ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತ ಮಹಿಳೆಯ ಕಿಡ್ನಾಪ್ ಪ್ರಕರಣಕ್ಕೆ ಸಂಬಂಧಿಸಿ ಭವಾನಿ ರೇವಣ್ಣ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಕೋರ್ಟ್ ವಜಾ ಮಾಡಿದ್ದು, ಯಾವುದೇ ಸಂದರ್ಭದಲ್ಲಿ ಭವಾನಿ ರೇವಣ್ಣ ಬಂಧನದ ಸಾಧ್ಯತೆ ಇದೆ.
ಅಪಹರಣ ಪ್ರಕರಣದಲ್ಲಿ ಎಸ್‌ಐಟಿ ಗೆ ಭವಾನಿ ರೇವಣ್ಣನ ತನಿಖೆ ಅಗತ್ಯವಿದೆ. ಹೀಗಾಗಿ ಅವರನ್ನು ಕಸ್ಟಡಿಗೆ ನೀಡಬೇಕು, ಭವಾನಿ ಕಿಡ್ನಾಪ್ ನಲ್ಲಿ ಭಾಗಿಯಾಗಿದ್ದಾರೆ ಎಂಬುದಕ್ಕೆ ಸಾಕ್ಷಿಗಳಿವೆ. ದೂರುದಾರ ಹಾಗೂ ಆರೋಪಿ ಸತೀಶ್ ಬಾಬಣ್ಣ ಮಾತಾಡಿರುವ ಕಾಲ್ ರೆಕಾರ್ಡ್ ಇದೆ. ಈ ಕಾಲ್ ರೆಕಾರ್ಡ್‌ನಲ್ಲಿ ಭವಾನಿ ಯಾವ ರೀತಿ ಭಾಗಿಯಾಗಿದ್ದಾರೆ ಎಂಬುದಕ್ಕೆ ಸಾಕ್ಷಿ ಇದೆ. ಮೊಬೈಲ್‌ನ ಅಟೋ ರೆಕಾರ್ಡರ್‌ನಿಂದ ಕಾಲ್ ರೆಕಾರ್ಡ್ ಆಗಿದೆ ಎಂದು ಕೋರ್ಟ್ ಗಮನಕ್ಕೆ ತಂದಿದ್ದಾರೆ.
ಪ್ರಕರಣದ ತನಿಖೆ ನಡೆಸುತ್ತಿರುವ ಎಸ್‌ಐಟಿ ಪೊಲೀಸರು ಭವಾನಿ ಅವರಿಗೆ ತನಿಖೆಗೆ ಹಾಜರಾಗುವಂತೆ 15 ದಿನಗಳ ಹಿಂದೆ ನೋಟಿಸ್ ನೀಡಿದ್ದರು. ಈ ಹಿನ್ನೆಲೆ ಅವರು ನಿರೀಕ್ಷಣಾ ಜಾಮೀನಿಗಾಗಿ ಅರ್ಜಿ ಸಲ್ಲಿಸಿದ್ದರು. ಈ ಮಧ್ಯೆ ಶುಕ್ರವಾರ ಬೆಳಗ್ಗೆ ಎಸ್‌ಐಟಿ ಅಧಿಕಾರಿಗಳು ಭವಾನಿ ಅವರಿಗೆ ಎರಡನೇ ನೋಟಿಸ್ ನೀಡಿದ್ದರು. ಅವರು ಮನೆಯಲ್ಲಿ ಇಲ್ಲದ ಕಾರಣ ನೋಟಿಸ್ ಅಂಟಿಸಿ ಬಂದಿದ್ದರು. ಇದೀಗ ಕೋರ್ಟ್ ಅವರ ಜಾಮೀನು ಅರ್ಜಿಯನ್ನು ತಿರಸ್ಕರಿಸಿದೆ.
ಮೇ 29ರಂದು ಈ ಪ್ರಕರಣದ ಕುರಿತು ವಾದ-ಪ್ರತಿವಾದ ಆಲಿಸಿದ ನ್ಯಾಯಾಲಯವು ಮೇ 31ರವರೆಗೆ ತೀರ್ಪು ಕಾಯ್ದಿರಿಸಿತ್ತು. ಹಾಗಾಗಿ ಮೇ 31 ರೇವಣ್ಣ ಕುಟುಂಬಕ್ಕೆ ಪ್ರಮುಖ ದಿನವಾಗಿತ್ತು. ಇಂದು ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿ ಪ್ರಜ್ವಲ್ ರೇವಣ್ಣ ಅವರನ್ನು 6 ದಿನಗಳ ಕಾಲ ಎಸ್‌ಐಟಿ ಕಸ್ಟಡಿಗೆ ನೀಡಲಾಗಿದೆ. ಭವಾನಿ ರೇವಣ್ಣ ಅವರ ನಿರೀಕ್ಷಣಾ ಜಾಮೀನು ಅರ್ಜಿ ಕೂಡ ತಿರಸ್ಕಾರಗೊಂಡಿದೆ. ಇದಲ್ಲದೆ ತಮ್ಮ ವಿರುದ್ಧ ದಾಖಲಾದ ಎರಡೂ ಎಫ್‌ಐಆರ್ ರದ್ದುಗೊಳಿಸುವಂತೆ ಕೋರಿ ಎಚ್.ಡಿ.ರೇವಣ್ಣ ಕೂಡ ಅರ್ಜಿ ಸಲ್ಲಿಸಿದ್ದರು. ಮಹಿಳೆಯ ಅಪಹರಣ ಪ್ರಕರಣದಲ್ಲಿ ಶಾಸಕ ಹೆಚ್.ಡಿ ರೇವಣ್ಣ ಅವರಿಗೆ ಜಾಮೀನು ನೀಡಿರುವ ವಿಶೇಷ ನ್ಯಾಯಾಲಯದ ಆದೇಶದಲ್ಲಿ ದೋಷ ಇದ್ದಂತಿದೆ ಎಂದು ಕರ್ನಾಟಕ ಹೈಕೋರ್ಟ್ ಇಂದು ಹೇಳಿದೆ.
ರೇವಣ್ಣ ಅವರಿಗೆ ಬೆಂಗಳೂರಿನ ಜನ ಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಮೇ 13 ರಂದು ಜಾಮೀನು ಮಂಜೂರು ಮಾಡಿದೆ. ಜಾಮೀನು ರದ್ದು ಕೋರಿ ವಿಶೇಷ ತನಿಖಾ ತಂಡ (ಎಸ್‌ಐಟಿ) ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೃಷ್ಣ ಎಸ್ ದೀಕ್ಷಿತ್ ಅವರಿದ್ದ ಏಕಸದಸ್ಯ ಪೀಠ, ಆದೇಶದಲ್ಲಿ ದೋಷ ಇದ್ದಂತಿದೆ ಎಂದು ಮೌಖಿಕವಾಗಿ ಹೇಳಿರುವುದಾಗಿ ವರದಿ ತಿಳಿಸಿದೆ.
ಇದನ್ನು ಓದಿ: ‘ನರಹಂತಕ’ ಇಸ್ರೇಲ್ ಪ್ರಧಾನಿ ನೆತನ್ಯಾಹು ಸಂದರ್ಶನಕ್ಕೆ ವಿರೋಧ: ಫ್ರಾನ್ಸ್‌ನ ಮಾದ್ಯಮ ಕಚೇರಿ ಹೊರಗೆ ಪ್ರತಿಭಟನೆ


