ಬಿಜೆಪಿ ಕೇಂದ್ರದಲ್ಲಿ ಮತ್ತೆ ಅಧಿಕಾರಕ್ಕೆ ಬಂದರೆ ಮೀಸಲಾತಿ ಕೊನೆಗೊಳಿಸಲಿದೆ, ಸಂವಿಧಾನವನ್ನು ಬದಲಿಸಲಿದೆ ಎಂದು ಅರವಿಂದ್ ಕೇಜ್ರಿವಾಲ್ ಮತ್ತು ಅಖಿಲೇಶ್ ಯಾದವ್ ಬಿಜೆಪಿಯನ್ನು 3ನೇ ಬಾರಿಗೆ ಏಕೆ ಆಯ್ಕೆ ಮಾಡಬಾರದು ಎಂದು ಜಂಟಿ ಪತ್ರಿಕಾಗೋಷ್ಟಿಯಲ್ಲಿ ಹೇಳಿದ್ದಾರೆ.
ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಅವರು ಬಿಜೆಪಿಯ “400 ಪಾರ್” ಘೋಷಣೆಯನ್ನು ಟೀಕಿಸಿದ್ದು, ಕೇಸರಿ ಪಕ್ಷದ ನಿಜವಾದ ಗುರಿ 400 ಸ್ಥಾನಗಳಲ್ಲ, 143 ಸ್ಥಾನಗಳು, ಯುಪಿ, ದೆಹಲಿ, ಪಂಜಾಬ್ ರಾಜ್ಯಗಳಲ್ಲಿ ಬಿಜೆಪಿಗೆ ದೊಡ್ಡ ಹೊಡೆತ ಬೀಳಲಿದೆ. ನಾವು ರೊಟ್ಟಿ, ಕಪಾಡಾ, ಮಕಾನ್‌ಗಾಗಿ ಹೋರಾಡಬೇಕಾಗಿದೆ, ಆದರೆ ನಮಗೆ ದೊಡ್ಡ ಹೋರಾಟವೆಂದರೆ ಸಂವಿಧಾನವನ್ನು ಉಳಿಸುವುದಾಗಿದೆ. ಎಎಪಿ ಮತ್ತು ಇಂಡಿಯಾ ಮೈತ್ರಿಕೂಟವು ಬಿಜೆಪಿಯನ್ನು ಅಧಿಕಾರದಿಂದ ಹೊರಹಾಕಲಿದೆ ಎಂದು ಹೇಳಿದ್ದಾರೆ.
ಆಮ್ ಆದ್ಮಿ ಪಕ್ಷದ ರಾಷ್ಟ್ರೀಯ ಸಂಚಾಲಕ ಅರವಿಂದ್ ಕೇಜ್ರಿವಾಲ್ ಮಾತನಾಡುತ್ತಾ, ಬಿಜೆಪಿ 220ಕ್ಕಿಂತ ಕಡಿಮೆ ಸ್ಥಾನಗಳನ್ನು ಪಡೆಯಲಿದೆ. ಹರಿಯಾಣ, ದೆಹಲಿ, ಪಂಜಾಬ್, ಕರ್ನಾಟಕ, ಮಹಾರಾಷ್ಟ್ರ, ಪಶ್ಚಿಮ ಬಂಗಾಳ, ಯುಪಿ, ಬಿಹಾರ, ಜಾರ್ಖಂಡ್ ಮತ್ತು ರಾಜಸ್ಥಾನದಲ್ಲಿ ಬಿಜೆಪಿಯ ಸ್ಥಾನಗಳಲ್ಲಿ ಕಡಿತವಾಗಲಿದೆ. ಈ ಬಾರಿ ಬಿಜೆಪಿ ಸರಕಾರ ರಚಿಸಲು ಸಾಧ್ಯವಿಲ್ಲ, ಇಂಡಿಯಾ ಮೈತ್ರಿಕೂಟ ಸರಕಾರವನ್ನು ರಚಿಸಲಿದೆ ಎಂದು ಹೇಳಿದ್ದಾರೆ.
ಲೋಕಸಭೆ ಚುನಾವಣೆಯ ನಂತರ ಬಿಜೆಪಿ ಅಧಿಕಾರಕ್ಕೆ ಬಂದರೆ, ಅವರು ಸಂವಿಧಾನವನ್ನು ಬದಲಾಯಿಸುತ್ತಾರೆ ಮತ್ತು ಮೀಸಲಾತಿಯನ್ನು ಕೊನೆಗೊಳಿಸುತ್ತಾರೆ. ಬಿಜೆಪಿಗರು ಯಾವಾಗಲೂ ಮೀಸಲಾತಿಗೆ ವಿರುದ್ಧವಾಗಿದ್ದಾರೆ. ಬಿಜೆಪಿ ಮತ್ತೆ ಅಧಿಕಾರಕ್ಕೆ ಬಂದರೆ ಉತ್ತರ ಪ್ರದೇಶದ ಮುಖ್ಯಮಂತ್ರಿ ಸ್ಥಾನದಿಂದ ಯೋಗಿ ಆದಿತ್ಯನಾಥ್ ಅವರನ್ನು ಮೋದಿ ಅಧಿಕಾರದಿಂದ ಕೆಳಗಿಳಿಸುತ್ತಾರೆ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ.
ಪಿಎಂ ಮೋದಿಯವರ ನಿವೃತ್ತಿಯ ಕುರಿತು ಪ್ರತಿಕ್ರಿಯಿಸಿದ ಕೇಜ್ರಿವಾಲ್, ಪಿಎಂ ಮೋದಿ ಅವರು ಸೆಪ್ಟೆಂಬರ್ 17, 2025ರಂದು 75ನೇ ವರ್ಷಕ್ಕೆ ಕಾಲಿಡಲಿದ್ದಾರೆ. ಅವರು ಅಮಿತ್ ಶಾ ಅವರನ್ನು ತಮ್ಮ ಉತ್ತರಾಧಿಕಾರಿಯನ್ನಾಗಿ ಮಾಡಲು ನಿರ್ಧರಿಸಿದ್ದಾರೆ. ಅವರು 75 ವರ್ಷಗಳ ನಂತರ ನಿವೃತ್ತರಾಗುವುದಿಲ್ಲ ಎಂದು ಪ್ರಧಾನಿ ಮೋದಿ ಈವರೆಗೆ ಹೇಳಿಲ್ಲ, ಅವರು ಈ ನಿಯಮವನ್ನು ಮಾಡಿದ್ದಾರೆ ಮತ್ತು ಅವರು ಈ ನಿಯಮವನ್ನು ಅನುಸರಿಸುತ್ತಾರೆ ಎಂದು ನನಗೆ ಸಂಪೂರ್ಣ ಭರವಸೆ ಇದೆ ಎಂದು ಹೇಳಿದ್ದಾರೆ.
ಅಮಿತ್ ಶಾಗೆ ಅಡ್ಡಿಯಾಗಬಹುದಾದ ನಾಯಕರನ್ನು ಬದಿಗೆ ಸರಿಸಲಾಗಿದೆ. ಶಿವರಾಜ್ ಸಿಂಗ್ ಚೌಹಾಣ್, ವಸುಂಧರಾ ರಾಜೇ, ರಮಣ್ ಸಿಂಗ್, ದೇವೇಂದ್ರ ಫಡ್ನವೀಸ್ ಮತ್ತು ಮನೋಹರ್ ಲಾಲ್ ಖಟ್ಟರ್ ಅವರನ್ನು ಬದಿಗೆ ಸರಿಸಲಾಗಿದೆ. ಅಮಿತ್ ಶಾ ಹಾದಿಗೆ ಮುಳ್ಳಾಗಬಹುದೆಂದು ಹೇಳಲಾದ ವ್ಯಕ್ತಿ ಆದಿತ್ಯನಾಥ್. ಬಿಜೆಪಿ ಸರ್ಕಾರ ರಚನೆಯಾದರೆ ಎರಡು ತಿಂಗಳಲ್ಲಿ ಆದಿತ್ಯನಾಥ್ ಅವರನ್ನು ಕೆಳಗಿಳಿಸಲು ನಿರ್ಧರಿಸಿದ್ದಾರೆ ಎಂದು ಕೇಜ್ರಿವಾಲ್ ಹೇಳಿದ್ದಾರೆ.
#WATCH | Lucknow, UP: Samajwadi Party chief Akhilesh Yadav says, "…Out of 543 seats, BJP itself believes that they will not get more than 143 seats…" pic.twitter.com/SHRMqFYvXN
— ANI (@ANI) May 16, 2024
ಇದನ್ನು ಓದಿ: ಒಡಿಶಾದಲ್ಲಿ ಬಿಜೆಪಿ-ಬಿಜೆಡಿ ಬೆಂಬಲಿಗರ ನಡುವೆ ಘರ್ಷಣೆ: ಓರ್ವ ಮೃತ್ಯು, ಹಲವರಿಗೆ ಗಾಯ


