಗಿದ್ದಾರೆ, ಅಪಹರಣಕ್ಕೊಳಗಾಗಿದ್ದಾರೆ ಅಥವಾ ಕೊಲೆಯಾಗಿದ್ದಾರೆಂದು ಭಾವಿಸಲಾಗಿದೆ. ಪ್ರಸ್ತುತ ದೊಡ್ಡ ಮಟ್ಟದ ಸಂಘರ್ಷ ನಿಂತಿದೆ. ಆದರೆ, ರಾಜ್ಯದ ವಿವಿದೆಡೆ ಆಗಾಗ ಗಲಾಟೆಗಳು ವರದಿಯಾಗುತ್ತಿರುತ್ತವೆ.
12 ತಿಂಗಳ ಹಿಂಸಾಚಾರದಿಂದ ಸಾರಿಗೆ ಮತ್ತು ಸಂವಹನ ಸೇವೆಗಳಿಗೆ ಅಡಚಣೆಯಾಗಿದೆ. ವ್ಯಾಪಾರ, ಶಾಲಾ- ಕಾಲೇಜುಗಳು ಮತ್ತು ಇತರ ಸಂಸ್ಥೆಗಳ ಮೇಲೆ ದೊಡ್ಡ ಪರಿಣಾಮ ಬೀರಿದೆ. ಮಣಿಪುರದ ಆರ್ಥಿಕತೆಯ ಮುಖ್ಯ ಆಧಾರವೆಂದು ಪರಿಗಣಿಸಲಾದ ಕೃಷಿ ವಲಯದ ಮೇಲೂ ಪರಿಣಾಮ ಬೀರಿದೆ.
ಒಂದು ವರ್ಷದಲ್ಲಿ ನೂರಾರು ಅಪರಾಧ ಪ್ರಕರಣಗಳು ಬೆಳಕಿಗೆ ಬಂದಿವೆ. ಅವುಗಳಲ್ಲಿ ಹಲವು ಪ್ರಕರಣಗಳನ್ನು ಇನ್ನೂ ಕೇಂದ್ರೀಯ ತನಿಖಾ ದಳ (ಸಿಬಿಐ) ತನಿಖೆ ನಡೆಸುತ್ತಿದೆ. ಕಳೆದ ವರ್ಷ ಆಗಸ್ಟ್‌ನಲ್ಲಿ 27 ಹಿಂಸಾಚಾರದ ಪ್ರಕರಣಗಳನ್ನು ರಾಜ್ಯ ಪೊಲೀಸರಿಂದ ಸಿಬಿಐಗೆ ವಹಿಸಲಾಗಿದೆ.
ಅವುಗಳಲ್ಲಿ ಮಹಿಳೆಯರನ್ನು ವಿವಸ್ತ್ರಗೊಳಿಸಿ ಮೆರವಣಿಗೆ ಮಾಡಿದ ಘಟನೆಯೂ ಸೇರಿದೆ. ಕಳೆದ ಜುಲೈನಲ್ಲಿ ಇಬ್ಬರು ಕುಕಿ ಮಹಿಳೆಯರನ್ನು ಮೈತೇಯಿ ಗುಂಪೊಂದು ಭತ್ತದ ಗದ್ದೆಯಲ್ಲಿ ವಿವಸ್ತ್ರಗೊಳಿಸಿ ಮೆರವಣಿಗೆ ಮಾಡಿತ್ತು. ಅದರ ವಿಡಿಯೋ ವೈರಲ್ ಆಗಿತ್ತು. ಬಳಿಕ, ಮಹಿಳೆಯರ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಲಾಗಿದೆ ಎಂಬ ಆರೋಪ ಕೇಳಿ ಬಂದಿತ್ತು. ಮೇ 4 ರಂದು ಜನಾಂಗೀಯ ಘರ್ಷಣೆಗಳು ಭುಗಿಲೆದ್ದ ಬೆನ್ನಲ್ಲೇ ಈ ಘಟನೆ ನಡೆದಿದೆ ಎನ್ನಲಾಗಿದೆ.
ಮಣಿಪುರದಲ್ಲಿ ಶಾಂತಿ ಸ್ಥಾಪಿಸುವುದು, ಒಡೆದು ಹೋದ ಎರಡು ಸಮುದಾಯಗಳನ್ನು ಒಗ್ಗೂಡಿಸುವುದು ದೊಡ್ಡ ಸವಾಲಾಗಿ ಪರಿಣಮಿಸಿದೆ. ನಾಗರಿಕರ ಬಳಿಯಿರುವ ಶಸ್ತ್ರಾಸ್ತ್ರಗಳನ್ನು ಸಂಪೂರ್ಣವಾಗಿ ವಶಪಡಿಸಿಕೊಳ್ಳುವವರೆಗೆ ಅಲ್ಲಿ ಶಾಂತಿ ನೆಲಸುವುದಿಲ್ಲ ಎಂದು ವರದಿಗಳು ಅಭಿಪ್ರಾಯಪಟ್ಟಿವೆ.
ಸಂಘರ್ಷದ ಸಂದರ್ಭದಲ್ಲಿ ಭದ್ರತಾ ಸಂಸ್ಥೆಗಳು ಸುಮಾರು 2 ಸಾವಿರ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಂಡಿವೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಅಂದಾಜಿಸಿದ್ದಾರೆ. ಇನ್ನೂ 4 ಸಾವಿರ ನಾಗರಿಕರ ಕೈಯಲ್ಲಿದೆ ಎಂದು ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.
ಅಸ್ಸಾಂ ರೈಫಲ್ಸ್ ಅಧಿಕಾರಿಯೊಬ್ಬರು ಸಂಘರ್ಷಕ್ಕೆ “ರಾಜಕೀಯ ಪರಿಹಾರ” ದ ಅಗತ್ಯವನ್ನು ಒತ್ತಿ ಹೇಳಿದ್ದಾರೆ. ಆದರೆ “ಸಾಮಾಜಿಕ ಮಾಧ್ಯಮಗಳಲ್ಲಿ ತಪ್ಪು ಮಾಹಿತಿಯು ಉದ್ವಿಗ್ನತೆಯನ್ನು ಉಂಟು ಮಾಡುತ್ತಿದೆ. ಇದು ಕಾನೂನು ಮತ್ತು ಸುವ್ಯವಸ್ಥೆಗೆ ಅಡಚಣೆಯಾಗಿದೆ ಎಂದು ಇಂಡಿಯನ್ ಎಕ್ಸ್ ಪ್ರೆಸ್ ವರದಿ ಹೇಳಿದೆ.
ಎರಡೂ ಸಮುದಾಯಗಳ ನಡುವಿನ ಸಂದಾನ ಮಾತುಗಳು ನಡೆದಿಲ್ಲ. ಕೇಂದ್ರ ಸರ್ಕಾರವೇ ಇದಕ್ಕೆ ಪರಿಹಾರ ಕಂಡುಕೊಳ್ಳಬೇಕು ಎಂದು ಸಮುದಾಯಗಳು ಆಗ್ರಹಿಸಿವೆ. ಆದರೆ, ಹಿಂಸಾಚಾರ ಪ್ರಾರಂಭಗೊಂಡು ವರ್ಷ ತುಂಬಿದರೂ ಪ್ರಧಾನಿ ಮೋದಿ ಮಣಿಪುರದ ಕಡೆ ತಲೆ ಹಾಕಿಲ್ಲ. ಹಿಂಸಾಚಾರದ ಬಗ್ಗೆ ಮಾತೆತ್ತಿಲ್ಲ.
ಮಣಿಪುರ ವಿಧಾನಸಭೆಯ 10 ಕುಕಿ-ಝೋಮಿ ಶಾಸಕರ ಜೊತೆಗೆ ಕುಕಿ-ಝೋಮಿ ಗುಂಪುಗಳು, ಕಳೆದ ವರ್ಷದ ಮೇ ತಿಂಗಳಿನಿಂದ ತಮಗೆ ಪ್ರತ್ಯೇಕ ಆಡಳಿತ ವ್ಯವಸ್ಥೆ ಮಾಡುವುದು ಮಾತ್ರ ಸ್ವೀಕಾರಾರ್ಹ ಪರಿಹಾರ ಎಂದು ಹೇಳಿಕೊಳ್ಳುತ್ತಿದ್ದಾರೆ.
“ನಾವು ಒಂದೇ ಆಡಳಿತದಲ್ಲಿ ಒಟ್ಟಿಗೆ ಬದುಕಲು ಸಾಧ್ಯವಿಲ್ಲ ಎಂದು ಚೆನ್ನಾಗಿ ತಿಳಿದಿರುವ ಕೇಂದ್ರವು ನಮ್ಮ ಸಮಸ್ಯೆಯನ್ನು ಪರಿಹರಿಸಬೇಕು. ಯಾವುದೇ ರಾಜಿ ಸಾಧ್ಯವಿಲ್ಲ. ಮಣಿಪುರ ಸರ್ಕಾರವು ಅದರ ಬಗ್ಗೆ ಏನನ್ನೂ ಮಾಡುವುದಿಲ್ಲ ಎಂಬುದು ನಮಗೆ ಸ್ಪಷ್ಟವಾಗಿದೆ. ನಾವು ನಮ್ಮ ಭೂಮಿ ರಕ್ಷಿಸಲು ಕೇಂದ್ರ ಸರ್ಕಾರದೊಂದಿಗೆ ನಮ್ಮ ರಾಜಕೀಯ ಬೇಡಿಕೆಯನ್ನು ಒತ್ತಾಯಿಸುವುದನ್ನು ಮುಂದುವರಿಸುತ್ತೇವೆ” ಎಂದು ಚುರಚಂದಪುರ ಮೂಲದ ಕುಕಿ-ಜೋಮಿ ಸಮುದಾತದ ಸ್ಥಳೀಯ ಬುಡಕಟ್ಟು ನಾಯಕರ ವೇದಿಕೆಯ ಕಾರ್ಯದರ್ಶಿ ಮುವಾನ್ ಟಾಂಬಿಂಗ್ ಹೇಳಿದ್ದಾರೆ.
ಮತ್ತೊಂದೆಡೆ ಮೈತೇಯಿ ಸಮುದಾಯದ ಪರ ಸಂಘಟನೆ COCOMI ನ ವಕ್ತಾರರಾದ ಖುರೈಜಮ್ ಅಥೌಬಾ, ಕೇಂದ್ರವು ಕುಕಿ-ಝೋಮಿ ಬಂಡುಕೋರರ ಗುಂಪುಗಳ ವಿರುದ್ದ ಕಠಿಣ ಕ್ರಮ ತೆಗೆದುಕೊಳ್ಳಬೇಕು. ಅವರೊಂದಿಗೆ ಕದನ ವಿರಾಮದ ಮಾತುಕತೆಗಳನ್ನು ನಿಲ್ಲಿಸಬೇಕು ಎಂದು ಆಗ್ರಹಿಸಿದ್ದಾರೆ.
ಒಟ್ಟಿನಲ್ಲಿ ಒಂದು ವರ್ಷದ ಹಿಂಸಾಚಾರದ ಬಳಿಕವೂ ರಾಜ್ಯ ಯಥಾ ಸ್ಥಿತಿಗೆ ಮರಳುವ ಲಕ್ಷಣ ಕಾಣುತ್ತಿಲ್ಲ. ಇದರಲ್ಲಿ ಜನರ ನಡುವಿನ ಸಂಘರ್ಷಕ್ಕಿಂತ ಸರ್ಕಾರದ ವೈಫಲ್ಯ ಎದ್ದು ಕಾಣುತ್ತಿದೆ. ಉಕ್ರೇನ್-ರಷ್ಯಾ, ಇಸ್ರೇಲ್- ಪ್ಯಾಲೆಸ್ತೀನ್ ನಡುವಿನ ಯುದ್ಧ ನಿಲ್ಲಿಸುವ ಸಾಮಾರ್ಥ್ಯವಿದೆ ಎನ್ನುವ ಪ್ರಧಾನಿ, ನಮ್ಮದೇ ದೇಶದ ರಾಜ್ಯ ಹಿಂಸಾಚಾರದಿಂದ ನಲುಗಿದರೂ ಭೇಟಿ ನೀಡದಿರುವುದು ವಿಪರ್ಯಾಸವೇ ಸರಿ. ರಾಜಕೀಯ ಡೊಂಬರಾಟದ ನಡುವೆ ಅಮಾಯಕ ಜನರು ನೆಮ್ಮದಿಯ ಬದುಕಿನ ನಿರೀಕ್ಷೆಯಲ್ಲಿ ದಿನ ಕಳೆಯುತ್ತಿದ್ದಾರೆ.
ಇದನ್ನೂ ಓದಿ : ಬಿಜೆಪಿಯ ನವ ಭಾರತದಲ್ಲಿ ಧರ್ಮವನ್ನು ಆಯುಧವನ್ನಾಗಿಸಲಾಗಿದೆ: ಪರಕಾಲ ಪ್ರಭಾಕರ್


