“ನಾನು ಅಂಗಿ ಧರಿಸಿರುವುದು ಸಂವಿಧಾನ ಕಾರಣದಿಂದ. ಸಂವಿಧಾನ ಇಲ್ಲದಿದ್ದರೆ, ನಮಗೆ ಅಂಗಿ ಧರಿಸಲು ಬಿಡುತ್ತಿರಲಿಲ್ಲ. ಇದು ನಮಗೆ ಅರ್ಥ ಆದರೆ, ನಾವು ಮತ್ತೆ ಬಿಜೆಪಿಗೆ ಮತ ಹಾಕುವುದಿಲ್ಲ. ಕರ್ನಾಟಕದ ಜನರು ಇದನ್ನು ಅರ್ಥ ಮಾಡಿಕೊಳ್ಳಬೇಕಿದೆ” ಎಂದು ಮಾಜಿ ಐಎಎಸ್ ಅಧಿಕಾರಿ, ಸಂಸದ ಸಸಿಕಾಂತ್ ಸೆಂಥಿಲ್ ಹೇಳಿದರು.
ಬೆಂಗಳೂರಿನಲ್ಲಿ ಜಾಗೃತ ಕರ್ನಾಟಕ ಸಂಘಟನೆ ಆಯೋಜಿಸಿದ್ದ ‘ಜನಾದೇಶ 2024 : ಸಂವಿಧಾನ ಕಲ್ಪಿಸಿದ ಭಾರತಕ್ಕಾಗಿ ಹೊಸ ರಾಜಕಾರಣ ಹೇಗೆ?’ ಎಂಬ ವಿಷಯ ಕುರಿತು ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
“ಬಿಜೆಪಿಗೆ ಸಮಾನತೆ ಬೇಕಿಲ್ಲ. ಅದು ಸಂವಿಧಾನವನ್ನು ಬದಲಿಸಬೇಕೆಂದು ಬಯಸುತ್ತದೆ. ಬಿಜೆಪಿ ಸಿದ್ದಾಂತ ಹಿಂದುತ್ವ. ಹಿಂದುತ್ವದ ಮೇಲೆ ಜನರನ್ನು ಕ್ರೋಢಿಕರಿಸಿ, ವಿಷ ಬಿತ್ತುತ್ತಿದೆ. ಜನರ ಸಮಸ್ಯೆಗಳಿಗೆ ಸ್ಪಂದಿಸದ್ದರೆ, ಜನಪರವಾಗಿ ನಿಲ್ಲದಿದ್ದರೆ ಅದು ರಾಜಕಾರಣವಲ್ಲ” ಎಂದು ಸೆಂಥಿಲ್ ತಿಳಿಸಿದರು.
“ಎಲ್ಲಾ ಸಮಾಜದಲ್ಲಿಯೂ ಏರುಪೇರುಗಳು ಇರುತ್ತವೆ. ಆದರೆ, ಭಾರತದಲ್ಲಿ ಒಂದು ಭಯಾನಕ ವ್ಯವಸ್ಥೆ ಇದೆ. ಅದು ಜಾತಿ ವ್ಯವಸ್ಥೆ. ಇಲ್ಲಿ ನಮ್ಮ ಹೋರಾಟ ಜಾತಿ ವ್ಯವಸ್ಥೆ ವಿರುದ್ದ ಇರಬೇಕು. ಜಾತಿ ವ್ಯವಸ್ಥೆಯಲ್ಲಿ ದಲಿತರು ಹೆಚ್ಚಾಗಿ ದೌರ್ಜನ್ಯಕ್ಕೆ ತುತ್ತಾಗುತ್ತಾರೆ. ಅದೇ ರೀತಿ, ಮಹಿಳೆಯರನ್ನು ಶೋಷಣೆ ಮಾಡುವ ವ್ಯವಸ್ಥೆಯೂ ಇದೆ” ಎಂದರು.
“ಬಾಬಾ ಸಾಹೇಬರು ವಿರೋಧ ಮಾಡಿದ್ದು ಜಾತಿ ವ್ಯವಸ್ಥೆಯನ್ನು. ನಾವು ದೇಶ ಕಟ್ಟಬೇಕೆಂಬುವುದನ್ನು ಮರೆತಿದ್ದೇವೆ. ದೇಶ ಕಟ್ಟುವ ಕೆಲಸವನ್ನು ಪಕ್ಷ ಅಷ್ಟೇ ಅಲ್ಲದೇ ಪ್ರತಿಯೊಬ್ಬ ನಾಗರಿಕರು ಕೂಡ ಮಾಡಬೇಕು. ಈ ಪ್ರಕ್ರಿಯೆಯನ್ನು ಪಕ್ಷ ಮುನ್ನಡೆಸಬೇಕಾಗುತ್ತದೆ. ದೇಶ ಕಟ್ಟೋದು ಮುಖ್ಯ. ಅದನ್ನು ನಾವೆಲ್ಲರೂ ಸೇರಿ ಮಾಡಬೇಕಿದೆ” ಎಂದು ಹೇಳಿದರು.
“ನಾವು ಸಂವಿಧಾನವನ್ನು ಸಂಭ್ರಮಿಸುವುದನ್ನೇ ಬಿಟ್ಟಿದ್ದೇವೆ. ನಾವು ಸಂವಿಧಾನವನ್ನು ಸಂಭ್ರಮಿಸಬೇಕು. ಪ್ರೀತಿ, ಸಮಾನತೆಯನ್ನು ಹರಡಬೇಕು. ಯುದ್ಧ ಎಂಬುವುದು ಭಾರತದ ತತ್ವವಲ್ಲ. ಈ ಯುದ್ದ ಎರಡು ಮೈಂಡ್‌ಸೆಟ್‌ಗಳ ನಡುವೆ ಇದೆ. ಒಂದು ಶ್ರೇಣೀಕರಣ, ಇನ್ನೊಂದು ಸಮಾನತೆ. ಕಾಂಗ್ರೆಸ್ ಅಂದರೆ ಸಮಾನತೆ, ಪ್ರೀತಿ, ಬಿಜೆಪಿ/ಆರ್‌ಎಸ್‌ಎಸ್ ಎಂದರ ಶೇಣಿ ವ್ಯವಸ್ಥೆ” ಎಂದು ವಿವರಿಸಿದರು.
“ಬಿಜೆಪಿ ಮತ್ತು ಆರ್‌ಎಸ್‌ಎಸ್ 70ರ ದಶಕದಲ್ಲಿ ಒಂದು ಫಾರ್ಮೂಲವನ್ನು ಕಂಡುಕೊಂಡವು. ಅದು, ಮುಸ್ಲಿಮರನ್ನು ವಿಲನ್‌ಗಳಾಗಿ ಬಿಂಬಿಸುವುದು. ಶೇ. 20ಕ್ಕಿಂತ ಕಡಿಮೆ ಇರುವ ಮುಸ್ಲಿಮರು ಶೇ. 80ರಷ್ಟು ಇರುವ ಹಿಂದುಗಳನ್ನು ಹೆದರಿಸುತ್ತಾರೆ, ದಬ್ಬಾಳಿಕೆ ಮಾಡುತ್ತಾರೆ ಎಂಬ ವಾದವನ್ನು ಮುಂದಿಟ್ಟವು. ಹಿಂದುಗಳೆಲ್ಲರೂ ಒಂದಾಗಬೇಕೆಂದು ಜನರನ್ನು ಕ್ರೋಢೀಕರಿಸಲು ಮುಂದಾದವು. ಬಿಜೆಪಿ/ಆರ್‌ಎಸ್‌ಎಸ್‌ನ ಅಜೆಂಡಾವನ್ನು ನಾವೆಲ್ಲರೂ ಅರ್ಥ ಮಾಡಿಕೊಳ್ಳಬೇಕು. ಕೋಮುವಾದವನ್ನು ಮಣಿಸಬೇಕು” ಎಂದು ಕರೆ ಕೊಟ್ಟರು.
ನಾನು ಕಾಲೇಜು ವಿದ್ಯಾರ್ಥಿಯಾಗಿದ್ದಾಗ ರಾಜಕೀಯವನ್ನು ಅರ್ಥ ಮಾಡಿಕೊಳ್ಳಲು ಆರಂಭಿಸಿದೆ. ಗುಜರಾತ್‌ನ ರಾಜಕೀಯ ವ್ಯವಸ್ಥೆಯು ದೇಶದ ರಾಜಕೀಯದ ಬಗ್ಗೆ ಹೆಚ್ಚು ಅರ್ಥ ಮಾಡಿಸಿತು. 2014ರಿಂದ ರಾಜಕೀಯ ವ್ಯವಸ್ಥೆಯ ಮೇಲೆ ಕೋಪ ಶುರುವಾಯಿತು. ಅದರೆ, ಕೋಪದಿಂದ ಬಿಜೆಪಿ, ಆರ್‌ಎಸ್‌ಎಸ್‌ಅನ್ನು ಮಣಿಸಲು ಸಾಧ್ಯವಿಲ್ಲ ಎಂಬುವುದನ್ನು ಗ್ರಹಿಸಿದೆ ಎಂದು ತಿಳಿಸಿದರು.
“ಕಾಂಗ್ರೆಸ್ ಮತ್ತು ಬಿಜೆಪಿಯ ಸಿದ್ದಾಂತಗಳು ಏನೆಂದು ತಿಳಿದುಕೊಳ್ಳಬಹುದು. ಕಾಂಗ್ರೆಸ್‌ನಲ್ಲಿ ಸಮಾನತೆ ಇದೆ. ಜನಪರ ಸಿದ್ದಾಂತ, ದೃಷ್ಟಿಕೋನ ಇದೆ. ಆದರೆ, ಬಿಜೆಪಿಯಲ್ಲಿ ಹಿಂದುತ್ವವಿದೆ, ಸಮಾನತೆ ಇಲ್ಲ. ಕಾಂಗ್ರೆಸ್ ಅಂದರೆ ಅದು ಒಂದು ಪಕ್ಷ ಅಲ್ಲ, ಅದೊಂದು ಚಳುವಳಿ. ಕಾಂಗ್ರೆಸ್ ಎಂಬ ಪದದ ಅರ್ಥವೇ ಒಳಗೊಳ್ಳುವಿಕೆ. ಚುನಾವಣೆ ಗೆಲ್ಲಲು ಬಿಜೆಪಿ ಮುಸ್ಲಿಮರನ್ನು ದ್ವೇಷ ಮಾಡುತ್ತದೆ. ಆದರೆ, ಬಿಜೆಪಿಯ ಪ್ರಮುಖ ಟಾರ್ಗೆಟ್ ಇರುವುದು ದಲಿತರು, ಸಂವಿಧಾನ” ಎಂದು ಹೇಳಿದರು.
ಇದನ್ನೂ ಓದಿ : ಲೋಕಸಭಾ ಚುನಾವಣೆಯ ಗೆಲವು ಸೋಲಿನಲ್ಲಿ ದಲಿತರು ಮತ್ತು ಹಿಂದುಳಿದವರ ಪಾತ್ರ


