ಕನ್ಯಾಕುಮಾರಿಯಲ್ಲಿ ಮೋದಿಯ ಧ್ಯಾನಕ್ಕಾಗಿ ತಗಲಿದ ವೆಚ್ಚದ ಮರುವಸೂಲಿಯನ್ನು ಕೋರಿ ತಮಿಳುನಾಡು ಕಾಂಗ್ರೆಸ್ ಸಮಿತಿ (ಟಿಎನ್‌ಸಿಸಿ)ಯು ಮದ್ರಾಸ್ ಹೈಕೋರ್ಟ್ ಮೆಟ್ಟಿಲೇರಿದೆ.
ತಮಿಳುನಾಡು ಕಾಂಗ್ರೆಸ್ ಸಮಿತಿ ಸದಸ್ಯ ಮತ್ತು ವಕೀಲರಾದ ಎಪಿ ಸೂರ್ಯಪ್ರಕಾಶಂ ಈ ಕುರಿತು ಮಾತನಾಡಿದ್ದು, ಪ್ರಧಾನಿಯವರು ಕನ್ಯಾಕುಮಾರಿಗೆ ಖಾಸಗಿ ಭೇಟಿಯನ್ನು ನೀಡಿದ್ದಾರೆ. ಭದ್ರತಾ ಅಂಶಗಳನ್ನು ಬಿಡಿ, ರಾಜ್ಯ ಸರಕಾರವು ಈ ಭೇಟಿಗೆ ಸಂಬಂಧಿಸಿದಂತೆ ಭಾರೀ ಮೊತ್ತವನ್ನು ವ್ಯಯಿಸಿದೆ. ಈ ವೆಚ್ಚವನ್ನು ಬಿಜೆಪಿಯಿಂದ ಮರುವಸೂಲು ಮಾಡುವ ಅಗತ್ಯವಿದೆ ಎಂದು ಹೇಳಿದ್ದಾರೆ.
ತಮಿಳುನಾಡು ಕಾಂಗ್ರೆಸ್ ಸಮಿತಿ ಸದಸ್ಯ ಮತ್ತು ವಕೀಲರಾದ ಎಪಿ ಸೂರ್ಯಪ್ರಕಾಶಂ ಮತ್ತುಇತರ ಆರು ವಕೀಲರು ಸಲ್ಲಿಸಿದ ಅರ್ಜಿಯು, ಪ್ರಧಾನಿ ಮೋದಿ ತಮ್ಮ ಅಧಿಕೃತ ಸ್ಥಾನವನ್ನು ದುರುಪಯೋಗಪಡಿಸಿಕೊಳ್ಳುವುದನ್ನು ತಡೆಯಲು ಭಾರತೀಯ ಚುನಾವಣಾ ಆಯೋಗಕ್ಕೆ (ಇಸಿಐ) ನಿರ್ದೇಶನಗಳನ್ನು ನೀಡಬೇಕೆಂದು ಹೈಕೋರ್ಟ್‌ಗೆ ಆಗ್ರಹಿಸಿದೆ.
ಕನ್ಯಾಕುಮಾರಿಯ ವಿವೇಕಾನಂದ ಶಿಲಾ ಸ್ಮಾರಕದಲ್ಲಿ ಪ್ರಧಾನಿ ನರೇಂದ್ರ ಮೋದಿ ಮಾಡಿದ ಧ್ಯಾನವು ಬಿಜೆಪಿಗೆ ಮತಗಳನ್ನು ಸೆಳೆಯುವ ಪ್ರಯತ್ನವಾಗಿದೆ. ಮೇ 30ರಂದು ಮೋದಿಯ ಧ್ಯಾನವನ್ನು ದೂರದರ್ಶನದಲ್ಲಿ ಮತ್ತು ಖಾಸಗಿ ವಾಹಿನಿಗಳಲ್ಲಿ ವ್ಯಾಪಕವಾಗಿ ಪ್ರಸಾರ ಮಾಡಲಾಗಿದೆ, ಇದು ವಿರೋಧಪಕ್ಷಗಳಿಗೆ ಅನಾನುಕೂಲ ಉಂಟು ಮಾಡಿದೆ ಮತ್ತು ಇದು ಮಾದರಿ ನೀತಿ ಸಂಹಿತೆಯ ಉಲ್ಲಂಘನೆಯಾಗಿದೆ ಎಂದು ತಮಿಳುನಾಡು ಕಾಂಗ್ರೆಸ್ ಸಮಿತಿ (ಟಿಎನ್‌ಸಿಸಿ) ಮದ್ರಾಸ್ ಹೈಕೋರ್ಟ್ ಗಮನಕ್ಕೆ ತಂದಿದೆ.
ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆಯ ಹಿತಾಸಕ್ತಿಯಿಂದ ಅಧಿಕೃತ ಸ್ಥಾನಗಳ ದುರ್ಬಳಕೆಯನ್ನು ತಡೆಯಲು ತಕ್ಷಣವೇ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುವಂತೆ ಭಾರತದ ಚುನಾವಣಾ ಆಯೋಗಕ್ಕೆ ನಿರ್ದೇಶನಗಳನ್ನು ನೀಡಬೇಕು ಎಂದು ಅರ್ಜಿಯಲ್ಲಿ ಹೇಳಲಾಗಿದೆ.
ಪ್ರಧಾನಿ ಭೇಟಿಯ ಸಂದರ್ಭದಲ್ಲಿ ವಿವೇಕಾನಂದ ರಾಕ್ ಸ್ಮಾರಕಕ್ಕೆ ಪ್ರವಾಸಿಗರು ಮತ್ತು ಹಿಂದೂ ಭಕ್ತರು ಭೇಟಿ ನೀಡುವುದನ್ನು ತಡೆಯದಂತೆ ತಮಿಳುನಾಡಿನ ಮುಖ್ಯ ಕಾರ್ಯದರ್ಶಿ ಮತ್ತು ಪೊಲೀಸ್ ಮಹಾನಿರ್ದೇಶಕರಿಗೆ ಮಧ್ಯಂತರ ನಿರ್ದೇಶನವನ್ನು ಕೂಡ ನೀಡುವಂತೆ ಅರ್ಜಿಯಲ್ಲಿ ಅಗ್ರಹಿಸಲಾಗಿತ್ತು.
ಲೋಕಸಭಾ ಚುನಾವಣೆ ಪ್ರಚಾರದ ಬಳಿಕ ಪ್ರಧಾನಿ ನರೇಂದ್ರ ಮೋದಿ ತಮಿಳುನಾಡಿನ ಕನ್ಯಾಕುಮಾರಿಯ ವಿವೇಕಾನಂದ ಶಿಲಾ ಸ್ಮಾರಕದಲ್ಲಿ 45 ಗಂಟೆಗಳ ಧ್ಯಾನವನ್ನು ನಡೆಸಿದ್ದರು.
ಇದನ್ನು ಓದಿ: ಲೋಕಸಭೆ ಚುನಾವಣೆ-2024: ಎಕ್ಸಿಟ್ ಪೋಲ್‌ನಲ್ಲಿ ಎನ್‌ಡಿಎಗೆ ಬಹುಮತ; ಇಲ್ಲಿದೆ ಚುನಾವಣೋತ್ತರ ಸಮೀಕ್ಷಾ ಫಲಿತಾಂಶಗಳ ವಿವರಗಳು…


