ಹೊಸದಾಗಿ ಚುನಾಯಿತರಾದ ಸಂಸತ್ತಿನ ಸದಸ್ಯರು ಜೂನ್ 24 ಮತ್ತು 26 ರ ನಡುವೆ ದೆಹಲಿಯ ನೂತನ ಸಂಸತ್ ಭವನದಲ್ಲಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಸಂಸದರು ಪ್ರಮಾಣ ವಚನ ಸ್ವೀಕರಿಸುವ ಮುನ್ನ ಲೋಕಸಭೆಯಲ್ಲಿ ರಾಷ್ಟ್ರಗೀತೆಯನ್ನು ನುಡಿಸಲಾಗಿದೆ. ಈ ವೇಳೆ ಕಾಂಗ್ರೆಸ್ ಸಂಸದ ಹಾಗೂ ಪ್ರಸ್ತುತ ವಿಪಕ್ಷ ನಾಯಕರಾಗಿರುವ ರಾಹುಲ್ ಗಾಂಧಿ ಸದನದಲ್ಲಿ ಹಾಜರಿರಲಿಲ್ಲ ಎಂದು 56 ಸೆಕೆಂಡುಗಳ ವಿಡಿಯೋ ಕ್ಲಿಪ್ ಒಂದು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಲಾಗಿದೆ.
ರಾಷ್ಟ್ರಗೀತೆ ಪೂರ್ಣಗೊಂಡ ಬಳಿಕ ರಾಹುಲ್ ಗಾಂಧಿ ತಡವಾಗಿ ಸದನ ಪ್ರವೇಶಿಸಿದ್ದಾರೆ ಎಂದು ಆರೋಪಿಸಲಾಗಿದೆ.
ಬಿಜೆಪಿ ಆಂಧ್ರ ಪ್ರದೇಶದ ರಾಜ್ಯ ಉಪಾಧ್ಯಕ್ಷ ವಿಷ್ಣು ವರ್ಧನ್ ರೆಡ್ಡಿ (@SVishnuReddy) ಜೂನ್ 24 ರಂದು ಎಕ್ಸ್‌ನಲ್ಲಿ ವಿಡಿಯೋ ಹಂಚಿಕೊಂಡಿದ್ದು, “ಶೆಹಝಾದ (ರಾಜಕುಮಾರ) ರಾಹುಲ್ ಗಾಂಧಿಯವರು ತಾನು ರಾಷ್ಟ್ರಗೀತೆಗಿಂತ ದೊಡ್ಡವನು ಎಂದು ಭಾವಿಸಿದ್ದಾರೆ. ಅವರು ತಡವಾಗಿ ಬಂದು ರಾಷ್ಟ್ರಗೀತೆ ಮುಗಿಯುತ್ತಿದ್ದಂತೆ ಸಂಸತ್ತಿಗೆ ಪ್ರವೇಶಿಸಿದ್ದಾರೆ” ಎಂದು ಬರೆದುಕೊಂಡಿದ್ದಾರೆ. ಈ ಪೋಸ್ಟ್ 2.5 ಲಕ್ಷಕ್ಕೂ ಹೆಚ್ಚು ವೀಕ್ಷಣೆಗಳನ್ನು ಪಡೆದುಕೊಂಡಿದೆ ಮತ್ತು 1,000 ಕ್ಕೂ ಹೆಚ್ಚು ಬಾರಿ ರೀಟ್ವೀಟ್ ಆಗಿದೆ.

ರಾಷ್ಟ್ರಗೀತೆ ಮುಗಿದ ನಂತರ ರಾಹುಲ್ ಗಾಂಧಿ ಸಂಸತ್ತಿಗೆ ಬಂದರು ಎಂದು ಬರೆದುಕೊಳ್ಳುವ ಮೂಲಕ ಎಕ್ಸ್‌ನಲ್ಲಿ ಹಲವಾರು ಇತರ ಬಳಕೆದಾರರು ಅದೇ ವಿಡಿಯೋ ಕ್ಲಿಪ್ ಅನ್ನು ಹಂಚಿಕೊಂಡಿದ್ದಾರೆ.
ಫ್ಯಾಕ್ಟ್‌ಚೆಕ್ : ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿರುವ ವಿಡಿಯೋದ ಸತ್ಯಾಸತ್ಯತೆಯನ್ನು ನಾವು ಪರಿಶೀಲಿಸಿದ್ದೇವೆ. ಇದಕ್ಕಾಗಿ 18ನೇ ಲೋಕಸಭೆಯ ಅಧಿವೇಶನ ಆರಂಭದ ಸಂಪೂರ್ಣ ವಿಡಿಯೋವನ್ನು ಸಂಸದ್ ಟಿವಿಯ ಯೂಟ್ಯೂಬ್ ಚಾನೆಲ್‌ನಲ್ಲಿ ವೀಕ್ಷಿಸಿದ್ದೇವೆ.
ಜೂನ್ 24ರಂದು ಅಪ್ಲೋಡ್ ಮಾಡಲಾದ 9 ನಿಮಿಷ 40 ಸೆಕೆಂಡ್‌ನ ವಿಡಿಯೋವೊಂದರಲ್ಲಿ 3 ನಿಮಿಷ 7 ಸೆಕೆಂಡ್‌ನಿಂದ ರಾಷ್ಟ್ರಗೀತೆ ಆರಂಭವಾಗುತ್ತದೆ. 3 ನಿಮಿಷ 18 ಸೆಕೆಂಡ್‌ನಲ್ಲಿ ಇಂಡಿಯಾ ಮೈತ್ರಿಕೂಟದ ಸಂಸದರು ಫ್ರೇಮ್‌ನಲ್ಲಿ ಗೋಚರಿಸುತ್ತಾರೆ. ಈ ವೇಳೆ ಹಿಂಭಾಗದ ಎಡ ಮೂಲೆಯಲ್ಲಿ, ಸಂಸದ್ ಟಿವಿ ಲೋಗೋದ ಹಿಂದೆ ರಾಹುಲ್ ಗಾಂಧಿಯಂತೆಯೇ ಬಿಳಿ ಟಿ-ಶರ್ಟ್ ಮತ್ತು ಕಪ್ಪು ಪ್ಯಾಂಟ್ ಧರಿಸಿರುವ ವ್ಯಕ್ತಿಯನ್ನು ಕಾಣಬಹುದು.

ವಿಡಿಯೋದಲ್ಲಿ 4 ನಿಮಿಷ 13 ಸೆಕೆಂಡ್‌ನಲ್ಲಿ ರಾಹುಲ್ ಗಾಂಧಿ ಸ್ಪೀಕರ್ ಪೀಠದ ಬಲ ಭಾಗದಲ್ಲಿ ಆಗಮಿಸುವುದು ಇದೆ. ಸಂಸದ್ ಟಿವಿಯ ಲೋಗೋ ಇರುವ ಬದಿಯಿಂದಲೇ ರಾಹುಲ್ ಮುಂಭಾಗಕ್ಕೆ ಬಂದಿರುವುದು ಸ್ಪಷ್ಟವಾಗಿ ವಿಡಿಯೋದಲ್ಲಿ ಗೊತ್ತಾಗುತ್ತದೆ.
ಅಂದರೆ, ರಾಹುಲ್ ಗಾಂಧಿ ರಾಷ್ಟ್ರಗೀತೆ ನುಡಿಸುವ ವೇಳೆ ಸ್ಪೀಕರ್ ಪೀಠದಿಂದ ನೋಡಿದರೆ ಎಡಭಾಗ ಮತ್ತು ಕೆಳಗಿನಿಂದ ನೋಡಿದರೆ ಬಲಭಾಗದಲ್ಲಿ ಹಿಂಬಂದಿ ನಿಂತಿದ್ದರು. ಸಂಸದ್ ಟಿವಿಯ ಲೋಗೋದ ಹಿಂದೆ ಬಿಳಿ ಟಿ-ಶರ್ಟ್ ಮತ್ತು ಕಪ್ಪು ಪ್ಯಾಂಟ್ ಧರಿಸಿ ನಿಂತಿದ್ದ ವ್ಯಕ್ತಿ ಅವರೇ. ರಾಷ್ಟ್ರಗೀತೆ ಮುಗಿದ ಬಳಿಕ ರಾಹುಲ್ ತನ್ನ ಆಸನಕ್ಕೆ ಆಗಮಿಸಿದ್ದಾರೆ.
ವಿಷ್ಣು ವರ್ಧನ್ ರೆಡ್ಡಿಯ ಪೋಸ್ಟ್‌ಗೆ ಪ್ರತಿಕ್ರಿಯೆ ಕೊಟ್ಟಿರುವ ಯುವ ಕಾಂಗ್ರೆಸ್‌ನ ರಾಷ್ಟ್ರೀಯ ಅಧ್ಯಕ್ಷ ಶ್ರೀನಿವಾಸ್ ಬಿವಿ “ಸುಳ್ಳುಗಳನ್ನು ಹರಡುವುದನ್ನು ನಿಲ್ಲಿಸಿ. ರಾಹುಲ್ ಗಾಂಧಿಯವರು ರಾಷ್ಟ್ರಗೀತೆ ನುಡಿಸುವ ವೇಳೆ ಸಂಪೂರ್ಣವಾಗಿ ಹಾಜರಿದ್ದರು. ವಿಡಿಯೋದ ಆರಂಭದಲ್ಲಿ ಸದನದ ಕೊನೆಯಲ್ಲಿ ಎಡ ಮೂಲೆಯಲ್ಲಿ ಅವರು ನಿಂತಿರುವುದನ್ನು ಕಾಣಬಹುದು.” ಸ್ಪಷ್ಟಪಡಿಸಿದ್ದಾರೆ.

ನಾವು ನಡೆಸಿದ ಪರಿಶೀಲನೆಯಲ್ಲಿ ರಾಹುಲ್ ಗಾಂಧಿ ರಾಷ್ಟ್ರಗೀತೆ ನುಡಿಸುವ ವೇಳೆ ಸಂಸತ್‌ನಲ್ಲಿಯೇ ಇದ್ದರು. ಅವರು ತನ್ನ ಆಸನಕ್ಕೆ ರಾಷ್ಟ್ರಗೀತೆ ಮುಗಿದ ಬಳಿಕ ಆಗಮಿಸಿದ್ದಾರೆ. ಅದನ್ನೇ ತಪ್ಪಾಗಿ ತಿಳಿದುಕೊಂಡು ರಾಹುಲ್ ಗಾಂಧಿ ರಾಷ್ಟ್ರಗೀತೆ ನುಡಿಸುವ ವೇಳೆ ಸಂಸತ್‌ನಲ್ಲೇ ಇರಲಿಲ್ಲ ಎಂದು ಸುಳ್ಳು ಸುದ್ದಿ ಹಬ್ಬಿಸಲಾಗಿದೆ ಎಂದು ಗೊತ್ತಾಗಿದೆ.
ಇದನ್ನೂ ಓದಿ : FACT CHECK : ಕೇರಳದ ಮುಸ್ಲಿಂ ಮಹಿಳೆ ಮಗನನ್ನೇ ಮದುವೆಯಾಗಿದ್ದಾರೆ ಎಂಬುವುದು ಸುಳ್ಳು


