ಇಸ್ರೇಲ್-ಹಿಜ್ಬುಲ್ಲಾ ನಡುವಿನ ಸಂಘರ್ಷ ಹೆಚ್ಚುತ್ತಿರುವ ಹಿನ್ನೆಲೆ ಬೈರುತ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿಯು ಲೆಬನಾನ್ ತೊರೆಯುವಂತೆ ಭಾರತೀಯ ಪ್ರಜೆಗಳಿಗೆ ಸಲಹೆ ನೀಡಿದೆ. ಅಲ್ಲದೆ, ಮುಂದಿನ ಸೂಚನೆ ನೀಡುವವರೆಗೆ ಲೆಬನಾನ್‌ಗೆ ಭಾರತೀಯರು ಪ್ರಯಾಣಿಸದಂತೆ ನಿರ್ದೇಶಿಸಿದೆ.
ಅಕ್ಟೋಬರ್ 2023ರಲ್ಲಿ ಕೊನೆಯದಾಗಿ ನವೀಕರಿಸಲಾದ ಭಾರತೀಯ ವಿದೇಶಾಂಗ ಇಲಾಖೆಯ ಮಾಹಿತಿ ಪ್ರಕಾರ, ಲೆಬನಾನ್‌ನಲ್ಲಿ ಸುಮಾರು 4,000 ಭಾರತೀಯ ಪ್ರಜೆಗಳಿದ್ದಾರೆ. ಅವರಲ್ಲಿ ಹೆಚ್ಚಿನವರು ಕಂಪನಿಗಳು, ನಿರ್ಮಾಣ ಕ್ಷೇತ್ರ ಮತ್ತು ಕೃಷಿ ಫಾರ್ಮ್‌ಗಳಲ್ಲಿ ದುಡಿಯುವವರಾಗಿದ್ದಾರೆ.
ಕಳೆದ ವರ್ಷ ಅಕ್ಟೋಬರ್‌ನಲ್ಲಿ ಪ್ರಾರಂಭಗೊಂಡ ಇಸ್ರೇಲ್‌ನ- ಹಮಾಸ್ ನಡುವಿನ ಸಂಘರ್ಷದ ಬಳಿಕ, ಇಸ್ರೇಲಿ ಪಡೆಗಳು ಮತ್ತು ಹಿಜ್ಬುಲ್ಲಾ ನಡುವೆ ಗಡಿಯಲ್ಲಿ ಹಿಂಸಾಚಾರ ಭುಗಿಲೆದ್ದಿದೆ. ಇತ್ತೀಚೆಗೆ ದಕ್ಷಿಣ ಲೆಬನಾನ್ ಗ್ರಾಮದ ಮೇಲೆ ಇಸ್ರೇಲ್ ನಡೆಸಿದ ದಾಳಿಯಲ್ಲಿ ಹಲವಾರು ನಾಗರಿಕರು ಸಾವನ್ನಪ್ಪಿದ್ದಾರೆ ಎಂದು ಲೆಬನಾನ್ ಮಾಧ್ಯಮ ವರದಿಗಳು ಗುರುವಾರ ತಿಳಿಸಿವೆ.
ಕಳೆದ ಮಂಗಳವಾರ, ಇಸ್ರೇಲ್ ದಕ್ಷಿಣ ಬೈರುತ್‌ನಲ್ಲಿ ಹಿಜ್ಬುಲ್ಲಾದ ಉನ್ನತ ಮಿಲಿಟರಿ ಕಮಾಂಡರ್ ಫೌದ್ ಶುಕೂರ್ ಅವರನ್ನು ಹತ್ಯೆ ಮಾಡಿದೆ ಎಂದು ವರದಿಯಾಗಿದೆ. ಇಸ್ರೇಲ್ ಆಕ್ರಮಿತ ಗೋಲನ್ ಹೈಟ್ಸ್‌ನಲ್ಲಿ ಹಿಜ್ಬುಲ್ಲಾ ದಾಳಿ ನಡೆಸಿ 12 ಜನರನ್ನು ಹತ್ಯೆ ಮಾಡಿದ ಬಳಿಕ, ಇಸ್ರೇಲ್ ನಡೆಸಿದ ರಾಕೆಟ್ ದಾಳಿಯಲ್ಲಿ ಶುಕೂರ್ ಕೊಲ್ಲಲ್ಪಟ್ಟಿರುವುದಾಗಿ ತಿಳಿದು ಬಂದಿದೆ.
ಇಸ್ರೇಲ್ ದಾಳಿಗೆ ಪ್ರತೀಕಾರವಾಗಿ ಗುರುವಾರ ರಾತ್ರಿ ಲೆಬನಾನ್‌ನಿಂದ ಇಸ್ರೇಲ್‌ನತ್ತ ಡಜನ್‌ನಷ್ಟು ರಾಕೆಟ್‌ಗಳನ್ನು ಹಿಜ್ಬುಲ್ಲಾ ಹಾರಿ ಬಿಟ್ಟಿದೆ ಎಂದು ವರದಿಯಾಗಿದೆ. ಇದರಿಂದ ಸಂಘರ್ಷ ಉಲ್ಬಣಗೊಂಡಿದೆ.
ಇದನ್ನೂ ಓದಿ : 5 ವರ್ಷಗಳಲ್ಲಿ ಒಳಚರಂಡಿ ಸ್ವಚ್ಛತೆ ವೇಳೆ 377 ಮಂದಿ ಸಾವು : ಮ್ಯಾನ್ಯುವಲ್ ಸ್ಕ್ಯಾವೆಂಜಿಂಗ್‌ನ ಯಾವುದೇ ಘಟನೆ ವರದಿಯಾಗಿಲ್ಲ ಎಂದ ಕೇಂದ್ರ


