ದ್ವೇಷ ಭಾಷಣಕ್ಕೆ ಸಂಬಂಧಿಸಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಎಫ್‌ಐಆರ್ ದಾಖಲಿಸುವಂತೆ ಕೋರಿ ಸಲ್ಲಿಸಲಾದ ಅರ್ಜಿಯನ್ನು ದೆಹಲಿ ಹೈಕೋರ್ಟ್ ‘ತಪ್ಪಾಗಿ ಗ್ರಹಿಸಲಾಗಿದೆ’ ಎಂದು ತಿರಸ್ಕರಿಸಿದೆ.
ನ್ಯಾಯಮೂರ್ತಿ ಸಚಿನ್ ದತ್ತಾ ಈ ಕುರಿತ ಅರ್ಜಿಯನ್ನು ತಿರಸ್ಕರಿಸಿದ್ದಾರೆ ಎಂದು ಬಾರ್ ಮತ್ತು ಬೆಂಚ್ ವರದಿ ಮಾಡಿದೆ. ಚುನಾವಣಾ ಆಯೋಗವು ಈಗಾಗಲೇ ಈ ವಿಷಯವನ್ನು ಪರಿಗಣಿಸಿರುವುದರಿಂದ ಈ ಬಗ್ಗೆ ಅರ್ಜಿಯ ವಿಚಾರಣೆ ಮಾಡುವುದಿಲ್ಲ ಹೈಕೋರ್ಟ್ ಹೇಳಿದೆ. ಚುನಾವಣಾ ಆಯೋಗ ಯಾರಿಗೆ ನೋಟಿಸ್ ನೀಡಬೇಕೆಂದು ನಾವು ನಿರ್ಧರಿಸಲು ಸಾಧ್ಯವಿಲ್ಲ. ಅವರು ಏನನ್ನೂ ಮಾಡುವುದಿಲ್ಲ ಎಂದು ನಾವು ಊಹಿಸಲು ಸಾಧ್ಯವಿಲ್ಲ. ಆಯೋಗ ಮೊದಲು ಎಫ್‌ಐಆರ್ ದಾಖಲಿಸಿ ಬಳಿಕ ಪ್ರತಿಕ್ರಿಯೆ ಪಡೆಯಲು ಸಾಧ್ಯವಿಲ್ಲ ಎಂದು ಹೈಕೋರ್ಟ್ ಪೀಠ ಹೇಳಿದೆ.
ಇದೇ ವೇಳೆ ಚುನಾವಣಾ ಆಯೋಗವು ಸಾಂವಿಧಾನಿಕ ಸಂಸ್ಥೆಯಾಗಿದ್ದು, ಅದರ ಕಾರ್ಯವನ್ನು ನಿಯಂತ್ರಿಸಲು ಸಾಧ್ಯವಿಲ್ಲ ಎಂದು ನ್ಯಾಯಮೂರ್ತಿ ದತ್ತಾ ಹೇಳಿದ್ದಾರೆ.
ಏಪ್ರಿಲ್ ಕೊನೆಯಲ್ಲಿ ರಾಜಸ್ಥಾನದ ಬನ್ಸ್ವಾರಾದಲ್ಲಿ ಮಾತನಾಡಿದ್ದ ಪ್ರಧಾನಿ ಮೋದಿ, ಈ ದೇಶದ ಸಂಪತ್ತನ್ನು ಹೆಚ್ಚು ಮಕ್ಕಳನ್ನು ಹೆರುವ ಮುಸ್ಲಿಮ್ ಸಮುದಾಯಕ್ಕೆ ನೀಡುವುದೇ ಕಾಂಗ್ರೆಸ್‌ನ ಗ್ಯಾರಂಟಿ ಎಂದು ಹೇಳಿದ್ದು, ಮುಸ್ಲಿಂ ಅಲ್ಪಸಂಖ್ಯಾತರನ್ನು “ಒಳನುಸುಳುವವರು” ಮತ್ತು “ಹೆಚ್ಚು ಮಕ್ಕಳನ್ನು ಹೊಂದಿರುವವರು” ಎಂದು ಹೇಳಿದ್ದಾರೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ದೇಶದ ಸಂಪತ್ತನ್ನು “ಒಳನುಸುಳುಕೋರರು” ಮತ್ತು “ಹೆಚ್ಚು ಮಕ್ಕಳನ್ನು ಹೊಂದಿರುವವರಿಗೆ” ಹಂಚಬಹುದು ಎಂದು ಹೇಳಿ ವಿವಾದವನ್ನು ಸೃಷ್ಟಿಸಿದ್ದರು.
ದೇಶದ ವೈಯಕ್ತಿಕ ಆಸ್ತಿಗಳನ್ನು ಕಸಿದು, ಅದನ್ನು ಮುಸ್ಲಿಮರಿಗೆ ಕಾಂಗ್ರೆಸ್ ಹಂಚಲಿದೆ. ಇದು ನಗರ ನಕ್ಸಲರ ಯೋಜನೆಯಾಗಿದೆ. ಈ ‘ನಗರ ನಕ್ಸಲ್’ ಮನಸ್ಥಿತಿಯಿಂದ ತಾಯಂದಿರೇ ಮತ್ತು ಸಹೋದರಿಯರೇ, ಅವರು ನಿಮ್ಮ ‘ಮಂಗಲಸೂತ್ರ’ವನ್ನು ಸಹ ಬಿಡುವುದಿಲ್ಲ. ಅವರು ಆ ಮಟ್ಟಕ್ಕೆ ಹೋಗಬಹುದು. ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಅವರು ತಾಯಿ ಮತ್ತು ಸಹೋದರಿಯರ ಚಿನ್ನವನ್ನು ಲೆಕ್ಕ ಹಾಕುತ್ತಾರೆ, ಅದರ ಬಗ್ಗೆ ಮಾಹಿತಿ ಪಡೆದು ನಂತರ ಆ ಆಸ್ತಿಯನ್ನು ಹಂಚುತ್ತಾರೆ. ಅವರು ಅದನ್ನು ಯಾರಿಗೆ ಹಂಚುತ್ತಾರೆ? ಮನಮೋಹನ್ ಸಿಂಗ್ ಅವರ ಸರ್ಕಾರವು ದೇಶದ ಆಸ್ತಿಯಲ್ಲಿ ಮುಸ್ಲಿಮರಿಗೆ ಮೊದಲ ಹಕ್ಕು ಎಂದು ಹೇಳಿತ್ತು. ಇದನ್ನು ನುಸುಳುಕೋರರಿಗೆ ವಿತರಿಸಲಾಗುವುದು. ನೀವು ಕಷ್ಟಪಟ್ಟು ಸಂಪಾದಿಸಿದ ಹಣ ನುಸುಳುಕೋರರಿಗೆ ಹೋಗಬೇಕೇ? ನೀವು ಇದನ್ನು ಅನುಮೋದಿಸುತ್ತೀರಾ? ಇದು ನಿಮಗೆ ಸ್ವೀಕಾರಾರ್ಹವೇ? ನೀವು ಕಷ್ಟಪಟ್ಟು ಸಂಪಾದಿಸಿದ ನಿಮ್ಮ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳುವ ಹಕ್ಕು ಸರ್ಕಾರಗಳಿಗೆ ಇದೆಯೇ? ತಾಯಂದಿರ ಮಂಗಳಸೂತ್ರದ ಮೌಲ್ಯವು ಚಿನ್ನ ಅಥವಾ ಅದರ ಬೆಲೆಯಲ್ಲಿಲ್ಲ, ಆದರೆ ಜೀವನದಲ್ಲಿ ಅವಳ ಕನಸುಗಳಿಗೆ ಸಂಬಂಧಿಸಿದೆ ಮತ್ತು ನೀವು ಅದನ್ನು ಕಸಿದುಕೊಳ್ಳುವ ಬಗ್ಗೆ ಮಾತನಾಡುತ್ತಿದ್ದೀರಾ? ಎಂದು ಪ್ರಧಾನಿ ಮೋದಿ ಪ್ರಶ್ನಿಸಿದ್ದರು. ಮೋದಿಯ ಈ ದ್ವೇಷದ ಭಾಷಣದ ವಿರುದ್ಧ ವ್ಯಾಪಕ ಟೀಕೆ ವ್ಯಕ್ತವಾಗಿತ್ತು.
ನ್ಯಾಯವಾದಿ ನಿಜಾಮ್ ಪಾಷಾ ಅವರ ಪರ ವಾದ ಮಂಡಿಸಿದ ಅರ್ಜಿದಾರರು, ಭಾರತ ರಾಷ್ಟ್ರ ಸಮಿತಿ ನಾಯಕ ಕೆ.ಚಂದ್ರಶೇಖರ ರಾವ್ ವಿರುದ್ಧ ಚುನಾವಣಾ ಸಂಸ್ಥೆ ಕ್ರಮ ಕೈಗೊಂಡಿದೆ ಆದರೆ ಮೋದಿಗೆ ನೊಟೀಸ್ ಕೂಡ ಜಾರಿ ಮಾಡಿಲ್ಲ. ಮೋದಿಯನ್ನು ಇತರರಿಗಿಂತ ಭಿನ್ನವಾಗಿ ಏಕೆ ನಡೆಸಿಕೊಳ್ಳುತ್ತಿದ್ದಾರೆ? ಮೋದಿ ಭಾಷಣ ಮಾಡಿದ್ದರೂ ಚುನಾವಣಾ ಆಯೋಗ ನೊಟೀಸ್ ನೀಡಿರುವುದು ಬಿಜೆಪಿ ಅಧ್ಯಕ್ಷರಿಗೆ, ಅದರಲ್ಲಿ ಮೋದಿ ಮಾಡಿದ ಭಾಷಣವನ್ನು ಕೂಡ ಉಲ್ಲೇಖಿಸಿಲ್ಲ. ಈ ವ್ಯಕ್ತಿಗೆ ಮಾತ್ರ ಸಲಹೆ ಮತ್ತು ಇತರರ ವಿರುದ್ಧ ಕ್ರಮ ಯಾಕೆ? ಕಾನೂನು ಎಲ್ಲರಿಗೂ ಸಮಾನವಾಗಿರಬೇಕು ಎಂದು ಕೋರ್ಟ್‌ನಲ್ಲಿ ವಾದಿಸಲಾಗಿದೆ.
ಚುನಾವಣಾ ಆಯೋಗದ ಪರ ವಾದ ಮಂಡಿಸಿದ ವಕೀಲ ಸುರುಚಿ ಸೂರಿ, ನೋಟೀಸ್‌ಗೆ ಪ್ರತಿಕ್ರಿಯಿಸಲು ಬಿಜೆಪಿಗೆ ಮೇ 15ರವೆರೆಗೆ ಗಡುವು ನೀಡಲಾಗಿದೆ. ಅಗತ್ಯ ಬಿದ್ದರೆ ಈ ಬಗ್ಗೆ ಮುಂದಿನ ಕ್ರಮವನ್ನು ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.
ಇದನ್ನು ಓದಿ: ಆಂಧ್ರಪ್ರದೇಶ ಚುನಾವಣೆ: ಶಾಸಕನಿಂದ ಮತದಾರನಿಗೆ ಕಪಾಳಮೋಕ್ಷ; ರಾಜ್ಯದ ವಿವಿಧೆಡೆ ಹಿಂಸಾತ್ಮಕ ಘಟನೆ ವರದಿ


