ದಕ್ಷಿಣ ಗಾಝಾದಲ್ಲಿ ಸ್ಥಳಾಂತರಗೊಂಡ ಪ್ಯಾಲೆಸ್ತೀನಿಯರ ಮೇಲೆ ಇಸ್ರೇಲ್ ನಡೆಸಿದ ವೈಮಾನಿಕ ದಾಳಿ ಹೃದಯವಿದ್ರಾಹಕವಾದುದು ಮತ್ತು ಅತ್ಯಂತ ಕಳವಳಕಾರಿ ವಿಷಯವಾಗಿದೆ ಎಂದು ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಹೇಳಿದೆ.
ಇಸ್ರೇಲ್ ಗಾಝಾ ಪಟ್ಟಿಯ ಮೇಲೆ ಆಕ್ರಮಣದ ವೇಳೆ ರಫಾ ನಗರಕ್ಕೆ ಸ್ಥಳಾಂತರಗೊಂಡ ಪ್ಯಾಲೆಸ್ತೀನ್ ನಾಗರಿಕರ ಶಿಬಿರದ ಮೇಲೆ ಮೇ.26ರಂದು ಇಸ್ರೇಲ್ ವೈಮಾನಿಕ ದಾಳಿ ನಡೆಸಿದೆ. ಈ ವೇಳೆ ಕನಿಷ್ಠ 45 ನಾಗರಿಕರು ಮೃತಪಟ್ಟಿರುವ ಬಗ್ಗೆ ವರದಿಯಾಗಿದೆ.
ಇಸ್ರೇಲ್ ಗಾಝಾದ ಮೇಲೆ ಕಾರ್ಯಾಚರಣೆಯನ್ನು ಪ್ರಾರಂಭಿಸಿದ ನಂತರ ರಫಾವನ್ನು ಗಾಝಾದಲ್ಲಿನ ಪ್ಯಾಲೆಸ್ತೀನ್ ನಾಗರಿಕರ ಕೊನೆಯ ಆಶ್ರಯವೆಂದು ಪರಿಗಣಿಸಲಾಗಿತ್ತು. ರಾಫಾದಲ್ಲಿನ ಶಿಬಿರದಲ್ಲಿ ನಾಗರಿಕರು ಜೀವಗಳನ್ನು ಕಳೆದುಕೊಂಡಿರುವುದು ನಮಗೆ ಆಳವಾದ ಕಳವಳದ ವಿಷಯವಾಗಿದೆ ಎಂದು ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ. ನಾಗರಿಕರ ರಕ್ಷಣೆ ಮತ್ತು ನಡೆಯುತ್ತಿರುವ ಸಂಘರ್ಷದಲ್ಲಿ ಅಂತರಾಷ್ಟ್ರೀಯ ಮಾನವೀಯ ಕಾನೂನನ್ನು ಗೌರವಿಸಲು ನಾವು ನಿರಂತರವಾಗಿ ಕರೆ ನೀಡಿದ್ದೇವೆ. ಭಾರತವು ಯಾವಾಗಲೂ ಎರಡು ದೇಶಗಳ ಪರಿಹಾರವನ್ನು ಬೆಂಬಲಿಸುತ್ತದೆ ಹಾಗೂ ಸಾರ್ವಭೌಮ ಮತ್ತು ಸ್ವತಂತ್ರ ಫೆಲೆಸ್ತೀನ್ ಸ್ಥಾಪನೆಗೆ ಬೆಂಬಲಿಸಿದೆ ಎಂದು ಹೇಳಿದ್ದಾರೆ.
ಮಂಗಳವಾರ, ಐರ್ಲೆಂಡ್, ನಾರ್ವೆ ಮತ್ತು ಸ್ಪೇನ್ ಔಪಚಾರಿಕವಾಗಿ ಪ್ಯಾಲೆಸ್ತೀನ್‌ನ್ನು ಒಂದು ದೇಶವೆಂದು ಗುರುತಿಸಿವೆ. ಭಾನುವಾರದ ದಾಳಿಯ ಬಗ್ಗೆ ಜಾಗತಿಕ ಆಕ್ರೋಶದ ಹೊರತಾಗಿಯೂ, ಇಸ್ರೇಲ್ ಗಾಝಾದಲ್ಲಿ ತನ್ನ ಹತ್ಯಾಕಾಂಡವನ್ನು ಮುಂದುವರಿಸಿದೆ. ಇಸ್ರೇಲ್ ನಡೆಸುತ್ತಿರುವ ಹತ್ಯಾಕಾಂಡಕ್ಕೆ ಜಾಗತಿಕ ಖಂಡನೆ ಮತ್ತು ಹೇಗ್‌ನಲ್ಲಿರುವ ಅಂತರಾಷ್ಟ್ರೀಯ ನ್ಯಾಯಾಲಯವು ತಕ್ಷಣವೇ ನಗರದಿಂದ ಸೇನೆಯನ್ನು ಹಿಂತೆಗೆದುಕೊಳ್ಳುವಂತೆ ಆದೇಶಿಸಿದರೂ ಇಸ್ರೇಲ್ ರಾಫಾದ ಮೇಲೆ ಆಕ್ರಮಣವನ್ನು ಮುಂದುವರೆಸುತ್ತಿರುವುದರಿಂದ ಒಂದು ಮಿಲಿಯನ್‌ಗಿಂತಲೂ ಹೆಚ್ಚು ಜನರು ರಫಾದಿಂದ ಸ್ಥಳಾಂತರಗೊಂಡಿದ್ದಾರೆ.
ಗಾಝಾದ ಮೇಲೆ ಕಳೆದ 8 ತಿಂಗಳಿನಿಂದ ಇಸ್ರೇಲ್ ದಾಳಿಯನ್ನು ನಡೆಸುತ್ತಿದೆ. ಅಲ್ ಜಝೀರಾ ವರದಿಯ ಪ್ರಕಾರ, ಹಮಾಸ್ ಒತ್ತೆಯಾಳುಗಳಲ್ಲಿ ನೂರು ಮಂದಿ ಇನ್ನು ಕೂಡ ಜೀವಂತವಾಗಿದ್ದಾರೆ ಮತ್ತು ಗಾಝಾದಲ್ಲಿದ್ದಾರೆ. ಸಂಕ್ಷಿಪ್ತ ಕದನ ವಿರಾಮ ಒಪ್ಪಂದದ ಭಾಗವಾಗಿ ಕೆಲವು ಒತ್ತೆಯಾಳುಗಳನ್ನು ನವೆಂಬರ್‌ನಲ್ಲಿ ಬಿಡುಗಡೆ ಮಾಡಲಾಯಿತು ಮತ್ತು ಇತರರು ಯುದ್ಧದ ಪರಿಣಾಮವಾಗಿ ಕೊಲ್ಲಲ್ಪಟ್ಟರು.
ಅಕ್ಟೋಬರ್‌ನಲ್ಲಿ ಇಸ್ರೇಲ್ ಗಾಝಾದ ಮೇಲೆ ಅಭೂತಪೂರ್ವ ವಾಯು ಮತ್ತು ಭೂ ಮಾರ್ಗದಲ್ಲಿ ದಾಳಿಯನ್ನು ಪ್ರಾರಂಭಿಸಿದ ಬಳಿಕೆ ಗಾಝಾದಲ್ಲಿ 15,000ಕ್ಕೂ ಹೆಚ್ಚು ಮಕ್ಕಳು ಸೇರಿದಂತೆ ಕನಿಷ್ಠ 36,700 ಜನರು ಸಾವನ್ನಪ್ಪಿದ್ದಾರೆ. ಲಕ್ಷಾಂತರ ಮಂದಿ ಮನೆಗಳನ್ನು ಕಳೆದುಕೊಂಡು ನಿರಾಶ್ರಿತರಾಗಿದ್ದಾರೆ.
ಇದನ್ನು ಓದಿ: ಸರ್ಕಾರಿ ಜಮೀನಿನಲ್ಲಿರುವ ಅಕ್ರಮ ಧಾರ್ಮಿಕ ಕಟ್ಟಡಗಳನ್ನು ತೆರವುಗೊಳಿಸುವಂತೆ ಸೂಚಿಸಿದ ಕೇರಳ ಹೈಕೋರ್ಟ್


