ರಾಜ್ಯಗಳ ನಡುವೆ ಘರ್ಷಣೆಯನ್ನು ಉಂಟುಮಾಡಲು ಪ್ರಧಾನಿ ನರೇಂದ್ರ ಮೋದಿ ಕೆಳಮಟ್ಟದ ತಂತ್ರಗಳನ್ನು ಬಳಸುತ್ತಿದ್ದಾರೆ ಎಂದು ತಮಿಳುನಾಡು ಸಿಎಂ ಮತ್ತು ಡಿಎಂಕೆ ಮುಖ್ಯಸ್ಥ ಎಂಕೆ ಸ್ಟಾಲಿನ್ ಪ್ರಧಾನಿ ಮೋದಿ ವಿರುದ್ಧ ವಾಗ್ಧಾಳಿಯನ್ನು ನಡೆಸಿದ್ದು, ಪ್ರಧಾನಿಯವರ ಬೇಜವಾಬ್ದಾರಿ ಭಾಷಣಗಳು ಮತ್ತು ಅವುಗಳನ್ನು ತಡೆಯುವಲ್ಲಿ ಚುನಾವಣಾ ಆಯೋಗದ ಮೌನವನ್ನು ದೇಶದ ನಾಗರಿಕರು ಆಘಾತ ಮತ್ತು ನಿರಾಶೆಯಿಂದ ನೋಡುತ್ತಿದ್ದಾರೆ ಎಂದು ಸ್ಟಾಲಿನ್ ಹೇಳಿದ್ದಾರೆ.
ದಕ್ಷಿಣದ ರಾಜ್ಯಗಳ ನಾಯಕರು ಉತ್ತರ ಪ್ರದೇಶದ ಜನರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡುತ್ತಿದ್ದಾರೆ ಎಂಬ ಪ್ರಧಾನಿಯ ಆರೋಪಗಳನ್ನು ಪ್ರಸ್ತಾಪಿಸಿದ ಸ್ಟ್ಯಾಲಿನ್ ಇದು ಮೋದಿಯ ಕಾಲ್ಪನಿಕ ಕಥೆ ಮತ್ತು ಸುಳ್ಳಿನ ಚೀಲ ಎಂದು ವಾಗ್ದಾಳಿ ನಡೆಸಿದ್ದಾರೆ. ಮೋದಿ ಪ್ರಧಾನಿ ಕಚೇರಿಯ ಘನತೆಯನ್ನು ಮರೆತಿದ್ದಾರೆ. ಪ್ರತಿದಿನ ಹೊಸ ಸುಳ್ಳು ಮತ್ತು ಪ್ರತಿ ಗಂಟೆಗೆ ದ್ವೇಷದ ಬೀಜಗಳನ್ನು ಬಿತ್ತುತ್ತಿದ್ದಾರೆ ಎಂದು ಹೇಳಿದ್ದಾರೆ.
ಇತ್ತೀಚೆಗೆ ನಡೆದ ರ್ಯಾಲಿಯಲ್ಲಿ, ಎಸ್‌ಪಿ ಮತ್ತು ಕಾಂಗ್ರೆಸ್‌ನ ದಕ್ಷಿಣ ರಾಜ್ಯಗಳ ಮಿತ್ರಪಕ್ಷಗಳು ಉತ್ತರಪ್ರದೇಶ ಮತ್ತು ಸನಾತನ ಧರ್ಮವನ್ನು ಅವಮಾನಿಸಿದೆ ಎಂದು ಮೋದಿ ಆರೋಪಿಸಿದ್ದರು.
ಉತ್ತರಪ್ರದೇಶದ ಜನರಿಗೆ ಪ್ರಯೋಜನಕಾರಿಯಾಗಿರುವ ವಿಷಯದ ಬಗ್ಗೆ ಪ್ರಧಾನಿ ಮೋದಿ ಎಂದಾದರೂ ಮಾತನಾಡಿದ್ದಾರೆಯೇ ಅಥವಾ ಯಾವುದೇ ಭರವಸೆ ನೀಡಿದ್ದಾರೆಯೇ? ಇಲ್ಲ. ಆದರೆ ಅವರು ದ್ವೇಷವನ್ನು ಹರಡುತ್ತಿದ್ದಾರೆ ಎಂದು ಸ್ಟಾಲಿನ್ ಹೇಳಿದ್ದಾರೆ.
ಬಿಜೆಪಿಯು ನಕಲಿ ಸುದ್ದಿಗಳನ್ನು ಬೆಂಬಲಿಸುತ್ತಿದೆ ಮತ್ತು ಪ್ರೋತ್ಸಾಹಿಸುತ್ತಿದೆ ಎಂದು ಸ್ಟಾಲಿನ್ ಆರೋಪಿಸಿದ್ದು, ಯೂಟ್ಯೂಬರ್ ಮನೀಶ್ ಕಶ್ಯಪ್ ಅವರ ಉದಾಹರಣೆಯನ್ನು ಉಲ್ಲೇಖಿಸಿದ್ದಾರೆ. ಬಿಹಾರದ ಕಾರ್ಮಿಕರ ಮೇಲೆ ದಾಳಿ ನಡೆದಿದೆ ಎಂದು ಸುಳ್ಳು ಸುದ್ದಿ ಹಬ್ಬಿ ತಮಿಳುನಾಡು ಪೊಲೀಸರಿಂದ ಬಂಧಿತರಾಗಿದ್ದ ಕಶ್ಯಪ್ ಅವರು ಇತ್ತೀಚೆಗೆ ಬಿಜೆಪಿಗೆ ಸೇರ್ಪಡೆಗೊಂಡಿದ್ದರು.
ಮೋದಿಯವರ ದ್ವೇಷಪೂರಿತ ಪ್ರಚಾರ ವಿಫಲವಾಗಿದೆ ಮತ್ತು ಅವರ ಸರ್ಕಾರ ಕಳೆದ 10 ವರ್ಷಗಳಲ್ಲಿ ಹೇಳಿಕೊಳ್ಳುವಂತಹ ಸಾಧನೆ ಏನು ಮಾಡಿಲ್ಲ, ಪ್ರಧಾನಿ ವಿರೋಧ ಪಕ್ಷಗಳು ಆಳುವ ರಾಜ್ಯಗಳಲ್ಲಿ ಜಾರಿಗೆ ತಂದ ಕಲ್ಯಾಣ ಯೋಜನೆಗಳನ್ನು ಕಡಿಮೆ ಮಾಡಲು ಮುಂದಾಗಿ ತನ್ನನ್ನು ತಾನು ಮೋದಿ ಬಡವರ ಶತ್ರು ಎಂದು ಬಹಿರಂಗಪಡಿಸಿದ್ದಾರೆ ಎಂದು ಹೇಳಿದ್ದಾರೆ.
ಮೋದಿ ತನ್ನ ಬಲಪಂಥೀಯ, ಪ್ರತಿಗಾಮಿ ಸಿದ್ಧಾಂತದಿಂದ ಮಹಿಳಾ ಕೇಂದ್ರಿತ ಯೋಜನೆಗಳನ್ನು ಬೆಂಬಲಿಸಲು ಹಿಂಜರಿಯುತ್ತಾರೆ. ಅವರು ಮಹಿಳೆಯರ ಪ್ರಗತಿ ಮತ್ತು ಸಾಮಾಜಿಕ ಬೆಳವಣಿಗೆಗೆ ಹೆದರುತ್ತಾರೆ. ಬಿಜೆಪಿಯ ವಿಭಜಕ ಕನಸುಗಳು ಎಂದಿಗೂ ಯಶಸ್ವಿಯಾಗುವುದಿಲ್ಲ, ಸುಳ್ಳನ್ನು ಛಿದ್ರಗೊಳಿಸಲಾಗುತ್ತದೆ ಮತ್ತು ದ್ವೇಷವನ್ನು ಹೊರಹಾಕಲಾಗುತ್ತದೆ. ಇಂಡಿಯಾ ಮೈತ್ರಿಕೂಟವು ಮೇಲುಗೈ ಸಾಧಿಸುತ್ತದೆ ಎಂದು ಸ್ಟ್ಯಾಲಿನ್ ಹೇಳಿದ್ದಾರೆ.
ಇದನ್ನು ಓದಿ: ಲೋಕಸಭೆ ಚುನಾವಣೆ: ಮುಸ್ಲಿಂ ಸಮುದಾಯಕ್ಕೆ ಕಡಿಮೆ ಪ್ರಾತನಿಧ್ಯ ನೀಡಿದ ರಾಜಕೀಯ ಪಕ್ಷಗಳು


