ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಕೈಯಲ್ಲಿ ಸಿಗರೇಟ್ ಹಿಡಿದು ನಿಂತಿರುವಂತೆ ತೋರುವ ಕಪ್ಪು ಬಿಳುಪಿನ (Black and white) ಫೋಟೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
ಸರ್ವೇಶ್ ಕುಟ್ಲೆಹರಿಯ ಎಂಬ ಫೇಸ್‌ಬುಕ್ ಬಳಕೆದಾರ ಜುಲೈ 12ರಂದು ಈ ಫೋಟೋ ಹಂಚಿಕೊಂಡಿದ್ದು “8,500 ರೂ. ಕಟಾ ಕಟ್ ಟಕಾ ಟಕ್ ಸಿಗಲಿದೆ ಎಂದು ಹೇಳಲಾದ ವ್ಯಕ್ತಿಯ ಪೋಸ್ಟ್ 20 ಸಾವಿರಕ್ಕೂ ಹೆಚ್ಚು ಲೈಕ್ಸ್‌ಗಳು ಮತ್ತು 5,900 ಶೇರ್‌ಗಳನ್ನು ಪಡೆದುಕೊಂಡಿದೆ ಎಂದು ಬರೆದುಕೊಂಡಿದ್ದಾರೆ.

ಅನೇಕ ಎಕ್ಸ್ ಮತ್ತು ಫೇಸ್‌ಬುಕ್ ಬಳಕೆದಾರರು ಇದೇ ಬರಹದೊಂದಿಗೆ ಫೋಟೋ ಹಂಚಿಕೊಂಡಿದ್ದಾರೆ.
ಹಾಗಾದರೆ ವೈರಲ್ ಫೋಟೋದಲ್ಲಿರುವ ಮಹಿಳೆ ನಿಜವಾಗ್ಲೂ ಸೋನಿಯಾ ಗಾಂಧಿಯ? ಸೋನಿಯಾ ಗಾಂಧಿ ಕೈಯಲ್ಲಿ ಸಿಗರೇಟ್ ಹಿಡಿದು ಫೋಟೋಗೆ ಪೋಸ್‌ಗೆ ಕೊಟ್ರಾ? ಎಂದು ಪರಿಶೀಲಿಸೋನ.
ಫ್ಯಾಕ್ಟ್‌ಚೆಕ್ : ವೈರಲ್ ಫೋಟೋದ ಕೆಳಗೆ ಎರಡ ಭಾಗದಲ್ಲಿ ‘ರಿಮಾರ್ಕರ್’ (Remarker)ಎಂಬ ವಾಟರ್ ಮಾರ್ಕ್ ಇರುವುದನ್ನು ನಾವು ಗಮನಿಸಿದ್ದೇವೆ. ರಿಮಾರ್ಕರ್ ಕುರಿತು ನಾವು ಗೂಗಲ್ ಮೂಲಕ ಮಾಹಿತಿ ಹುಡುಕಿದಾಗ ಅದೊಂದು ಕೃತಕ ಬುದ್ದಿಮತ್ತೆ (Artificial intelligence) ಟೂಲ್ ಎಂಬುವುದು ಗೊತ್ತಾಗಿದೆ. ಈ ಎಐ ಟೂಲ್ ಯಾವುದಾದರು ಫೋಟೋದಲ್ಲಿ ವ್ಯಕ್ತಿಗಳ ಮುಖವನ್ನು ಬದಲಿ ಮತ್ತೊಬ್ಬರ ಮುಖ ಜೋಡಿಸಲು ಅನುವು ಮಾಡುತ್ತದೆ. ಹಾಗಾಗಿ, ಸೋನಿಯಾ ಗಾಂಧಿಯವರ ಫೋಟೋವನ್ನು ಎಐ ಮೂಲಕ ಸೃಷ್ಟಿಸಿರುವುದು ನಮಗೆ ಗೊತ್ತಾಗಿದೆ.
ಇನ್ನು ವೈರಲ್ ಫೋಟೋದ ಮೂಲ ಹುಡುಕಲು ನಾವು ಅದನ್ನು ಗೂಗಲ್ ರಿವರ್ಸ್ ಇಮೇಜ್‌ನಲ್ಲಿ ಹಾಕಿ ಸರ್ಚ್ ಮಾಡಿದ್ದೇವೆ. ಈ ವೇಳೆ ಮೈಕ್ರೋ ಬ್ಲಾಗಿಂಗ್ ವೆಬ್‌ಸೈಟ್ ತಂಬ್ಲರ್‌ನಲ್ಲಿ 2013ರಲ್ಲಿ ವೈರಲ್ ಫೋಟೋದ ರೀತಿಯ ಪೋಟೋ ಅಪ್ಲೋಡ್ ಆಗಿರುವುದು ಕಂಡು ಬಂದಿದೆ. ಆದರೆ, ಅಲ್ಲಿ ಸೋನಿಯಾ ಗಾಂಧಿಯ ಬದಲು ಮತ್ತೊಬ್ಬರು ಮಹಿಳೆಯ ಫೋಟೋ ಇದೆ. ಫೋಟೋಗೆ “Ghazale Photographed By Farzad Sarfarazi, 2012” ಎಂದು ಕ್ಯಾಪ್ಶನ್ ಕೊಡಲಾಗಿದೆ. ಫೋಟೋದ ಕೆಳಗೆ ಬಲ ಭಾಗದಲ್ಲಿ ವಾಟರ್ ಮಾರ್ಕ್ ಕೂಡ ಇದೆ.

ತಂಬ್ಲರ್‌ನಲ್ಲಿ ನಮಗೆ ಲಭ್ಯವಾಗಿರುವ ಫೋಟೋವನ್ನು ಅನೇಕರು ವಿವಿಧ ಸಂದರ್ಭಗಳಲ್ಲಿ ಹಂಚಿಕೊಂಡಿದ್ದು, ಫರ್ಝಾದ್ ಸರ್ಫರಾಝಿ ಅವರ ಫೋಟೋ ಎಂದು ತಿಳಿಸಿದ್ದಾರೆ.
ನಮ್ಮ ಪರಿಶೀಲನೆಯಲ್ಲಿ, ಸೋನಿಯಾ ಗಾಂಧಿ ಸಿಗರೇಟ್ ಹಿಡಿದು ನಿಂತಿರುವಂತೆ ಕಾಣುವ ಫೋಟೋ ರಿಮಾರ್ಕರ್ ಎಂಬ ಎಐ ಟೂಲ್ ಬಳಸಿ ಎಡಿಟ್ ಮಾಡಿರುವಂತದ್ದು. ಬೇರೊಬ್ಬ ಮಹಿಳೆಯ ಫೋಟೋದ ಮುಖ ಬದಲಾಯಿಸಿ ಸೋನಿಯಾ ಗಾಂಧಿಯವರ ಮುಖ ಕೂರಿಸಿರುವುದು ಗೊತ್ತಾಗಿದೆ.
ಇದನ್ನೂ ಓದಿ : FACT CHECK : ‘ಸ್ಟಾರ್’ ಚಿಹ್ನೆಯಿರುವ 500 ರೂ. ನೋಟು ನಕಲಿಯೇ?


