ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆಯ ಅಪಹರಣಕ್ಕೆ ಸಂಚು ಪ್ರಕರಣಕ್ಕೆ ಸಂಬಂಧಿಸಿ ತಲೆ ಮರೆಸಿಕೊಂಡಿರುವ ಭವಾನಿ ರೇವಣ್ಣ ನಿರೀಕ್ಷಣಾ ಜಾಮೀನು ಕೋರಿ ಹೈಕೋರ್ಟ್ ಮೊರೆ ಹೋಗಿದ್ದಾರೆ.
ಭವಾನಿ ರೇವಣ್ಣಗೆ ಈ ಮೊದಲು ವಿಚಾರಣೆಗೆ ಹಾಜರಾಗುವಂತೆ ಪ್ರಕರಣದ ತನಿಖೆ ನಡೆಸುತ್ತಿರುವ ಎಸ್ಐಟಿ ಅಧಿಕಾರಿಗಳು ನೊಟೀಸ್ ನೀಡಿದ್ದರು. ಆದರೆ ಅವರು ವಿಚಾರಣೆಗೆ ಹಾಜರಾಗಿರಲಿಲ್ಲ. ಭವಾನಿ ರೇವಣ್ಣ ನಿರೀಕ್ಷಣಾ ಜಾಮೀನು ಕೋರಿ ನ್ಯಾಯಾಲಯದ ಮೊರೆ ಹೋಗಿದ್ದರು. ಮೇ 29ರಂದು ಈ ಪ್ರಕರಣದ ಕುರಿತು ವಾದ-ಪ್ರತಿವಾದ ಆಲಿಸಿದ ನ್ಯಾಯಾಲಯವು ಮೇ 31ರವರೆಗೆ ತೀರ್ಪು ಕಾಯ್ದಿರಿಸಿತ್ತು. ಮೇ.31ರಂದು ಸೆಷನ್ಸ್ ಕೋರ್ಟ್ ಭವಾನಿ ರೇವಣ್ಣ ಅವರ ನಿರೀಕ್ಷಣಾ ಜಾಮೀನು ಅರ್ಜಿಯನ್ನು ತಿರಸ್ಕರಿಸಿತ್ತು. ಇದರ ಬೆನ್ನಲ್ಲಿ ಭವಾನಿ ರೇವಣ್ಣ ತಲೆ ಮರೆಸಿಕೊಂಡಿದ್ದಾರೆ. ಭವಾನಿ ರೇವಣ್ಣ ಬಂಧನಕ್ಕೆ ಶೋಧ ನಡೆಸಲಾಗುತ್ತಿದೆ ಎಂದು ಎಸ್‌ಐಟಿ ಅಧಿಕಾರಿಗಳು ಹೇಳಿದ್ದರು. ಇದೀಗ ಬಂಧನದ ಭೀತಿಯಿಂದ ಭವಾನಿ ರೇವಣ್ಣ ಹೈಕೋರ್ಟ್ ಮೆಟ್ಟಿಲೇರಿದ್ದಾರೆ.
ನಿರೀಕ್ಷಣಾ ಜಾಮೀನು ಕೋರಿ ಭವಾನಿ ರೇವಣ್ಣ ಪರ ವಕೀಲರು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ. ಮೇ.29ರ ವಾದದ ವೇಳೆ ಅಪಹರಣ ಪ್ರಕರಣದಲ್ಲಿ ಎಸ್‌ಐಟಿಗೆ ಭವಾನಿ ರೇವಣ್ಣ ಅವರ ತನಿಖೆ ಅಗತ್ಯವಿದೆ. ಹೀಗಾಗಿ ಅವರನ್ನು ಕಸ್ಟಡಿಗೆ ನೀಡಬೇಕು, ಭವಾನಿ ಕಿಡ್ನಾಪ್‌ನಲ್ಲಿ ಭಾಗಿಯಾಗಿದ್ದಾರೆ ಎಂಬುದಕ್ಕೆ ಸಾಕ್ಷಿಗಳಿವೆ. ದೂರುದಾರ ಹಾಗೂ ಆರೋಪಿ ಸತೀಶ್ ಬಾಬಣ್ಣ ಮಾತನಾಡಿರುವ ಕಾಲ್ ರೆಕಾರ್ಡ್ ಇದೆ. ಈ ಕಾಲ್ ರೆಕಾರ್ಡ್‌ನಲ್ಲಿ ಭವಾನಿ ಯಾವ ರೀತಿ ಭಾಗಿಯಾಗಿದ್ದಾರೆ ಎಂಬುದಕ್ಕೆ ಸಾಕ್ಷಿ ಇದೆ. ಮೊಬೈಲ್‌ನ ಅಟೋ ರೆಕಾರ್ಡರ್‌ನಿಂದ ಕಾಲ್ ರೆಕಾರ್ಡ್ ಆಗಿದೆ ಎಂದು ಕೋರ್ಟ್ ಗಮನಕ್ಕೆ ತಂದಿದ್ದರು.
ತಲೆಮರೆಸಿಕೊಂಡಿರುವ ಭವಾನಿ ಅವರನ್ನು ಬಂಧಿಸಲು ಶೋಧ ನಡೆಸಲಾಗುತ್ತಿದೆ. ಆಕೆ ಎಲ್ಲೋ ತಲೆಮರೆಸಿಕೊಂಡಿದ್ದು, ಶೀಘ್ರದಲ್ಲೇ ಬಂಧಿಸಲಾಗುವುದು. ಇದು ಕಾನೂನು ಪ್ರಕ್ರಿಯೆಯಾಗಿದೆ ಮತ್ತು ಬೇರೇನೂ ಇಲ್ಲ ಎಂದು ಗೃಹ ಸಚಿವ ಡಾ. ಜಿ ಪರಮೇಶ್ವರ್ ನಿನ್ನೆ ಹೇಳಿದ್ದರು.
ಭವಾನಿಗಾಗಿ ಮೈಸೂರು, ಹಾಸನ, ಬೆಂಗಳೂರು, ಮಂಡ್ಯ, ರಾಮನಗರ ಸೇರಿದಂತೆ ವಿವಿಧೆಡೆ ಎಸ್‌ಐಟಿ ಶೋಧ ನಡೆಸಿದೆ. ಆಕೆಯ ಪತ್ತೆಗಾಗಿ ಭವಾನಿ ಅವರ ಸಂಬಂಧಿಕರ ಮನೆಗಳಲ್ಲಿಯೂ ಹುಡುಕಾಟ ನಡೆಸಲಾಗಿದೆ. ಆದರೆ ಅವರು ಪತ್ತೆಯಾಗಲಿಲ್ಲ ಎಂದು ಮೂಲಗಳು ತಿಳಿಸಿವೆ. ಅವರ ಪತ್ತೆಗೆ ಎಸ್‌ಐಟಿ ವಿವಿಧ ತಂಡಗಳನ್ನು ರಚಿಸಿದೆ ಎಂದು ಮೂಲಗಳು ತಿಳಿಸಿವೆ.
ಇದನ್ನು ಓದಿ: ಬಿಜೆಪಿ ಪರ ಕೆಲಸ ಮಾಡುತ್ತಿದ್ದವರನ್ನೇ ಪ್ರಶ್ನೆ ಕೇಳಿ ಸಮೀಕ್ಷೆ ನಡೆಸಲಾಗಿದೆ: ಅಖಿಲೇಶ್ ಯಾದವ್


