ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಬಂಧಿತರಾಗಿರುವ ಹಾಸನ ಸಂಸದ, ಎನ್‌ಡಿಎ ಲೋಕಸಭಾ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಅವರನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದ ಬಳಿಕ ಕೋರ್ಟಿಗೆ ಹಾಜರುಪಡಿಸಲಾಗಿದ್ದು, ಆರೋಪಿಯನ್ನು ಆರು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡಲಾಗಿದೆ.
ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅವರನ್ನು ಬೆಂಗಳೂರು ನ್ಯಾಯಾಲಯ ಆರು ದಿನಗಳ ಪೊಲೀಸ್ ಕಸ್ಟಡಿಗೆ ನೀಡಿದೆ. ಲೈಂಗಿಕ ದೌರ್ಜನ್ಯ ಆರೋಪದ ಕುರಿತು ತನಿಖೆ ನಡೆಸುತ್ತಿರುವ ಎಸ್‌ಐಟಿ ತಂಡ ಹೊಳೆನರಸೀಪುರದಲ್ಲಿ ಅವರ ವಿರುದ್ಧ ದಾಖಲಾಗಿರುವ ಮೊದಲ ಎಫ್‌ಐಆರ್‌ನಲ್ಲಿ ಅವರನ್ನು ಕಸ್ಟಡಿಗೆ ಕೋರಿತ್ತು.
ಅಶ್ಲೀಲ ವಿಡಿಯೋ ಪ್ರಕರಣದಲ್ಲಿ ಬಂಧಿತರಾಗಿರುವ ಜೆಡಿಎಸ್ ಅಮಾನತುಗೊಂಡಿರುವ ಸಂಸದ ಪ್ರಜ್ವಲ್ ರೇವಣ್ಣ ಅವರನ್ನು ವೈದ್ಯಕೀಯ ಪರೀಕ್ಷೆಗಾಗಿ ಬೆಂಗಳೂರಿನ ಬೌರಿಂಗ್ ಮತ್ತು ಲೇಡಿ ಕರ್ಜನ್ ಆಸ್ಪತ್ರೆಗೆ ಕರೆತರಲಾಗಿತ್ತು. ವೈದ್ಯಕೀಯ ಪರೀಕ್ಷೆಯ ಮುಕ್ತಾಯದ ನಂತರ, ಪ್ರಜ್ವಲ್ ಅವರನ್ನು ಸಿಟಿ ಸಿವಿಲ್ ನ್ಯಾಯಾಲಯಕ್ಕೆ ಕರೆದೊಯ್ಯಲಾಯಿತು, ಅಲ್ಲಿ ಅವರನ್ನು 42 ನೇ ಎಸಿಎಂಎಂ ನ್ಯಾಯಾಲಯದ ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಯಿತು. ಅಲ್ಲಿ ಪ್ರಜ್ವಲ್ ಅವರನ್ನು ತಮ್ಮ ಕಸ್ಟಡಿಗೆ ಒಪ್ಪಿಸುವಂತೆ ಎಸ್‌ಐಟಿ ಅಧಿಕಾರಿಗಳು ನ್ಯಾಯಾಲಯಕ್ಕೆ ಮನವಿ ಮಾಡಿದ್ದರು. ಅಂತಿಮವಾಗಿ ನ್ಯಾಯಾಧಿಶರು ಆರು ದಿನಗಳ ಕಾಲ ಎಸ್‌ಐಟಿ ವಶಕ್ಕೆ ನೀಡಿದ್ದಾರೆ.

ಹಾಸನ ಸಂಸದರನ್ನು ಎಸ್‌ಐಟಿ ಗುರುವಾರ ರಾತ್ರಿ ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಬಂಧಿಸಿದೆ. ಮೈಸೂರಿನ ಕೆಆರ್ ನಗರದ ಮಹಿಳೆಯೊಬ್ಬಳ ಅಪಹರಣ ಪ್ರಕರಣದಲ್ಲಿ ಎಚ್‌ಡಿ ರೇವಣ್ಣ ಜಾಮೀನು ಪ್ರಶ್ನಿಸಿ ಎಸ್‌ಐಟಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದೆ. ಎಸ್‌ಐಟಿ ಪ್ರಕಾರ, ಈ ತನಿಖೆ ಮುಗಿಯುವವರೆಗೆ ರೇವಣ್ಣ ಕಸ್ಟಡಿಯಲ್ಲಿ ಮುಂದುವರಿಯಬೇಕು. ಹೀಗಾಗಿ, ಜಾಮೀನು ರದ್ದುಗೊಳಿಸುವಂತೆ ಹೈಕೋರ್ಟ್‌ಗೆ ಮನವಿ ಮಾಡಿದೆ.
ಪ್ರಜ್ವಲ್ ಅವರು ಭಾಗಿಯಾಗಿದ್ದಾರೆ ಎನ್ನಲಾದ ನೂರಾರು ಅಶ್ಲೀಲ ವಿಡಿಯೋ ತುಣುಕುಗಳ ಪ್ರಸಾರದ ಮಧ್ಯೆ ಏಪ್ರಿಲ್ 26 ರಂದು ತಡರಾತ್ರಿ ದೇಶವನ್ನು ತೊರೆದಿದ್ದಾರೆ ಎಂದು ವರದಿಯಾಗಿತ್ತು. ಸೋಮವಾರ ವಿಡಿಯೋ ಸಂದೇಶವನ್ನು ಬಿಡುಗಡೆ ಮಾಡಿದ್ದ ಅವರು, ಮೇ 31 ರಂದು ವಿಶೇಷ ತನಿಖಾ ತಂಡ (ಎಸ್‌ಐಟಿ) ಮುಂದೆ ಹಾಜರಾಗುವುದಾಗಿ ಹೇಳಿದ್ದರು.
ಲೈಂಗಿಕ ಕಿರುಕುಳದ ಆರೋಪದ ನಡುವೆ ಕಳೆದ ತಿಂಗಳು ಜರ್ಮನಿಗೆ ಪಲಾಯನ ಮಾಡಿದ ಪ್ರಜ್ವಲ್ ರೇವಣ್ಣ ಅವರ ಪಾಸ್‌ಪೋರ್ಟ್ ಅನ್ನು ವಶಪಡಿಸಿಕೊಳ್ಳಲು ವಿದೇಶಾಂಗ ವ್ಯವಹಾರಗಳ ಸಚಿವಾಲಯವು (ಎಂಇಎ) ಮೇ 21 ರಂದು ವಿನಂತಿಯನ್ನು ಸ್ವೀಕರಿಸಿದೆ ಎಂದು ವಿದೇಶಾಂಗ ಸಚಿವ ಎಸ್ ಜೈಶಂಕರ್ ಹೇಳಿದ್ದಾರೆ.
ಇದನ್ನೂ ಓದಿ; ಮಹಿಳೆಯ ಅಪಹರಣ ಪ್ರಕರಣ| ರೇವಣ್ಣಗೆ ಜಾಮೀನು ನೀಡಿರುವ ಆದೇಶದಲ್ಲಿ ದೋಷ ಇದ್ದಂತಿದೆ: ಹೈಕೋರ್ಟ್


