ಸುಪ್ರೀಂ ಕೋರ್ಟ್ ಆದೇಶ ಉಲ್ಲಂಘಿಸಿ ಉತ್ತರ ಅರಾವಳಿ ಚಿರತೆ ವನ್ಯಜೀವಿ ಕಾರಿಡಾರ್ ಆಗಿರುವ ದೆಹಲಿ ರಿಜ್ ಅರಣ್ಯ ಪ್ರದೇಶದಲ್ಲಿ ಸುಮಾರು 1,100 ಮರಗಳನ್ನು ಕಡಿಯಲು ನಿರ್ದೇಶನ ನೀಡುವಾಗ ದೆಹಲಿ ಅಭಿವೃದ್ಧಿ ಪ್ರಾಧಿಕಾರದ (ಡಿಡಿಎ) ಅಧ್ಯಕ್ಷರೂ ಆಗಿರುವ ಲೆಫ್ಟಿನೆಂಟ್ ಗವರ್ನರ್ ವಿ.ಕೆ ಸಕ್ಸೇನಾ ಅವರು ತಮ್ಮ ವಿವೇಚನೆ ಬಳಸಿಲ್ಲ ಎಂದು ಸುಪ್ರೀಂ ಕೋರ್ಟ್ ಶುಕ್ರವಾರ ಕಿಡಿಕಾರಿದೆ.
ನ್ಯಾಯಾಲಯದ ಪೂರ್ವಾನುಮತಿ ಪಡೆಯದೆ ಮರಗಳನ್ನು ಕಡಿಯಲು ಲೆ. ಗವರ್ನರ್ ಅನುಮತಿಸಿದ್ದಕ್ಕೆ ನ್ಯಾಯಮೂರ್ತಿಗಳಾದ ಅಭಯ್ ಎಸ್ ಓಕಾ ಮತ್ತು ಉಜ್ಜಲ್ ಭುಯಾನ್ ಅವರಿದ್ದ ಪೀಠ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ಅಲ್ಲದೆ ತಮ್ಮ ಪಾತ್ರ ಮುಚ್ಚಿಡಲು ಲೆ. ಗವರ್ನರ್ ಯತ್ನಿಸಿದ್ದನ್ನು ಖಂಡಿಸಿತು. ಮರ ಕಡಿಯಲು ತಾನು ನಿರ್ದೇಶನ ನೀಡಿದ್ದಾಗಿ ವಿಚಾರಣೆಯ ಮೊದಲ ದಿನವೇ ಲೆ. ಗವರ್ನರ್ ತಿಳಿಸಬೇಕಿತ್ತು ಎಂದು ಪೀಠ ಹೇಳಿದೆ.
ಮೊದಲ ದಿನವೇ ಲೆ. ಗವರ್ನರ್ ನಿರ್ದೇಶನ ನೀಡಿದ್ದಾರೆ ಎಂಬುವುದನ್ನು ನಮಗೆ ತಿಳಿಸಬೇಕಿತ್ತು. ಮೂರು ದಿನ ಆ ವಿಷಯ ಮುಚ್ಚಿಡಲಾಯಿತು. ಅಲ್ಲದೆ ಲೆ. ಗವರ್ನರ್ ಸಕ್ಸೇನಾ ಅವರು ತಮ್ಮನ್ನು ತಾವೇ ನ್ಯಾಯಾಲಯ ಎಂದು ಭಾವಿಸಿದಂತಿದೆ ಎಂದು ನ್ಯಾಯಾಲಯ ಕಿಡಿಕಾರಿದೆ. ಲೆ. ಗವರ್ನರ್ ಸೇರಿದಂತೆ ಎಲ್ಲರೂ ಪ್ರಕರಣದಲ್ಲಿ ತಪ್ಪು ಮಾಡಿದ್ದು, ನ್ಯಾಯಾಲಯಕ್ಕೆ ಸ್ಪಷ್ಟೀಕರಣ ನೀಡುವ ಬದಲು ಕೃತ್ಯವನ್ನು ಮುಚ್ಚಿಡಲು ಮುಂದಾಗಿದ್ದಾರೆ ಎಂದಿದೆ.
ಈ ಬೆಳವಣಿಗೆಗಳು ವಿಷಾದಕರ ಎಂದಿರುವ ನ್ಯಾಯಾಲಯ ಲೆ. ಗವರ್ನರ್ ಕ್ರಮಗಳನ್ನು ಸಮರ್ಥಿಸಿಕೊಂಡಿದ್ದ ಅವರ ಪರ ಹಿರಿಯ ವಕೀಲ ಮಣಿಂದರ್ ಸಿಂಗ್ ಅವರನ್ನು ತರಾಟೆಗೆ ತೆಗೆದುಕೊಂಡಿದೆ.
ಇದೇ ವೇಳೆ ಮರ ಕಡಿಯಲು ಅನುಮತಿಸಲಾಗದು ಎಂದು ಲೆ. ಗವರ್ನರ್‌ಗೆ ತಿಳಿಸಲಾಗಿತ್ತೇ ಎಂಬ ಬಗ್ಗೆ ಸರ್ಕಾರಿ ಅಧಿಕಾರಿಗಳು ಮತ್ತು ಡಿಡಿಎ ಅಧಿಕಾರಿಗಳು ತನಗೆ ತಿಳಿಸಬೇಕು ಎಂದು ಸುಪ್ರೀಂ ಕೋರ್ಟ್ ತಿಳಿಸಿದೆ. ಅಲ್ಲದೆ ಲೆ. ಗವರ್ನರ್ ಅಣತಿಯಂತೆ ಮರ ಕಡಿಯಲು ನಿರ್ಧರಿಸಲಾಗಿತ್ತೇ ಅಥವಾ ಸ್ವತಂತ್ರವಾಗಿ ನಿರ್ಧಾರ ಕೈಗೊಳ್ಳಲಾಗಿತ್ತೆ ಎಂಬುದನ್ನು ವಿವರಿಸುವಂತೆಯೂ ಡಿಡಿಎಗೆ ಅದು ನಿರ್ದೇಶಿಸಿದೆ.
ಯಾರ ಸೂಚನೆಯ ಮೇರೆಗೆ ಅವರು ಕ್ರಮಕ್ಕೆ ಮುಂದಾಗಿದ್ದಾರೆ ಎಂದು ತಿಳಿಸುವಂತೆ ಮರ ಕಡಿದಿದ್ದ ಗುತ್ತಿಗೆದಾರರಿಗೆ ನೋಟಿಸ್ ಜಾರಿ ಮಾಡಲಾಗಿದೆ. ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವ ಬಗ್ಗೆ ಸರ್ಕಾರ ವಿವರಿಸಬೇಕು ಎಂದು ಕೂಡ ಪೀಠ ತಾಕೀತು ಮಾಡಿದೆ.
ಇದನ್ನೂ ಓದಿ : ಉಪ ಚುನಾವಣೆ : 13 ಕ್ಷೇತ್ರಗಳ ಪೈಕಿ 10ರಲ್ಲಿ ಇಂಡಿಯಾ ಒಕ್ಕೂಟದ ಪಕ್ಷಗಳಿಗೆ ಗೆಲುವು


