20,000 ಕೋಟಿ ರೂ.ಗೂ ಹೆಚ್ಚು ಬ್ಯಾಂಕ್ ಸಾಲ ವಂಚನೆ ಆರೋಪದಡಿ ಆಮ್ಟೆಕ್ ಕಂಪೆನಿ ಮತ್ತು ಅದರ ಪ್ರವರ್ತಕರ ವಿರುದ್ಧ ಅಕ್ರಮ ಹಣ ವರ್ಗಾವಣೆ ತನಿಖೆಯ ಭಾಗವಾಗಿ ಜಾರಿ ನಿರ್ದೇಶನಾಲಯ(ಇಡಿ) ಗುರುವಾರ ದೆಹಲಿ, ಮುಂಬೈ ಮತ್ತು ನಾಗ್ಪುರದ ಸುಮಾರು 35 ಕಡೆಗಳಲ್ಲಿ ಶೋಧ ಕಾರ್ಯ ನಡೆಸಿದೆ.
ಅರವಿಂದ್ ಧಾಮ್, ಗೌತಮ್ ಮಲ್ಹೋತ್ರಾ ಸೇರಿದಂತೆ ಆಮ್ಟೆಕ್ ಗ್ರೂಪ್ ಮತ್ತು ಅದರ ನಿರ್ದೇಶಕರಿಗೆ ಸಂಬಂಧಿಸಿದ ಸ್ಥಳಗಳ ಮೇಲೆ ದೆಹಲಿ, ಗುರುಗ್ರಾಮ್, ನೋಯ್ಡಾ, ಮುಂಬೈ ಮತ್ತು ನಾಗ್ಪುರಗಳಲ್ಲಿನ ಸುಮಾರು 35 ವ್ಯಾಪಾರ ಮತ್ತು ವಸತಿ ಕೇಂದ್ರಗಳ ಮೇಲೆ ಇಂದು ಬೆಳಿಗ್ಗೆಯಿಂದ ದಾಳಿ ನಡೆಸಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.
ಆಮ್ಟೆಕ್-ACIL ಲಿಮಿಟೆಡ್‌ನ ವಿರುದ್ಧ ಈ ಮೊದಲು CBI ಎಫ್‌ಐಆರ್ ದಾಖಲಿಸಿತ್ತು. 20,000 ಕೋಟಿ ರೂ.ಗಿಂತ ಹೆಚ್ಚಿನ ಬ್ಯಾಂಕ್ ವಂಚನೆಯ ಆರೋಪದ ಮೇಲೆ ಈ ಕೇಸ್‌ನ್ನು ದಾಖಲಿಸಿಕೊಳ್ಳಲಾಗಿತ್ತು. ಈ ಕುರಿತು ಸುಪ್ರೀಂಕೋರ್ಟ್ ಕೂಡ ಜಾರಿ ನಿರ್ದೇಶನಾಲಯದ ತನಿಖೆಗೆ ಸೂಚಿಸಿತ್ತು. ಇಡಿ ಪ್ರಕಾರ ಈ ಅವ್ಯವಹಾರದಿಂದ ಸರಕಾರದ ಬೊಕ್ಕಸಕ್ಕೆ ಸುಮಾರು 10,000-ರೂ.ನಿಂದ 15,000 ಕೋಟಿವರೆಗೆ ನಷ್ಟ ಉಂಟಾಗಿದೆ ಎಂದು ಮೂಲಗಳು ತಿಳಿಸಿವೆ.
ರಿಯಲ್ ಎಸ್ಟೇಟ್, ವಿದೇಶಿ ಹೂಡಿಕೆ ಮತ್ತು ಹೊಸ ಉದ್ಯಮಗಳಲ್ಲಿ ಹೂಡಿಕೆ ಮಾಡಲು ಸಾಲದ ನಿಧಿಗಳನ್ನು ಬಳಸಲಾಗಿದೆ ಎಂದು ತನಿಖೆಯ ವೇಳೆ ಜಾರಿ ನಿರ್ದೇಶನಾಲಯ ಕಂಡುಕೊಂಡಿದೆ.
ಶೆಲ್ ಕಂಪನಿಗಳ ಹೆಸರಿನಲ್ಲಿ ಸಾವಿರಾರು ಕೋಟಿ ರೂ. ಆಸ್ತಿಗಳನ್ನು ವಂಚನೆ ಮಾಡಲಾಗಿದೆ ಎಂದು ಆರೋಪಿಸಲಾಗಿದೆ, ಹಲವಾರು ವಿದೇಶಿ ಆಸ್ತಿಗಳನ್ನು ಸೃಷ್ಟಿಸಲಾಗಿದೆ ಮತ್ತು ಬೇನಾಮಿ ನಿರ್ದೇಶಕರು ಮತ್ತು ಷೇರುದಾರರ ಮೂಲಕ ಹೊಸ ಹೆಸರಿನಲ್ಲಿ ವಂಚನೆ ಮಾಡಿರುವ ಬಗ್ಗೆ ತನಿಖೆಯ ವೇಳೆ ಕಂಡು ಬಂದಿದೆ ಎಂದು ಹೇಳಲಾಗಿದೆ.
ಇದನ್ನು ಓದಿ: ಬಿಹಾರ: ಎಸ್ಸಿ, ಎಸ್ಟಿ, ಒಬಿಸಿಗಳ ಮೀಸಲಾತಿಯಲ್ಲಿ 65% ಹೆಚ್ಚಳ ರದ್ದುಗೊಳಿಸಿದ ಹೈಕೋರ್ಟ್


