ಒಬಿಸಿ ಪಟ್ಟಿಯಡಿ ಮುಸ್ಲಿಮರಿಗೆ ನೀಡಿರುವ 4% ಮೀಸಲಾತಿಗೆ ತಮ್ಮ ಪಕ್ಷವು ಬದ್ಧವಾಗಿದೆ ಎಂದು ಟಿಡಿಪಿ ಪ್ರಧಾನ ಕಾರ್ಯದರ್ಶಿ ಮತ್ತು ಎನ್ ಚಂದ್ರಬಾಬು ನಾಯ್ಡು ಅವರ ಪುತ್ರ ನಾರಾ ಲೋಕೇಶ್ ಶುಕ್ರವಾರ ಹೇಳಿದ್ದಾರೆ.
ಮಿತ್ರ ಪಕ್ಷವಾದ ಬಿಜೆಪಿಯಿಂದ ಭಿನ್ನವಾದ ನಿಲುವಿನಲ್ಲಿ, ಬಡ ಮುಸ್ಲಿಮರು ಬಡತನದಿಂದ ಹೊರಬರಲು ಸಹಾಯ ಮಾಡುವ ಉದ್ದೇಶದಿಂದ ಮೀಸಲಾತಿಯನ್ನು ಕಲ್ಯಾಣ ಕ್ರಮ ಎಂದು ಲೋಕೇಶ್ ಬಣ್ಣಿಸಿದ್ದು, ಟಿಡಿಪಿ ಇದನ್ನು ಅಲ್ಪಸಂಖ್ಯಾತರ ಓಲೈಕೆಯಾಗಿ ನೋಡುವುದಿಲ್ಲ ಎಂದು ಹೇಳಿದ್ದಾರೆ.
ಒಂದು ನಿರ್ದಿಷ್ಟ ವಿಭಾಗವು ಬಡತನದಲ್ಲಿ ವಾಸಿಸುತ್ತಿದ್ದರೆ ಒಂದು ರಾಷ್ಟ್ರ ಅಥವಾ ರಾಜ್ಯವು ಅಭಿವೃದ್ಧಿ ಹೊಂದುತ್ತದೆ ಎಂದು ಹೇಳಲಾಗುವುದಿಲ್ಲ. ಕಡಿಮೆ ಪ್ರಾತಿನಿಧ್ಯ ಇರುವ ಸಮುದಾಯಗಳಿಗೆ ಅವಕಾಶಗಳನ್ನು ಸೃಷ್ಟಿಸುವಂತಹ ನೀತಿಗಳನ್ನು ಸರ್ಕಾರಗಳು ಜಾರಿಗೊಳಿಸಬೇಕು. ಮುಸ್ಲಿಮರಿಗೆ ಶೇಕಡ 4ರಷ್ಟು ಮೀಸಲಾತಿ ನೀಡುವ ನಿರ್ಧಾರವನ್ನು ಆ ದೃಷ್ಟಿಕೋನದಿಂದ ಕೈಗೊಳ್ಳಲಾಗಿದೆಯೇ ವಿನಃ ರಾಜಕೀಯ ಲಾಭಕ್ಕಾಗಿ ಅಥವಾ ಯಾರನ್ನೂ ಓಲೈಸುವ ಉದ್ದೇಶದಿಂದ ಕೈಗೊಂಡಿಲ್ಲ ಎಂದು ಹೇಳಿದ್ದಾರೆ.
ಲೋಕಸಭೆ ಚುನಾವಣೆಯ ಪ್ರಚಾರದ ವೇಳೆ ನರೇಂದ್ರ ಮೋದಿ ಮತ್ತು ಅಮಿತ್ ಶಾ ಸೇರಿದಂತೆ ಹಲವು ಬಿಜೆಪಿ ನಾಯಕರು ಆಂಧ್ರಪ್ರದೇಶ ಮತ್ತು ತೆಲಂಗಾಣದಲ್ಲಿ ಮುಸ್ಲಿಮರಿಗೆ ನೀಡಿರುವ ಮೀಸಲಾತಿಯನ್ನು ಟೀಕಿಸಿದ್ದರು. ಅಧಿಕಾರಕ್ಕೆ ಮರಳಿದ ನಂತರ ಮುಸ್ಲಿಮರ ಮೀಸಲಾತಿ ರದ್ದು ಪಡಿಸಿ ಎಸ್ಸಿ, ಎಸ್ಟಿಗಳು ಮತ್ತು ಒಬಿಸಿಗಳಿಗೆ ಆ ಮೀಸಲಾತಿಯನ್ನು ನೀಡುವುದಾಗಿ ಹೇಳಿದ್ದರು.
ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡ ನಂತರವೂ ಟಿಡಿಪಿ ಮುಸ್ಲಿಂ ಮೀಸಲಾತಿಯನ್ನು ಬೆಂಬಲಿಸಿತ್ತು. ಮೈತ್ರಿಯಲ್ಲಿದ್ದಾಗ ಕೆಲವು ನಿರ್ದಿಷ್ಟ ವಿಷಯಗಳ ಬಗ್ಗೆ ಭಿನ್ನಾಭಿಪ್ರಾಯ ಹೊಂದಿರುವುದು ತಪ್ಪಲ್ಲ ಎಂದು ನಾಯ್ಡು ಆಂಧ್ರಪ್ರದೇಶದಲ್ಲಿ ಮತದಾನಕ್ಕೆ ದಿನಗಳ ಮೊದಲು ನೀಡಿದ ಸಂದರ್ಶನದಲ್ಲಿ ಹೇಳಿದ್ದರು. ಈ ವಿಚಾರದಲ್ಲಿ ಟಿಡಿಪಿ ಮತ್ತು ಬಿಜೆಪಿ ಭಿನ್ನ ನಿಲುವು ಹೊಂದಿದೆ ಎಂದು ಅವರು ಹೇಳಿದ್ದರು.
ವಿವಾದಿತ ವಿಷಯದ ಬಗ್ಗೆ ತನ್ನ ತಂದೆಯ ನಿಲುವನ್ನು ವಿವರಿಸಿದ ಲೋಕೇಶ್, ಟಿಡಿಪಿ ಎಲ್ಲರನ್ನು ಒಟ್ಟಾಗಿ ಕರೆದುಕೊಂಡು ಹೋಗುವುದಕ್ಕೆ ಬದ್ಧವಾಗಿದೆ ಮತ್ತು ಅದಕ್ಕೆ ಓಲೈಕೆ ಎಂದರ್ಥವಲ್ಲ. ಆಂಧ್ರಪ್ರದೇಶದಲ್ಲಿ ಮುಸ್ಲಿಮರು ಬಡತನದಲ್ಲಿ ನರಳುತ್ತಿರುವುದನ್ನು ಗಮನಿಸಿದ್ದೇವೆ. ನಾವು ನಿಮ್ಮನ್ನು ಬೆಂಬಲಿಸುತ್ತೇವೆ. ನಾವು ಯಾವಾಗಲೂ ರಾಷ್ಟ್ರೀಯ ಮಟ್ಟದಲ್ಲಿ ನಮ್ಮ ಪಾಲುದಾರರೊಂದಿಗೆ ಸೌಹಾರ್ದಯುತ ಸಂಬಂಧವನ್ನು ಹೊಂದಲು ಬಯಸುತ್ತೇವೆ ಎಂದು ಹೇಳಿದ್ದಾರೆ. ರಾಷ್ಟ್ರೀಯ ಹಿತಾಸಕ್ತಿಯ ದೊಡ್ಡ ವಿಷಯಗಳಿಗೆ ಬಂದಾಗ ನಿರ್ದಿಷ್ಟ ಶಾಸನದ ಬಗ್ಗೆ ನಾವು ಕೇಂದ್ರ ಸರ್ಕಾರಕ್ಕೆ ಮನವರಿಕೆ ಮಾಡಲು ಪ್ರಯತ್ನಿಸುತ್ತೇವೆ ಅವರು ಹೇಳಿದ್ದಾರೆ.
ಅಮರಾವತಿಯು ಆಂಧ್ರಪ್ರದೇಶದ ಏಕೈಕ ರಾಜಧಾನಿಯಾಗಲಿದೆ ಎಂದು ಲೋಕೇಶ್ ಸ್ಪಷ್ಟಪಡಿಸಿದ್ದು, ಶೀಘ್ರದಲ್ಲೇ ರಚನೆಯಾಗಲಿರುವ ಟಿಡಿಪಿ ಸರ್ಕಾರವು ವಿಶಾಖಪಟ್ಟಣಂಗೆ ಭವ್ಯವಾದ ಯೋಜನೆಗಳನ್ನು ನೀಡಲಿದೆ ಎಂದು ಹೇಳಿದ್ದಾರೆ.
ಇದನ್ನು ಓದಿ: ಕಾಂಗ್ರೆಸ್ ವಿವಿಪ್ಯಾಟ್ ಸುಧಾರಣೆ ನಿಲುವು ಹೊಂದಿದೆ ಹೊರತು ಇವಿಎಂಗಳನ್ನು ತಿರಸ್ಕರಿಸಿಲ್ಲ: ಪಿ ಚಿದಂಬರಂ ಸ್ಪಷ್ಟನೆ


