ಮಹಿಳೆಯ ಅಪಹರಣ ಪ್ರಕರಣದಲ್ಲಿ ಶಾಸಕ ಹೆಚ್.ಡಿ ರೇವಣ್ಣ ಅವರಿಗೆ ಜಾಮೀನು ನೀಡಿರುವ ವಿಶೇಷ ನ್ಯಾಯಾಲಯದ ಆದೇಶದಲ್ಲಿ ದೋಷ ಇದ್ದಂತಿದೆ ಎಂದು ಕರ್ನಾಟಕ ಹೈಕೋರ್ಟ್ ಶುಕ್ರವಾರ ಹೇಳಿರುವುದಾಗಿ ಲೈವ್ ಲಾ ವರದಿ ಮಾಡಿದೆ.
ರೇವಣ್ಣ ಅವರಿಗೆ ಬೆಂಗಳೂರಿನ ಜನ ಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಮೇ 13 ರಂದು ಜಾಮೀನು ಮಂಜೂರು ಮಾಡಿದೆ. ಜಾಮೀನು ರದ್ದು ಕೋರಿ ವಿಶೇಷ ತನಿಖಾ ತಂಡ (ಎಸ್‌ಐಟಿ) ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೃಷ್ಣ ಎಸ್ ದೀಕ್ಷಿತ್ ಅವರಿದ್ದ ಏಕಸದಸ್ಯ ಪೀಠ, ಆದೇಶದಲ್ಲಿ ದೋಷ ಇದ್ದಂತಿದೆ ಎಂದು ಮೌಖಿಕವಾಗಿ ಹೇಳಿರುವುದಾಗಿ ವರದಿ ತಿಳಿಸಿದೆ.
ಎಸ್‌ಐಟಿ ಪರ ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಪ್ರೊಫೆಸರ್ ರವಿವರ್ಮ ಕುಮಾರ್ ವಾದ ಮಂಡಿಸಿದ್ದಾರೆ.
ವಾದ ಮಂಡನೆಯ ವೇಳೆ ಪ್ರೊ. ರವಿವರ್ಮ ಕುಮಾರ್ ಅವರು “ಜಾಮೀನು ನೀಡಿರುವ ವಿಚಾರಣಾಧೀನ ನ್ಯಾಯಾಲಯದ ಆದೇಶ ತಪ್ಪಾಗಿದೆಯೇ ಎಂಬ ಪ್ರಶ್ನೆ ಉದ್ಭವಿಸಿದೆ. ವಿಚಾರಣಾಧೀನ ನ್ಯಾಯಾಲಯವು ಐಪಿಸಿ ಸೆಕ್ಷನ್ 364ಎ ಅರ್ಜಿಯಲ್ಲಿ ಪ್ರಮಾದ ಎಸಗಿದೆ” ಎಂದಿದ್ದಾರೆ.
ಆಗ ಪೀಠವು “ವಾದದಲ್ಲಿ ಬಲ ಇದೆ. ದಾಖಲೆಯನ್ನು ಪರಿಶೀಲಿಸಿದರೆ ದೋಷ ಇದ್ದಂತಿದೆ” ಎಂದಿದೆ. ಆಗ ಪ್ರೊ. ರವಿವರ್ಮ ಕುಮಾರ್ ಅವರು “ದೂರು ನೀಡುವುದರಿಂದ ಮಹಿಳೆಯನ್ನು ತಡೆಯಲು ಅಪಹರಿಸಲಾಗಿದೆ. ಸಾಕ್ಷಿಯನ್ನು ಅಪಹರಿಸಲಾಗಿದೆ. ಪ್ರಕರಣವನ್ನು ತುರ್ತಾಗಿ ಆಲಿಸಬೇಕು. ಈ ನಡೆಗೆ ಅನುಮತಿಸಿದರೆ ಯಾರೂ ಕ್ರಿಮಿನಲ್ ಪ್ರಕರಣ ದಾಖಲಿಸಲಾಗದು” ಎಂದು ಹೇಳಿದ್ದಾರೆ.
ಪ್ರಕರಣದ ಹಿನ್ನೆಲೆ : ಪ್ರಜ್ವಲ್ ರೇವಣ್ಣ ಮೇಲೆ ಲೈಂಗಿಕ ದೌರ್ಜನ್ಯ ಆರೋಪ ಕೇಳಿ ಬಂದ ಬೆನ್ನಲ್ಲೇ, ತನ್ನ ಮನೆ ಕೆಲಸದ ಮಹಿಳೆಯನ್ನು ಅಪಹರಿಸಿದ ಆರೋಪ ರೇವಣ್ಣ ವಿರುದ್ಧ ಕೇಳಿ ಬಂದಿತ್ತು. ಅಪಹರಣಕ್ಕೊಳಗಾದ ಮಹಿಳೆಯ ಮಗ ಈ ಕುರಿತು ಮೈಸೂರಿನ ಕೆ.ಆರ್ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಪ್ರಕರಣದಲ್ಲಿ ಬಂಧನ ಭೀತಿಯಿಂದ ರೇವಣ್ಣ ನ್ಯಾಯಾಲಯದ ಮೊರೆ ಹೋಗಿದ್ದರು. ನ್ಯಾಯಾಲಯ ನಿರೀಕ್ಷಣಾ ಜಾಮೀನು ನಿರಾಕರಿಸಿದ್ದರಿಂದ ಎಸ್‌ಐಟಿ ಅವರನ್ನು ಬಂಧಿಸಿತ್ತು. ಬಳಿಕ ನ್ಯಾಯಾಲಯ ಜಾಮೀನು ನೀಡಿದ್ದರಿಂದ ರೇವಣ್ಣ ಬಿಡುಗಡೆಗೊಂಡಿದ್ದಾರೆ.
ರೇವಣ್ಣ ಅವರ ಸೂಚನೆಯಂತೆ ಮಹಿಳೆಯನ್ನು ಅಪಹರಿಸಿದ ಆರೋಪ ಅವರ ಆಪ್ತ ಸತೀಶ್ ಬಾಬಣ್ಣ ಮೇಲಿದೆ. ಇವರನ್ನು ಪೊಲೀಸರು ಬಂಧಿಸಿತ್ತು. ನ್ಯಾಯಾಲಯ ನ್ಯಾಯಾಂಗ ಬಂಧನ ವಿಧಿಸಿದೆ. ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯದ ಸಂತ್ರಸ್ತೆಯರಲ್ಲಿ ಅಪಹರಣಕ್ಕೊಳಗಾದ ಮಹಿಳೆಯೂ ಒಬ್ಬರು ಎನ್ನಲಾಗಿದೆ. ಮೈಸೂರಿನ ತೋಟದ ಮನೆಯೊಂದರಲ್ಲಿದ್ದ ಮಹಿಳೆಯನ್ನು ಎಸ್‌ಐಟಿ ಅಧಿಕಾರಿಗಳು ಈಗಾಗಲೇ ರಕ್ಷಿಸಿದ್ದಾರೆ.
ಇದನ್ನೂ ಓದಿ : ಪ್ರಚೋದನಕಾರಿ ಪೋಸ್ಟ್ : ಹಿಂದುತ್ವ ಮುಖಂಡ ಶರಣ್ ಪಂಪ್‌ವೆಲ್ ವಿರುದ್ದ ಪ್ರಕರಣ ದಾಖಲು


