ಪಶ್ಚಿಮ ಬಂಗಾಳದ ಗವರ್ನರ್ ಸಿವಿ ಆನಂದ ಬೋಸ್ ವಿರುದ್ಧ ಲೈಂಗಿಕ ಕಿರುಕುಳ ಆರೋಪದ ಬಗ್ಗೆ ಪ್ರತಿಕ್ರಿಯಿಸಿದ ಪ.ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಎಲ್ಲವೂ ಹೊರಬಿದ್ದಿಲ್ಲ, ನನಗೆ ಪೆನ್ ಡ್ರೈವ್ ಸಿಕ್ಕಿದೆ. ಆನಂದ ಬೋಸ್ ರಾಜೀನಾಮೆ ನೀಡಬೇಕು, ನಾನು ರಾಜಭವನಕ್ಕೆ ಹೋಗುವುದಿಲ್ಲ ಮತ್ತು ಬೋಸ್ ಅವರ ಪಕ್ಕದಲ್ಲಿ ಕುಳಿತುಕೊಳ್ಳುವುದಿಲ್ಲ ಎಂದು ಹೇಳಿದ್ದಾರೆ.
ಹೂಗ್ಲಿಯಲ್ಲಿ ಚುನಾವಣಾ ರ್ಯಾಲಿಯಲ್ಲಿ ಮಾತನಾಡಿದ ಮಮತಾ ಬ್ಯಾನರ್ಜಿ, ರಾಜಭವನಕ್ಕೆ ತೆರಳಿ ನಾನು ರಾಜ್ಯಪಾಲರನ್ನು ಭೇಟಿ ಮಾಡುವುದಿಲ್ಲ. ಅವರು ನನಗೆ ಕರೆ ಮಾಡಿದರೆ, ನಾನು ರಸ್ತೆಯಲ್ಲಿ ನಿಂತು ಅವರೊಂದಿಗೆ ಮಾತನಾಡುತ್ತೇನೆ, ಗೌರವಾನ್ವಿತ ರಾಜ್ಯಪಾಲರೇ, ನೀವು ರಾಜೀನಾಮೆ ನೀಡಬೇಕು, ಮಹಿಳೆಗೆ ಚಿತ್ರಹಿಂಸೆ ನೀಡಲು ನೀವು ಯಾರು? ಎಲ್ಲವೂ ಇನ್ನೂ ಹೊರಬಿದ್ದಿಲ್ಲ ನನಗೆ ಸಂಪೂರ್ಣ ವೀಡಿಯೊ ಮತ್ತು ಪೆನ್ ಡ್ರೈವ್ ಸಿಕ್ಕಿದೆ. ಇದು ಹಗರಣವಾಗಿದೆ ಎಂದು ಹೇಳಿದ್ದಾರೆ.
ಮೇ 7ರಂದು ಮೂರನೇ ಹಂತದ ಚುನಾವಣೆ ಮುಗಿದ ನಂತರ ಬಿಜೆಪಿ ಚುನಾವಣಾ ದುರಂತದ ವಾಸನೆಯನ್ನು ಗ್ರಹಿಸಿದೆ. ಮೂರನೇ ಹಂತದ ಮತದಾನದ ನಂತರ ಅವರು ಅಳುತ್ತಿದ್ದಾರೆ. ಮುಂಬರುವ ದಿನಗಳಲ್ಲಿ ಏನಾಗುತ್ತದೆ ಎಂಬುದನ್ನು ಕಾದು ನೋಡಿ ಎಂದು ಮಮತಾ ಹೇಳಿದ್ದಾರೆ.
ತೃಣಮೂಲ ಕಾಂಗ್ರೆಸ್ ನಾಯಕರಿಗೆ ನಿರಂತರವಾಗಿ ಬೆದರಿಕೆ ಕರೆಗಳು ಬರುತ್ತಿವೆ, ಅವರು ಚುನಾವಣೆಯಿಂದ ಹೊರಗುಳಿಯದಿದ್ದರೆ ಭೀಕರ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ಬೆದರಿಸಲಾಗುತ್ತಿದೆ. ನಾವು ಯಾರಿಗೂ ಹೆದರುವುದಿಲ್ಲ. ನಾವು ಖಂಡಿತವಾಗಿಯೂ ದೇಶದಲ್ಲಿ ಬಿಜೆಪಿಯನ್ನು ಅಧಿಕಾರದಿಂದ ಹೊರಹಾಕುತ್ತೇವೆ ಎಂದು ಹೇಳಿದ್ದಾರೆ.
2019ರಿಂದ ರಾಜಭವನದಲ್ಲಿ ಗುತ್ತಿಗೆ ಉದ್ಯೋಗಿಯಾಗಿ ಕೆಲಸ ಮಾಡುತ್ತಿರುವ ಮಹಿಳೆಯೊಬ್ಬರು, ಏಪ್ರಿಲ್ 24 ರಂದು ರಾಜ್ಯಪಾಲರ ವಿರುದ್ಧ ಲೈಂಗಿಕ ದೌರ್ಜನ್ಯದ ಅರೋಪ ಮಾಡಿದ್ದರು. ರಾಜ್ಯಪಾಲರನ್ನು ತನ್ನ ಬಡ್ತಿ ಕುರಿತು ಚರ್ಚಿಸಲು ಭೇಟಿಯಾದಾಗ ಅವರು ಕಿರುಕುಳ ನೀಡಿದ್ದಾರೆ ಎಂದು ಸಂತ್ರಸ್ತೆ ಹರೇ ಸ್ಟ್ರೀಟ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ರಾಜ್ಯಪಾಲರ ವಿರುದ್ಧ ಮಹಿಳೆ ನೀಡಿದ ದೂರಿನ ಬಗ್ಗೆ ತನಿಖೆ ನಡೆಸಲು ಕೋಲ್ಕತ್ತಾ ಪೊಲೀಸರು ತನಿಖಾ ತಂಡವನ್ನು ರಚಿಸಿದ್ದಾರೆ. ಇದರ ಬೆನ್ನಲ್ಲಿ ರಾಜ್ಯಪಾಲರು ತಮ್ಮ ವಿರುದ್ಧದ ತನಿಖೆಗೆ ಪೊಲೀಸರಿಗೆ ಯಾವುದೇ ಸಹಕಾರ ನೀಡದಂತೆ ಮತ್ತು ಯಾವುದೇ ಹೇಳಿಕೆ ನೀಡದಂತೆ ರಾಜಭವನದ ಸಿಬ್ಬಂದಿಗಳಿಗೆ ಸೂಚಿಸಿದ್ದರು.
ರಾಜಭವನ ಎಕ್ಸ್‌ನಲ್ಲಿ ಈ ಕುರಿತು ಪೋಸ್ಟ್ ಮಾಡಿತ್ತು, ಭಾರತದ ಸಂವಿಧಾನದ 361(2) ಮತ್ತು (3)ರ ಪ್ರಕಾರ, ಭಾರತದ ರಾಷ್ಟ್ರಪತಿ ಮತ್ತು ಯಾವುದೇ ರಾಜ್ಯದ ರಾಜ್ಯಪಾಲರು ತಮ್ಮ ವಿರುದ್ಧ ಯಾವುದೇ ಕ್ರಿಮಿನಲ್ ಮೊಕದ್ದಮೆಯಿಂದ ಸಾಂವಿಧಾನಿಕ ವಿನಾಯಿತಿಯನ್ನು ಅನುಭವಿಸುತ್ತಾರೆ. ಆದ್ದರಿಂದ ರಾಜ್ಯ ಸರಕಾರವು ರಾಜ್ಯಪಾಲರ ವಿರುದ್ಧ ಯಾವುದೇ ರೀತಿಯ ಕ್ರಿಮಿನಲ್ ಮೊಕದ್ದಮೆಗಳ ತನಿಖೆ ಪ್ರಾರಂಭಿಸಲು ಸಾಧ್ಯವಿಲ್ಲ ಎಂಬುದು ಸ್ಪಷ್ಟವಾಗಿದೆ ಎಂದು ಹೇಳಿತ್ತು.
ಇದನ್ನು ಓದಿ: ಪ.ಬಂಗಾಳ: ತನ್ನ ವಿರುದ್ಧದ ತನಿಖೆಗೆ ಸಹಕರಿಸದಂತೆ ರಾಜಭವನದ ಸಿಬ್ಬಂದಿಗಳಿಗೆ ಸೂಚಿಸಿದ ಗವರ್ನರ್


