ಕೇರಳ ಹೈಕೋರ್ಟ್ ರಾಜ್ಯದಾದ್ಯಂತ ಸರ್ಕಾರಿ ಜಮೀನಿನಲ್ಲಿರುವ ಅಕ್ರಮ ಧಾರ್ಮಿಕ ರಚನೆಗಳನ್ನು ತೆಗೆದುಹಾಕಲು ಆದೇಶಿಸಿದ್ದು, ಇಂತಹ ಅನಧಿಕೃತ ನಿರ್ಮಾಣಗಳು ವಿವಿಧ ಧಾರ್ಮಿಕ ಸಮುದಾಯಗಳ ನಡುವೆ ಘರ್ಷಣೆಯನ್ನು ಉಂಟುಮಾಡಬಹುದು ಎಂದು ಹೇಳಿದೆ.
ಸರ್ಕಾರಿ ಭೂಮಿಯಲ್ಲಿ ಅಕ್ರಮವಾಗಿ ತಲೆ ಎತ್ತಿರುವ ಎಲ್ಲಾ ಧಾರ್ಮಿಕ ಕಟ್ಟಡಗಳನ್ನು ಕೆಡವುವಂತೆ ಕೇರಳ ಹೈಕೋರ್ಟ್ ಮಹತ್ವದ ಆದೇಶವೊಂದರಲ್ಲಿ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿದೆ. ಈ ಕುರಿತು ಆದೇಶವನ್ನು ಹೊರಡಿಸಿದ ನ್ಯಾಯಮೂರ್ತಿ ಪಿ.ವಿ.ಕುಂಞಕೃಷ್ಣನ್, ಈ ಕುರಿತು ಕೈಗೊಂಡ ಕ್ರಮಗಳ ಕುರಿತು ಒಂದು ವರ್ಷದೊಳಗೆ ಹೈಕೋಟ್‌ನ ರಿಜಿಸ್ಟ್ರಾರ್ ಜನರಲ್‌ಗೆ ವರದಿ ಸಲ್ಲಿಸುವಂತೆ ಸೂಚಿಸಿದ್ದಾರೆ.
ಹಿಂದೂ, ಕ್ರಿಶ್ಚಿಯನ್, ಮುಸ್ಲಿಂ ಅಥವಾ ಇತರ ಯಾವುದೇ ಧರ್ಮವನ್ನು ತೆರವು ಪ್ರಕ್ರಿಯೆಯಲ್ಲಿ ಪರಿಗಣಿಸಬಾರದು. ಸರ್ಕಾರಿ ಭೂಮಿಯಲ್ಲಿ ಅನಧಿಕೃತ ಧಾರ್ಮಿಕ ಕೇಂದ್ರಗಳಿಗೆ ಅವಕಾಶ ನೀಡಬಾರದು ಎಂದು ನಿರ್ದೇಶನ ನೀಡಿದ್ದಾರೆ.
ದೇವರು ಸರ್ವವ್ಯಾಪಿಯಾಗಿದ್ದಾನೆ, ಆದ್ದರಿಂದ ಧಾರ್ಮಿಕ ಕಟ್ಟಡಗಳನ್ನು ನಿರ್ಮಿಸಲು ಭಕ್ತರು ಸರ್ಕಾರಿ ಭೂಮಿಯನ್ನು ಅತಿಕ್ರಮಿಸಬೇಕಾಗಿಲ್ಲ. ಅದನ್ನು ಭೂರಹಿತರಿಗೆ ಹಂಚಲಿ, ಇದರಿಂದ ದೇವರು ಹೆಚ್ಚು ಸಂತೋಷ ಪಡುತ್ತಾನೆ ಮತ್ತು ಆಶೀರ್ವಾದವನ್ನು ನೀಡುತ್ತಾನೆ ಎಂದು ನ್ಯಾಯಮೂರ್ತಿಗಳು ಹೇಳಿದ್ದಾರೆ.
ಸರ್ಕಾರಿ ಭೂಮಿಯಲ್ಲಿ ಯಾವುದೇ ಧಾರ್ಮಿಕ ಕಟ್ಟಡಗಳು ಅಥವಾ ಇತರ ರಚನೆಗಳು ಅಸ್ತಿತ್ವದಲ್ಲಿವೆಯೇ ಎಂಬುದನ್ನು ತಹಸೀಲ್ದಾರ್ ಮತ್ತು ಗ್ರಾಮಾಧಿಕಾರಿಗಳ ಮೂಲಕ ತನಿಖೆ ಮಾಡಲು ಮುಖ್ಯ ಕಾರ್ಯದರ್ಶಿ ಜಿಲ್ಲಾಧಿಕಾರಿಗಳಿಗೆ ಸೂಚಿಸಬೇಕು. ಅನಧಿಕೃತ ಕಟ್ಟಡಗಳು ಕಂಡುಬಂದಲ್ಲಿ ಸಾರ್ವಜನಿಕರು ಈ ಬಗ್ಗೆ ಸಂಬಂಧಪಟ್ಟ ಜಿಲ್ಲಾಧಿಕಾರಿಗಳ ಗಮನಕ್ಕೂ ತರಬಹುದು. ಜಿಲ್ಲಾಧಿಕಾರಿ ಆರು ತಿಂಗಳೊಳಗೆ ಈ ಬಗ್ಗೆ ತನಿಖೆ ಪೂರ್ಣಗೊಳಿಸಬೇಕು. ಅಕ್ರಮ ಕಟ್ಟಡಗಳು ಕಂಡು ಬಂದರೆ ಆರು ತಿಂಗಳೊಳಗೆ ಪೊಲೀಸರ ನೆರವಿನಿಂದ ಅದನ್ನು ನೆಲಸಮ ಮಾಡಬೇಕು ಎಂದು ಹೈಕೋರ್ಟ್ ತೀರ್ಪಿನ ವೇಳೆ ಹೇಳಿದೆ.
ಕೇರಳದ ಪ್ಲಾಂಟೇಶನ್ ಕಾರ್ಪೊರೇಷನ್ ಸಲ್ಲಿಸಿದ ರಿಟ್ ಅರ್ಜಿಗೆ ಪ್ರತಿಕ್ರಿಯೆಯಾಗಿ ಹೈಕೋರ್ಟ್ ಈ ಆದೇಶವನ್ನು ನೀಡಿದೆ. ದೀರ್ಘಾವಧಿಯ ಲೀಸ್‌ನಲ್ಲಿ ನೀಡಲಾದ ತನ್ನ ಆಸ್ತಿಗಳನ್ನು ಒತ್ತುವರಿ ಮಾಡಿಕೊಂಡಿರುವವರನ್ನು ತೆರವುಗೊಳಿಸಿ ಸರ್ಕಾರಿ ಭೂಮಿಯನ್ನು ರಕ್ಷಿಸುವಂತೆ ಕೋರಿ ಹೈಕೋರ್ಟ್ ಮೊರೆ ಹೋಗಲಾಗಿತ್ತು. ಪಥನಂತಿಟ್ಟದಲ್ಲಿರುವ ಚಂದನಪಲ್ಲಿ ಎಸ್ಟೇಟ್‌ನ ಸಿ ವಿಭಾಗದಲ್ಲಿ ಅತಿಕ್ರಮಣ ಮತ್ತು ಅನಧಿಕೃತ ಕಟ್ಟಡಗಳ ನಿರ್ಮಾಣದ ಬಗ್ಗೆ ಅರ್ಜಿಯಲ್ಲಿ ಹೇಳಲಾಗಿತ್ತು. ಅರ್ಜಿಯನ್ನು ಪರಿಗಣಿಸಿದ ಹೈಕೋರ್ಟ್, ಅತಿಕ್ರಮಣದಾರರನ್ನು ತೆರವು ಮಾಡುವಂತೆ ಹಾಗೂ ಆಸ್ತಿಯಲ್ಲಿರುವ ಅಕ್ರಮ ಕಟ್ಟಡಗಳನ್ನು ಆರು ತಿಂಗಳೊಳಗೆ ತೆರವುಗೊಳಿಸುವಂತೆ ಪತ್ತನಂತಿಟ್ಟ ಜಿಲ್ಲಾಧಿಕಾರಿ, ಡಿಜಿಪಿ, ಪತ್ತನಂತಿಟ್ಟ ಜಿಲ್ಲಾ ಪೊಲೀಸ್ ಮುಖ್ಯಸ್ಥರು, ಅಡೂರು ಆರ್‌ಡಿಒ, ಕೊನ್ನಿ ವಿಭಾಗೀಯ ಅರಣ್ಯಾಧಿಕಾರಿಗೆ ನಿರ್ದೇಶನವನ್ನು ನೀಡಿದೆ.
Kerala High Court orders removal of illegal religious structures on State land "whether Hindu, Christian, Muslim or other religion"
Read more: https://t.co/lNUQewMd6M pic.twitter.com/rY6eTt1bpf
— Bar and Bench (@barandbench) May 30, 2024
ಇದನ್ನು ಓದಿ: ಕನ್ಯಾಕುಮಾರಿಯಲ್ಲಿ ಮೋದಿ ಧ್ಯಾನ: ವಿವೇಕಾನಂದ ಸ್ಮಾರಕಕ್ಕೆ ತೆರಳದಂತೆ ಪ್ರವಾಸಿಗಳಿಗೆ ನಿರ್ಬಂಧ


