ವೈಎಸ್‌ಆರ್ ಕಾಂಗ್ರೆಸ್ ಪಕ್ಷ (ವೈಎಸ್‌ಆರ್‌ಸಿಪಿ) ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಪತ್ರವನ್ನು ಬರೆದಿದ್ದು, ಆಂಧ್ರಪ್ರದೇಶದಲ್ಲಿ ಕಾನೂನು, ಸುವ್ಯವಸ್ಥೆ ರಕ್ಷಣೆಗೆ ಮಧ್ಯಪ್ರವೇಶಿಸುವಂತೆ ಮನವಿ ಮಾಡಿದ್ದಾರೆ. ಚುನಾವಣೆಯಲ್ಲಿ ನಮ್ಮ ಪಕ್ಷದ ಸೋಲಿನ ನಂತರ ತಮ್ಮ ಬೆಂಬಲಿಗರ ಮೇಲೆ ಸಂಘಟಿತ ಹಿಂಸಾಚಾರ, ಹಲ್ಲೆ ಮಾಡಲಾಗುತ್ತಿದೆ ಎಂದು ಪತ್ರದಲ್ಲಿ ಉಲ್ಲೇಖಿಸಿಲಾಗಿದೆ.
ರಾಷ್ಟ್ರಪತಿಗೆ ಮಾತ್ರವಲ್ಲದೆ ಆಂಧ್ರಪ್ರದೇಶದ ರಾಜ್ಯಪಾಲ ಎಸ್ ಅಬ್ದುಲ್ ನಝೀರ್ ಮತ್ತು ಪೊಲೀಸ್ ಮಹಾನಿರ್ದೇಶಕ(ಡಿಜಿಪಿ) ಹರೀಶ್ ಕುಮಾರ್ ಗುಪ್ತಾ ಅವರಿಗೆ ಪಕ್ಷವು ಮಧ್ಯಪ್ರವೇಶಿಸುವಂತೆ ಪತ್ರಗಳನ್ನು ಕಳುಹಿಸಿದೆ.
ತೆಲುಗು ದೇಶಂ ಪಕ್ಷ (ಟಿಡಿಪಿ), ಜನಸೇನಾ ಪಕ್ಷ (ಜೆಎಸ್‌ಪಿ), ಮತ್ತು ಬಿಜೆಪಿ ಮೈತ್ರಿಯು ಆಂಧ್ರ ವಿಧಾನಸಭೆ ಚುನಾವಣೆಯಲ್ಲಿ ವೈಎಸ್‌ಆರ್‌ಸಿಪಿಯನ್ನು ಹೀನಾಯವಾಗಿ ಸೋಲಿಸಿದೆ. ವೈಎಸ್‌ಆರ್‌ಸಿಪಿ ಕೇವಲ 11 ಸ್ಥಾನಗಳನ್ನು ಗಳಿಸಿದೆ. 175 ವಿಧಾನಸಭಾ ಸ್ಥಾನಗಳ ಪೈಕಿ 164 ಸ್ಥಾನಗಳೊಂದಿಗೆ ಮೈತ್ರಿಕೂಟವು ಭಾರಿ ಬಹುಮತದೊಂದಿಗೆ ಚುನಾವಣೆಯನ್ನು ಗೆದ್ದು ಸರ್ಕಾರ ರಚಿಸಲು ಸಜ್ಜಾಗಿದೆ.
ಜೂನ್ 4 ರಂದು ಫಲಿತಾಂಶಗಳು ಪ್ರಕಟವಾದ ನಂತರ ತನ್ನ ಬೆಂಬಲಿಗರನ್ನು ಗುರಿಯಾಗಿಸಿಕೊಂಡು ಹಲವಾರು ಹಿಂಸಾತ್ಮಕ ಕೃತ್ಯಗಳು ನಡೆದಿದೆ. ದಾಳಿಯ ಹಿಂದೆ ಭಾಗಿಯಾಗಿರುವ ಪಕ್ಷವನ್ನು ಪತ್ರದಲ್ಲಿ ಉಲ್ಲೇಖಿಸದಿದ್ದರೂ, ಪಕ್ಷದ ಅಧಿಕೃತ ಸಾಮಾಜಿಕ ಮಾಧ್ಯಮ ಖಾತೆಗಳು TDP ಮತ್ತು JSP ಬಗ್ಗೆ ಆರೋಪವನ್ನು ಮಾಡಿದೆ. ಪಕ್ಷದ ಸ್ಥಳೀಯ ಕಾರ್ಯಕರ್ತರ ನಿವಾಸಗಳ ಮೇಲೆ ದಾಳಿ ನಡೆಸಿ ಅವರ ಆಸ್ತಿಪಾಸ್ತಿಗಳನ್ನು ನಾಶಪಡಿಸಿರುವ ಬಗ್ಗೆ ಪತ್ರದಲ್ಲಿ ಉಲ್ಲೇಖಿಸಲಾಗಿದೆ.
ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ ವೀಡಿಯೊವೊಂದರಲ್ಲಿ, ವೈಎಸ್ ಜಗನ್ ಮೋಹನ್ ರೆಡ್ಡಿ ಮತ್ತು ವೈಎಸ್‌ಆರ್‌ಸಿಪಿ ಮಾಜಿ ಶಾಸಕಿ ಮತ್ತು ಸಚಿವೆ ರೋಜಾ ಅವರ ಪೋಟೋಗಳನ್ನು ಹೊಂದಿರುವ ನಗರಿ ಕ್ಷೇತ್ರದಲ್ಲಿ ಕಲ್ಲಿನ ಫಲಕವನ್ನು ನಾಶಪಡಿಸಲಾಗಿದೆ. ಶುಕ್ರವಾರ ಕೃಷ್ಣಾ ಜಿಲ್ಲೆಯ ಗುಡಿವಾಡದಲ್ಲಿರುವ ಮಾಜಿ ಶಾಸಕ ಕೊಡಲಿ ನಾನಿ ಅವರ ನಿವಾಸದ ಮೇಲೆ ಟಿಡಿಪಿ ಬೆಂಬಲಿಗರು ಮೊಟ್ಟೆ ದಾಳಿ ನಡೆಸಿದ್ದಾರೆ. ದಾಳಿಗಳ ಪ್ರಮಾಣ ಕಳೆದ 24 ಗಂಟೆಗಳಲ್ಲಿ ಹೆಚ್ಚಾಗಿದೆ. ವೈಎಸ್‌ಆರ್‌ಸಿಪಿ ಬೆಂಬಲಿಗರನ್ನು ವಿಶೇಷವಾಗಿ ಎಸ್ಸಿ, ಎಸ್ಟಿ, ಒಬಿಸಿ ಅಲ್ಪಸಂಖ್ಯಾತ ಸಮುದಾಯಗಳು, ಮಹಿಳೆಯರು ಮತ್ತು ಮಕ್ಕಳು ಸೇರಿ ದುರ್ಬಲ ಗುಂಪುಗಳ ಜನರನ್ನು ಬೆದರಿಸುವ ಸಂಘಟಿತ ಪ್ರಯತ್ನದ ಭಾಗವಾಗಿದೆ. ಈ ಬಗ್ಗೆ ಸ್ಥಳೀಯ ಕಾನೂನು ಜಾರಿ ಸಂಸ್ಥೆಗಳು ಕ್ರಮ ಕೈಗೊಳ್ಳಲು ವಿಫಲವಾಗಿದೆ. ಆದ್ದರಿಂದ ಅಧಿಕಾರಿಗಳು ಈ ಸಮಸ್ಯೆಯ ಬಗ್ಗೆ ತಕ್ಷಣ ಮತ್ತು ಗಂಭೀರವಾಗಿ ಗಮನಹರಿಸಬೇಕು ಎಂದು ರಾಷ್ಟ್ರಪತಿಗೆ ಬರೆದ ಪತ್ರದಲ್ಲಿ ನಿರಂಜನ್ ರೆಡ್ಡಿ ಒತ್ತಾಯಿಸಿದ್ದಾರೆ.
ಇದನ್ನು ಓದಿ: ಕಾಂಗ್ರೆಸ್ ವಿವಿಪ್ಯಾಟ್ ಸುಧಾರಣೆ ನಿಲುವು ಹೊಂದಿದೆ ಹೊರತು ಇವಿಎಂಗಳನ್ನು ತಿರಸ್ಕರಿಸಿಲ್ಲ: ಪಿ ಚಿದಂಬರಂ ಸ್ಪಷ್ಟನೆ


