ರಾಮ ರಾಮಾ ರಾಮ ಅಯ್ಯೋ ಶ್ರೀರಾಮಾ
ಎಲ್ಲಿರುವನೋ ನನ್ನ ಪರಶುರಾಮ
ಮರಳಿ ಕೊಡುವೆಯಾ ಮಗನ ರಾಮ ಶ್ರೀರಾಮಾ
ಇಲ್ಲದಿರೆ ನನ್ನನ್ನೂ ಬಲಿ ತೆಗೆದುಕೋ ರಾಮ
ಕೈಯಲ್ಲಿ ಬಂದೂಕು ಹಿಡಿದನಂತೆ
ನನ್ನಂಥ ಹೆಣ್ಣನ್ನೇ ಹೊಡೆದನಂತೆ
‘ಅಮ್ಮ’ ಎನ್ನುತ್ತಲೇ ಎದೆ ಸೀಳುವಾಗ
ಹೆತ್ತಮ್ಮನನ್ನೇ ಮರೆತಿದ್ದನಂತೆ
ಹೇಗೆ ನಂಬಲಿ ಶಿವನೇ ಅಯ್ಯೋ ಶ್ರೀರಾಮಾ
ಕಳೆದು ಹೋದನು ಹೇಗೆ ಪರಶುರಾಮ ನನ್ನ ಪರಶುರಾಮ
ಏಳುಕೊಳ್ಳದೆಲ್ಲವಗ ಹರಕೆ ಹೊತ್ತಿದ್ದೆ
ಒಂಬತ್ತು ತಿಂಗಳು ಹೊಟ್ಟೆ ಹೊತ್ತಿದ್ದೆ
ರಕ್ತ ಮಾಂಸ ಬಸಿದು ಕೂಸ ಮಾಡಿದ್ದೆ
ನೋವು ಬ್ಯಾನಿ ತಿಂದು ಸತ್ತು ಹಡೆದಿದ್ದೆ
ಹೇಗೆ ನಂಬಲಿ ಶಿವನೇ ಅಯ್ಯೋ ಶ್ರೀರಾಮಾ
ಕಳೆದು ಹೋದನು ಹೇಗೆ ಪರಶುರಾಮ ನನ್ನ ಪರಶುರಾಮ
ವರ್ಷಗಟ್ಟಲೆ ಎದೆಯ ಹಾಲು ಉಣಿಸಿದ್ದೆ
ತೋಳ ತೊಟ್ಟಿಲು ತೂಗಿ ಲಾಲಿ ಹಾಡಿದ್ದೆ
ತೆಪ್ಪೆಜ್ಜಿ ಕಿತ್ತಾಗ ಹಾಡಿ ಕುಣಿದಿದ್ದೆ
ತೊದಲನುಡಿಯೊಳಗ ಕೈಲಾಸ ಕಂಡಿದ್ದೆ
ಹೇಗೆ ನಂಬಲಿ ಶಿವನೇ ಅಯ್ಯೋ ಶ್ರೀರಾಮಾ
ಕಳೆದು ಹೋದನು ಹೇಗೆ ಪರಶುರಾಮ ನನ್ನ ಪರಶುರಾಮ
ಸಾಲಿಗಿ ಕಳಿಸಿದ ಸಡಗರ ಸಡಗರ
ಸಾಹೇಬನಾಗುವ ಕನಸಿನ ಸಡಗರ
ಕೂಲಿನಾಲಿ ಮಾಡಿ ಬೆಳೆಸಿದ ಸಡಗರ
ಬಡತನವ ಮರೆಸಿದ್ದ ಮುದ್ದು ಸುಕುಮಾರ
ಹೇಗೆ ನಂಬಲಿ ಶಿವನೇ ಅಯ್ಯೋ ಶ್ರೀರಾಮಾ
ಕಳೆದು ಹೋದನು ಹೇಗೆ ಪರಶುರಾಮ ನನ್ನ ಪರಶುರಾಮ
ಹರೆಯವು ಮೈತುಂಬಿ ಹೋರಿಯಾಗಿದ್ದ
ಚೆಲುವೆಯರ ಕಣ್ಣಾಗ ಬುಗುರಿಯಾಗಿದ್ದ
ಅಪ್ಪನ ಹೆಗಲ ಭಾರ ಹೊರುತ್ತಿದ್ದ
ಅವ್ವನಲಿ ಸೊಸೆ ತರುವ ಕನಸ ಬೆಳೆಸಿದ್ದ
ಹೇಗೆ ನಂಬಲಿ ಶಿವನೇ ಅಯ್ಯೋ ಶ್ರೀರಾಮಾ
ಕಳೆದು ಹೋದನು ಹೇಗೆ ಪರಶುರಾಮ ನನ್ನ ಪರಶುರಾಮ
ನಿಂತಲ್ಲೇ ಕತ್ತರಿಸಿ ನೆಲಕ ಬಿದ್ದೇನಿ
ಎದೆಯಿಂದ ನೆಲವ ಬಗೆಯುತ್ತಿದ್ದೀನಿ
ಕಣ್ಣು ಕತ್ತಲಗೂಡಿ ಹೊರಳುತಿದ್ದೀನಿ
ಮಗನ ಹೆಸರಿಡಿದು ಚೀರುತಿದ್ದೀನಿ
ಹೇಗೆ ನಂಬಲಿ ಶಿವನೇ ಅಯ್ಯೋ ಶ್ರೀರಾಮಾ
ಕಳೆದು ಹೋದನು ಹೇಗೆ ಪರಶುರಾಮ ನನ್ನ ಪರಶುರಾಮ
ಹರೆಯದ ಕೈಗೆ ಬಂದೂಕು ಕೊಟ್ಟವರಾರು ?
ಹರೆಯದ ಮೈ ಹೊಕ್ಕ ಕೊಲೆಗಡುಕರಾರು ?
ಯಾರು ಉಣಿಸಿದರವನ ಎದೆಗೆ ವಿಷವ ?
ಯಾರು ಕಕ್ಕಿಸಿದರು ನನ್ನೆದೆಯ ಹಾಲು ?
ಹೇಗೆ ನಂಬಲಿ ಶಿವನೇ ಅಯ್ಯೋ ಶ್ರೀರಾಮಾ
ಕಳೆದು ಹೋದನು ಹೇಗೆ ಪರಶುರಾಮ ನನ್ನ ಪರಶುರಾಮ
ಕರುಣೆ ಬಾರದೇನೋ ರಾಮ ಶ್ರೀರಾಮಾ
ಮರಣವಾದರೂ ನೀಡೋ ರಾಮ ಶ್ರೀರಾಮಾ
ಯಾರ ಸೇನೆಯಲ್ಲಿ ಕಳೆದುಹೋದೆಯೋ ರಾಮ
ಕಾಯುತಿರುವೆನು ತಾಯಿ ರಾಮಶ್ರೀರಾಮ
ಮರಳಿ ಕೊಡುವೆಯಾ ಮಗನ ರಾಮ ಶ್ರೀರಾಮ
ಇಲ್ಲದಿರೆ ನನ್ನೊಡಲ ಬೆಂಕಿಯಲಿ ಬೂದಿಯಾಗೋ
-ಎಂ. ಡಿ. ಒಕ್ಕುಂದ


