ಈ ಬಾರಿಯ ಲೋಕಸಭೆ ಚುನಾವಣೆಗೆ ಕಾಂಗ್ರೆಸ್ ಪಕ್ಷ ಐದು ಗ್ಯಾರಂಟಿಗಳನ್ನು ಘೋಷಿಸಿದೆ. ಈ ಪೈಕಿ ಮಹಿಳೆಯರಿಗೆ ಮಾಸಿಕ 8,500 ರೂಪಾಯಿ ಸಹಾಯಧನ ಕೊಡುವ ‘ಮಹಾಲಕ್ಷಿ’ ಯೋಜನೆಯೂ ಒಂದು.
ಮಹಾಲಕ್ಷಿ ಯೋಜನೆಯ ಕುರಿತು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಪ್ರತಿ ಚುನಾವಣಾ ಭಾಷಣದಲ್ಲೂ ಪ್ರಸ್ತಾಪಿಸುತ್ತಿದ್ದಾರೆ. ಮಹಿಳೆಯರು ವಿಶೇಷವಾಗಿ ಗೃಹಿಣಿಯರು, ಕುಟುಂಬದ ಜವಬ್ದಾರಿಯನ್ನು ಹೊತ್ತ ತಾಯಂದಿರು ಬಹಳ ಕಷ್ಟಪಡುತ್ತಿದ್ದಾರೆ. ಅವರಿಗೆ ಸಹಾಯ ಮಾಡುವ ಸಲುವಾಗಿ ಈ ಗ್ಯಾರಂಟಿ ಜಾರಿಗೊಳಿಸುತ್ತೇವೆ ಎನ್ನುತ್ತಿದ್ದಾರೆ.
ಕಾಂಗ್ರೆಸ್ ತನ್ನ ಐದು ಗ್ಯಾರಂಟಿಗಳು ಸೇರಿದಂತೆ ಚುನಾವಣಾ ಭರವಸೆಗಳ ಕುರಿತು ಆಗಾಗ ವಿಡಿಯೋ ಹಂಚಿಕೊಳ್ಳುತ್ತಿರುತ್ತದೆ. ಇತ್ತೀಚೆಗೆ ‘ಮಹಾಲಕ್ಷಿ’ ಯೋಜನೆಯದ್ದು ಎನ್ನಲಾದ ವಿಡಿಯೋವೊಂದು ವೈರಲ್ ಆಗಿದೆ.
ವಿಡಿಯೋದಲ್ಲಿ ತಾಯಿಯೊಬ್ಬಳು ಮಗುವಿಗೆ ಹಾಲುಣಿಸುತ್ತಿರುವಾಗ ಆಕೆಯ ಕೈಯಿಂದ ಹಾಲಿನ ಬಾಟಲಿ ಕೆಳಗೆ ಬೀಳುವುದು. ಆಕೆಯ ಪಕ್ಕ ಇದ್ದ ಮಹಿಳೆಯರು ಅದನ್ನು ಎತ್ತಿ ಕೊಡದೆ ಸುಮ್ಮನೆ ಕೂರುವುದು. ಆಗ ಸ್ವಚ್ಚತಾ ಸಿಬ್ಬಂದಿಯಾಗಿರುವ ಮಹಿಳೆಯೊಬ್ಬರು ಬಂದು ಬಾಟಲಿ ಎತ್ತಿ ಕೊಡುವ ದೃಶ್ಯವಿದೆ.

ಮುಂದುವರಿದು, ಮಗುವಿನ ಹಾಲುಣಿಸುತ್ತಿದ್ದ ತಾಯಿ ಮತ್ತು ಸ್ವಚ್ಚತಾ ಸಿಬ್ಬಂದಿ ಮಹಿಳೆ ನಡುವೆ ನಡೆಯುವ ಸಂಭಾಷಣೆ ವಿಡಿಯೋದಲ್ಲಿ ಇದೆ. ಹಾಲುಣಿಸುತ್ತಿದ್ದ ತಾಯಿ ಸ್ವಚ್ಚತಾ ಸಿಬ್ಬಂದಿ ಮಹಿಳೆಗೆ “ನಿಮಗೆ ಎಷ್ಟು ಮಕ್ಕಳು, ನೀವು ಮನೆ ಮತ್ತು ಮಕ್ಕಳು ಎರಡೂ ಕೆಲಸವನ್ನು ಹೇಗೆ ನಿಭಾಯಿಸುವಿರಿ?” ಎಂದು ಪ್ರಶ್ನಿಸುತ್ತಾರೆ. ಆಗ ಮಹಿಳೆ ಉತ್ತರಿಸುತ್ತಾ, “10 ಗಂಟೆ ಪಾಳಿಯಲ್ಲಿ ಕಚೇರಿ ಕೆಲಸ ಮುಗಿಸಿ ಮನೆಗೆ ಹೋದ ಮೇಲೆ ತಾಯಿಯ “ಎನ್ನುತ್ತಾರೆ. ಆಗ ಅಲ್ಲೇ ಕುಳಿತಿದ್ದ ಮತ್ತೊಬ್ಬ ಮಹಿಳೆ, “ಎರಡೆರಡು ಕೆಲಸಗಳನ್ನು ಮಾಡುವುದರಲ್ಲೇ ನಿನ್ನ ಆಯಸ್ಸು ಮುಗಿಯುತ್ತದೆ” ಎಂದು ಹೇಳುವುದನ್ನು ನೋಡಬಹುದು.
ವಿಡಿಯೋದಲ್ಲಿ ಮಹಿಳೆಯರ ಸಂಭಾಷಣೆ ಮುಗಿದ ಬಳಿಕ, ರಾಹುಲ್ ಗಾಂಧಿಯವರು ಮಹಾಲಕ್ಷಿ ಯೋಜನೆ ಕುರಿತು ಮಾತನಾಡಿರುವ ದೃಶ್ಯವಿದೆ. ಅನೇಕ ಕಾಂಗ್ರೆಸ್ ಮುಖಂಡರು ಈ ವಿಡಿಯೋವನ್ನು ಹಂಚಿಕೊಂಡಿದ್ದಾರೆ.
ಫ್ಯಾಕ್ಟ್‌ಚೆಕ್ : ಈ ವಿಡಿಯೋ ಕುರಿತು ಅನುಮಾನ ವ್ಯಕ್ತವಾದ ಕಾರಣ, ನಾವು ಇದರ ಸತ್ಯಾಸತ್ಯತೆ ಪರಿಶೀಲಿಸಿದ್ದೇವೆ. ಈ ವೇಳೆ ಇದು ಕಾಂಗ್ರೆಸ್‌ನ ಮಹಾಲಕ್ಷಿ ಯೋಜನೆ ಕುರಿತ ವಿಡಿಯೋ ಅಲ್ಲ. ಎಡಿಟೆಡ್ ವಿಡಿಯೋ ಎಂಬ ಸತ್ಯ ಗೊತ್ತಾಗಿದೆ.
ಗೂಗಲ್ ರಿವರ್ಸ್ ಇಮೇಜ್‌ನಲ್ಲಿ ವಿಡಿಯೋದ ಸ್ಕ್ರೀನ್ ಶಾಟ್ ಬಳಸಿ ನಾವು ಸರ್ಚ್ ಮಾಡಿದಾಗ, ಪ್ರೆಗಾ ನ್ಯೂಸ್ ಯೂಟ್ಯೂಬ್ ಚಾನೆಲ್‌ನಲ್ಲಿ 19 ಫೆಬ್ರವರಿ 2022 ರಂದು ಅಪ್ಲೋಡ್ ಮಾಡಲಾದ ಮೂಲ ವಿಡಿಯೋ ದೊರೆತಿದೆ.

ಮೂಲ ವಿಡಿಯೋದಲ್ಲೂ ವೈರಲ್ ವಿಡಿಯೋದಲ್ಲಿರುವ ದೃಶ್ಯಗಳೇ ಇದ್ದು, ಕೊನೆಯಲ್ಲಿ ಮಾತ್ರ ಮಹಿಳಾ ದಿನಾಚರಣೆಯ ಸಂದೇಶ ಸಾರುವ ಸನ್ನಿವೇಶವಿದೆ. ಮಹಿಳಾ ದಿನಾಚರಣೆಯ ಪ್ರಯುಕ್ತ ಪ್ರೆಗಾ ನ್ಯೂಸ್ ಸಿದ್ದಪಡಿಸಿದ ವಿಶೇಷ ವಿಡಿಯೋವನ್ನು ಕಟ್ ಮಾಡಿ, ಅದಕ್ಕೆ ರಾಹುಲ್ ಗಾಂಧಿಯ ವಿಡಿಯೋ ಎಡಿಟ್ ಮಾಡಿ ಹಂಚಿಕೊಂಡಿರುವುದು ನಮ್ಮ ಪರಿಶೀಲನೆಯಲ್ಲಿ ಗೊತ್ತಾಗಿದೆ.
ಇದನ್ನೂ ಓದಿ : FACT CHECK : ರಾಜ್ಯಸಭೆಯ ಮಾಜಿ ಸದಸ್ಯ ಮಜೀದ್ ಮೆಮನ್ ಉಗ್ರ ಕಸಬ್ ಪರ ವಾದಿಸಿದ್ದರು ಎಂಬುವುದು ಸುಳ್ಳು


